ಕನ್ನಡ ಸುದ್ದಿ  /  ಜೀವನಶೈಲಿ  /  Parenting: ಮಕ್ಕಳನ್ನ ಬೆಳೆಸುವಾಗ ಪೋಷಕರು ನಿರ್ವಹಿಸುವ ಪ್ರಭಾವ ಹೇಗಿರುತ್ತೆ; ಮಗುವಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ

Parenting: ಮಕ್ಕಳನ್ನ ಬೆಳೆಸುವಾಗ ಪೋಷಕರು ನಿರ್ವಹಿಸುವ ಪ್ರಭಾವ ಹೇಗಿರುತ್ತೆ; ಮಗುವಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಬೈಯ್ಯುವುದು, ಹೊಡೆಯುವುದರಿಂದ ಮಕ್ಕಳು ಬುದ್ಧಿ ಕಲಿತು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡುತ್ತಾರೆ ಎಂಬ ನಂಬಿಕೆ ಹೊಂದಿರುವುದು ಸರಿಯಲ್ಲ. ಮಕ್ಕಳ ಉತ್ತಮ ರೀತಿಯಲ್ಲಿ ಬೆಳೆಯಲು ಪೋಷಕರು ಏು ಮಾಡಬೇಕು, ಸವಾಲುಗಳೇನು ಅನ್ನೋದರ ಮಾಹಿತಿ ಇಲ್ಲಿದೆ.

ಮಕ್ಕಳನ್ನ ಬೆಳೆಸುವಾಗ ಪೋಷಕರು ನಿರ್ವಹಿಸುವ ಪ್ರಭಾವ ಹೇಗಿರುತ್ತೆ; ಮಗುವಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ
ಮಕ್ಕಳನ್ನ ಬೆಳೆಸುವಾಗ ಪೋಷಕರು ನಿರ್ವಹಿಸುವ ಪ್ರಭಾವ ಹೇಗಿರುತ್ತೆ; ಮಗುವಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ

ಹಿಂದೆಲ್ಲಾ ಅವಿಭಕ್ತ ಕುಟುಂಬ ಚಾಲ್ತಿಯಲ್ಲಿತ್ತು. ಇಂದು ಕುಟುಂಬಗಳು ಹಂಚಿ ಹೋಗಿದ್ದು, ಗಂಡ-ಹೆಂಡತಿ ಮಕ್ಕಳಿಗಷ್ಟೇ ಸೀಮಿತವಾಗಿದೆ. ಓದಿ ಕೆಲಸಕ್ಕೆಂದು ಪಟ್ಟಣಕ್ಕೆ (ನಗರಗಳಿಗೆ) ಬರುವ ಮಕ್ಕಳು, ಮದುವೆಯಾಗಿ ಇಲ್ಲೇ ಸೆಟಲ್ ಆದ್ರೆ, ತಂದೆ-ತಾಯಿ ಊರಿನಲ್ಲಿರುವ ಮನೆಯಲ್ಲಿರುತ್ತಾರೆ. ಅದೆಷ್ಟೋ ಹಳ್ಳಿಗಳು ಇಂದು ವೃದ್ಧಾಶ್ರಮದಂತಿದೆ ಅನ್ನೋ ಮಾತುಗಳನ್ನು ನೀವು ಕೇಳಿರಬಹುದು. ಇನ್ನು ಪೋಷಕರ ವಿಷಯಕ್ಕೆ ಬಂದಾಗ ಕುಟುಂಬಗಳಲ್ಲಿ ಹೆಚ್ಚಿನ ವೈವಿಧ್ಯತೆಯಿದೆ. ಕುಟುಂಬ ಘಟಕವು ಹೇಗೆ ಅಸ್ತಿತ್ವದಲ್ಲಿದೆ ಮತ್ತು ಮಕ್ಕಳನ್ನು ಹೇಗೆ ಬೆಳೆಸಲಾಗುತ್ತದೆ ಎಂಬುದರ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ.

ಪೋಷಕರ (Parenting) ಶೈಲಿಯು ತಮ್ಮ ಮಕ್ಕಳ ಕಡೆಗೆ ಪೋಷಕರು ಹೊಂದಿರುವ ವಿಧಾನವನ್ನು ಸೂಚಿಸುತ್ತದೆ. ನಾವು ಚಿಕ್ಕವರಿರುವಾಗ ನಮ್ಮ ತಂದೆ-ತಾಯಿ ನಮಗೆ ಸರಿಯಾಗಿ ಬೆನ್ನಿಗೆ ಗೂಸಾ ನೀಡುತ್ತಿದ್ದರು. ಕೇಳಿದ್ದೆಲ್ಲವನ್ನೂ ಅಷ್ಟು ಸುಲಭವಾಗಿ ಕೊಡುತ್ತಿರಲಿಲ್ಲ. ಆದರೆ, ಈಗಿನ ಮಕ್ಕಳಿಗೆ ಈ ರೀತಿಯಿಲ್ಲ. ಕೇಳಿದ್ದೆಲ್ಲಾ ಕ್ಷಣಾರ್ಧದಲ್ಲಿ ಸಿಗುತ್ತದೆ ಅಂತಾ 90ರ ದಶಕ ಹಾಗೂ ಅದರ ಹಿಂದಿನ ದಶಕದವರು ಹೇಳುವ ಮಾತಿದು. ಆದರೆ, ಮಕ್ಕಳ ಪಾಲನೆಯಲ್ಲಿ ನಾವು ತುಂಬಾ ಜಾಗರೂಕರಾಗಿರಬೇಕು. ಬೈಯ್ಯುವುದು, ಹೊಡೆಯುವುದರಿಂದ ಮಕ್ಕಳು ಬುದ್ಧಿ ಕಲಿಯುತ್ತಾರೆ ಎಂದು ಹೇಳಲು ಆಗುವುದಿಲ್ಲ. ಪಾಲನೆಯ ಶೈಲಿಯು ಮಕ್ಕಳು ಪ್ರೌಢಾವಸ್ಥೆಯಲ್ಲಿ ಬೆಳೆದಂತೆ ದೀರ್ಘಾವಧಿಯ ಪರಿಣಾಮಗಳನ್ನು ಬೀರಬಹುದು. ಅವುಗಳಲ್ಲಿ ಕೆಲವು ಶೈಲಿಗಳು ಈ ಕೆಳಗಿನಂತಿವೆ.

ಟ್ರೆಂಡಿಂಗ್​ ಸುದ್ದಿ

ಅನುಮತಿ ಪಾಲನೆ: ಇದು ಹೆಚ್ಚು ಸಹಿಷ್ಣುವಾಗಿರುವ, ಕಡಿಮೆ ನಿರೀಕ್ಷೆಗಳನ್ನು ಹೊಂದಿರುವ ಹಾಗೂ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರುವ ಪೋಷಕರ ಸ್ವಭಾವವಾಗಿದೆ. ಪೋಷಕರ ಈ ಶೈಲಿಯು ಮಕ್ಕಳ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರಬಹುದು. ಈ ರೀತಿಯ ಪೋಷಕರೊಂದಿಗೆ ಮಕ್ಕಳು ಸ್ವಯಂ ನಿಯಂತ್ರಣದಿಂದ ಹೋರಾಡಬಹುದು. ಅಲ್ಲದೆ ನಿಯಮಗಳು ಹಾಗೂ ಪೋಷಕರು ಹಾಕಿರುವ ರೇಖೆಯನ್ನು ಮೀರಲು ಕಷ್ಟವಾಗಬಹುದು. ಇತರರನ್ನು ಪರಿಗಣಿಸದೆ ತಮ್ಮ ಆಸೆಗಳನ್ನು ಪೂರೈಸಬೇಕು ಎಂದು ಮಕ್ಕಳು ನಿರೀಕ್ಷಿಸಬಹುದು.

ನಿರಂಕುಶ ಪಾಲನೆ: ನಮ್ಮಪ್ಪ, ಅಮ್ಮ ತುಂಬಾ ಸ್ಟ್ರಿಕ್ಟ್ ಇದ್ದಾರೆ ಎಂದು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಹೇಳಿರುವುದನ್ನು ಕೇಳಿರಬಹುದು. ಕೆಲವು ಪೋಷಕರು ಕಟ್ಟುನಿಟ್ಟಾದ (ತಾವು ಹೇಳಿದಂತೆಯೇ ಆಗಬೇಕು ಎಂಬ), ಬೇಡಿಕೆಯಿರುವ ಮತ್ತು ಮಕ್ಕಳ ಮೇಲೆ ನಿಯಂತ್ರಣವನ್ನು ತರುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಶಿಕ್ಷೆಯನ್ನು ಶಿಸ್ತಿನ ಸಾಧನವಾಗಿ ಬಳಸುತ್ತಾರೆ. ಮಕ್ಕಳ ಬೆಳವಣಿಗೆಯ ಮೇಲೆ ಈ ರೀತಿಯ ಪಾಲನೆಯಿಂದ ಹಲವು ಪರಿಣಾಮಗಳನ್ನು ಎದುರಿಸಬೇಕಾದೀತು. ಇದರಿಂದ ಮಕ್ಕಳು ತಮ್ಮಷ್ಟಕ್ಕೆ ಯೋಚಿಸಲು ಮತ್ತು ತಮಗಿಷ್ಟವಾದ ಆಯ್ಕೆಗಳನ್ನು ಮಾಡಲು ಹೆಣಗಾಡಬಹುದು.

ನಿರಂತರ ಬೈಗುಳ ಹಾಗೂ ಶಿಕ್ಷೆ ನೀಡುವುದರಿಂದ ಮಕ್ಕಳಲ್ಲಿ ಸ್ವಯಂ ಮೌಲ್ಯ ಮತ್ತು ಆತ್ಮವಿಶ್ವಾಸ ಕ್ಷೀಣಿಸಲು ಕಾರಣವಾಗಬಹುದು. ಕೆಲವು ಮಕ್ಕಳು ಬಂಡಾಯದ ವರ್ತನೆಯನ್ನು ಬೆಳೆಸಿಕೊಳ್ಳಬಹುದು. ಇನ್ನೂ ಕೆಲವರು ತಾವು ಬೆಳೆಯುತ್ತಾ ಹೋದಂತೆ ಪೋಷಕರಲ್ಲಿನ ಪ್ರೀತಿ ಕಡಿಮೆಯಾಗಿ ಬೇರೆ ಪ್ರೀತಿಯತ್ತ ಮನಸ್ಸು ಜಾರುವ ಪ್ರಕರಣಗಳು ಹೆಚ್ಚಿವೆ. ಅತಿಯಾಗಿ ಹೊಡೆಯುವುದರಿಂದ ಮಕ್ಕಳು ಬೆಳೆಯುತ್ತಾ ಕಠಿಣ ಮನಸ್ಸನ್ನು ಹೊಂದುವಂತಾಗುತ್ತಾರೆ. ಅವರೂ ಕೂಡ ಬೇರೆಯವರಿಗೆ ನಿಂದಿಸುವುದು, ಹೊಡೆಯಲು ಮುಂದಾಗುವಂತಹ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಅಧಿಕೃತ ಪಾಲನೆ: ಈ ರೀತಿಯ ಪೋಷಕರು ತಮ್ಮ ಮಕ್ಕಳ ಮೇಲೆ ನಿಯಮಗಳು ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಇವರು ಮಕ್ಕಳಿಗೆ ಬೆಂಬಲ ಮತ್ತು ಮುಕ್ತ ಸಂವಹನವನ್ನು ಒದಗಿಸುತ್ತಾರೆ. ತಿಳುವಳಿಕೆ ನೀಡುವುದು, ಮಾರ್ಗದರ್ಶನ ತೋರುವುದು ಹಾಗೂ ಮಕ್ಕಳಿಗೆ ವಿವರಿಸುವುದರಲ್ಲಿ ಶಿಸ್ತನ್ನು ಸಮತೋಲನಗೊಳಿಸುತ್ತಾರೆ. ಇದರಿಂದ ಮಕ್ಕಳು ಸ್ವಾಭಿಮಾನದ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾರೆ. ಈ ಮಕ್ಕಳು ಸಾಮಾನ್ಯವಾಗಿ ಉತ್ತಮ ಸ್ವಯಂ ನಿಯಂತ್ರಣ ಕೌಶಲ್ಯ ಹಾಗೂ ಉತ್ತಮ ಸಾಮಾಜಿಕ ಕೌಶಲ್ಯಗಳನ್ನು ತೋರುತ್ತಾರೆ. ಅಲ್ಲದೆ ಸಂಬಂಧಗಳನ್ನು ನಿಭಾಯಿಸುವ ಸಾಮರ್ಥ್ಯವೂ ಇವರಲ್ಲಿರುತ್ತದೆ. ಇಂತಹ ಮಕ್ಕಳು ಬೆಳೆದಂತೆ ಜವಾಬ್ದಾರಿಯುತ ಹಾಗೂ ಸಮರ್ಥ ವ್ಯಕ್ತಿಗಳಾಗುತ್ತಾರೆ.

ನಿರ್ಲಕ್ಷ್ಯದ ಪಾಲನೆ: ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರುವ ಪೋಷಕರು ತಮ್ಮ ಮಕ್ಕಳ ಅಗತ್ಯತೆಗಳ ಬಗ್ಗೆ ಯಾವುದೇ ಸಂಬಂಧವಿಲ್ಲದಂತೆ, ಭಾವನಾತ್ಮಕವಾಗಿ ನಿರ್ಲಿಪ್ತರಾಗಿರುವುದು, ಯಾವುದಕ್ಕೂ ಪ್ರತಿಕ್ರಿಯಿಸದೆ ನಿರ್ಲಕ್ಷ್ಯ ಧೋರಣೆ ತಾಳುತ್ತಾರೆ. ಕನಿಷ್ಠ ಈ ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡುವುದು, ಮೇಲ್ವಿಚಾರಣೆ, ಬೆಂಬಲ ನೀಡುವುದು ಮಾಡಬಹುದು. ಹಾಗಂತ ನಿರ್ಲಕ್ಷ್ಯ ಧೋರಣೆಯು ಮಕ್ಕಳ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಮಕ್ಕಳು ಭಾವನಾತ್ಮಕ ಮತ್ತು ನಡವಳಿಕೆಯ ಸಮಸ್ಯೆಗಳಲ್ಲಿ ತೊಂದರೆಗಳನ್ನು ಅನುಭವಿಸಬಹುದು. ಮಕ್ಕಳ ಶೈಕ್ಷಣಿಕ ಫಲಿತಾಂಶಗಳಿಗೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಮಕ್ಕಳು ಇತರರನ್ನು ನಂಬಲು ಭೀತಿಪಡುತ್ತಾರೆ.

ಮಕ್ಕಳ ಮೇಲೆ ಪೋಷಕರು ತೋರುವ ಭಾವನೆಯು ವಿಭಿನ್ನ ಮಿಶ್ರಣಗಳ ಸಾರವೆಂದರೆ ತಪ್ಪಲ್ಲ. ಪರಿಣಾಮಕಾರಿ ಪೋಷಕತ್ವವು ಹೊಂದಿಕೊಳ್ಳುವ ಗುಣವನ್ನು ಒಳಗೊಂಡಿರುತ್ತದೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನವನ್ನು ಒದಗಿಸುವುದರ ಜೊತೆಗೆ ಸಮತೋಲನವನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ. ಈ ಮೂಲಕ ಮಕ್ಕಳು ಜಗತ್ತನ್ನೇ ಗೆಲ್ಲಬಹುದು. ಇದು ಪೋಷಕರು ಮಕ್ಕಳನ್ನು ಯಾವ ರೀತಿ ಬೆಳೆಸುತ್ತಾರೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)