ಮಕ್ಕಳಲ್ಲಿ ನಿಷ್ಕಪಟ ಮನೋಭಾವ, ಮುಗ್ಧತೆ ಮರೆಯಾಗಲು ಕಾರಣವಿದು, ಪೋಷಕರು-ಸಮಾಜ ಮಾಡಬೇಕಿರುವುದೇನು? ಡಾ ರೂಪಾ ರಾವ್ ಬರಹ
ಡಾ. ರೂಪಾ ರಾವ್ ಬರಹ: ಪೋಷಕರು ರ‍್ಯಾಂಕ್ ಮಿಡಿಯಾ ರೆಕಗ್ನಿಷನ್‌ಗಳ ಹಿಂದೆ, ಸಿನಿಮಾ ಮತ್ತು ಮಾಧ್ಯಮಗಳು ಹಣ ಮಾಡುವುದರ ಹಿಂದೆ ಬಿದ್ದು ಮಕ್ಕಳ ಮುಗ್ಧತೆಯನ್ನೇ ಕೊಲ್ಲುತ್ತಿದ್ದಾರೆ. ಏನಾದರಾಗಲಿ ಮೊದಲು ಮನುಷ್ಯತ್ವ ಉಳಿಸುವುದು, ಬೆಳೆಸುವುದು ಬಹಳ ಮುಖ್ಯ.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮುಗ್ಧತೆ, ನಿಷ್ಕಪಟ ಮನೋಭಾವ ಸಂಪೂರ್ಣವಾಗಿ ಮರೆಯಾಗುತ್ತಿದೆ. 10, 12 ವಯಸ್ಸಿನ ಮಕ್ಕಳು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಇಂದಿನ ಮಕ್ಕಳಲ್ಲಿ ತಪ್ಪು ಮಾಡಿದ್ದೇವೆ ಎನ್ನುವ ಅಪರಾಧಿ ಭಾವ ಎಂದಿಗೂ ಮೂಡುವುದಿಲ್ಲ. ಮಕ್ಕಳಲ್ಲಿನ ಮುಗ್ಧತೆ ಸಂಪೂರ್ಣ ಮರೆಯಾಗಲು ಕಾರಣವೇನು, ಈ ವಿಚಾರದಲ್ಲಿ ಪೋಷಕರು ಹಾಗೂ ಸಮಾಜ ಏನು ಮಾಡಬಹುದು ಎಂಬ ಬಗ್ಗೆ ವಿಸ್ತಾರವಾಗಿ ತಮ್ಮ ಫೇಸ್‌ಬುಕ್ ಬರಹದಲ್ಲಿ ಬರೆದುಕೊಂಡಿದ್ದಾರೆ ಮನಶಾಸ್ತ್ರಜ್ಞೆ ಡಾ ರೂಪಾ ರಾವ್. ಅವರ ಬರಹವನ್ನು ನೀವೂ ಓದಿ.
ಡಾ. ರೂಪಾ ರಾವ್ ಬರಹ
ನಿನ್ನೆ ಹುಬ್ಬಳಿಯ 12 ವರ್ಷದ ಬಾಲಕನೊಬ್ಬ ತನ್ನ ಹದಿಹರೆಯದ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಂದ ಎಂಬ ಸುದ್ದಿ ಓದಿದೆ. ಅವರಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಹಂಚಿಕೊಂಡಿದ್ದ ಚಿಕ್ಕ ಹುಡುಗರು. ಓದಿ ಶಾಕ್ ಏನೂ ಆಗಲಿಲ್ಲ.
ಏಕೆಂದರೆ ಇದೊಂದೆ ಅಲ್ಲ. ಪಟಿಯಾಲಾದಿಂದ ಬಂಗಾಳದವರೆಗೆ, ಮಧ್ಯ ಪ್ರದೇಶದಿಂದ ಉತ್ತರ ಪ್ರದೇಶದವರೆಗೆ- ಹದಿಹರೆಯದವರು ಐಫೋನ್‌ಗಳು, ಪಾಸ್ವರ್ಡ್‌ಗಳು, ವಿಡಿಯೊ ತುಣುಕುಗಳು ಅಥವಾ ಕೇವಲ 115 ರೂಪಾಯಿ ಆಸೆಗೆ ತಮ್ಮ ಸ್ನೇಹಿತರನ್ನೇ ಕೊಲ್ಲುತ್ತಿರುವ, ಪ್ರೀತಿಗೆ ಅಡ್ಡ ಬಂದ ತಾಯಿಯನ್ನೇ ಇರಿದು ಕೊಂದ ಹದಿಹರೆಯ ಮತ್ತು ಹದಿಹರೆಯದ ಹಿಂದಿನ ವಯಸಿನವರ ಬಗ್ಗೆ ಈಗಂತೂ ದಿನಾ ಓದುತ್ತಿರುತ್ತೇವೆ.
ಮಕ್ಕಳು ಇಂತಹ ಕ್ರೂರ ಕೃತ್ಯಗಳನ್ನು ಮಾಡಿದಾಗ, ಇದು ಪೀರ್ ಪ್ರೆಶರ್ ಅಥವಾ ಮಾಧ್ಯಮಗಳಲ್ಲಿ ಹಿಂಸಾತ್ಮಕ ದೃಶ್ಯಗಳನ್ನು ನೋಡಿದ್ದಾರೆ ಎಂದು ಹೇಳಿ ಬಿಡುವುದು ಈ ಹೊತ್ತಿಗೆ ಸಾಕಾಗುವುದಿಲ್ಲ.
ಈ ಲಕ್ಷಣಗಳು ಅದಕ್ಕಿಂತ ಹೆಚ್ಚು ಆಳವಾದ, ಆತಂಕಕಾರಿ ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಯ ದಿಕ್ಕಿನತ್ತ ಬೊಟ್ಟು ಮಾಡುತ್ತಿವೆ. ಈ ಪೀಳಿಗೆ ಜೆನ್ ಆಲ್ಫಾ ಮತ್ತು ಜೆನ್ ಝೀ (ಕೊನೆಯ ವರ್ಷಗಳಲ್ಲಿ) ಹುಟ್ಟಿದ ಮಕ್ಕಳು.
ಇವರಲ್ಲಿ ಎಂಪತಿ (ಇನ್ನೊಬ್ಬರಲ್ಲಿ ಉಂಟಾಗುವ ಭಾವನಾತ್ಮಕ ಬಂಧು) ಕ್ಷೀಣವಾಗುತ್ತಿರುವುದು, ತಮ್ಮಲ್ಲಿಯೇ ಭಾವನಾತ್ಮಕವಾಗಿ ಸಂಪರ್ಕರಹಿತರಾಗುತ್ತಿರುವು ಅಷ್ಟೇ ಅಲ್ಲ ಅತಿ ಬೇಗ ಪ್ರಚೋದಿತರಾಗಬಲ್ಲರು ಮತ್ತು ಹೆಚ್ಚಿನ ಮಟ್ಟದಲ್ಲಿ ಸಂವೇದನಾಹೀನರಾಗುವುದೂ ಕೂಡ ಇದೆ.
ನನ್ನ ಕೌನ್ಸೆಲಿಂಗ್ ಅನುಭವಗಳಲ್ಲಿ ಗಮನಕ್ಕೆ ಬಂದ ಒಂದಷ್ಟು ವಿಷಯಗಳು ಹೀಗಿವೆ:
ಮಕ್ಕಳು ಮುಗ್ಧರು ಅವರಲ್ಲಿ ಕಪಟ ಇರುವುದಿಲ್ಲ ಎಂದು ಗಂಟಾಘೋಷವಾಗಿ ಹೇಳುವ ಮಕ್ಕಳ ಮನೋತಜ್ಞರೆಂದು ಗುರುತಿಸಿಕೊಂಡ ಹಲವರು ಮಾತನಾಡದ ಒಂದು ವಿಷಯವೆಂದರೆ ʼಈ ಮಕ್ಕಳಲ್ಲಿ ಕೆಲವರು ತಮ್ಮ ಮುಗ್ಧ ಮುಖಗಳ ಹಿಂದೆ, ತಮ್ಮ ನಿಜವಾದ ಉದ್ದೇಶಗಳನ್ನು ಮರೆಮಾಚುವುದರಲ್ಲಿ ಅತ್ಯಂತ ನಿಷ್ಣಾತರಾಗಿರುತ್ತಾರೆ.
ತಮಗೆ ಬೇಕಾದುದನ್ನು ಪಡೆಯಲು ಅಥವಾ ಶಿಸ್ತು ಕಲಿಸುವ ಪೋಷಕರ ಬಗ್ಗೆ ದೂರು ಕೊಡಲು ಕೌನ್ಸೆಲರ್‌ಗಳ ಬಳಿಯಲ್ಲಿ ಅಥವಾ ಅವರ ಟೀಚರ್‌ಗಳ ಅಥವಾ ಕೆಲವರು ಪೊಲೀಸರೊಂದಿಗೆ ವಿಕ್ಟಿಮ್ ಕಾರ್ಡ್ ಹೇಗೆ ಪ್ಲೇ ಮಾಡಬೇಕೆಂದು ಅವರಿಗೆ ತಿಳಿದಿದೆ. ಹೆಚ್ಚುತ್ತಿರುವ ಮಾಹಿತಿ, ಸಿನಿಮಾಗಳ ಮೂಲಕ ಬರುವ ಕ್ರೈಮ್ ವಿಷಯಗಳು ಇದನ್ನು ಹೇಳಿಕೊಡುತ್ತಿವೆ.
ನಾನು ಗಮನಿಸಿದಂತೆ ಈಗಿನ ಬಹಳಷ್ಟು ಮಕ್ಕಳು ತಮ್ಮ ಹೆತ್ತವರಿಗೆ ಜಾಸ್ತಿಯೇ ಅಗೌರವ ತೋರುತ್ತಿದ್ದಾರೆ ಮತ್ತು ಕೆಲವು ಸಂದರ್ಭಗಳಲ್ಲಿ ತಂದೆ ತಾಯಿಯ ಮೇಲೆ ವಾಚಾಮಗೋಚರವಾಗಿ ಬಯ್ಯವುದು, ಅವರ ಮೇಲೆ ಕೈ ಮಾಡುವುದು, ಕೆಳಗೆ ನೂಕುವಂತಹ ಹಿಂಸಾ ಕೃತ್ಯ ಸಹ ಮಾಡುತ್ತಿದ್ದಾರೆ.
ಇನ್ನು ಬೆದರಿಕೆ, ಎಮೋಷನಲ್ ಬ್ಲ್ಯಾಕ್‌ಮೇಲ್ ಸರ್ವೇ ಸಾಮಾನ್ಯ. ಎಷ್ಟು ಮಾಡಿದರೂ ಏನೋ ಕೊರತೆ, ಇನ್ನೂ ಇನ್ನೂ ಮತ್ತಷ್ಟು ಮಗದಷ್ಟು ಬೇಕೆಂಬ ಹಪಾಹಪಿ, ಅದು ಸ್ವಾತಂತ್ರ್ಯ, ಮೊಬೈಲ್, ಪ್ರೀತಿ, ಏನೇ ಇರಲಿ ಪೋಷಕರು ಆ ʼಹೆಚ್ಚುʼ ಎಂಬುದನ್ನು ಕೊಡಲಾಗದಾಗ ಅಥವಾ ಅದನ್ನು ಕೊಡಲು ತಡ ಮಾಡಿದಾಗ, ಬಹಳಷ್ಟು ಮಕ್ಕಳಿಗೆ ಆ ಹತಾಶೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ತಂದೆ ತಾಯಿಯ ಮೇಲೆ ದೂರು ದ್ವೇಷ ಮುಂತಾದವು ಶುರುವಾಗುತ್ತವೆ.
ಇರಲಿ ಕೆಲವು ಮಕ್ಕಳು ಕೊಲೆಯಂತಹ ಹಿಂಸಾಚಾರಕ್ಕೆ ಇಳಿಯಲು ಕಾರಣವಾದ 5 ಸೈಕಾಲಜಿಕಲ್ ಅಂಶಗಳನ್ನು ನೋಡೋಣ:
1. ಸೈಕೋಪಾತ್‌ಗಳಲ್ಲಿ ಮಾತ್ರ ಕಾಣುತ್ತಿದ್ದ ಕ್ರೌರ್ಯ ಹಾಗೂ ಭಾವ ಶೂನ್ಯತೆಯ ಲಕ್ಷಣಗಳು (Callous-Unemotional Traits) ಗುಣಲಕ್ಷಣಗಳು
ತಪ್ಪಿತಸ್ಥತೆಯ ಕೊರತೆ, ಟೊಳ್ಳು ಭಾವನೆಗಳು, ಸಂವೇದನಾಶೀಲತೆ ಇಲ್ಲದಿರುವುದು ಇವುಗಳು ಈಗೀಗ ಸಾಮಾನ್ಯ ಮಕ್ಕಳಲ್ಲಿಯೂ ಹರಡುತ್ತಿವೆ.
ಒಮ್ಮೆ ಒಂದು ಹುಡುಗಿಯನ್ನು ʼನೀನು ಹೀಗೆಲ್ಲಾ ನೂಕಿದರೆ ಮಾಡಿದರೆ ನಿನ್ನ ತಾಯಿಗೆ ಮಾನಸಿಕ ಮತ್ತು ದೈಹಿಕವಾಗಿ ನೋವಾಗುತ್ತೆ ಅಲ್ವಾʼ ಎಂದು ಕೇಳಿದರೆ
ಆ ಹುಡುಗಿಯದು ಆಗಲಿ who cares ಎಂಬ ತಣ್ಣನೆಯ ನೋಟ ಬೀರುತ್ತಾಳೆ. ಬೇಕಾದರೆ ಕೊಲೆಯಂತಹ ಕೃತ್ಯ ಮಾಡಿದ ಮಕ್ಕಳನ್ನು ಮಾತಾಡಿಸಿ ʼಇದು ಕೇವಲ ಫೈಟಿಂಗ್ ಅಷ್ಟೆ, ಅವನು ನಿಜವಾಗಿಯೂ ಸಾಯುತ್ತಾನೆ ಎಂದು ನನಗೆ ಗೊತ್ತಿರಲಿಲ್ಲʼ
ಇವು ಕೇವಲ ಸುಳ್ಳು ಮಾತ್ರವಲ್ಲ ಭಯ ಹುಟ್ಟಿಸುವ ಭಾವನಾತ್ಮಕತೆ ಖಾಲಿ ಆಗುತ್ತಿರುವ ಭಯಾನಕ ಸೂಚನೆ.
2. ನೈತಿಕ ನಿಷ್ಕ್ರಿಯತೆ (moral disengagement)
ಹದಿಹರೆಯದವರು ಎರಡೆರೆಡು ಜೀವನ ಅದು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ನಡೆಸುತ್ತಿದ್ದಾರೆ. ಅವರ ಡಿಜಿಟಲ್ ಅವತಾರಗಳಲ್ಲಿ, ಯಾವುದೇ ಭಾವನೆಗಳು ಊಹೂಂ ಇಲ್ಲ, ಅಲ್ಲಿ ಕೇವಲ ಅಹಂ ಇದೆ. ತಮ್ಮಲ್ಲಿಯೇ ಲೀನವಾಗುವಿಕೆ. ಅವರ ಸ್ಟೇಟಸ್‌ಗಳಲ್ಲಿ ಭಾವನೆಗಳಿರುತ್ತವೆಯೇ ಹೊರತು ಅಲ್ಲಿ ನೈಜ ಭಾವನೆಗಳು ಇರುವುದಿಲ್ಲ.
ಇದೇ ಅಭ್ಯಾಸವಾಗಿ ತಮ್ಮ ನಿಜ ಜೀವನದಲ್ಲಿಯೂ ಅವರು ತಮ್ಮ ಭಾವನೆಗಳನ್ನು ತಾವು ಮಾಡಿದ ಕೃತ್ಯಗಳಿಂದ ಕತ್ತರಿಸಿಡಲು ಕಲಿಯುತ್ತಾರೆ. ಯಾವುದೇ ಹಾನಿ ಆಗಲಿ ಯಾವುದೇ ಗಿಲ್ಟ್ ಇಲ್ಲದೇ ಯಾರಿಗೇ ಆಗಲಿ ಹಾನಿ ಅಥವಾ ತೊಂದರೆ ಮಾಡುವ ಸಾಮರ್ಥ್ಯ ಇದು. ಇದನ್ನು ನೈತಿಕ ನಿಷ್ಕ್ರಿಯತೆ (ಮಾರಲ್ ಡಿಸ್‌ಎಂಗೇಜ್ಮೆಂಟ್) ಎಂದು ಕರೆಯಬಹುದು.
3. ಡೋಪಮೈನ್ ಡೀಸೆನ್ಸಿಟೈಸೇಶನ್
ಗೇಮಿಂಗ್, ಸೋಶಿಯಲ್ ಮೀಡಿಯಾಗಳು ಮತ್ತು ಹೊರಗಿನ ಹಾಗೂ ಒಳಗಿನ ಪ್ರಚೋದನೆಗಳು ಮಕ್ಕಳ ಮೆದುಳನ್ನು ಬದಲಾಯಿಸುತ್ತಿವೆ. ಡೋಪಮೈನ್ ಟ್ರಾಪ್ ಅಂದರೆ ಇನ್ನೂ ಬೇಕು ಬೇಕು ಎಂಬ ಹಪಾಹಪಿ. ಒಂದಷ್ಟು ಹೊತ್ತಿನ ಥ್ರಿಲ್ ಅಥವಾ ಖುಷಿಯ ನಂತರದಲ್ಲಿ ಡೋಪಮೈನ್ ಮತ್ತೆ ಮತ್ತೆ ಖಾಲಿ ಆಗುತ್ತವೆ. ಮತ್ತೆ ಥ್ರಿಲ್ ಬೇಕೆನಿಸುತ್ತದೆ. ಇದರಿಂದ ಅವರ ನಿಜ ಜೀವನದ ಧನಾತ್ಮಕತೆ ಯಾವುದೇ ರೀತಿಯಲ್ಲಿನ ಥ್ರಿಲ್ ಕೊಡುವುದಿಲ್ಲ. ಹಾಗಾಗಿ ಕೆಲವರು ಈ ಥ್ರಿಲ್ ಮತ್ತು ಸಂತೋಷ ಪಡೆಯಲು ರಿಸ್ಕಿ ಬಿಹೇವಿಯರ್ ಅಥವಾ ಅಪಾಯಕಾರಿ ಕೃತ್ಯಗಳನ್ನು ಹುಡುಕುತ್ತಾರೆ. ಅದು ಇನ್ನೊಬ್ಬರಿಗೆ ಹಾನಿ ಆಗುವುದಿದ್ದರೂ ಸರಿ.
4. ಕೆಲವೊಮ್ಮೆ ಹುಡುಗರಲ್ಲಿ ಅದುಮಿಟ್ಟ ಭಾವನೆಗಳು, ಆಕ್ರೋಶದ ರೂಪದಲ್ಲಿ ಬರಬಹುದು ಅಥವಾ ಪವರ್ ಸ್ಟ್ರಗಲ್ ಕೂಡಾ ವಿಶೇಷವಾಗಿ ಹುಡುಗರಲ್ಲಿ, ದುಃಖ ಮತ್ತು ಭಯ ಪಡುವುದನ್ನು ತಪ್ಪು ಎಂದೇ ಹೇಳಿ ಬೆಳೆಸಲಾಗುತ್ತಿದೆ. ಇಂತಹವರಿಗೆ ಆಕ್ರೋಶ ಅಥವಾ ಕ್ರೋಧವೇ ತಮ್ಮನ್ನು ವ್ಯಕ್ತಪಡಿಸುವ ಏಕೈಕ ಭಾಷೆಯಾಗುತ್ತದೆ. ಆ ಭಾಷೆ ಹಿಂಸಾಚಾರಕ್ಕೆ ಕಾರಣವಾಗಬಹುದು.
5. ದಿ ಇನ್ವಿಸಿಬಿಲಿಟಿ ಕಾಂಪ್ಲೆಕ್ಸ್ ಅಗೋಚರಿಕೆಯ ಕಾಂಪ್ಲೆಕ್ಸ್
ಅನೇಕ ಹದಿಹರೆಯದವರು ತಮ್ಮನ್ನು ತಮ್ಮ ತಪ್ಪನ್ನು ಯಾರೂ ಗಮನಿಸುವುದಿಲ್ಲ ಎಂದುಕೊಳ್ಳುತ್ತಾರೆ ತಾವು ಅಗೋಚರ ಎಂದೇ ಭಾವಿಸುತ್ತಾರೆ. ಇಂತವರು ಭಾವನಾತ್ಮಕವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಿರಬಹುದು.
ಅಂತಹವರಲ್ಲಿ ಕೆಲವರು ತಾವು ಅಗೋಚರ ಎಂದು ಭಾವಿಸಿ ತಪ್ಪುಗಳನ್ನು ಮಾಡಿದರೆ, ಇನ್ನೂ ಕೆಲವರು ತಮ್ಮನ್ನು ಯಾರೂ ಗುರುತಿಸಲಿಲ್ಲ ಎಂದೇ ಸಾಮಾಜಿಕ ಮನ್ನಣೆಗಾಗಿ ಆಘಾತ, ರೆಬೆಲ್ ಆಗುವುದರ ಅಥವಾ ಕ್ರೌರ್ಯದ ಮೂಲಕ ಗುರುತಿಗಾಗಿ ಹಂಬಲಿಸುತ್ತಾರೆ.
ಅಡ್ರಲಿನ್ ಸೈಕಾಲಜಿಯಲ್ಲಿ ಇದನ್ನು ಹೀಗೆ ವಿವರಿಸಲಾಗಿದೆ. ಒಂದು ಎರಡು ಮೂರು ವರ್ಷದ ಮಗು ಅಮ್ಮನ ಗಮನಕ್ಕಾಗಿ ಅಳುತ್ತದೆ. ಆದರೆ ಅಮ್ಮ ಆಗ ಗಮನ ಕೊಡದೇ ಇದ್ದಾಗ ಕೈಗೆ ಸಿಕ್ಕಿದ್ದನ್ನು ಎಸೆಯುತ್ತದೆ. ಆಗ ಅಮ್ಮ ಬಂದು ಬೈದರೂ ಅದು ಗಮನವೇ ಅನಿಸಿ ಅದೇ ವರ್ತನೆಯನ್ನು ಮುಂದುವರೆಸುತ್ತದೆ.
ಈ ವರ್ತನೆಗಳು ಈಗಿನ ಮಕ್ಕಳಲ್ಲಿಯೇ ಜಾಸ್ತಿ ಏಕೆ?
ಮೊದಲು ಇರಲಿಲ್ಲವಾ? ಮೊದಲೂ ಇತ್ತು, ಆದರೆ ಈಗ ಹೆಚ್ಚು. ಅದಕ್ಕೆ ಕಾರಣ ಹೀಗಿದೆ. ಕಳೆದೆರೆಡು ದಶಕಗಳ ತಾಂತ್ರಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು.
ಮೊದಲನೆಯದು ಮೊಬೈಲ್. ಈಗ ಫೋನ್ ಕೇವಲ ಸಾಧನವಷ್ಟೇ ಅಲ್ಲ. ಇದು ಮಕ್ಕಳ ಸ್ಥಾನಮಾನ, ಸ್ವ-ಮೌಲ್ಯ ಮತ್ತು ಪೀರ್ ಗುಂಪಿಗೆ ಪ್ರವೇಶ ಕೊಡುವ ಪಾಸ್‌ಪೋರ್ಟ್.
ಆಕ್ರಮಣಕಾರಿಯನ್ನು ವೈಭವೀಕರಿಸುವ ಡಿಜಿಟಲ್ ದೃಶ್ಯ ಮಾಧ್ಯಮ ರೀಲ್‌ಗಳಿಂದ ಹಿಡಿದು ಗೇಮಿಂಗ್‌ವರೆಗೆ, ಮಕ್ಕಳಿಗೆ ಯಾವುದೇ ಸಾಮಾಜಿಕ ಹೊಣೆಗಾರಿಕೆಯಿರದೇ ಪ್ರಾಬಲ್ಯ (ಗೆಲುವು) ಮತ್ತು ಸೇಡು ತೀರಿಸಿಕೊಳ್ಳುವ ಚಿತ್ರಗಳನ್ನು ನೀಡುತ್ತಿವೆ.
ಮನೆಯಲ್ಲಿ ಭಾವನಾತ್ಮಕ ತರಬೇತಿಯ ಕೊರತೆ ಮಕ್ಕಳಿದೆ. ಪೋಷಕರು ಊಟ, ಬಟ್ಟೆ ಮತ್ತು ಶಿಕ್ಷಣವನ್ನು ಒದಗಿಸುತ್ತಾರೆ ನಿಜ, ಆದರೆ ಭಾವನಾತ್ಮಕ ಬಾಂಧವ್ಯದ ಕೊರತೆ ಇದೆ. ಈಗಿನ ಮಕ್ಕಳಿಗೆ ಸಂಪನ್ಮೂಲಗಳಲ್ಲಿ ಕೊರತೆ ಇಲ್ಲ, ಆದರೆ ಭಾವನಾತ್ಮಕ ಬಾಂಧವ್ಯ ಕಡಿಮೆ.
ನಿಜ ಹೇಳಬೇಕೆಂದರೆ ಒಂದಿಡೀ ಪೀಳಿಗೆ ಮಾನವೀಯತೆಯನ್ನು ಕಳೆದುಕೊಳ್ಳುವ ಹಂತದಲ್ಲಿದೆ. ಇದಾಗಬಾರದೆಂದರೆ ಇಲ್ಲಿ ಪೋಷಕರು, ಶಿಕ್ಷಕರು, ಮತ್ತು ಮಾಧ್ಯಮ ಮತ್ತು ಸಮಾಜದ ಜವಾಬ್ದಾರಿ ಸಾಕಷ್ಟಿದೆ.
ಮಕ್ಕಳ ಮೆದುಳಿನ ಬೆಳವಣಿಗೆ ಮೆದುಳಿನ ಹಿಂದಿನ ಭಾಗದಿಂದ ಶುರುವಾಗುತ್ತದೆ. ಅವುಗಳೆಂದರೆ ಮೊದಲ ಹಂತ ಸ್ಪರ್ಶ, ದೃಷ್ಟಿ, ಶ್ರವಣ ಭಾವನೆ, ಕಲಿಕೆ, ಗಮನಿಸುವಿಕೆಗೆ ಸಂಬಂಧ ಪಟ್ಟ ಭಾಗಗಳು. ಹಾಗಾಗಿಯೇ ಬಾಲ್ಯದ ಮೊದಲ ಹಂತದಲ್ಲಿ ಕಲಿತ ವಿಷಯ, ಭಾವನೆಗಳು, ಅನುಭವಗಳ ನೋವು, ನಲಿವು, ವಿಚಾರಗಳು ಸುಪ್ತ ಮನಸ್ಸಿನಲ್ಲಿ ಬೇರೂರುತ್ತದೆ.
ಆದರೆ, ತಾಳ್ಮೆ ಸಹನೆ, ವಿಚಾರಶೀಲತೆ ಇವುಗಳು ಮೆದುಳಿನ ಮುಂಭಾಗದ ಒಂದು ಒಳಭಾಗದ ಕಾರ್ಯ. ಅದನ್ನು ಪ್ರಿ ಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯುತ್ತೇವೆ. ಇದರ ಪರಿಪೂರ್ಣ ಬೆಳವಣಿಗೆ 25 ವರ್ಷಕ್ಕೆ ಮುಗಿಯುತ್ತದೆ. ಅಲ್ಲಿಯವರೆಗೂ ಎಲ್ಲರೂ ಮಕ್ಕಳೇ. ಈ ಮೆದುಳಿನ ಪರಿಪೂರ್ಣ ಬೆಳವಣಿಗೆಯಾಗದ ಸಮಯದಲ್ಲಿ ಈ ಅತೀವ ತಂತ್ರಜ್ಞಾನ, ಅತೀ ಬುದ್ದಿ, ಮಾಹಿತಿ ಎಲ್ಲವೂ ಅಪಾಯವನ್ನೇ ತಂದೊಡ್ಡಬಲ್ಲವು.
ಪೋಷಕರು, ಸಮಾಜ ಮಾಡಬೇಕಿರುವುದೇನು?
ಆದ್ದರಿಂದಲೇ ಯಾವುದು ಸರಿ, ಯಾವುದು ತಪ್ಪು, ಯಾವುದು ಅತಿ ಎಂಬೆಲ್ಲಾ ಪೋಷಕರ ಮಾರ್ಗದರ್ಶನ ಈ ನಿಟ್ಟಿನಲ್ಲಿ ಅತ್ಯಗತ್ಯ. ಹಾಗೆಯೇ ಮಾಧ್ಯಮಗಳದ್ದೂ ಕೂಡ ಯಾವ ಮಾಹಿತಿ ಬೇಕಾದರೂ ಯಾವ ವಯಸ್ಸಿನವರಿಗೂ ಸಿಗುವ ಕಾಲದಲ್ಲಿ ಕ್ರೌರ್ಯ, ಅನೀತಿ, ಹಿಂಸೆ ಇಂತಹ ವಿಷಯಗಳ ವಿಜೃಂಭಣೆ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಯೋಚಿಸಿದರೆ ಉತ್ತಮ ಸಮಾಜದ ನಿರ್ಮಾಣಕ್ಕೆ ಅವರು ಸಹಾ ಕೊಡುಗೆ ನೀಡಬಹುದು.
ಮೊದಲು ಶಾಲೆ, ಮಾಧ್ಯಮ ಮತ್ತು ಸಮಾಜ ಶಕ್ತಿ, ಹುಂಬ ಧೈರ್ಯ ಮತ್ತು ಫ್ಯಾಂಟಸಿ ಯಶಸ್ಸನ್ನು ಮೆರೆದಾಡಿಸುವುದನ್ನು ನಿಲ್ಲಿಸಬೇಕು. ಯಾವುದೇ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಯಾರನ್ನೋ ಹೊಡಿ, ಬಿಡಿ ಕೊಲ್ಲು ಅಂದರೆ ಅಥವಾ ಅಶ್ಲೀಲ ಪದ ಬಳಸಿದರೆ ಅಲ್ಲಿಯೇ ಅದು ತಪ್ಪು ಎಂದು ಬಿಡಿಸಿ ಹೇಳಬೇಕು. ಭಾವಾನಾತ್ಮಕ ಬಂಧ, ಕರುಣೆ, ತ್ಯಾಗ, ಸಹಾನುಭೂತಿ ಮತ್ತೊಬ್ಬರೆಡೆ ಕಾಳಜಿ ಮುಂತಾದವುನ್ನು ಪರಿಚಯಿಸಬೇಕು.
ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಮೂಲಕ ಇವುಗಳನ್ನು ಹೇಳಿಕೊಡುವುದಲ್ಲದೇ ಯಾವ ಸಮಯದಲ್ಲಿ ದುಷ್ಟರ ವಿರುದ್ಧ ನಿಲ್ಲಬೇಕು ಎಂಬುದನ್ನು ಅದೇ ದೃಷ್ಟಾಂತಗಳ ಮೂಲಕ ಹೇಳಿಕೊಡಬೇಕು.
ಮಕ್ಕಳಿಗೆ ಡಿಲೇಡ್ ಗ್ರಾಟಿಫಿಕೇಶನ್ ಕಲಿಸಬೇಕು. ಅಂದರೆ ಕಾದು ನಡೆಯುವ ತಾಳ್ಮೆ ಮತ್ತು ಸಹನೆ. ಬೇಕಾದದ್ದು ದಿಢೀರ್ ಎಂದು ಸಿಗುವುದೂ ಅಸಹನೆ ಮತ್ತು ದುಡುಕಿಗೆ ಕಾರಣವಾಗುತ್ತದೆ.
ಅವರಿಗೆ ಮೊಬೈಲ್ ಕೊಡುವಾಗ ಅಥವಾ ಟಿವಿ ನೋಡುವಾಗ ಎಂತಹ ವಿಷಯಗಳು ಅವರ ಕಣ್ಣಿಗೆ ಬೀಳಬೇಕು ಮತ್ತು ಬೀಳಬಾರದು ಎಂದು ನಿರ್ಧರಿಸಿ.
ಆದಷ್ಟು ಧನಾತ್ಮಕ ಕಥೆಗಳನ್ನು ಹೇಳಿ ಅವರು ಕಥೆ ಕೇಳುವುದನ್ನು ಅಭ್ಯಾಸ ಮಾಡಬೇಕು (ಟಿವಿ ಅಥವಾ ಮೊಬೈಲ್, ಕಂಪ್ಯೂಟರ್ ಮೂರು ಬೇಡ). ಕಥೆ ಹೇಳುತ್ತಾ ಅದನ್ನು ಕೇಳುತ್ತಾ ಅವರು ಆ ಭಾವನೆಗಳು, ಅದರಲ್ಲಿನ ದೃಶ್ಯಾವಳಿಗಳನ್ನು ಕಲ್ಪಿಸಿಕೊಳ್ಳುತ್ತಾ ಅವರ ಒಳಗಿನ ಪ್ರಪಂಚ ಬೆಳೆಯುತ್ತಾ ಹೋಗುತ್ತದೆ.
ಬಹಳಷ್ಟು ಪೋಷಕರು ಒಂದೋ ಬಹಳ ಕಟ್ಟುನಿಟ್ಟು ಅಥವಾ ಪೂರ್ಣ ಸಲುಗೆ ಕೊಡುತ್ತಾರೆ. ಒಂದೋ ಅತೀವ ಕಾಳಜಿ ಇಲ್ಲ, ಸಂಪೂರ್ಣ ಕುರುಡುತನ. ಇವೆಲ್ಲವೂ ಅವರನ್ನು ಅವರು ಮುಂದೇನಾಗುತ್ತಾರೆ ಎಂದು ನಿರ್ಧರಿಸುತ್ತದೆ. ಶಿಕ್ಷಣ ಅದರಲ್ಲಿಯೂ ನೈತಿಕ ಶಿಕ್ಷಣ ಬಹಳ ಮುಖ್ಯ. ಜೊತೆಗೆ ಭಾವನಾತ್ಮಕ ಜೀವನ ಕಲೆಯೂ ಇರಲಿ.
ಶಾಲೆಗಳು ಅಂಕಗಳ ಹಿಂದೆ, ಪೋಷಕರು ರ‍್ಯಾಂಕ್ ಮಿಡಿಯಾ ರೆಕಗ್ನಿಷನ್‌ಗಳ ಹಿಂದೆ, ಸಿನಿಮಾ ಮತ್ತು ಮಾಧ್ಯಮಗಳು ಹಣ ಮಾಡುವುದರ ಹಿಂದೆ ಬಿದ್ದು ಮಕ್ಕಳ ಮೂಲ ಮುಗ್ಧತೆಯನ್ನೇ ಕೊಲ್ಲುತ್ತಿದ್ದಾರೆ. ಏನಾದರಾಗಲಿ ಮೊದಲು ಮನುಷ್ಯತ್ವ ಉಳಿಸುವುದು ಬೆಳೆಸುವುದು ಬಹಳ ಮುಖ್ಯ. ಅದೇ ಇಲ್ಲದಿದ್ದ ಮೇಲೆ ಬದುಕೇ ಇಲ್ಲದಂತಾಗುತ್ತದೆ. ಅದರಿಂದ ಏನು ಪ್ರಯೋಜನ?
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990