ಮಕ್ಕಳು ಶಾಲೆಗೆ ಹೋಗುವ ಮೊದಲ ದಿನದ ಫೋಟೊ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಮುನ್ನ ಈ ವಿಷಯ ಗಮನಿಸಿ; ಶ್ರೀನಿಧಿ ಡಿಎಸ್ ಬರಹ
ಇತ್ತೀಚಿಗೆ ಬದುಕಿನ ಎಲ್ಲಾ ಖುಷಿ, ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಸಹಜವಾಗಿದೆ. ಇದೀಗ ಮಕ್ಕಳ ಶಾಲೆ ಆರಂಭವಾಗಿದ್ದು, ಮಗು ಶಾಲೆಗೆ ಹೋಗುವ ಮೊದಲ ದಿನದ ಫೋಟೊವನ್ನು ಹಂಚಿಕೊಂಡು ಪೋಷಕರು ಸಂಭ್ರಮಿಸುತ್ತಿದ್ದಾರೆ. ಆದರೆ ಈ ಖುಷಿಯ ನಡುವೆ ಐಡಿ ಕಾರ್ಡ್‌ನಲ್ಲಿರುವ ವಿವರ ಮರೆಮಾಚಲು ಮರೆಯುತ್ತಿದ್ದಾರೆ. ಈ ಕುರಿತು ಶ್ರೀನಿಧಿ ಡಿಎಸ್ ಬರಹ ಇಲ್ಲಿದೆ.
ಫೇಸ್ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳು ಇಂದು ನಮ್ಮ ಬದುಕಿನ ಭಾಗವಾಗಿದೆ. ನಮ್ಮೆಲ್ಲಾ ಖುಷಿ, ದುಃಖ, ಬೇಸರವನ್ನು ಹಂಚಿಕೊಳ್ಳಲು ಇವು ವೇದಿಕೆಯಾಗಿರುವುದು ಸುಳ್ಳಲ್ಲ. ಬದುಕಿನ ಚಿಕ್ಕ ಪುಟ್ಟ ಕ್ಷಣಗಳನ್ನು ಫೇಸ್‌ಬುಕ್ ಪುಟಗಳಲ್ಲಿ ದಾಖಲಿಸುವುದು ಹಲವರಿಗೆ ರೂಢಿ, ಇದು ಖಂಡಿತ ತಪ್ಪಲ್ಲ. ನಮ್ಮ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು, ಅದಕ್ಕೆ ನಮ್ಮ ಸ್ನೇಹಿತರು ಹಾಗೂ ಆತ್ಮೀಯರಿಂದ ಬರುವ ಪ್ರತಿಕ್ರಿಯೆ ನೋಡಿದಾಗ ನಮಗೆ ಖುಷಿ ಎನ್ನಿಸುತ್ತದೆ. ಆದರೆ ಕೆಲವೊಮ್ಮೆ ಖುಷಿ, ನೋವು, ದುಃಖ ಹಂಚಿಕೊಳ್ಳುವ ಭರದಲ್ಲಿ ಖಾಸಗಿತನವನ್ನ ಮರೆಯುತ್ತಿದ್ದೇವೆ.
ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಂಚಿಕೊಳ್ಳುವ ಅದೆಷ್ಟೋ ವಿಚಾರಗಳು ನಮ್ಮ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂನಲ್ಲಿರುವ ಎಲ್ಲಾ ಸ್ನೇಹಿತರಿಗೂ ಸಿಗುತ್ತದೆ. ಇನ್ನೂ ಕೆಲವರು ನಮ್ಮ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂ ಅಕೌಂಟ್‌ಗಳಿಗೆ ಪ್ರೈವೆಸಿ ಸೆಟ್ ಮಾಡಿರುವುದೂ ಇಲ್ಲ. ಅಂತಹ ಸಂದರ್ಭಗಳಲ್ಲಿ ವಿಷಯಗಳೆಲ್ಲಾ ಪಬ್ಲಿಕ್ ಆಗುತ್ತದೆ ಎಂಬುದು ನಿಮ್ಮ ತಲೆಯಲ್ಲಿ ಇರಬೇಕು.
ಇದೀಗ ಶಾಲಾ ದಿನಗಳು ಆರಂಭವಾಗುತ್ತಿದ್ದು, ಕೆಲವೆಡೆ ಈಗಾಗಲೇ ಶಾಲೆ ಶುರುವಾಗಿದೆ. ಕೆಲವು ಮಕ್ಕಳಿಗೆ ಇದೇ ಮೊದಲ ಬಾರಿ ಶಾಲೆಯಾದರೆ ಇನ್ನೂ ಕೆಲವರಿಗೆ ಈಗಾಗಲೇ ಶಾಲೆ ಶುರುವಾಗಿದೆ. ಪೋಷಕರು ತಮ್ಮ ಮಕ್ಕಳ ಮೊದಲ ದಿನದ ಶಾಲೆಯ ಸಂಭ್ರಮವನ್ನು, ಯೂನಿಫಾರಂ ಧರಿಸಿ, ಸ್ಕೂಲ್ ಬ್ಯಾಗ್ ಹಿಡಿದು, ಐಡಿ ಕಾರ್ಡ್ ಹಾಕಿ ಶಾಲೆಗೆ ಹೊರಟ ಮಗುವಿನ ಫೋಟೊವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಖುಷಿ ಹಂಚಿಕೊಳ್ಳುವ ಭರದಲ್ಲಿ ಖಾಸಗಿ ಬದುಕಿಗೆ ಬಗ್ಗೆ ಮರೆಯುತ್ತಿದ್ದಾರೆ. ಮಗುವಿನ ಐಡಿ ಕಾರ್ಡ್‌ನಲ್ಲಿ ಮನೆ ವಿಳಾಸ, ಪೋಷಕರ ಮೊಬೈಲ್ ನಂಬರ್ ಸಹಿತ ಎಲ್ಲವೂ ಇರುತ್ತದೆ. ಹಾಗಾಗಿ ಮಕ್ಕಳ ಫೋಟೊ ಹಂಚಿಕೊಳ್ಳುವ ಮುನ್ನ ಪೋಷಕರು ಎಚ್ಚರ ವಹಿಸಬೇಕು. ಈ ಬಗ್ಗೆ ಶ್ರೀನಿಧಿ ಡಿಎಸ್ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡು ಬರಹ ಹೀಗಿದೆ:
ಶ್ರೀನಿಧಿ ಡಿಎಸ್ ಬರಹ
ಒಂದು ಕಳಕಳಿಯ ಮನವಿ: ಬಹಳ ಮಂದಿ ನಿಮ್ಮ ಮಕ್ಕಳ ಶಾಲೆಯ ಮೊದಲ ದಿನ ಎಂದು ಪೋಸ್ಟ್ ಹಾಕಿದ್ದೀರಿ. ಪುಟ್ಟ ಮಕ್ಕಳು ಶಾಲೆಯ ಯುನಿಫಾರಂನಲ್ಲಿ ನಿಂತಿರೋ ಮುದ್ದಾದ ಚಿತ್ರಗಳನ್ನ ನೋಡಿ ಸಂತೋಷವೂ ಆಯಿತು. ಆದರೆ, ಹಾಗೆ ಮಾಡುವ ಭರದಲ್ಲಿ- ನಿಮ್ಮ ಮನೆಯ ಅಡ್ರೆಸ್ಸು, ನಿಮ್ಮ ಮಕ್ಕಳ ಶಾಲೆ ಯಾವುದು, ಎಷ್ಟನೇ ಕ್ಲಾಸು ಎಂಬ ಎಲ್ಲ ವಿವರಗಳನ್ನು ಫೇಸ್‌ಬುಕ್‌ನಲ್ಲಿ ಯಾವ ಮುಲಾಜೂ ಇಲ್ಲದೇ ಹಂಚುತ್ತಿದ್ದೀರಿ. ತುಂಬ ಮಂದಿಯ ಪೋಸ್ಟ್ ಗಳು ’ಪಬ್ಲಿಕ್’ ಕೂಡ ಆಗಿವೆ.
ದಯಮಾಡಿ- ಫೇಸ್‌ಬುಕ್‌ಗೆ ನಿಮ್ಮ ಮಕ್ಕಳ ಫೋಟೊ ಹಾಕುವಾಗ ಅವರ ಐಡಿ ಕಾರ್ಡ್ ಚಿತ್ರಗಳನ್ನ ಮರೆಮಾಚಿ. ಅಲ್ಲಿ ನಿಮ್ಮ ಮಗುವಿಗೆ ಸಂಬಂಧಪಟ್ಟ ಎಲ್ಲ ವಿವರಗಳೂ ಇರುತ್ತವೆ. ಶಾಲೆಯ ಬಸ್ಸಿನ ಚಿತ್ರದಲ್ಲಿ/ ಶಾಲೆಯ ಫೋಟೊಗಳಲ್ಲಿ ಅಲ್ಲಿನ ವಿಳಾಸ ತಿಳಿಯುತ್ತದೆ. ಅವುಗಳನ್ನೂ ಹಾಕಬೇಡಿ. ಇವತ್ತಿನ ಕಾಲದಲ್ಲಿ ನಾವು ಇವುಗಳನ್ನು ಯಾಕೆ ಹಾಗೆ ಹಾಕಬಾರದು - ಅದರಿಂದ ಏನೆಲ್ಲ ಆಗಬಹುದು ಎಂಬುದನ್ನು ಮತ್ತೆ ವಿವರಿಸಿ ಹೇಳುವ ಅವಶ್ಯಕತೆ ಇಲ್ಲ. ಸಂತೋಷ ಸಂಭ್ರಮಗಳನ್ನು ಹಂಚಿಕೊಳ್ಳಿ. ಖಾಸಗಿ ವಿವರಗಳನ್ನಲ್ಲ, ಎಚ್ಚರವಿರಲಿ.
ಇಂದು ಬೆಳಿಗ್ಗೆ ಶ್ರೀನಿಧಿ ಈ ಪೋಸ್ಟ್ ಹಂಚಿಕೊಂಡಿದ್ದು ಹಲವರು ಶೇರ್ ಮಾಡಿದ್ದಾರೆ. ಇನ್ನೂ ಕೆಲವರು ಕಾಮೆಂಟ್ ಮಾಡುವ ಮೂಲಕ ಇವರ ಮಾತನ್ನು ಒಪ್ಪಿಕೊಂಡಿದ್ದಾರೆ.
ಶ್ರೀನಿಧಿ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ
ವಿನಾಯಕ್ ಭಟ್ ಅವರ ಕಾಮೆಂಟ್ ಹೀಗಿದೆ: ಇನ್ನು, ಪಿಯುಸಿ ಓದುವ ಮಕ್ಕಳಿದ್ದರೆ ಖಾಸಗಿ ಇಂಜನಿಯರಿಂಗ್ ಕಾಲೇಜುಗಳಿಂದ ಬಹಳ ಫೋನ್ ಬರುತ್ತೆ. ಮಕ್ಕಳ ಹೆಸರು, ಕಾಲೇಜ್ ಹೆಸರು ಅವರೇ ಹೇಳ್ತಾರೆ.. ಪೇರೆಂಟ್ಸಾ ಅಂತ ಕೇಳಿ ಶಾಕ್ ಕೊಡ್ತಾರೆ! ಫೋನ್ ನಂಬರ್ ಸಮೇತ ಇಷ್ಟು ನಿಖರ ಮಾಹಿತಿ ಪಿಯು ಮಂಡಳಿಯಿಂದಲೇ ಸೋರಿಕೆಯಾಗ್ತಿದೆ ಅನ್ನುವ ಗುಮಾನಿ ಉಂಟು. ನಮ್ಮಷ್ಚಕ್ಕೆ ನಾವಿದ್ದರೂ ಡಿಜಿಟಲ್ ಕ್ರಾಂತಿಯಿಂದ ನಮಗರಿವಿಲ್ಲದೇ ಮನೆ ಗಾಜಿನ ಕೋಣೆಯಾಗಿದೆ.
ಬಿ. ಜ್ಯೋತಿ ಗಾಂವ್ಕರ್ ಕಾಮೆಂಟ್ ಇದು: ನಿಜ ನಿಮ್ಮ ಮಾತು.. ವರ್ಷದ ಹಿಂದೆ ಮಗಳನ್ನು ದೂರದ ಊರಿಗೆ ಕಾಲೇಜ್ ಗೆ ಕಳಿಸುವಾಗಿನ ಒಂದು ಸಂದರ್ಭ ಬರೆದು ಫೇಸ್ಬುಕ್ ಲ್ಲಿ ಶೇರ್ ಮಾಡಿಕೊಂಡಿದ್ದೆ.. ಕಮೆಂಟ್ ಲ್ಲಿ ಯಾರೋ ಎಲ್ಲಿ ಯಾವ ಕಾಲೇಜ್ ಗೆ ಹಾಕಿದ್ದೀರಿ ಅಂತ ಕೇಳಿದ್ರು.. sorry i don't want to share details in public ಅಂತ ಹೇಳಿದ್ದೆ. ಮಕ್ಕಳೊಂದಿಗಿನ ಭಾವವನ್ನು ಬರಹದಲ್ಲಿ ಹಂಚಿಕೊಳ್ಳಬಹು ಆದರೆ ಅವರ ಬಗ್ಗೆ ಪಬ್ಲಿಕ್ ಲ್ಲಿ ಮಾಹಿತಿ ಶೇರ್ ಮಾಡ್ಕೊಳ್ಳೋದು ಸೇಫ್ ಅಲ್ಲ ಮಕ್ಕಳ ಫೋಟೋ ಹಾಕುವಾಗ ಪಬ್ಲಿಕ್ ಗೆ ಹಾಕೋದಕ್ಕಿಂತ ಪ್ರೈವಸಿ ಸೆಟ್ಟಿಂಗ್ ನೋಡ್ಕೊಳ್ಳೋದು ಒಳ್ಳೇದು
ವಿಕ್ರಮ್ ಜೋಷಿ ಅವರ ಕಾಮೆಂಟ್: ಇದನ್ನು ಹೇಳಿ ಹೇಳಿ...ಸಾಕಾಗಿದೆ. ಕೆಲವರಂತೂ ...'ಹೌದಾ...ಗೊತ್ತೇ ಇರಲಿಲ್ಲ' ಎಂದು ಹೇಳಿ ಕಡೆಗೆ ಪ್ರೈವಸಿ ಸ್ಟೇಟ್ಮೆಂಟ್ ಕೂಡ ಬದಲಾಯಿಸುವುದಿಲ್ಲ... ಲೈಕ್ ಹಾಗೂ ಕೆಮೆಂಟ್ ಬೇಕು ಅಷ್ಟೇ..