ಕನ್ನಡ ಸುದ್ದಿ  /  Lifestyle  /  Parenting Avalu Column By Reshma Shetty Mother And Daughter Mother Behavior With Adolescent Daughter In Kannada Rst

Adolescent Daughter: ಹದಿ ವಯಸ್ಸಿನ ಮಗಳಿಗೆ ನೀವು ಅಮ್ಮನಷ್ಟೇ ಆದರೆ ಸಾಲದು, ಸ್ನೇಹಿತೆ-ಶಿಕ್ಷಕಿಯೂ ಆಗಬೇಕು; ಅವಳು ಅಂಕಣ

Parenting: ಹದಿವಯಸ್ಸಿನ ಹೆಣ್ಣುಮಕ್ಕಳ ಬಗ್ಗೆ ಅಮ್ಮಂದಿರು ದುಃಖ ತೋಡಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯ. ಇಂಥ ಬೆಳವಣಿಗೆಗೆ ಮೊಬೈಲ್‌ ಒಂದೇ ಕಾರಣವಲ್ಲ. ಹದಿವಯಸ್ಸಿನ ತಲ್ಲಣವೇ ಅಂಥದ್ದು. ಈ ವಯಸ್ಸಿನಲ್ಲಿ ತಾಯಿಯಾದವಳು ಮಗಳಿಗೆ ಸ್ನೇಹಿತೆ, ಶಿಕ್ಷಕಿಯಾಗಿ ಜೊತೆ ನಿಲ್ಲಬೇಕು. ಮಗಳನ್ನು ಕುರುಡಾಗಿ ಪ್ರೀತಿಸಿದರೆ ಸಾಲದು, ಅರ್ಥ ಮಾಡಿಕೊಂಡು ಒಳಿತಿನೆಡೆಗೆ ನಡೆಸಬೇಕು.

ಹದಿ ಹರೆಯದ ಮಗಳಿಗೆ ಸ್ನೇಹಿತೆಯಾಗಿ, ಶಿಕ್ಷಕಿಯಾಗಿ
ಹದಿ ಹರೆಯದ ಮಗಳಿಗೆ ಸ್ನೇಹಿತೆಯಾಗಿ, ಶಿಕ್ಷಕಿಯಾಗಿ

ಇತ್ತೀಚೆಗೆ ನಾನು ಬಸ್ಸಿನಲ್ಲಿ ಹೋಗುತ್ತಿದ್ದಾಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದದ್ದು ಬೇಡವೆಂದರೂ ಕಿವಿಗೆ ಬೀಳುತ್ತಿತ್ತು. ಅವರು ʼನನ್ನ ಮಗಳಿಗೆ ಈಗ 10ನೇ ತರಗತಿ. ಅವಳ ಓದು, ಭವಿಷ್ಯ ಚೆನ್ನಾಗಿರಬೇಕು ಎಂದುಕೊಂಡು ನಮಗೆ ಕಷ್ಟವಾದರೂ ಸರಿ, ಅವಳು ಚೆನ್ನಾಗಿ ಓದಲಿ ಎಂದು ಲಕ್ಷಾಂತರ ರೂಪಾಯಿ ಡೊನೇಷನ್‌ ಕಟ್ಟಿ ಒಳ್ಳೆಯ ಶಾಲೆಗೆ ಹಾಕಿದ್ದೆವು. ಆದರೆ ಈ ಬಾರಿ ಅವಳ ಶಾಲೆಯಲ್ಲಿ ಅವಳಿಗೆ ಅಡ್ಮಿಷನ್‌ ಕೊಡಲು ಮ್ಯಾನೇಜ್‌ಮೆಂಟ್‌ ಒಪ್ಪುತ್ತಿಲ್ಲ. ಕಾರಣ ಕೇಳಿದರೆ ಅಟೆಂಡೆನ್ಸ್‌ ಶಾರ್ಟೆಜ್‌ ಎನ್ನುತ್ತಿದ್ದಾರೆ. ಅಲ್ಲದೆ ಅವಳು ಶಾಲೆಗೆ ಅಗತ್ಯಕ್ಕಿಂತ ಹೆಚ್ಚು ಹಣ ತರುತ್ತಾಳೆ, ಮೊಬೈಲ್‌ ಫೋನ್‌ ತರುತ್ತಾಳೆ, ಓದಿನಲ್ಲೂ ಅಷ್ಟಕಷ್ಟೇ ಎಂದು ಅವಳ ಲೆಕ್ಚರರ್‌ ಕಂಪ್ಲೆಂಟ್ಸ್‌ ಹೇಳಿದರು. ಕೊನೆಗೆ ಟಿಸಿ ಕೊಟ್ಟು ಕಳಿಸಿದರು. 9ನೇ ತರಗತಿ ಹುಡುಗಿಗೆ ಹಾಜರಾತಿ ಕಡಿಮೆಯಾಗುವುದು ಹೇಗೆ' ಎನ್ನುವುದು ಅವರ ಅಳಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಅವರ ಮಾತು ಅಷ್ಟಕ್ಕೇ ನಿಲ್ಲಲಿಲ್ಲ. 'ಮಗಳಿಗೆ ಶಾಲೆಗೆ ತಡವಾಗಬಾರದು ಎನ್ನುವ ಕಾರಣಕ್ಕೆ ನಮ್ಮ ಯಜಮಾನ್ರು ಅವಳನ್ನು ಟೈಮಿಗೆ ಸರಿಯಾಗಿ ಬಸ್ಸಿಗೆ ಬಿಡುತ್ತಾರೆ, ಆದರೂ ಇವಳಿಗೆ ಅಟೆಂಡೆನ್ಸ್ ಶಾರ್ಟೇಜ್ ಆಗಿದ್ದು ಹೇಗೆ ಎನ್ನುವುದೇ ಅರ್ಥವಾಗುತ್ತಿಲ್ಲ. ಇತ್ತೀಚೆಗೆ ಅವಳು ಮೊಬೈಲ್‌ ಹಿಡಿದುಕೊಂಡೇ ಕೋಣೆಯ ಬಾಗಿಲು ಹಾಕಿಕೊಂಡು ಕುಳಿತಿರುತ್ತಿದ್ದಳು, ಕೇಳಿದರೆ ಮೊಬೈಲ್‌ನಲ್ಲಿ ಸ್ಟಡಿ ಮೆಟಿರಿಯಲ್‌ ಇದೆ' ಎಂದು ಹೇಳುತ್ತಿದ್ದಳುʼ ಎಂದೆಲ್ಲಾ ಗೋಳು ತೋಡಿಕೊಳ್ಳುತ್ತಿದ್ದರು.

ಒಮ್ಮೆ ನನ್ನ ಸಂಬಂಧಿಯೊಂದಿಗೆ ಮಾತನಾಡುತ್ತಿದ್ದಾಗ ಅವರು ತೋಡಿಕೊಂಡ ಅಳಲು ಸಹ ಹೆಚ್ಚೂಕಡಿಮೆ ಇದೇ ರೀತಿ ಇತ್ತು. ʼನನ್ನ ಮಗಳು 10ನೇ ತರಗತಿಯಲ್ಲಿ ಶೇ 95ಕ್ಕೂ ಹೆಚ್ಚು ಅಂಕ ಗಳಿಸಿದ್ದಳು. ಅವಳೇ ಆಸೆ ಪಟ್ಟಂತೆ ಉತ್ತಮ ಕಾಲೇಜಿನಲ್ಲಿ 2.5 ಲಕ್ಷ ಡೊನೇಷನ್‌ ನೀಡಿ ಪಿಯುಸಿಯಲ್ಲಿ ಸೈನ್ಸ್‌ಗೆ ಸೇರಿಸಿದ್ದೆವು. ಮೊದಲ ವರ್ಷ ಚೆನ್ನಾಗಿಯೇ ಓದಿದ್ದಳು, 90ಕ್ಕೂ ಹೆಚ್ಚು ಅಂಕ ಗಳಿಸಿದ್ದಳು. ಆದರೆ ದ್ವಿತೀಯ ಪಿಯುಸಿ ರಿಸಲ್ಟ್‌ ಬಂದಿದ್ದು ಪಿಯುಸಿ, ನೀಟ್‌ ಯಾವುದರಲ್ಲೂ ನಿರೀಕ್ಷೆ ಮಾಡಿದ ಮಟ್ಟಿಗೆ ಮಾರ್ಕ್ಸ್‌ ಅಲ್ಲ. ಮೂರು ಹೊತ್ತೂ ಮೊಬೈಲ್‌ ಹಿಡಿದೇ ಕುಳಿತಿರುತ್ತಿರುತ್ತಾಳೆ. ಕೇಳಿದರೆ ಕ್ಲಾಸ್‌ ಗ್ರೂಪ್‌ ನೋಡುತ್ತೇನೆ. ಸ್ಟಡಿ ಮೆಟಿರೀಯಲ್ಸ್‌ ಎಲ್ಲಾ ಮೊಬೈಲ್‌ಗೆ ಕಳುಹಿಸೋದು ಅನ್ನುತ್ತಿದ್ದಳು. ನನಗೆ ಒಮ್ಮೊಮ್ಮೆ ಮೊಬೈಲ್‌ ಕೊಡಿಸಿಯೇ ತಪ್ಪು ಮಾಡಿದ್ವಾ ಅನ್ನುತ್ತೆʼ ಎಂದು ಮಗಳನ್ನು ಆಕ್ಷೇಪಿಸುತ್ತಿದ್ದರು.

***

ಒಬ್ಬರೇ ಮಕ್ಕಳಿರುವ ಮನೆಗಳ ಸಂಖ್ಯೆ ಈಗ ಹೆಚ್ಚು. ಇದು ಪೋಷಕರ ಮನಸ್ಥಿತಿಯನ್ನೂ ಬದಲಿಸಿದೆ. ಅದರಲ್ಲಿಯೂ ಒಬ್ಬಳೇ ಹೆಣ್ಣುಮಗಳಿರುವ ಮನೆಗಳಲ್ಲಿ ಮಗಳು ಹದಿವಯಸ್ಸಿಗೆ ಬಂದಾಗ ಅಮ್ಮಂದಿರು ಅನುಭವಿಸುವ ತಲ್ಲಣದ ಸ್ವರೂಪ ಪೂರ್ತಿಯಾಗಿ ಬದಲಾಗಿದೆ. ಹೈಸೂಲ್‌, ಪಿಯುಸಿಗೆ ಬಂದ ಹಲವು ಹೆಣ್ಣುಮಕ್ಕಳ ಪೋಷಕರು ತಮ್ಮ ಮಕ್ಕಳ ವರ್ತನೆ ಅರ್ಥವಾಗದೇ ಕಂಗಲಾಗುತ್ತಾರೆ. ಒಬ್ಬಳೇ ಮಗಳು ಎಂಬ ಕಾರಣಕ್ಕೆ ಅವಳು ಕೇಳಿದ್ದನ್ನೆಲ್ಲಾ ಕೊಡಿಸಿ, ಅವಳಿಗೆ ಇಷ್ಟ ಬಂದಂತೆ ಬದುಕುವ ಸ್ವಾತಂತ್ರ್ಯ ನೀಡುತ್ತಾರೆ. ಆದರೆ ಓದು, ವರ್ತನೆಯ ವಿಷಯ ಬಂದಾಗ ಪೋಷಕರು ಶಾಕ್‌ಗೆ ಒಳಗಾಗುತ್ತಾರೆ. ತಮ್ಮ ಮಗಳ ವರ್ತನೆ ಬದಲಾಗಿದೆ, ತಮ್ಮ ನಿರೀಕ್ಷೆಯಂತೆ ಅವಳ ಬದುಕು ಸಾಗುತ್ತಿಲ್ಲ ಎಂಬುದು ಅರಿವಾದಾಗ ಎಲ್ಲಕ್ಕೂ ಮೊಬೈಲ್ ಕಾರಣ ಎಂದು ದೂರುತ್ತಾರೆ. ಕೆಲವರು ಮಗಳ ಕೈಲಿದ್ದ ಮೊಬೈಲ್ ಕಿತ್ತು ಬಚ್ಚಿಡುವುದು ಸೇರಿದಂತೆ ತೋಚಿದಂತೆ ವರ್ತಿಸುತ್ತಾರೆ.

ಇದು ಎಲ್ಲರ ಮನೆ ಕಥೆಯೇ? ಅವಳೇಕೆ ಹೀಗಾದಳು? ಮೊಬೈಲ್‌ ಒಂದೇ ಇದಕ್ಕೆಲ್ಲಾ ಕಾರಣವೇ? ಓದಿನಲ್ಲಿ ಅತೀವ ಆಸಕ್ತಿ ಇದ್ದ ಹುಡುಗಿ ಅಷ್ಟೇಕೆ ಕಡಿಮೆ ಮಾರ್ಕ್ಸ್‌ ತೆಗೆಯುತ್ತಿದ್ದಾಳೆ? ನನ್ನನ್ನು ಇಂಥ ಪ್ರಶ್ನೆಗಳು ಕಾಡಿದವು. ಕೆಲವರೊಂದಿಗೆ ಮಾತನಾಡಿದಾಗ, ಇಂಟರ್ನೆಟ್‌ನಲ್ಲಿ ಹುಡುಕಾಡಿದಾಗ ಸಿಕ್ಕ ಉತ್ತರಗಳನ್ನು ಇಲ್ಲಿ ಬರೆದಿದ್ದೇನೆ. ನಿಮಗೆ ಸಿಕ್ಕ ಉತ್ತರಗಳನ್ನು ನೀವೂ ಹಂಚಿಕೊಳ್ಳಿ. ತಾಯಿಯಾದವಳು ಹದಿ ವಯಸ್ಸಿನ ಮಗಳ ಬಳಿ ತಾಯಿ ಹೇಗಿರಬೇಕು? ಮುಂದೆ ಓದಿ.

ಮಗಳನ್ನು ಸೂಕ್ಷ್ಮವಾಗಿ ಗಮನಿಸಿ

ನಿಮ್ಮ ಮಗಳು ಹೈಸ್ಕೂಲ್‌ಗೆ ಬಂದ ನಂತರ ಸಹಜವಾಗಿಯೇ ಅವಳಲ್ಲಿ ಕೆಲವು ದೈಹಿಕ-ಮಾನಸಿಕ ಬದಲಾವಣೆಗಳು ಕಂಡುಬರುತ್ತವೆ. ಪ್ರತಿದಿನದ ಅವಳ ಚಟುವಟಿಕೆಯ ಮೇಲೆ ಒಂದು ಕಣ್ಣಿಟ್ಟಿರಿ. ಅವಳ ಓದು, ಶಾಲೆಯ ಚಟುವಟಿಕೆಯಲ್ಲಿ ಜೊತೆಯಾಗಿ. ಶಾಲೆ ಹಾಗೂ ಅವಳ ದೈನಂದಿನ ದಿನಚರಿಯನ್ನು ಪ್ರತಿದಿನ ಕೇಳಿ ತಿಳಿದುಕೊಳ್ಳಿ. ಅವಳೊಂದಿಗೆ ಸ್ನೇಹಿತೆಯಂತೆ ವರ್ತಿಸಿ. ಹಲವು ದುಡಿಯುವ ತಾಯಂದಿರು ತಮ್ಮ ಮಗಳು ಹೈಸ್ಕೂಲಿಗೆ ಬಂದಾಕ್ಷಣ ಕೆಲಸ ಬಿಡುವುದನ್ನೂ ನೋಡಿದ್ದೇವೆ. ಇದು ಮಗಳ ಭವಿಷ್ಯದ ಉದ್ದೇಶದಿಂದ ಉತ್ತಮ ನಿರ್ಧಾರ. ಹಾಗೆಂದು ಮಗಳನ್ನು ಬೆಳೆಸುವುದು ಅಮ್ಮನೊಬ್ಬಳ ಜವಾಬ್ದಾರಿಯಷ್ಟೇ ಅಲ್ಲವಲ್ಲ. ಇಬ್ಬರಲ್ಲಿ ಯಾರಾದರೂ ಒಬ್ಬರು ಹೆಚ್ಚು ಗಮನ ಹರಿಸುವಂತೆ ಪ್ಲಾನ್ ಮಾಡುವುದು ಒಳ್ಳೆಯದು.

ಸ್ನೇಹಿತೆಯಂತಿರಿ

ಹದಿ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಉಂಟಾಗುವ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ಅವರದ್ದಾಗಿರುವುದಿಲ್ಲ. ಅವರಿಗೆ ತಮ್ಮ ಮನಸ್ಸಿನ ಗೊಂದಲಗಳನ್ನು ಯಾರೊಂದಿಗೆ, ಹೇಗೆ ವಿವರಿಸಬೇಕು ಎಂಬುದೂ ಅರಿವಿರುವುದಿಲ್ಲ. ಆ ಕಾರಣಕ್ಕೆ ತಾಯಿಯಾದವಳು ಮಗಳೊಂದಿಗೆ ಸ್ನೇಹಿತೆಯಂತಿರಬೇಕು. ಮಗಳ ಮನದ ಮಾತು, ಅವಳಿಂದ ವ್ಯಕ್ತವಾಗುವ ಭಾವನೆಗಳನ್ನು ಕೇಳಿಸಿಕೊಂಡು, ಅದಕ್ಕೆ ಪರಿಹಾರವಾಗಬೇಕು. ಸದಾ ಅವಳಿಗೆ ಒಳಿತು, ಕೆಡುಕಿನಲ್ಲಿ ಜೊತೆ ನಿಲ್ಲಬೇಕು. ಸ್ನೇಹಿತೆಯಂತೆ ಅವಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಬೇಕು.

ಗದರುವುದು, ಬಯ್ಯುವುದು ಮಾಡದಿರಿ

ಮಗಳು ಮೊಬೈಲ್‌ ನೋಡಿದ್ದಕ್ಕೆ, ಶಾಲೆಯಿಂದ ತಡವಾಗಿ ಬಂದಿದ್ದಕ್ಕೆ, ಕಡಿಮೆ ಅಂಕ ಗಳಿಸಿದ್ದಕ್ಕೆ, ಸ್ನೇಹಿತರ ಜೊತೆ ಮಾತನಾಡಿದ್ದಕ್ಕೆ... ಇಂತಹ ವರ್ತನೆಗಳು ಕಂಡು ಬಂದಾಗ ಪ್ರತಿದಿನ ಗದರುವುದು, ಬಯ್ಯವುದು ಮಾಡದಿರಿ. ಸಮಾಧಾನದಿಂದ ಜೊತೆ ಕುಳಿತು ಮಾತನಾಡಿ. ಇದರಿಂದಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸಿ. ಈ ವಯಸ್ಸಿನಲ್ಲಿ ಗಂಡುಮಕ್ಕಳ ಜೊತೆ ನಿನ್ನ ವರ್ತನೆ, ಸಲುಗೆ ಹೇಗಿರಬೇಕು, ಹೇಗಿದ್ದರೆ ಚೆನ್ನ ಎಂಬುದನ್ನು ತಿಳಿಸಿ ಹೇಳಿ. ಅದನ್ನು ಬಿಟ್ಟು ಗದರುವುದು, ಬಯ್ಯವುದು ಮಾಡಿದರೆ ಅವರು ಸಿಟ್ಟಾಗಬಹುದು ಅಥವಾ ಕೋಪದಿಂದ ನಿಮ್ಮ ಕಣ್ಣು ತಪ್ಪಿಸಿ ಅಂತಹ ಕೆಲಸ ಮಾಡಬಹುದು.

ಮೊಬೈಲ್‌ ಬಳಕೆಯ ಮೇಲೆ ಕಣ್ಣಿಡಿ

ಇತ್ತೀಚೆಗೆ ಹೆಚ್ಚಿನ ಪೋಷಕರು ಹೊರಗೆ ದುಡಿಯುವವರಿರುತ್ತಾರೆ. ದುಡಿದು ಸುಸ್ತಾಗಿ ಬರುವ ತಾಯಿಗೆ ಮನೆಗೆಲಸ, ಅಡುಗೆ ಎಂದೇ ಸಮಯ ಹೋಗುತ್ತದೆ, ಈ ನಡುವೆ ಮಗಳ ಮೇಲೆ ಗಮನ ಇರುವುದಿಲ್ಲ. ಇನ್ನು ಕೆಲ ಪೋಷಕರಿಗೆ ಸ್ಮಾರ್ಟ್‌ ಬಳಕೆ ಅಷ್ಟೊಂದು ತಿಳಿದಿರುವುದಿಲ್ಲ. ಹಾಗಂತ ಮಗಳ ಮೊಬೈಲ್‌ ಪರಿಶೀಲಿಸದೇ ಇರುವುದು ತಪ್ಪು. ದಿನವಿಡೀ ಮೊಬೈಲ್‌ ಹಿಡಿದೇ ಕುಳಿತುಕೊಳ್ಳುವ ಮಗಳು ಕೇಳಿದರೆ ಆನ್‌ಲೈನ್‌ ಕ್ಲಾಸ್‌, ಮೊಬೈಲ್‌ನಲ್ಲೇ ಓದುತ್ತಿದ್ದೇನೆ, ಮೊಬೈಲ್‌ಗೆ ನೋಟ್ಸ್‌ ಕಳುಹಿಸುತ್ತಾರೆ ಎಂದೆಲ್ಲಾ ಹೇಳಬಹುದು. ಆದರೆ ವಾರಕೊಮ್ಮೆಯಾದರೂ ಮಗಳ ಮೊಬೈಲ್‌ ಪರಿಶೀಲನೆ ಮಾಡಬೇಕು. ನಿಮಗೆ ತಿಳಿಯದಿದ್ದರೆ ಮನೆಯಲ್ಲಿ ಅಥವಾ ಆಪ್ತರಲ್ಲಿ ಮಗಳ ಮೊಬೈಲ್‌ ಪರಿಶೀಲನೆ ಮಾಡಿಸಿ. ಇದು ಅವಳ ಹಕ್ಕಿನ ಉಲ್ಲಂಘನೆ ಎಂದು ಕೆಲವರು ವಾದಿಸಬಹುದು. ಆದರೆ ಮಗಳು ಅಪಾಯಕ್ಕೆ ಸಿಲುಕಿದಾಗ ಅಂಥವರು ಸಹಾಯಕ್ಕೆ ಬರುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

ತಿಂಗಳಿಗೊಮ್ಮೆ ಶಾಲೆ, ಕಾಲೇಜಿಗೆ ಭೇಟಿ ನೀಡಿ

ನಿಮ್ಮ ಬ್ಯುಸಿ ಬದುಕಿನ ಒತ್ತಡದ ನಡುವೆ ಮಗಳ ಓದು, ಶಾಲೆಯನ್ನು ಕಡೆಗಣಿಸಬೇಡಿ. ತಿಂಗಳಿಗೆ ಒಮ್ಮೆಯಾದರೂ ಮಗಳ ಶಾಲೆ ಅಥವಾ ಕಾಲೇಜಿಗೆ ಭೇಟಿ ನೀಡಿ ಅವಳ ಓದು, ವರ್ತನೆಯ ಬಗ್ಗೆ ಕೇಳಿ ತಿಳಿದುಕೊಳ್ಳಿ. ಶಾಲೆಯಲ್ಲಿ ಮಗಳು ಹೇಗಿರುತ್ತಾಳೆ ಎಂಬ ಬಗ್ಗೆ ಕೇಳಿ. ಅವಳ ಕ್ಲಾಸ್‌ ಟೀಚರ್‌ ನಂಬರ್‌ ಪಡೆದು ಅವರೊಂದಿಗೆ ಸಂಪರ್ಕ ಇಟ್ಟುಕೊಳ್ಳಿ. ಕ್ಲಾಸ್‌ಟೆಸ್ಟ್‌ಗಳಲ್ಲಿ ಮಗಳು ಹೇಗೆ ಮಾಡಿದ್ದಾಳೆ ಎಂಬುದನ್ನು ಗಮನಿಸಿ. ಮಗಳ ಸಹಪಾಠಿಗಳ ಜೊತೆಯೂ ಸಂಪರ್ಕ ಇರಿಸಿಕೊಳ್ಳಿ.

ವರ್ತನೆಯ ಮೇಲಿರಲಿ ಗಮನ

ಹದಿ ವಯಸ್ಸಿನ ಮಗಳ ವರ್ತನೆಯ ಮೇಲೆ ತಾಯಿ ಹೆಚ್ಚು ಗಮನ ನೀಡಬೇಕು. ಕೋಣೆಯ ಒಳಗೆ ಹೆಚ್ಚು ಹೊತ್ತು ಬಾಗಿಲು ಹಾಕಿಕೊಂಡು ಕೂರುವುದು, ಮೊಬೈಲ್‌ ನೋಡಿಕೊಂಡೇ ಇರುವುದು, ಮಂಕಾಗಿರುವುದು, ಪದೇ ಪದೇ ಸಿಟ್ಟಾಗುವುದು, ಅಸಹಾಯಕ ಭಾವ ಇವುಗಳನ್ನು ಗಮನಿಸುವುದು ಮುಖ್ಯವಾಗುತ್ತದೆ. ಅಲ್ಲದೆ ಇದರ ಹಿಂದಿನ ಕಾರಣಗಳನ್ನೂ ತಿಳಿದು ಬುದ್ಧಿ ಹೇಳುವುದು ಮುಖ್ಯವಾಗುತ್ತದೆ.

ಒಟ್ಟಿನಲ್ಲಿ ಹದಿವಯಸ್ಸಿನ ಮಗಳು ದಾರಿ ತಪ್ಪಿದಳು, ಓದಿನಲ್ಲಿ ಹಿಂದೆ ಉಳಿದಳು, ನಮ್ಮ ಪ್ರೀತಿ, ಸಲುಗೆಯನ್ನು ದುರುಪಯೋಗ ಮಾಡಿಕೊಂಡಳು ಎಂದು ಮಗಳು ದಾರಿ ತಪ್ಪಿದ ಮೇಲೆ ದೂರುವುದಕ್ಕಿಂತ ತಾಯಿಯಾದವಳು ಮಗಳ ಮೇಲೆ ಮೊದಲೇ ನಿಗಾ ವಹಿಸುವುದು ಉತ್ತಮ. ಇದು ಹದಿವಯಸ್ಸಿನ ಮಗಳ ಬದುಕು, ಭವಿಷ್ಯವನ್ನು ತಿದ್ದಿ ತೀಡುವಲ್ಲಿ ತಾಯಿ ಪಾತ್ರವು ಮಹತ್ವರವಾದದ್ದು. ಹಾಗಾಗಿ ಮಗಳಿಗೆ ತಾಯಿಯಾಗಿ, ಸ್ನೇಹಿತೆಯಾಗಿ, ಶಿಕ್ಷಕಿಯಾಗಿ ಪ್ರತಿ ಹಂತದಲ್ಲೂ ನಿಂತು ಮಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿ. ಇಲ್ಲಿರುವ ಎಲ್ಲ ಅಂಶಗಳು ಯಥಾವತ್ತಾಗಿ ಹದಿವಯಸ್ಸಿನ ಗಂಡುಮಕ್ಕಳ ತಾಯಂದಿರಿಗೂ ಅನ್ವಯಿಸುತ್ತದೆ ಎನ್ನುವುದನ್ನು ಮರೆಯಬೇಡಿ.

ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ reshma@htdigital.in ಅಥವಾ ht.kannada@htdigital.in ಗೆ ಈಮೇಲ್​ ಮಾಡಿ.

ಇನ್ನಷ್ಟು ಅಂಕಣ ಬರಹಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ