ಪ್ರಾಣಿಗಳಾಕೃತಿಯ ಟೋಸ್ಟ್ ತಯಾರಿಸಿ ಮಕ್ಕಳನ್ನ ಸೆಳೆಯಿರಿ, ಲಂಚ್ ಬಾಕ್ಸ್ ಆಕರ್ಷಕವಾಗಿ ಕಾಣುವಂತೆ ಮಾಡಲು ಇಲ್ಲಿದೆ ಬೆಸ್ಟ್ ಐಡಿಯಾ
ಶಾಲೆಗೆ ಹೋಗುವ ಪುಟ್ಟ ಮಕ್ಕಳಿಗೆ ಏನು ಬುತ್ತಿ ಕಳುಹಿಸುವುದು ಎಂಬ ಚಿಂತೆ ಅನೇಕ ತಾಯಂದಿರದ್ದು. ನೀವುಕೂಡ ಇದೇ ರೀತಿಯ ಚಿಂತೆಯಲ್ಲಿದ್ದರೆ ನಿಮ್ಮ ತಲೆನೋವನ್ನು ಕಡಿಮೆ ಮಾಡುವಂತಹ ವಿಧ-ವಿಧವಾದ ತಿನಿಸುಗಳನ್ನು ತಯಾರಿಸುವ ಬಗ್ಗೆ ಇಲ್ಲಿದೆ ಮಾಹಿತಿ.
ಮಕ್ಕಳನ್ನು ಉತ್ತಮ ಶಾಲೆಗೆ ದಾಖಲಿಸಿ ಉತ್ತಮ ಶಿಕ್ಷಣ ಕೊಡಬೇಕೆನ್ನುವುದು ಪೋಷಕರ ಚಿಂತೆ. ಇದರ ಜೊತೆಗೆ ಮಕ್ಕಳಿಗೆ ಪ್ರತಿನಿತ್ಯ ಟಿಫಿನ್ ಬಾಕ್ಸ್ ಗೆ ಯಾವ ಊಟ ಪ್ಯಾಕ್ ಮಾಡಿ ಕಳಿಸಬೇಕು ಎನ್ನುವ ಚಿಂತೆ ಕೂಡ ಕಡಿಮೆಯದ್ದಲ್ಲ. ಮನೆಯಲ್ಲಿ ಯಾವುದೋ ಒಂದು ಆಹಾರವನ್ನು ಇಷ್ಟಪಡುವ ಮಕ್ಕಳು ಅದನ್ನೇ ಲಂಚ್ ಬಾಕ್ಸ್ ಗೆ ಹಾಕಿ ಕಳುಹಿಸಿದರೆ ಖುಷಿ ಖುಷಿಯಿಂದ ತಿಂದು ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ತಾಯಂದಿರಿಗೆ ಮಕ್ಕಳಿಗೆ ಯಾವ ತಿಂಡಿ ಕಳುಹಿಸುವುದು ಎಂಬ ಚಿಂತೆ ಕಾಡುತ್ತಿರುತ್ತದೆ. ಕೆಲವೊಂದು ಶಾಲೆಗಳಲ್ಲಿ ಹೊರಗಿನ ತಿಂಡಿಗಳನ್ನು ತರಲು ಅವಕಾಶ ಇರುವುದಿಲ್ಲ. ಇಂಥಾ ಸಂದರ್ಭಗಳಲ್ಲಂತೂ ಮನೆಯಲ್ಲಿಯೇ ತಿಂಡಿ ತಯಾರಿಸಿ ಕಳುಹಿಸದೇ ಪೋಷಕರಿಗೆ ಬೇರೆ ವಿಧಿ ಉಳಿಯುವುದಿಲ್ಲ.
ಮಕ್ಕಳಿಗೆ ನೀವು ಮಾಡಿ ಕಳುಹಿಸುವ ಅಡುಗೆಯು ಕೇವಲ ಪೌಷ್ಠಿಕಾಂಶದಿಂದ ಕೂಡಿದ್ದರೆ ಸಾಲದು. ನೋಡಲು ಕೂಡ ಆಕರ್ಷಕವಾಗಿ ಇರಬೇಕು. ಆಗ ಮಾತ್ರ ಮಕ್ಕಳು ಅದನ್ನು ಇಷ್ಟಪಟ್ಟು ತಿನ್ನುತ್ತಾರೆ. ನೀವು ಕೂಡ ನಿಮ್ಮ ಮಗುವಿಗೆ ಯಾವ ರೀತಿಯ ಟಿಫಿನ್ ಮಾಡಿ ಕಳುಹಿಸಬಹುದು ಎಂದು ಯೋಚಿಸುತ್ತಿದ್ದರೆ ಇಲ್ಲೊಂದಿಷ್ಟು ಐಡಿಯಾಗಳಿವೆ. ಈ ರುಚಿಕರವಾದ ಟೋಸ್ಟ್ ಗಳನ್ನು ತಯಾರಿಸುವುದು ಸುಲಭ. ಸವಿಯಲು ರುಚಿಕರ ಅಷ್ಟೇ ಏಕೆ ನೋಡಲು ಕೂಡ ಅತ್ಯಾಕರ್ಷಕವಾಗಿ ಇರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ ಸಿಗುತ್ತಿದೆ ಎಂದ ಮೇಲೆ ಇನ್ಯಾಕೆ ತಡ? ಈ ರುಚಿಕರವಾದ ಟೋಸ್ಟ್ಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಂಡೇ ಬಿಡೋಣ.
ಕರಡಿ ಆಕಾರದ ಟೋಸ್ಟ್
ಬೇಕಾಗುವ ಸಾಮಗ್ರಿಗಳು: ಸ್ಲೈಸ್ ಮಾಡಿಕೊಂಡ ಬ್ರೌನ್ ಬ್ರೆಡ್ - 1, ವೃತ್ತಾಕಾರದಲ್ಲಿ ತುಂಡರಿಸಿದ ಬಾಳೆ ಹಣ್ಣುಗಳು, ಪೀನಟ್ ಬಟರ್( ಮಾರುಕಟ್ಟೆಯಲ್ಲಿ ಸಿಗುತ್ತದೆ), ಕಪ್ಪು ದ್ರಾಕ್ಷಿ ಅಥವಾ ಬ್ಲೂ ಬೆರ್ರಿ ಹಣ್ಣುಗಳು
ಮಾಡುವ ವಿಧಾನ: ಬ್ರೌನ್ ಬ್ರೆಡ್‍ನ ಒಂದು ಸ್ಲೈಸ್ ತೆಗೆದುಕೊಳ್ಳಿ. ಈ ತಿಂಡಿಯನ್ನು ತಯಾರಿಸಲು ನೀವು ಮಲ್ಟಿಗ್ರೇನ್ ಬ್ರೆಡ್‍ಗಳನ್ನೂ ಬಳಸಬಹುದು. ಇದರ ಮೇಲೆ ಪೀನಟ್ ಬಟರನ್ನು ಸಮಾನಾಗಿ ಸವರಿಕೊಳ್ಳಿ. ಈಗ ನೀವು ಕತ್ತರಿಸಿಕೊಂಡ ಬಾಳೆ ಹಣ್ಣಿನಿಂದ ಕರಡಿಯ ಕಣ್ಣು ಹಾಗೂ ಮೂಗುಗಳನ್ನು ರಚಿಸಿ. ಬಾಳೆಹಣ್ಣಿನ ಮೇಲೆ ಕಪ್ಪು ದ್ರಾಕ್ಷಿಯನ್ನು ಇಡಿ. ದ್ರಾಕ್ಷಿ ಇಲ್ಲವೆಂದರೆ ನೀವು ಬ್ಲು ಬೆರ್ರಿ ಹಣ್ಣುಗಳನ್ನೂ ಬಳಸಬಹುದು. ಇದು ನೋಡಲು ಥೇಟ್ ಕರಡಿ ಕಣ್ಣಿನಂತೆಯೇ ಕಾಣುತ್ತದೆ. ಸ್ವಲ್ಪ ಡ್ರೈ ಫ್ರೂಟ್ಸ್ ಇದ್ದರೆ ಅವುಗಳನ್ನು ಸೇರಿಸಿ ಟಿಫಿನ್ ಬಾಕ್ಸಿನಲ್ಲಿಟ್ಟು ಕಳುಹಿಸಿ ಕೊಟ್ಟರೆ ಮಕ್ಕಳು ಇದನ್ನು ಸವಿಯದೇ ಇರಲು ಸಾಧ್ಯವೇ ಇಲ್ಲ.
ಬೆಕ್ಕಿನಾಕೃತಿಯ ಟೋಸ್ಟ್
ಬೇಕಾಗುವ ಸಾಮಗ್ರಿಗಳು: ಸ್ಟ್ರಾಬೆರ್ರಿ ತುಂಡುಗಳು, ಬ್ಲೂಬೆರ್ರಿ ಹಣ್ಣುಗಳು, ಪೀನಟ್ ಬಟರ್, ಒಂದು ರಸ್ಬೆರ್ರಿ ಹಣ್ಣು, ಪ್ರೆಟ್ಜೆಲ್ ತುಂಡುಗಳು.
ತಯಾರಿಸುವ ವಿಧಾನ: ಬ್ರೆಡ್ ತೆಗೆದುಕೊಂಡು ಇದರ ಮೇಲೆ ಪೀನಟ್ ಬಟರ್ ಅನ್ನು ಸವರಿಕೊಳ್ಳಿ. ಸ್ಟ್ರಾಬೆರ್ರಿ ತುಂಡುಗಳನ್ನು ಬೆಕ್ಕಿನ ಕಿವಿ ರೀತಿಯಂತೆ ಇಡಿ. ಬ್ಲೂಬೆರ್ರಿ ಹಣ್ಣುಗಳಿಂದ ಬೆಕ್ಕಿನ ಕಣ್ಣುಗಳನ್ನು ರಚಿಸಿ. ಕಣ್ಣಿನ ಕೆಳಗೆ ಮಧ್ಯ ಭಾಗ್ಯದಲ್ಲಿ ರಸ್ಬೆರ್ರಿ ಹಣ್ಣುಗಳನ್ನಿಡಿ. ಇದು ಬೆಕ್ಕಿನ ಮೂಗಿನಂತೆಯೇ ಕಾಣುತ್ತದೆ. ಈಗ ಪ್ರೆಟ್ಜೆಲ್ ತುಂಡುಗಳಿಂದ ಬೆಕ್ಕಿನ ಮೀಸೆ ತಯಾರಿಸಿ. ಈಗ ಬ್ರೆಡ್ ಥೇಟ್ ಬೆಕ್ಕಿನಂತೆಯೇ ಕಾಣುತ್ತಿರುತ್ತದೆ. ಇದನ್ನು ಮಕ್ಕಳ ಟಿಫಿನ್ ಬಾಕ್ಸಿನಲ್ಲಿಟ್ಟು ಕಳುಹಿಸಿ.
ಇದೇ ಮಾದರಿಯನ್ನು ಬಳಸಿಕೊಂಡು ನೀವು ಕೋತಿ ಮುಖದಂತೆ, ಗೂಬೆಯ ಮುಖದಂತೆ ಬ್ರೆಡ್‍ಗಳ ಮೇಲೆ ಸಿಂಗರಿಸಬಹುದಾಗಿದೆ. ಇವುಗಳು ನೋಡಲು ಆಕರ್ಷಕವಾಗಿ ಕಾಣುವುದರಿಂದ ಮಕ್ಕಳು ಸುಲಭವಾಗಿ ತಿನ್ನುತ್ತಾರೆ. ಮಾತ್ರವಲ್ಲದೆ ಇವುಗಳಲ್ಲಿ ನೀವು ಬಳಸುವ ಹಣ್ಣುಗಳು ಹಾಗೂ ಡ್ರೈಫ್ರೂಟ್‍ಗಳಿಂದ ಮಕ್ಕಳಿಗೆ ಉತ್ತಮ ಪೋಷಕಾಂಶವನ್ನು ಒದಗಿಸುತ್ತದೆ.