ನಿಮ್ಮ ಮುದ್ದು ಮಕ್ಕಳ ಕೋಮಲ ತ್ವಚೆಗೆ ಬೇಕು ವಿಶೇಷ ಕಾಳಜಿ; ಆರೈಕೆ ಮಾಡುವ ಮೊದಲು ಈ ವಿಚಾರ ತಿಳಿದುಕೊಳ್ಳಿ
Baby Skincare Tips: ಮಕ್ಕಳ ತ್ವಚೆ ಬಹಳಷ್ಟು ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಅದಲ್ಲದೇ ಕಾಳಜಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮಕ್ಕಳ ಕೋಮಲ ತ್ವಚೆ ಆರೈಕೆ ಮಾಡಲು ಈ ಸರಳ ಸಲಹೆಗಳನ್ನು ಪಾಲಿಸಿ. (ಬರಹ: ಅರ್ಚನಾ ವಿ. ಭಟ್)

ಪಂಚೇಂದ್ರಿಯಗಳಲ್ಲಿ ಒಂದಾದ ಚರ್ಮವು (Skin) ದೇಹದ ಒಳಭಾಗಗಳಿಗೆ ರಕ್ಷಣೆ ಒದಗಿಸುವುದರ ಜೊತೆಗೆ ಸೂಕ್ಷವಾದ ಪದರುಗಳನ್ನು ಹೊಂದಿರುತ್ತದೆ. ಅದರಲ್ಲೂ ಚಿಕ್ಕ ಮಕ್ಕಳ ತ್ವಚೆ (Baby Skincare) ದೊಡ್ಡವರ ತ್ವಚೆಗಿಂತ ಬಹಳಷ್ಟು ಸೂಕ್ಷ್ಮವಾಗಿರುತ್ತದೆ. ಮಕ್ಕಳ ಕೋಮಲ ತ್ವಚೆಯು ಬಹಳ ಬೇಗ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲದೇ ರಾಸಾಯನಿಕ ವಸ್ತುಗಳಿಂದ ಹಾನಿಗೊಳಗಾಗುತ್ತದೆ. ಹಾಗಾಗಿ ಮಕ್ಕಳ ತ್ವಚೆಯ ಕಾಳಜಿವಹಿಸುವುದು ಅತಿ ಅವಶ್ಯಕವಾಗಿದೆ. ಅದಕ್ಕಾಗಿ ಮಕ್ಕಳ ತ್ವಚೆಯ ಬಗ್ಗೆ ಸರಿಯಾದ ತಿಳುವಳಿಕೆ ಅಗತ್ಯವಿದೆ. ತ್ವಚೆಯ ಕಾಳಜಿ ಮಾಡಲು ಮತ್ತು ಹಾನಿಯನ್ನು ತಪ್ಪಿಸಲು ಸರಿಯಾದ ಯೋಜನೆಯ ಅವಶ್ಯಕತೆಯಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುವ ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯುವುದು ಅಷ್ಟೇ ಅಗತ್ಯವಾಗಿದೆ. ಏಕೆಂದರೆ ನಿಮ್ಮ ಮಕ್ಕಳ ಕೋಮಲ ತ್ವಚೆಗೆ ಹೆಚ್ಚು ಹಾನಿಯನ್ನುಂಟು ಮಾಡುವುದು ರಾಸಾಯನಿಕಯುಕ್ತ ಉತ್ಪನ್ನಗಳೇ ಆಗಿವೆ. ಮಕ್ಕಳಿಗಾಗಿ ಬಳಸುವ ಸೋಪು, ಶ್ಯಾಂಪೂ, ಮಾಯ್‌ಶ್ಚರೈಸರ್, ಬಟ್ಟೆಗೆ ಹಾಕುವ ಡಿಟರ್ಜಂಟ್‌ಗಳಿಂದಲೇ ತ್ವಚೆ ಹಾನಿ ಸಂಭವಿಸುವುದು ಹೆಚ್ಚು. ಅದರಿಂದ ದದ್ದು, ಶುಷ್ಕತೆ ಮತ್ತು ಕಿರಿಕಿರಿಯ ಅನುಭವಗಳು ಸಾಮಾನ್ಯವಾಗಿದೆ. ಅದಕ್ಕಾಗಿ ನಿಮ್ಮ ಮುದ್ದು ಮಕ್ಕಳ ತ್ವಚೆಯ ಆರೈಕೆ ಮಾಡಲು ಮತ್ತು ಸಾಮಾನ್ಯ ಚರ್ಮದ ಕಾಯಿಲೆಗಳಿಂದ ಅವರನ್ನು ರಕ್ಷಿಸಲು ಈ ಸಲಹೆಗಳನ್ನು ಪಾಲಿಸಿ.
ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ತ್ವಚೆ ಸಮಸ್ಯೆಗಳು
ಪೋಷಕರು ನಿಮ್ಮ ಮುದ್ದು ಮಕ್ಕಳ ಕೋಮಲ ತ್ವಚೆಯ ಆರೈಕೆಗೆ ಪ್ರಾಮುಖ್ಯತೆಯನ್ನು ನೀಡದಿದ್ದರೆ ಅನೇಕ ಚರ್ಮದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಡೈಪರ್ ಹಾಕುವ ಜಾಗದಲ್ಲಿ ದದ್ದು, ಚರ್ಮದ ತುರಿಕೆ, ಶುಷ್ಕತೆ ಮತ್ತು ಬೇಬಿ ಎಕ್ನಿ ಮುಂತಾದವುಗಳು ಕಾಣಿಸಿಕೊಳ್ಳುತ್ತದೆ. ತ್ವಚೆಯ ನೈರ್ಮಲ್ಯದ ಕಡೆ ಹೆಚ್ಚು ಗಮನವಹಿಸದಿದ್ದರೆ, ಅದು ಮುಂದೆ ಚರ್ಮದ ಸೋಂಕುಗಳಿಗೂ ಕಾರಣವಾಗಬಹುದು.
ಮಕ್ಕಳ ಕೋಮಲ ತ್ವಚೆ ಕಾಪಾಡಲು ಸಲಹೆಗಳು
ಸ್ನಾನ ಮಾಡಿಸುವಾಗ ವಿಶೇಷ ಕಾಳಜಿವಹಿಸಿ
ಚಿಕ್ಕ ಮಕ್ಕಳ ಅದರಲ್ಲೂ ಶಿಶುಗಳ ಚರ್ಮವು ಬಹಳ ಸೂಕ್ಷ್ಮವಾಗಿರುತ್ತದೆ. ಅವರ ಸ್ನಾನದಲ್ಲಿ ಸಾಧ್ಯವಾದಷ್ಟು ಸುಗಂಧ ರಹಿತ ಮತ್ತು ಸೌಮ್ಯವಾದ ಸೋಪ್ ಬಳಸುವುದು ಉತ್ತಮ. ಏಕೆಂದರೆ ಅದರಿಂದ ತ್ವಚೆಗೆ ಹೆಚ್ಚಿನ ಹಾನಿ ಉಂಟಾಗುವುದಿಲ್ಲ. ಸ್ನಾನಕ್ಕೆ ಉಗುರುಬೆಚ್ಚಗಿನ ನೀರನ್ನು ಆಯ್ದುಕೊಳ್ಳಿ. ಅದು ಚರ್ಮದಲ್ಲಿರುವ ನೈಸರ್ಗಿಕ ತೇವಾಂಶವನ್ನು ಕಾಪಾಡುತ್ತದೆ ಮತ್ತು ಶುಷ್ಕತೆಯಿಂದ ದೂರವಿಡುತ್ತದೆ. ಕುತ್ತಿಗೆಯ ಕೆಳಭಾಗ, ಡೈಪರ್ ಹಾಕುವ ಜಾಗವನ್ನು ಸರಿಯಾಗಿ ಸ್ವಚ್ಛಗೊಳಿಸಿ.
ಮಾಯ್‌ಶ್ಚರೈಸರ್ ಬಳಿಸಿ
ಸ್ನಾನದ ನಂತರ ನಿಮ್ಮ ಮಗುವಿಗೆ ಮಾಯ್‌ಶ್ಚರೈಸರ್ ಹಚ್ಚಿ. ಅದು ಶುಷ್ಕತೆಯಿಂದ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಡಿಮೆ ರಾಸಾಯನಿಕ ಮತ್ತು ಸುಗಂಧದ ಹೊಂದಿರುವ ಮಾಯ್‌ಶ್ಚರೈಸರ್ ಆಯ್ದುಕೊಳ್ಳಿ. ಇಲ್ಲವೇ ಮನೆಯಲ್ಲಿಯೇ ತಯಾರಿಸಿ. ಇದು ಮಕ್ಕಳ ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಮಕ್ಕಳ ತ್ವಚೆ ಕೋಮಲವಾಗಿಸುವುದರ ಜೊತೆಗೆ ಒಣ ತ್ವಚೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಆಗಾಗ ಡೈಪರ್ ಬದಲಿಸಿ
ಶಿಶುಗಳಿಗೆ ಡೈಪರ್‌ನಿಂದ ಉಂಟಾಗುವ ಚರ್ಮದ ಉರಿಯೂತವನ್ನು ತಡೆಗಟ್ಟಗಲು ಡೈಪರ್ ಅನ್ನು ಆಗಾಗ ಬದಲಿಸುವುದು ಅವಶ್ಯಕವಾಗಿದೆ. ಕೊಳಕು ಮತ್ತು ಒದ್ದೆಯಾದ ಡೈಪರ್ ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಅದರಿಂದ ದದ್ದು ಮತ್ತು ಚರ್ಮದ ಸೋಂಕು ಉಂಟಾಗುತ್ತದೆ. ಝಿಂಕ್ ಆಕ್ಸೈಡ್ ಹೊಂದಿರುವ ಡೈಪರ್ ರ್‍ಯಾಶ್ ಕ್ರೀಮ್ ಬಳಸಿ. ಇದರಿಂದ ಚರ್ಮ ಕೋಮಲವಾಗಿರುವುದರ ಜೊತೆಗೆ ಚರ್ಮಕ್ಕೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡದಂತೆ ತಡೆಯುತ್ತದೆ.
ಮೃದುವಾದ ಬಟ್ಟೆಗಳನ್ನು ಬಳಸಿ
ಹತ್ತಿಯಿಂದ ಮಾಡಿದ ಮೃದುವಾದ ಬಟ್ಟೆಗಳನ್ನು ನಿಮ್ಮ ಚಿಕ್ಕ ಮಕ್ಕಳಿಗೆ ಆಯ್ದುಕೊಳ್ಳಿ. ಅದು ಸರಾಗವಾಗಿ ಗಾಳಿಯಾಡುವಂತಿರಲಿ, ಬಿಗಿಯಾದ ಬಟ್ಟೆ ಮಕ್ಕಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಜೊತೆಗೆ ಅಲರ್ಜಿ ಉಂಟುಮಾಡಬಹುದು. ಖರೀದಿಸಿ ತಂದ ಹೊಸ ಬಟ್ಟೆಯನ್ನು ತೊಳೆದು ಉಪಯೋಗಿಸಿ. ಬಟ್ಟೆಗಳನ್ನು ತೊಳೆಯಲು ಸೌಮ್ಯವಾದ ಡಿಟರ್ಜಂಟ್‌ಗಳನ್ನು ಬಳಸಿ.
ಸೂರ್ಯನ ಕಿರಣಗಳಿಂದ ರಕ್ಷಿಸಿ
ಸೂರ್ಯನ ನೇರಳಾತೀತ ಕಿರಣಗಳು ಶಿಶುಗಳ ಚರ್ಮಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಅದಕ್ಕಾಗಿ ವಿಶೇಷವಾಗಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗಿನ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಿ. ಅತಿ ಅವಶ್ಯಕತೆಯಿದ್ದರೆ ಅಗಲವಾದ ಟೋಪಿ ಮತ್ತು ದೇಹ ಸಂಪೂರ್ಣವಾಗಿ ಮುಚ್ಚುವ ಬಟ್ಟೆಯನ್ನು ಬಳಸಿ. ಸನ್‌ಸ್ಕ್ರೀನ್ ಲೋಷನ್ ಬಳಸುವುದಾದರೆ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ. ಅವರು ಸೂಚಿಸಿರುವ ಲೋಷನ್ ಬಳಸಿ.
ಉಷ್ಣತೆಯ ಬಗ್ಗೆ ಕಾಳಜಿವಹಿಸಿ
ಬಿಸಿಲಿನ ದಿನಗಳನ್ನು ನಿರ್ವಹಿಸಲು ಹತ್ತಿಯ ತೆಳುವಾದ ಬಟ್ಟೆ ಬಳಸಿ. ಕೋಣೆಯ ಉಷ್ಣಾಂಶವು ಅಧಿಕವಾಗಿರದಂತೆ ನೋಡಿಕೊಳ್ಳಿ. ಭಾರವಾದ ಹೊದಿಕೆಗಳನ್ನು ಬಳಸಬೇಡಿ. ತೆಳುವಾದ ಹತ್ತಿಯ ಹೊದಿಕೆ ಬಳಸಿ. ಅತಿಯಾಗಿ ಬೆವರುವುದು, ಕೆನ್ನೆ ಕೆಂಪಾಗುವುದು ಅಥವಾ ಜೋರಾಗಿ ಉಸಿರಾಟ ನಡೆಸುವಂತ ಲಕ್ಷಣಗಳನ್ನು ಗಮನಿಸಿ. ವೈದ್ಯರ ಬಳಿ ಕರೆದುಕೊಂಡು ಹೋಗಿ.
ಹಾಸಿಗೆ, ಹೊದಿಕೆಗಳ ಕಾಳಜಿ ಇರಲಿ
ಶಿಶು ಮತ್ತು ಚಿಕ್ಕ ಮಕ್ಕಳ ಬಟ್ಟೆ, ಹಾಸಿಗೆ ಮತ್ತು ಹೊದಿಕೆಗಳು ಸ್ವಚ್ಛವಾಗಿರುವುದು ಅವಶ್ಯಕವಾಗಿದೆ. ಅವುಗಳನ್ನು ಸೌಮ್ಯವಾದ, ಸುಗಂಧ ಮುಕ್ತ ಡಿಟರ್ಜಂಟ್‌ಗಳನ್ನು ಬಳಸಿ ತೊಳೆಯಿರಿ. ಏಕೆಂದರೆ ಡಿಟರ್ಜಂಟ್ ಗಳಲ್ಲಿರುವ ರಾಸಾಯನಿಕಗಳಿಂದಲೂ ಮಗುವಿಗೆ ಚರ್ಮದ ಸಮಸ್ಯೆಗಳು ಬರಬಹುದು.
ನಿಮ್ಮ ಕೈಯನ್ನು ಸ್ವಚ್ಛವಾಗಿರಿಸಿಕೊಳ್ಳಿ
ನೀವು ಮಗುವಿನ ಆರೈಕೆ ಮಾಡುತ್ತಿದ್ದರೆ ಮೊದಲು ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ನಿಮ್ಮ ಕೈಯಲ್ಲಿರುವ ಬ್ಯಾಕ್ಟೀರಿಯಾಗಳಿಂದಲೂ ತ್ವಚೆಗೆ ಹಾನಿಯಾಗಬಹುದು. ಹಾಗಾಗಿ ಶಿಶುಗಳ ಆರೈಕೆ ಮಾಡುವಾಗ ನಿಮ್ಮ ಕೈ ಸ್ವಚ್ಛವಾಗಿದ್ದರೆ, ಮಕ್ಕಳಿಗೆ ಉಂಟಾಗುವ ತ್ವಚೆಯ ಸೋಂಕುಗಳಿಂದ ದೂರವಿಡಬಹುದು.
ಮಗುವಿನ ತ್ವಚೆಯನ್ನು ಸೂಕ್ಷ್ಮವಾಗಿ ಗಮನಿಸಿ
ನಿಮ್ಮ ಮಗುವಿನ ಚರ್ಮದ ಮೇಲೆ ದದ್ದು, ಕೆಂಪು ಗುಳ್ಳೆಗಳು, ಅಥವಾ ರ್‍ಯಾಶಸ್‌ಗಳು ಕಾಣಿಸಿಕೊಂಡಿವೆಯೇ ಎಂದು ಆಗಾಗ ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಮಗುವಿನ ಚರ್ಮದಲ್ಲಿ ಏನಾದರೂ ಬದಲಾವಣೆ ಕಾಣಿಸಿಕೊಂಡರೆ ಮೊದಲು ಮಕ್ಕಳ ತಜ್ಞರನ್ನು ಭೇಟಿ ಮಾಡಿ. ಸೂಕ್ತ ಸಮಯದ ಚಿಕಿತ್ಸೆಯಿಂದ ತೀವ್ರವಾದ ಚರ್ಮದ ಸಮಸ್ಯೆಗಳಿಂದ ನಿಮ್ಮ ಮುದ್ದು ಮಕ್ಕಳನ್ನು ಕಾಪಾಡಿಕೊಳ್ಳಬಹುದು.
ಮಕ್ಕಳ ಸೂಕ್ಷ್ಮ ತ್ವಚೆ ಆರೈಕೆ ಹೀಗೆ ಮಾಡಿ
1) ಮಕ್ಕಳ ಸೂಕ್ಷ್ಮ ತ್ವಚೆಗೆ ರಕ್ಷಣೆ ಒದಗಿಸಲು ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಬಹುದು. ಅದು ತೇವಾಂಶವನ್ನು ಕಾಪಾಡುತ್ತದೆ. ಮತ್ತು ಸೂಕ್ಷ್ಮ ಚರ್ಮವನ್ನು ರಕ್ಷಿಸಲು ತಡೆಗೋಡೆಯನ್ನು ರೂಪಿಸುತ್ತದೆ.
2) ಚರ್ಮವನ್ನು ಹೈಡ್ರೀಕರಿಸಲು ಗ್ಲಿಸರಿನ್ ಬಳಸಬಹುದು. ಅದು ತ್ವಚೆಯ ತೇವಾಂಶ ಕಾಪಾಡುತ್ತದೆ.
3) ಶಿಯಾ ಬಟರ್ ಬಳಸಿ. ಅದು ಚರ್ಮದ ಶುಷ್ಕತೆ ಮತ್ತು ಕಿರಿಕಿರಿಯನ್ನು ಹೋಗಲಾಡಿಸುತ್ತದೆ.
4) ಝಿಂಕ್ ಆಕ್ಸೈಡ್ ಇರುವ ಲೋಷನ್ ಬಳಸಿ. ಡೈಪರ್‌ನಿಂದಾಗುವ ರ್‍ಯಾಶಸ್‌ಗಳಿಂದ ದೂರವಿರಲು ಇದು ಉತ್ತಮವಾಗಿದೆ, ಜೊತೆಗೆ ತೇವಾಂಶವನ್ನು ಕಾಪಾಡುತ್ತದೆ.
5) ದೊಡ್ಡವರಿಗೆ ಬಳಸುವ ಚರ್ಮದ ಉತ್ಪನ್ನಗಳನ್ನು ಶಿಶು ಅಥವಾ ಮಕ್ಕಳಿಗೆ ಬಳಸಬೇಡಿ.
