Parenting: ಅಮ್ಮಂದಿರೇ, ಕಂದನ ಮೇಲೆ ಕೋಪಗೊಳ್ಳುವ ಮುನ್ನ ಯೋಚಿಸಿ; ಸಿಟ್ಟಿನ ನಿಯಂತ್ರಣಕ್ಕೆ ಈ ಸಲಹೆ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting: ಅಮ್ಮಂದಿರೇ, ಕಂದನ ಮೇಲೆ ಕೋಪಗೊಳ್ಳುವ ಮುನ್ನ ಯೋಚಿಸಿ; ಸಿಟ್ಟಿನ ನಿಯಂತ್ರಣಕ್ಕೆ ಈ ಸಲಹೆ ಪಾಲಿಸಿ

Parenting: ಅಮ್ಮಂದಿರೇ, ಕಂದನ ಮೇಲೆ ಕೋಪಗೊಳ್ಳುವ ಮುನ್ನ ಯೋಚಿಸಿ; ಸಿಟ್ಟಿನ ನಿಯಂತ್ರಣಕ್ಕೆ ಈ ಸಲಹೆ ಪಾಲಿಸಿ

ಮನೆಕೆಲಸ ಕಚೇರಿ, ಕಚೇರಿ ಕೆಲಸ, ಓಡಾಟ ಈ ಎಲ್ಲಾ ಒತ್ತಡದ ನಡುವೆ ತಾಯಿ ಮಕ್ಕಳ ಮೇಲೆ ರೇಗಾಡುವುದು ಜಾಸ್ತಿ. ಅದರಲ್ಲೂ ಮಾತು ಕೇಳದ ಮಕ್ಕಳು ತಾಯಿ ಕೋಪಕ್ಕೆ ಗುರಿಯಾಗುವುದು ಸಾಮಾನ್ಯ. ಆದರೆ ತಾಯಿಯಾದವಳು ತಾಳ್ಮೆ ಕಲಿಯಬೇಕು. ಮಕ್ಕಳ ಮೇಲೆ ಕೋಪ ಮಾಡಿಕೊಳ್ಳುವ ಮುನ್ನ ಈ ಲೇಖನ ಓದಿ.

ಅಮ್ಮಂದಿರೇ, ಕಂದನ ಮೇಲೆ ಕೋಪಗೊಳ್ಳುವ ಮುನ್ನ ಯೋಚಿಸಿ
ಅಮ್ಮಂದಿರೇ, ಕಂದನ ಮೇಲೆ ಕೋಪಗೊಳ್ಳುವ ಮುನ್ನ ಯೋಚಿಸಿ

ಚಿಕ್ಕ ಮಕ್ಕಳಿರುವ ಅಮ್ಮಂದಿರಿಗೆ ಮೂಗಿನ ತುದಿಯಲ್ಲೇ ಕೋಪ ಇರುವುದು ಸಹಜ. ಅಮ್ಮ ಎಷ್ಟೇ ಮುದ್ದು ಮಾಡಿದರೂ, ಕೋಪ ಬಂದಾಗ ಮಾತ್ರ ರಾಕ್ಷಸಿಯಂತೆ ಕಾಣುತ್ತಾಳೆ. ಕಿರುಚಾಡುವುದು, ಕೂಗುವುದು, ಬಯ್ಯವುದು, ಹೊಡಿಯೋದು ಎಲ್ಲ ಮಾಡ್ತಾಳೆ, ಆದ್ರೆ ಮುದ್ದು ಮಾತ್ರ ಚೆನ್ನಾಗಿ ಮಾಡ್ತಾಳೆ. ಹೌದು, ಇದು ಪ್ರತಿ ತಾಯಂದಿರ ಸಹಜ ಗುಣ.

ಈ ಅಮ್ಮಂದಿರು ಯಾಕೆ ಹೀಗೆ ಆಡ್ತಾರೆ. ಮಗುವಾಗುವ ಮೊದಲು ತಣ್ಣಗೆ ಇದ್ದ ಆಕೆ, ಮಗುವಾದ ಮೇಲೆ ಸಂಪೂರ್ಣ ಬದಲಾಗುತ್ತಾಳೆ. ಮಗುವನ್ನು ಸಂಭಾಳಿಸಿ ಸೋಲುವ ಅಮ್ಮ ಬೇರೆ ದಾರಿ ಕಾಣದೆ ಕೂಗಾಡುತ್ತಾಳೆ. ಹೇಳಿದ ಮಾತನ್ನು ಕೇಳದ ಮಕ್ಕಳನ್ನು ಕಂಡರೆ ಅಮ್ಮನಿಗೆ ಕೋಪ ನೆತ್ತಿಗೇರುತ್ತದೆ.

ಮಕ್ಕಳನ್ನು ನೋಡಿಕೊಳ್ಳುವುದು ಮಾತ್ರವಲ್ಲದೇ, ಮನೆ ಕೆಲಸ, ಆಫೀಸ್‌ ಕೆಲಸ, ಹೊರಗಿನ ಕೆಲಸ ಎಲ್ಲವನ್ನು ಒಬ್ಬಳೇ ನಿಭಾಯಿಸುವ ಕಾರಣ ಆಕೆ ಸಹಜವಾಗಿಯೇ ನಿಸ್ಸಾಹಯಕಳಾಗಿ ತನ್ನ ಹತಾಶೆಯನ್ನು ಮಕ್ಕಳ ಮೇಲೆ ತೋರುತ್ತಾಳೆ. ಆದರೆ ಮಕ್ಕಳನ್ನು ಹೊಡೆಯುವುದು, ಮಕ್ಕಳ ಮೇಲೆ ಕೋಪ ಮಾಡಿಕೊಂಡು ಬಯ್ಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಿದ್ದರೆ ತಾಯಿಯಾದವಳು ಸಿಟ್ಟನ್ನು ಕಡಿಮೆ ಮಾಡಿಕೊಂಡು ಮಕ್ಕಳನ್ನು ಸಂಭಾಳಿಸುವುದು ಹೇಗೆ? ತಾಯಿಯಾದವಳು ಕೋಪ ಮಾಡಿಕೊಳ್ಳದೇ ಮಕ್ಕಳೊಂದಿಗೆ ನಗು ನಗುತ್ತಾ ಇರಲು ಸಾಧ್ಯವೇ? ಈ ರೀತಿಯ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುವುದು ಸಾಮಾನ್ಯ. ಇಂತಹ ಪ್ರಶ್ನೆಗಳಿಗೆ ಪರಿಹಾರವಾದರೂ ಏನು?

ಮನುಷ್ಯ ಎಂದ ಮೇಲೆ ಕೋಪ ಬರುವುದು ಸಹಜ. ಆದರೆ ನಿಮ್ಮ ಕೋಪಕ್ಕೆ ಸಕಾರಣವಿರಬೇಕು. ನಿದ್ದೆ ಸರಿಯಾಗಿ ಆಗದೆ ಇದ್ದಾಗ, ಅನಾರೋಗ್ಯದಿಂದ ಬಳಲುತ್ತಿದ್ದಾಗ, ಹಸಿವಿನಿಂದ ಒದ್ದಾಡುವಾಗ, ಗಂಡ ಅತ್ತೆ ಮಾವ ನಾದಿನಿ ನೆಂಟರ ಸಮಸ್ಯೆಗಳಿಂದ ತುಂಬಿರುವಾಗ ಅಥವಾ ಆಫೀಸಿನ ಜಂಜಾಟ, ಹಣಕಾಸಿನ ಸಮಸ್ಯೆಗಳಿದ್ದಾಗ ಕೋಪ ಬರುವುದು ಸಹಜ. ಆ ಕೋಪವನ್ನು ಎಂದಿಗೂ ಮಕ್ಕಳ ಮೇಲೆ ತೋರಿಸಬೇಡಿ. ಇದು ಮುಗ್ಧ ಮಕ್ಕಳ ಮೇಲೆ ಪರಿಣಾಮ ಬೀರಲಿದೆ.

ಮನಸ್ಸನ್ನು ಬೇರೆಡೆಗೆ ತಿರುಗಿಸಿ

ಹಲವು ಬಾರಿ ತಾಯಂದಿರು ಮಕ್ಕಳ ಮೇಲೆ ಕೂಗಾಡಿ, ರೇಗಾಡಿ ನಂತರ ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಕೋಪ ಬಂದಾಗ ತಕ್ಷಣವೇ ಆ ಜಾಗದಿಂದ ಅಥವಾ ಆ ಸನ್ನಿವೇಶದಿಂದ ಹೊರಗಿರಲು ಪ್ರಯತ್ನಿಸಬೇಕು. ಅಲ್ಲಿಯೇ ಇದ್ದು ಕೋಪವನ್ನು ಹೆಚ್ಚು ಮಾಡಿಕೊಳ್ಳುವ ಬದಲು ಜಾಗ ಬದಲಾಯಿಸಿದರೆ ಒಳ್ಳೆಯದು. ಕೋಪ ಬಂದಾಗ ತಕ್ಷಣಕ್ಕೆ ಟಿವಿ ನೋಡುವುದು, ಸಂಗೀತ ಆಲಿಸುವುದು, ಅಥವಾ ಮನೆಯಿಂದ ಹೊರ ಬಂದು ನಿಲ್ಲುವುದು ಈ ರೀತಿ ಮನಸ್ಸನ್ನು ಬೇರೆಡೆಗೆ ತಿರುಗಿಸಿದಾಗ ಕೋಪವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು.

ಮೌನವಾಗಿರಿ

'ಮಾತು ಬೆಳ್ಳಿ ಮೌನ ಬಂಗಾರ' ಎಂಬ ಗಾದೆ ಇದೆ ಅದರಂತೆ ಕೋಪ ಬಂದಾಗ ಮಾತಿನ ಬರದಲ್ಲಿ ಭಾಗ್ಯದಂತೆ ಮಾತನಾಡುವ ಬದಲು ಕೆಲ ನಿಮಿಷಗಳ ಕಾಲ ಮೌನ ವಹಿಸಿದರೆ ಸಾಕು. ಮೌನ ವಹಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಕೋಪ ಬರುತ್ತಿದ್ದಂತೆ ಒಂದರಿಂದ ನೂರರ ತನಕ ಸಂಖ್ಯೆಯನ್ನು ಮನಸ್ಸಲ್ಲಿ ಎಣಿಸಿಕೊಂಡು ಹೋಗಿ. ಆಗ ಮನಸ್ಸು ಶಾಂತವಾಗಲಿದೆ ಕೋಪ ಕೂಡ ತಣ್ಣಗಾಗಲಿದೆ.

ಮನಸ್ಸಿಗೆ ನಾಟುವಂತೆ ವಿವರಿಸಿ

ಕೋಪದಲ್ಲಿ ಮಕ್ಕಳನ್ನು ನಿಂದಿಸುವುದರಲ್ಲಿ ಅರ್ಥವಿಲ್ಲ. ಅವರಿಗೆ ಮತ್ತಷ್ಟು ನೋವು ಉಂಟಾಗುತ್ತದೆ. ಹೀಗಾಗಿ ನೀವು, ನೀನು ಹೀಗೆ ಮಾಡುವುದರಿಂದ ನನಗೆ ನೋವಾಗುತ್ತಿದೆ. ನನಗೆ ಬೇಸರವಾಗಿದೆ, ನನ್ನ ಮನಸ್ಸಿಗೆ ಘಾಸಿಯಾಗಿದೆ ಎಂಬಂತೆ ಮಾತನಾಡುವುದರಿಂದ ಅವರು ಕೂಡ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ.

ಉಪಾಯದಿಂದ ಮಕ್ಕಳನ್ನು ಸಂಭಾಳಿಸಿ

ಮಕ್ಕಳು ತಾಯಿಯ ಮಾತು ಕೇಳಲಿಲ್ಲವೆಂದರೆ ಹೊಡೆಯುವುದು ಮತ್ತು ಬಯ್ಯುವುದು ಶಿಕ್ಷೆ ಅಲ್ಲ. ಬದಲಾಗಿ ಅವರಿಗೆ ತಿಳಿ ಹೇಳಬೇಕು. ನಿನ್ನ ಪುಸ್ತಕಗಳನ್ನು ಸರಿಯಾಗಿ ಎತ್ತಿಟ್ಟುಕೋ, ಇಲ್ಲದಿದ್ದರೆ ಟಿವಿ ನೋಡುವಂತಿಲ್ಲ... ಜೋರಾಗಿ ಮಾತನಾಡಿದರೆ ಸೈಕಲ್ ನೀಡುವುದಿಲ್ಲ... ಹೇಳಿದ್ದನ್ನು ಕೇಳದಿದ್ದರೆ ತಿಂಡಿಗಳನ್ನು ತೆಗೆದುಕೊಡುವುದಿಲ್ಲ.. ಎಂದು ಉಪಾಯ ಮಾಡಿ ಮಕ್ಕಳನ್ನು ಸರಿದಾರಿಗೆ ತನ್ನಿ.

ಮಕ್ಕಳಿಗೆ ಬಿಡಿಸಿ ಹೇಳುವ ಪ್ರಯತ್ನ ಮಾಡಿ

ಮಕ್ಕಳು ಹಠ ಹಿಡಿಯದಂತೆ ಇರಲು ಮಕ್ಕಳೊಂದಿಗೆ ಸದಾ ಶಾಂತವಾಗಿರಿ. ಮಕ್ಕಳಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವಂತಹ ಮಾತುಗಳನ್ನು ಆಡಿ. ಮಕ್ಕಳ ಪ್ರತಿ ಕೆಲಸಕ್ಕೂ ಪ್ರೋತ್ಸಾಹ ಮೆಚ್ಚುಗೆ ಇರಬೇಕು. ಮಕ್ಕಳನ್ನು ಆತ್ಮೀಯವಾಗಿ ಅಪ್ಪುಗೆ ಮಾಡಿ ಒಳ್ಳೆಯ ಮಾತುಗಳನ್ನು ಹೇಳಿ ಅವರನ್ನು ಸರಿದಾರಿಗೆ ತನ್ನಿ.

ಮಕ್ಕಳ ಮೇಲೆ ನಿಮಗೆ ಕೋಪ ಬಂದಾಗ ಹಿಂದಿನ ಘಟನೆಗಳನ್ನು ಮಕ್ಕಳಿಗೆ ಹೇಳಿ ಬಯ್ಯೋದು ಸರಿಯಲ್ಲ. ಅದರಿಂದ ಅವರ ಮನಸ್ಸಿಗೆ ಮತ್ತಷ್ಟು ಹಾನಿ ಉಂಟಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಸಮಸ್ಯೆಗಳಿಗೆ ಪರಿಹಾರವನ್ನು ಬಿಡಿಸಿ ಹೇಳಿ.

ಮನಸ್ಸು ಶಾಂತವಾಗುವ ಮಾರ್ಗಗಳು ಕಂಡುಕೊಳ್ಳಿ

ನೀವು ಯೋಚಿಸಿದ್ದೆಲ್ಲ ನಿಜವಾಗುವುದಿಲ್ಲ. ಹೀಗಾಗಿ ಸಾಧ್ಯವಾದಷ್ಟರ ಮಟ್ಟಿಗೆ ಯೋಚನೆಗಳನ್ನು ಒಂದೆಡೆ ಬರೆದಿಡಿ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕೋಪ ಕೂಡ ನಿಯಂತ್ರಣಕ್ಕೆ ಬರಲಿದೆ.

ಪ್ರತಿದಿನ ನಿಮ್ಮ ಮನಸ್ಥಿತಿಯನ್ನು ಶಾಂತವಾಗಿಟ್ಟುಕೊಳ್ಳಲು ಯಾವ ದಾರಿಗಳಿವೆ ಎಂಬುದನ್ನು ನೀವೇ ಕಂಡುಕೊಳ್ಳಿ. ಸರಳವಾಗಿ ಹೇಳಬಹುದಾದರೆ... ವ್ಯಾಯಾಮ ಮಾಡುವುದು, ಸಂಗೀತ ಕೇಳುವುದು, ಧ್ಯಾನ ಮಾಡುವುದು, ಪುಸ್ತಕ ಓದುವುದು ಮತ್ತು ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ, ಅವರೊಂದಿಗೆ ಆಟವಾಡುವುದರಿಂದ ದಿನೇ ದಿನೇ ನಿಮ್ಮ ಕೋಪ ಕೂಡ ಹತೋಟಿಗೆ ಬರಲಿದೆ.

ಮಕ್ಕಳಿಗೆ ತಿಳಿ ಹೇಳಿ

ಮಕ್ಕಳ ತುಂಟಾಟವನ್ನು ಸಹಿಸದೆ ನೀವು ಕೋಪದಲ್ಲಿ ಮಕ್ಕಳನ್ನು ಹೊಡೆದಿರುತ್ತೀರಿ. ಮಕ್ಕಳು ಕೂಡ ಬೇಜಾರಾಗಿ ಒಂದೆಡೆ ಕುಳಿತಿರುತ್ತಾರೆ. ಆಗ ಮಕ್ಕಳ ಬಳಿ ಹೋಗಿ ಈ ರೀತಿ ಹೊಡೆದದ್ದು ತಪ್ಪಾಯ್ತು. ‌ನೀನು ಮುಂದೆ ಇಂತಹ ಸನ್ನಿವೇಶವನ್ನು ಸೃಷ್ಟಿಸಿಕೊಳ್ಳಬೇಡ ಎಂದು ಮಕ್ಕಳ ಬಳಿ ಕ್ಷಮೆ ಕೇಳಿದರೆ ಮುಂದಿನ ದಿನಗಳಲ್ಲಿ ಮಕ್ಕಳು ಕೂಡ ಅದನ್ನು ಅನುಸರಿಸಲಿದ್ದಾರೆ.

ಲೇಖನ: ಅಕ್ಷರ ಕಿರಣ್‌