ತಂದೆ–ತಾಯಿ ಗಮನ ಸೆಳೆವ ಮಕ್ಕಳ ವರ್ತನೆ ತೊಂದರೆಯಲ್ಲ, ಸೂಚನೆ; ಪೋಷಕರಿಗಿದು ಅರ್ಥವಾಗಬೇಕಿದೆ – ನಡಹಳ್ಳಿ ವಸಂತ್ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ತಂದೆ–ತಾಯಿ ಗಮನ ಸೆಳೆವ ಮಕ್ಕಳ ವರ್ತನೆ ತೊಂದರೆಯಲ್ಲ, ಸೂಚನೆ; ಪೋಷಕರಿಗಿದು ಅರ್ಥವಾಗಬೇಕಿದೆ – ನಡಹಳ್ಳಿ ವಸಂತ್ ಬರಹ

ತಂದೆ–ತಾಯಿ ಗಮನ ಸೆಳೆವ ಮಕ್ಕಳ ವರ್ತನೆ ತೊಂದರೆಯಲ್ಲ, ಸೂಚನೆ; ಪೋಷಕರಿಗಿದು ಅರ್ಥವಾಗಬೇಕಿದೆ – ನಡಹಳ್ಳಿ ವಸಂತ್ ಬರಹ

ಮಕ್ಕಳು ತಂದೆ–ತಾಯಿಯ ಗಮನ ತಮ್ಮೆಡೆ ಸೆಳೆಯಲು ಹಟ, ಕೋಪ ಮಾಡುತ್ತಿದ್ದಾರೆ ಎಂದರೆ ಅವರಿಗೆ ಪೋಷಕರ ಅಗತ್ಯವಿದೆ, ಅವರ ಪ್ರೀತಿಯ ಅವಶ್ಯವಿದೆ ಎಂಬುದರ ಸೂಚನೆಯಾಗಿದೆ. ಇಂತಹ ಸಂದರ್ಭದಲ್ಲಿ ಪೋಷಕರೇನು ಮಾಡಬೇಕು ಎಂಬುದರ ಬಗ್ಗೆ ಬರೆದಿದ್ದಾರೆ ಆಪ್ತಸಮಾಲೋಚಕ ನಡಹಳ್ಳಿ ವಸಂತ್‌.

ಮಕ್ಕಳಲ್ಲಿನ ಗಮನ ಸೆಳೆಯುವ ವರ್ತನೆಗಳು ತೊಂದರೆಯಲ್ಲ, ಸೂಚನೆ - ನಡಹಳ್ಳಿ ವಸಂತ್ ಬರಹ
ಮಕ್ಕಳಲ್ಲಿನ ಗಮನ ಸೆಳೆಯುವ ವರ್ತನೆಗಳು ತೊಂದರೆಯಲ್ಲ, ಸೂಚನೆ - ನಡಹಳ್ಳಿ ವಸಂತ್ ಬರಹ (PC: Canva)

ಅದೊಂದು ಪೋಷಕರ (Parents Meeting) ಸಭೆ. ಶಾಲಾ ಮುಖ್ಯಸ್ಥರು ಕೆಲವು ಮಾತುಗಳನ್ನಾಡಲು ನನ್ನನ್ನು ಆಹ್ವಾನಿಸಿದ್ದರು. ನಾನು ಭಾಷಣಕ್ಕಿಂತ ಹೆಚ್ಚಾಗಿ ಮಾತುಕತೆಯನ್ನು ಇಷ್ಟಪಡುತ್ತೇನೆ. ಹಾಗಾಗಿ 10 ನಿಮಿಷ ಮಾತನಾಡಿ ಪೋಷಕರಿಂದ ಪ್ರಶ್ನೆಗಳನ್ನು ಆಹ್ವಾನಿಸಿದೆ. ಒಬ್ಬ ಮಹಿಳೆ ತನ್ನ ಕಷ್ಟಗಳನ್ನು ಹೇಳಿಕೊಂಡಳು ‘ನನ್ನ ಮಗು ಏಳು ವರ್ಷದವನು, ನಾನು ಸಂಜೆ ಕೆಲಸದಿಂದ ಬಂದು ಮನೆಗೆಲಸ ಮಾಡುವಾಗಲೇ ಅವನು ಬಂದು ಹೆಚ್ಚು ತೊಂದರೆ ಕೊಡುತ್ತಾನೆ. ಇದು ಒಂದು ರೀತಿಯ Attention seeking Behaviour, ಹಾಗಾಗಿ ಇದನ್ನು ಕಡೆಗಣಿಸಿ ಅವನಿಗೆ ತನ್ನ ಕೆಲಸ ಮಾಡಿಕೊಳ್ಳುವ ಶಿಸ್ತು ಕಲಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ಹಾಗೆ ಮಾಡಿದರೆ ಅವನ ಸಿಟ್ಟು ಗಲಾಟೆ ಹೆಚ್ಚಾಗುತ್ತದೆ. ಅವನನ್ನು ಸರಿ ಮಾಡುವುದು ಹೇಗೆ?‘.

‘ಕಚೇರಿಯಿಂದ ಮನೆಗೆ ಬಂದ ಪತಿ ನಿಮ್ಮನ್ನು ಮಾತನಾಡಿಸದೇ ಅಥವಾ ನೆಪ ಮಾತ್ರಕ್ಕೆ ಒಂದೆರಡು ಮಾತನಾಡಿ ಮೊಬೈಲ್‌ ಹಿಡಿದು ಕುಳಿತರೆ ನಿಮಗೇನೆನ್ನಿಸುತ್ತದೆ?‘ ನನ್ನ ಮರು ಪ್ರಶ್ನೆಯಾಗಿತ್ತು. ‘ಸಿಟ್ಟು, ಬೇಸರ ಎಲ್ಲವೂ ಆಗುತ್ತಿರುತ್ತದೆ‘ ಮಹಿಳೆಯ ಪ್ರಾಮಾಣಿಕ ಉತ್ತರವಾಗಿತ್ತು. ‘ಈ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಲು ನೀವು ತೋರಿಸುವ ವರ್ತನೆಯನ್ನು Attention seeking Behavior ಎಂದು ಕಡೆಗಣಿಸಿದರೆ ಆಗ ಏನಾಗಬಹುದು?‘ ಪ್ರಶ್ನೆ ಮುಂದುವರೆಸಿದೆ. ‘ನನ್ನ ಸಿಟ್ಟು ಹೆಚ್ಚಾಗುತ್ತದೆ‘ ಎನ್ನುವುದು ಮಹಿಳೆಯ ಉತ್ತರವಾಗಿತ್ತು. ‘ಹಾಗಿದ್ದರೆ ಈಗ ನಿಮ್ಮ ಮಗ ತೋರಿಸುತ್ತಿರುವುದು ತನ್ನ ಹೆಚ್ಚಾದ ಸಿಟ್ಟನ್ನೇ ಅಲ್ಲವೇ? ಅದು ದೋಷ ಹೇಗಾಗುತ್ತದೆ? ಮತ್ತು ಅದನ್ನು ಕಡೆಗಣಿಸುವುದು ಪರಿಹಾರವಾಗಬಹುದೇ?‘

‘ಆದರೆ ನಾನು ಕೆಲಸದ ಒತ್ತಡದಲ್ಲಿರುತ್ತೇನಲ್ಲವೇ? ನನಗೆ ಅವನನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಅದಕ್ಕೇನು ಮಾಡುವುದು?‘

‘ಇದನ್ನು ಸಂಪೂರ್ಣ ಒಪ್ಪುತ್ತೇನೆ. ಅಂದರೆ ನಾವು ಚರ್ಚೆ ಮಾಡುತ್ತಿರುವುದು ಮಗುವಿನ ತೊಂದರೆಯನ್ನಲ್ಲ. ಮಗುವಿನ ವರ್ತನೆಯನ್ನು ನೀವು ಹೇಗೆ ನಿಭಾಯಿಸಬೇಕು ಎನ್ನುವ ವಿಚಾರವನ್ನಲ್ಲವೇ?‘ ಎನ್ನುವ ನನ್ನ ಪ್ರಶ್ನೆಗೆ ಅವರು ಹೌದೆಂದು ತಲೆಯಲ್ಲಾಡಿಸಿದರು. ಅಲ್ಲಿದ್ದ ಹೆಚ್ಚಿನ ಪೋಷಕರು ತಮ್ಮ ಮುಖಭಾವದಲ್ಲಿಯೇ ಅದನ್ನು ಅನುಮೋದಿಸಿದ್ದರು. ಮಕ್ಕಳಲ್ಲಿ ವರ್ತನೆಯ ಕೊರತೆಯನ್ನು ಹುಡುಕಿ ಅದಕ್ಕೆ ದೊಡ್ಡ ದೊಡ್ಡ ಕಾಯಿಲೆಗಳ ಹೆಸರು ನೀಡಿ ಹಣ ಮಾಡುತ್ತಿರುವ ತಜ್ಞರ ಬಲೆಯಿಂದ ಈ ಮಹಿಳೆಯನ್ನು ಬಿಡಿಸುವ ನನ್ನ ಮೊದಲ ಉದ್ದೇಶ ಸಾಧನೆಯಾಗಿತ್ತು. ನಂತರ ಇಂತಹ ವರ್ತನೆಯ ಹಿನ್ನೆಲೆ ಮತ್ತು ಪರಿಹಾರಗಳನ್ನು ಕುರಿತು ಮಾತನಾಡಿದೆ.

ನಾವೆಲ್ಲರೂ ಸಂಘಜೀವಿಗಳು. ನಮ್ಮ ಮಿದುಳು ನರಮಂಡಲಗಳು ಅದಕ್ಕಾಗಿಯೇ ರೂಪುಗೊಂಡಿವೆ. ಹಾಗಾಗಿ ಇತರರ ಅದರಲ್ಲೂ ಹೆಚ್ಚಾಗಿ ಕುಟುಂಬದವರ ಮತ್ತು ಆತ್ಮೀಯರ ಗಮನ ನಮ್ಮ ಕಡೆಗೆ ಇರಬೇಕೆಂದು ಸಹಜವಾಗಿ ನಿರೀಕ್ಷಿಸುತ್ತೇವೆ. ಮಕ್ಕಳಿಗೆ ಇದರ ಅಗತ್ಯ ಹೆಚ್ಚಾಗಿಯೇ ಇರುತ್ತದೆ. ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಮಿದುಳು ನರಮಂಡಲಗಳು ಪೋಷಕರು ನೀಡುವ ಸಹಜ ಪ್ರೀತಿ ಬೆಂಬಲ ಭದ್ರತೆಗಳಿಂದಲೇ ಸಮಗ್ರವಾಗಿ ಬೆಳವಣಿಗೆಯಾಗುತ್ತದೆ. ಮಕ್ಕಳಿಗೆ ಅದರ ಕೊರತೆ ಎನ್ನಿಸಿದಾಗ ಅವರು ತಮ್ಮ ವರ್ತನೆಯ ಮೂಲಕ ‘ನನಗೆ ನಿನ್ನ ಒಡನಾಟದ ಅಗತ್ಯವಿದೆ‘ ಎಂದು ತೋರಿಸುತ್ತಾರೆ. ಆದರೆ ಪೋಷಕರಿಗೆ ಅದನ್ನು ನಿಭಾಯಿಸಲು ಕಷ್ಟವಾದಾಗ ಅದನ್ನು ಮಕ್ಕಳ ಸಮಸ್ಯೆಯಾಗಿ ನೋಡಿ ಅವರಿಗೆ ಶಿಸ್ತನ್ನು ಕಲಿಸಲು ಪ್ರಯತ್ನಿಸುತ್ತಾರೆ. ಇದರಿಂದ ಮಕ್ಕಳ ಒಡನಾಟದ ಹಸಿವು ಹೆಚ್ಚಾಗಬಹುದೇ ಹೊರತು ಅವರಿಗೆ ಸಮಾಧಾನವಾಗುವುದಿಲ್ಲ. ಪರಿಣಾಮ ಶಿಸ್ತನ್ನು ಕಲಿಸುವ ಪೋಷಕರ ಪ್ರಯತ್ನದಿಂದಲೇ ಅವರ ಅಶಿಸ್ತು ಹೆಚ್ಚಾಗುತ್ತದೆ. ಹಾಗಾಗಿ ಮಗು ಹಟ ಮಾಡಿದರೆ ಸಿಟ್ಟನ್ನು ತೋರಿಸಿದರೆ ಅದಕ್ಕೆ ಒಡನಾಟದ ಹಸಿವು ತೀರಿರುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಪೋಷಕರಿಗೆ ನಿಭಾಯಿಸಲು ಕಷ್ಟವಾಗುವ ಮಕ್ಕಳ ಎಲ್ಲಾ ವರ್ತನೆಗಳನ್ನು ಸಮಸ್ಯೆಯಾಗಿ ಮಾತ್ರ ನೋಡಿದರೆ ತೊಂದರೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಪೋಷಕರ ಹಿಡಿತದಲ್ಲಿ ಇರುವವರೆಗೆ ಮಕ್ಕಳು ಎಲ್ಲವನ್ನೂ ಒಪ್ಪಿಕೊಂಡು ವಿಧೇಯರಾಗಿದ್ದರೂ ಮಕ್ಕಳ ಪೋಷಕರ ಬಾಂಧವ್ಯದಲ್ಲಿ ಗೊತ್ತಿಲ್ಲದಂತೆಯೇ ಬಿರುಕುಗಳು ಬಿಟ್ಟಿರುತ್ತವೆ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.