ಮುಗಿತಾ ಬಂತು ಬೇಸಿಗೆ ರಜೆ, ಶಾಲೆ ಆರಂಭಕ್ಕೆ ದಿನಗಣನೆ; ಈಗಿನಿಂದಲೇ ಮಕ್ಕಳನ್ನು ಹೀಗೆ ಸಜ್ಜುಗೊಳಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮುಗಿತಾ ಬಂತು ಬೇಸಿಗೆ ರಜೆ, ಶಾಲೆ ಆರಂಭಕ್ಕೆ ದಿನಗಣನೆ; ಈಗಿನಿಂದಲೇ ಮಕ್ಕಳನ್ನು ಹೀಗೆ ಸಜ್ಜುಗೊಳಿಸಿ

ಮುಗಿತಾ ಬಂತು ಬೇಸಿಗೆ ರಜೆ, ಶಾಲೆ ಆರಂಭಕ್ಕೆ ದಿನಗಣನೆ; ಈಗಿನಿಂದಲೇ ಮಕ್ಕಳನ್ನು ಹೀಗೆ ಸಜ್ಜುಗೊಳಿಸಿ

ಮಕ್ಕಳಿಗೆ ಬೇಸಿಗೆ ರಜೆ ಮುಗಿದು ಶಾಲೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಿನಿಂದಲೇ ಮಕ್ಕಳನ್ನು ಶಾಲೆಗೆ ಸಜ್ಜುಗೊಳಿಸಿ, ಇದರಿಂದ ಮೊದಲ ದಿನದಿಂದಲೇ ಮಗು ನಗುತ್ತಾ ಶಾಲೆಗೆ ತೆರಳುತ್ತದೆ.

ಶಾಲೆ ಆರಂಭಕ್ಕೆ ದಿನಗಣನೆ; ಈಗಿನಿಂದಲೇ ಮಕ್ಕಳನ್ನು ಶಾಲೆಗೆ ಹೀಗೆ ಸಜ್ಜುಗೊಳಿಸಿ
ಶಾಲೆ ಆರಂಭಕ್ಕೆ ದಿನಗಣನೆ; ಈಗಿನಿಂದಲೇ ಮಕ್ಕಳನ್ನು ಶಾಲೆಗೆ ಹೀಗೆ ಸಜ್ಜುಗೊಳಿಸಿ (PC: HT File Photo )

ಬೇಸಿಗೆ ರಜೆ ಮೊನ್ನೆಯಷ್ಟೇ ಆರಂಭವಾಗಿದೆ ಎನ್ನಿಸುತ್ತಿದ್ದರೂ ಈಗಾಗಲೇ ರಜೆ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ವಾರ ಕಳೆದರೆ ಮಕ್ಕಳಿಗೆ ಶಾಲೆ ಪುನಾರಂಭವಾಗುತ್ತದೆ. ಆದರೆ ಮಕ್ಕಳಿನ್ನೂ ಬೇಸಿಗೆ ರಜೆಯ ಮೂಡ್‌ನಲ್ಲೇ ಇದ್ದಾರೆ. ಶಾಲೆಗೆ ಹೋಗಲು ಮಕ್ಕಳಿಗೆ ಪುಸ್ತಕ, ಬ್ಯಾಗ್‌, ಯೂನಿಫಾರಂ ತಂದರೆ ಸಾಲುವುದಿಲ್ಲ. ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸುವುದು ಮುಖ್ಯವಾಗುತ್ತದೆ.

ದೀರ್ಘ ರಜೆ ಎಂದಾಗ ಮಕ್ಕಳು ಸಾಮಾನ್ಯವಾಗಿ ಶಾಲೆಯ ಹೋಗುವಾಗಿನ ಶಿಸ್ತನ್ನು ಮರೆತು ಬಿಟ್ಟಿರುತ್ತಾರೆ. ಆ ಶಿಸ್ತನ್ನು ಜೂನ್ 1 ಅಥವಾ 2 ರಂದು ಆರಂಭವಾಗುವ ಶಾಲೆಯ ಮೊದಲ ದಿನದಿಂದಲೇ ಕಲಿಸುವುದು ಕಷ್ಟವಾಗಬಹುದು, ಅದಕ್ಕಾಗಿ ಈಗಿನಿಂದಲೇ ಅವರನ್ನು ಶಾಲೆಗೆ ಹೋಗಲು ಮಾನಸಿಕವಾಗಿ, ದೈಹಿಕವಾಗಿ ಸಿದ್ಧರಾಗುವಂತೆ ಮಾಡಿ. ಮಕ್ಕಳನ್ನು ಶಾಲೆಗೆ ಸಿದ್ಧ ಮಾಡುವಲ್ಲಿ ಪೋಷಕರು ಅನುಸರಿಸಬೇಕಾದ ಕೆಲವು ಮೂಲ ನಿಯಮಗಳಿವು.

ಬೆಳಿಗ್ಗೆ ಬೇಗ ಏಳುವುದು ಅಭ್ಯಾಸ ಮಾಡಿಸಿ

ರಜೆಯ ಕಾರಣದಿಂದ ಮಕ್ಕಳು ಪ್ರತಿದಿನ ತಡವಾಗಿ ಎದ್ದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇನ್ನೇನು ಶಾಲೆ ಶುರುವಾಗುವ ಕಾರಣ ಅವರಿಗೆ ಈಗಿನಿಂದಲೇ ಬೇಗ ಎಬ್ಬಿಸುವ ಅಭ್ಯಾಸ ಮಾಡಿಸಿ. ಇಲ್ಲದಿದ್ದರೆ ಶಾಲೆಯ ಮೊದಲ ಒಂದು ವಾರ ಸರಿಯಾಗಿ ಏಳದೇ ಇರುವುದು, ಶಾಲೆಗೆ ಸರಿಯಾಗಿ ಹೋಗದೇ ಇರುವುದು ಇಂತಹ ಅಭ್ಯಾಸಗಳನ್ನು ಮಾಡಬಹುದು. ಅದಕ್ಕಾಗಿ ಅವರನ್ನು ಈಗಲೇ ದಿನ ಬೇಗ ಎಬ್ಬಿಸುವ ಅಭ್ಯಾಸ ಮಾಡಿ, ಶಾಲೆಯ ಆರಂಭವಾಗುವ ಹೊತ್ತಿಗೆ ಬೇಗ ಏಳುವುದು ರೂಢಿಯಾಗಿರುತ್ತದೆ.

ಆರೋಗ್ಯ ಕೆಡದಂತೆ ನೋಡಿಕೊಳ್ಳಿ

ಇನ್ನು ಶಾಲೆ ಆರಂಭಕ್ಕೆ ಉಳಿದಿರುವುದು ಕೊನೆಯ 10 ದಿನ ಮಾತ್ರ, ಈ ಸಮಯದಲ್ಲಿ ಮಕ್ಕಳು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಸಿಕ್ಕ ಸಿಕ್ಕಿದ್ದನ್ನೆಲ್ಲಾ ತಿನ್ನುವುದು, ಮಳೆಯಲ್ಲಿ ನೆನೆಯುವುದು, ಹೊರಗಡೆ ಆಟವಾಡಿ ಗಾಯ ಮಾಡಿಕೊಳ್ಳುವುದು ಇಂಥದ್ದನ್ನೆಲ್ಲಾ ಮಾಡದಂತೆ ನೋಡಿಕೊಳ್ಳಿ. ಶಾಲೆ ಆರಂಭವಾಗುವಾಗ ಮಕ್ಕಳ ಆರೋಗ್ಯ ಕೆಟ್ಟರೆ ಆರಂಭದಲ್ಲೇ ಶಾಲೆಗೆ ರಜೆ ಹಾಕಿಸಬೇಕಾಗುತ್ತದೆ. ಆ ಕಾರಣಕ್ಕೆ ಮಕ್ಕಳ ಆರೋಗ್ಯ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.

ಓದಿಸುವ ಅಭ್ಯಾಸ ಮಾಡಿಸಿ

ದೀರ್ಘ ರಜೆಯು ಮಕ್ಕಳಿಗೆ ಓದು, ಬರಹದ ಪರಿಪಾಠವನ್ನು ಮರೆಸಿರುತ್ತದೆ. ಶಾಲೆ ಆರಂಭವಾದಾಗ ಒಮ್ಮೆಲೆ ಓದು ಬರಹ ಎಂದರೆ ಮಕ್ಕಳಿಗೆ ಕಷ್ಟವಾಗುತ್ತದೆ. ಆ ಕಾರಣಕ್ಕೆ ಅವರಿಗೆ ಈಗಿನಿಂದಲೇ ಓದು ಬರಹದ ಅಭ್ಯಾಸ ಮಾಡಿಸಿ. ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಸ್ವಲ್ಪ ಹೊತ್ತು ಓದಲು ಅಥವಾ ಬರೆಯಲು ತಿಳಿಸಿ

ಹೋಮ್‌ವರ್ಕ್‌ಗಳನ್ನು ಮುಗಿಸಿ

ಬೇಸಿಗೆ ರಜೆ ನೀಡುವ ಮೊದಲು ಶಾಲೆಗಳಲ್ಲಿ ಬ್ರಿಜ್‌ಕೋರ್ಸ್‌ ರೂಪದಲ್ಲಿ ಒಂದಿಷ್ಟು ಹೋರ್ಮ್‌ವರ್ಕ್‌ಗಳನ್ನು ನೀಡಿರುತ್ತಾರೆ. ಆದರೆ ಮಕ್ಕಳು ರಜೆಯ ಮಜದ ನಡುವೆ ಅದನ್ನೆಲ್ಲಾ ಮರೆತಿರುತ್ತಾರೆ. ಕೊನೆ ಕ್ಷಣದಲ್ಲಿ ಪರದಾಡುವ ಬದಲು ಈಗಲೇ ಮಕ್ಕಳಿಗೆ ಏನೆಲ್ಲಾ ಹೋಮ್‌ವರ್ಕ್ ನೀಡಿದ್ದಾರೆ ಗಮನಿಸಿ ಮುಗಿಸುವಂತೆ ಹೇಳಿ, ನೀವು ಮಕ್ಕಳಿಗೆ ಸಹಾಯ ಮಾಡಿ.

ಶಾಲೆಗೆ ಬೇಕಾಗುವ ಪರಿಕರಗಳನ್ನ ತಂದಿರಿಸಿ

ಸ್ಕೂಲ್ ಬ್ಯಾಗ್‌, ಯೂನಿಫಾರ್ಮ್, ಪುಸ್ತಕ ಇವಿಷ್ಟೇ ಅಲ್ಲ, ಶಾಲೆಗೆ ಹೋಗಲು ಬೇಕಾಗುವ ಇತರ ಸಾಮಗ್ರಿಗಳು ಅಂದರೆ ಛತ್ರಿ, ರೈನ್‌ಕೋಟ್‌, ಚಪ್ಪಲಿ, ಟಿಫಿನ್‌ ಬಾಕ್ಸ್‌, ಜಾಮಿಟ್ರಿ ಬಾಕ್ಸ್‌, ಬಾಟರ್ ಬಾಟಲಿ ಮುಂತಾದವನ್ನು ಮೊದಲೇ ಏನೆಲ್ಲಾ ಬೇಕು ಎಂದು ಪಟ್ಟಿ ಮಾಡಿಸಿಕೊಂಡು ತಂದಿಡಿ. ಇಲ್ಲದಿದ್ದರೆ ಮಕ್ಕಳು ಶಾಲೆಗೆ ಹೋಗಲ್ಲ ಎಂದು ಹಟ ಮಾಡುವ ಸಾಧ್ಯತೆ ಇದೆ.

ಈಗಿನಿಂದಲೇ ಶಾಲೆಯ ಆರಂಭದ ದಿನ ಬಗ್ಗೆ ಹೇಳಿ ರೆಡಿ ಮಾಡಿ

ಶಾಲೆ ಶುರುವಾಗುವ ಹಿಂದಿನ ದಿನ ನಾಳೆ ಶಾಲೆ ಶುರು ಎಂದು ಹೇಳಿದರೆ ಮಕ್ಕಳು ಶಾಲೆಗೆ ಹೋಗಲು ಒಪ್ಪುವುದಿಲ್ಲ. ಇದು ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಹೆಚ್ಚು ಅನ್ವಯಿಸುತ್ತದೆ. ಹಾಗಾಗಿ ಈಗಿನಿಂದಲೇ ಇನ್ನೊಂದು ವಾರದಲ್ಲಿ ಶಾಲೆಗೆ ಹೋಗಬೇಕು ಎಂದು ಹೇಳಿ ಶಾಲೆಯ ಬಗ್ಗೆ, ಸ್ನೇಹಿತರ ಬಗ್ಗೆ ಹೇಳಿ ಮಗುವನ್ನು ಮಾನಸಿಕವಾಗಿ ಶಾಲೆಗೆ ಹೋಗಲು ಸಿದ್ಧರಾಗುವಂತೆ ಮಾಡಿ.

ಈ ಸಲಹೆಗಳು ಸರಳ ಹಾಗೂ ಎಲ್ಲರಿಗೂ ತಿಳಿದಿರುವಂಥದ್ದೇ ಎನ್ನಿಸಿದರೂ ಬಹುತೇಕ ಮಕ್ಕಳು ಶಾಲೆಯ ಆರಂಭದಲ್ಲಿ ಶಾಲೆಗೆ ಹೋಗೊಲ್ಲ ಎಂದು ಹಠ ಹಿಡಿಯಲು ಇವೇ ಮೂಲ ಕಾರಣಗಳಾಗಿರುತ್ತವೆ. ಆ ಕಾರಣಕ್ಕೆ ಈ ಮೇಲಿನ ಸಲಹೆಗಳನ್ನು ಪೋಷಕರು ಪಾಲಿಸಬೇಕು, ಆ ಮೂಲಕ ಮಕ್ಕಳನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಜ್ಜುಗೊಳಿಸಬೇಕು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.