Parenting Tips: ಪಾಲಕರೇ, ಮಗುವಿನ ಭವಿಷ್ಯ ನಿಮ್ಮ ಕೈಯಲ್ಲಿದೆ; ಈ ತಪ್ಪುಗಳನ್ನು ಎಂದಿಗೂ ಮಾಡದಿರಿ
ಪಾಲಕರಲ್ಲಿನ ಕೆಲವೊಂದು ಅಭ್ಯಾಸಗಳು ಮತ್ತು ರೀತಿ ನೀತಿಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಮಕ್ಕಳನ್ನು ನಡೆಸಿಕೊಳ್ಳುವ ರೀತಿಯನ್ನು ನೀವು ಬದಲಾಯಿಸದಿದ್ದರೆ, ಅದರಿಂದ ಅವರ ಭವಿಷ್ಯದ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ನಿಮ್ಮ ಮಗುವಿನ ಭವಿಷ್ಯ ರೂಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎನ್ನುವುದನ್ನು ಮರೆಯಬಾರದು.

ಮಕ್ಕಳ ಭವಿಷ್ಯವನ್ನು ಚೆನ್ನಾಗಿ ರೂಪಿಸಬೇಕು ಮತ್ತು ಅವರಿಗೆ ಬೇಕಾಗಿರುವುದನ್ನು ಕೊಡಿಸಬೇಕು, ಮಕ್ಕಳ ವಿಚಾರದಲ್ಲಿ ಸ್ವಲ್ಪ ಕಟ್ಟುನಿಟ್ಟು ಜಾಸ್ತಿಯಾಗಿಯೇ ಇರಬೇಕು ಎಂದು ಹಲವು ಪಾಲಕರು ಅಂದುಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಮಕ್ಕಳ ಜತೆ ಪಾಲಕರು ಗೊತ್ತಿದ್ದೋ, ಗೊತ್ತಿಲ್ಲದೆಯೋ, ವಿವಿಧ ರೀತಿಯಲ್ಲಿ ತಪ್ಪಾಗಿ ನಡೆದುಕೊಳ್ಳುತ್ತಾರೆ. ಅವರ ನಡವಳಿಕೆ ಮಕ್ಕಳ ಮೇಲೆ ಗಾಢವಾದ ಪ್ರಭಾವ ಬೀರಬಹುದು ಮತ್ತು ಅವರ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗಬಹುದು. ಪಾಲಕರಲ್ಲಿರುವ ಅಂತಹ ಅಭ್ಯಾಸಗಳು ಯಾವುವು ಮತ್ತು ಅದರಿಂದ ಮಕ್ಕಳಿಗೆ ಹೇಗೆ ಸಮಸ್ಯೆಯಾಗುತ್ತದೆ ಎನ್ನುವ ವಿವರ ಇಲ್ಲಿದೆ.
ಮಕ್ಕಳನ್ನು ಸದಾ ಹೀಯಾಳಿಸುವುದು
ಕೆಲವು ಪಾಲಕರು ಕಾರಣವಿರಲಿ, ಇಲ್ಲದಿರಲಿ. ಮಕ್ಕಳನ್ನು ಸದಾ ಹೀಯಾಳಿಸುವುದು ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ತಮಾಷೆಗಾಗಿ ಮಕ್ಕಳಿಗೆ ತಮಾಷೆ ಮಾಡುವುದು ಇಲ್ಲವೇ ಅವರ ಬಗ್ಗೆ ತಾತ್ಸಾರದಿಂದ ಮಾತನಾಡುವುದನ್ನು ಮಾಡುತ್ತಾರೆ. ಆದರೆ ಹಾಗೆ ಮಾಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಕೊರತೆ ಉಂಟಾಗುತ್ತದೆ. ಹೀಗಾಗಿ ಅವರು ಮಾನಸಿಕವಾಗಿ ಕುಗ್ಗುತ್ತಾರೆ. ಮಕ್ಕಳು ಸರಿಯಾಗಿ ಹೋಮ್‌ವರ್ಕ್ ಮಾಡುತ್ತಿಲ್ಲ ಎಂದು ಅವರನ್ನು ಹೀಯಾಳಿಸುವ ಬದಲು, ಯಾಕೆ ಸರಿಯಾಗಿ ಹೋಮ್‌ವರ್ಕ್ ಮಾಡಿಲ್ಲ ಎಂದು ಕೇಳಿ ನೋಡಿ. ಜತೆಗೆ, ಅವರ ಹೋಮ್‌ವರ್ಕ್‌ಗೆ ಏನು ತೊಂದರೆಯಾಗಿದೆ, ಸರಿಪಡಿಸುವುದು ಹೇಗೆ ಮತ್ತು ಅದಕ್ಕೆ ಪರಿಹಾರ ಏನು ಎನ್ನುವುದನ್ನು ಕಂಡುಕೊಳ್ಳಿ. ಹಾಗೆ ಮಾಡಿದರೆ, ಮಕ್ಕಳಿಗೆ ಸೂಕ್ತ ಬೆಂಬಲ ಮತ್ತು ಸಹಾಯ ದೊರೆಯುತ್ತದೆ.
ಪ್ರತಿ ಹಂತದಲ್ಲೂ ನಿರ್ಬಂಧ
ಮಕ್ಕಳ ನಡವಳಿಕೆಯನ್ನು ಪ್ರತಿ ಹಂತದಲ್ಲೂ ಸೂಕ್ಷ್ಮವಾಗಿ ಗಮನಿಸುವುದು ಮತ್ತು ಮಧ್ಯಪ್ರವೇಶಿಸುವ ಅಭ್ಯಾಸ ಕೆಲವು ಪಾಲಕರಿಗೆ ಇರುತ್ತದೆ. ಮಕ್ಕಳನ್ನು ರಕ್ಷಿಸುವ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ನೆಪದಲ್ಲಿ ಅವರಿಗೆ ಕಿರಿಕಿರಿಯುಂಟುಮಾಡಿದರೆ, ಅವರು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಅದರಿಂದ ಅವರ ಬೆಳವಣಿಗೆಗೆ ಅಡ್ಡಿಯಾಗಬಹುದು. ಅದರ ಬದಲು, ಅವರಿಗೆ ಹೊಸ ಅವಕಾಶ ಕಲ್ಪಿಸಿ, ಅವರಲ್ಲಿ ನಂಬಿಕೆಯಿಡಿ, ಹಾಗೆ ಮಾಡಿದರೆ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅವರಿಗೆ ಸಹಾಯ ಮಾಡಿದರೆ, ಸ್ಫೂರ್ತಿಯೂ ದೊರೆಯುತ್ತದೆ.
ಇದನ್ನೂ ಓದಿ: ತೆಳ್ಳಗೆ ಬಳುಕುವ ಚಪ್ಪಟೆಯಾದ ಹೊಟ್ಟೆ ನಿಮ್ಮದಾಗಬೇಕೇ? ಫಿಟ್ನೆಸ್ ಟ್ರೈನರ್ ಸಲಹೆ ಕೇಳಿ
ಇತರ ಮಕ್ಕಳೊಂದಿಗೆ ಹೋಲಿಕೆ
ಕೆಲವೊಮ್ಮೆ ಒಡಹುಟ್ಟಿದವರ ಜತೆ, ಮತ್ತೆ ಕೆಲವೊಮ್ಮೆ ನೆರೆಮನೆಯವರ ಜತೆ ಇನ್ನು ಕೆಲವೊಮ್ಮೆ ಸಂಬಂಧಿಗಳ ಜತೆ ಮಕ್ಕಳನ್ನು ಹೋಲಿಸಿ ಪಾಲಕರು ತಮ್ಮ ಮಕ್ಕಳನ್ನು ಮೂದಲಿಸುತ್ತಾರೆ. ಇದರಿಂದ ಮಕ್ಕಳಲ್ಲಿ ಕೀಳರಿಮೆ ಉಂಟಾಗುತ್ತದೆ. ಅವರು ಹಾಗೆ ಸಾಧನೆ ಮಾಡಿದರು, ಇವರು ಹೀಗೆ ಸಾಧನೆ ಮಾಡಿದರು ಎಂದು ಹೇಳುತ್ತಾ, ಮಕ್ಕಳಲ್ಲಿ ತಾವು ಕೀಳು, ಅವರು ಮೇಲು ಎಂಬ ಭಾವನೆ ಮೂಡಿಸುತ್ತಾರೆ.
ಅತಿಯಾದ ಶಿಸ್ತು ಮತ್ತು ಕಟ್ಟುನಿಟ್ಟು
ಕೆಲವು ಪಾಲಕರು ಮಕ್ಕಳ ಜತೆ ಅತಿಯಾದ ಕಟ್ಟುನಿಟ್ಟು ಮತ್ತು ಶಿಸ್ತನ್ನು ತೋರ್ಪಡಿಸುತ್ತಾರೆ. ಮಕ್ಕಳಲ್ಲಿ ಶಿಸ್ತು, ಕಟ್ಟುನಿಟ್ಟು ಬೇಕು ನಿಜ, ಆದರೆ ಅತಿಯಾಗಿ ಅವರನ್ನು ದಂಡಿಸುವುದು ಮತ್ತು ಶಿಸ್ತಿನ ಹೆಸರಿನಲ್ಲಿ ಅವರಿಗೆ ಬೈಗುಳ, ಹೀಯಾಳಿಸುವುದನ್ನು ಮಾಡಬಾರದು. ಏನಾದರೂ ತಪ್ಪು ಮಾಡಿದರೆ ಬುದ್ಧಿ ಹೇಳಬೇಕು.
ಇದನ್ನೂ ಓದಿ: ರಾತ್ರಿ ಒಳಉಡುಪು ಧರಿಸದೇ ಮಲಗಿದರೆ ಎಷ್ಟೊಂದು ಪ್ರಯೋಜನ; ವೈದ್ಯರ ಟಿಪ್ಸ್ ಇಲ್ಲಿದೆ
ಹೆಚ್ಚಿನ ಅಂಕ ಗಳಿಕೆಗೆ ಒತ್ತಡ
ಮಕ್ಕಳ ಆಸಕ್ತಿಯ ಕ್ಷೇತ್ರ ಯಾವುದು, ಅವರ ಹವ್ಯಾಸಗಳು ಏನು, ಹೇಗೆ ಎನ್ನುವುದನ್ನು ಅರಿತುಕೊಳ್ಳಬೇಕು. ಅದರ ಬದಲು, ಪಾಲಕರು ತಮ್ಮ ಇಷ್ಟವನ್ನು ಅವರ ಮೇಲೆ ಹೇರಿ, ಹೆಚ್ಚಿನ ಅಂಕ ಗಳಿಸುವಂತೆ ಒತ್ತಡ ಹೇರಬಾರದು. ಮಕ್ಕಳ ಮಾನಸಿಕ ಆರೋಗ್ಯವೂ ಮುಖ್ಯ ಎನ್ನುವುದನ್ನು ಮರೆಯಬಾರದು.
ನಿಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಇರುವುದು
ಕೆಲವೊಮ್ಮೆ ಪಾಲಕರು ಸಣ್ಣಪುಟ್ಟ ತಪ್ಪು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಅದನ್ನು ಅವರು ಒಪ್ಪಿಕೊಳ್ಳಬೇಕು, ಹಾಗೆ ಮಾಡಿದರೆ ಮಕ್ಕಳಿಗೂ ನಿಮ್ಮ ಬಗ್ಗೆ ಪ್ರಾಮಾಣಿಕ ಭಾವನೆ ಮೂಡುತ್ತದೆ. ಜತೆಗೆ ಮಕ್ಕಳ ಜತೆಗಿನ ನಿಮ್ಮ ಬಾಂಧವ್ಯ ಮತ್ತು ಸಂಬಂಧವೂ ಸುಧಾರಿಸುತ್ತದೆ.
