ಪಠ್ಯ ಜ್ಞಾನದ ಜತೆಗೆ ಮಕ್ಕಳಲ್ಲಿ ಕಲ್ಪನಾಶಕ್ತಿಯನ್ನೂ ಬೆಳೆಸಿ; ಪೋಷಕರು, ಶಿಕ್ಷಕರಿಗಿದು ಕಿವಿಮಾತು – ಮನದ ಮಾತು ಅಂಕಣ
ಭವ್ಯಾ ವಿಶ್ವನಾಥ್ ಬರಹ: ಮಕ್ಕಳಲ್ಲಿ ಓದಿನ ಜ್ಞಾನದ ಜೊತೆಗೆ ಕಲ್ಪನಾಶಕ್ತಿ ಬೆಳೆಸುವುದರಿಂದ ಅವರಲ್ಲಿ ಸೃಜನಶೀಲ ಮನೋಭಾವ ವೃದ್ಧಿಯಾಗುತ್ತದೆ. ಮಕ್ಕಳು ಕಲ್ಪನೆ ಮಾಡಿಕೊಳ್ಳುವುದನ್ನು ಬೆಳೆಸುವುದು ಪೋಷಕರು ಹಾಗೂ ಶಿಕ್ಷಕರ ಕರ್ತವ್ಯ. ಇದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು. ಇದರಿಂದ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ.
ಪಠ್ಯ ಪುಸ್ತಕ, ಕಥೆ ಪುಸ್ತಕ, ಸಿನಿಮಾ, ಕಂಪ್ಯೂಟರ್‌ಗಳಲ್ಲಿರುವ ವಿಷಯವನ್ನು ಮಾಹಿತಿಯಂತೆ ಸಂಗ್ರಹ ಮಾಡುವುದರ ಬದಲು, ಪ್ರಾಯೋಗಿಕವಾಗಿ ಮತ್ತು ಮಕ್ಕಳ ಕಲ್ಪನೆಯ ಮೂಲಕ ವಿಷಯಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಪ್ರಚೋದಿಸಿ. ಪಠ್ಯ ಪುಸ್ತಕಗಳಲ್ಲಿರುವ ವಿಷಯಗಳನ್ನು ಕಲಿತುಕೊಳ್ಳುವ ಜೊತೆ ಜೊತೆಗೆ ಮಕ್ಕಳ ಸೃಜನಶೀಲತೆ ಮತ್ತು ಕಲ್ಪನಾಶಕ್ತಿ ಬೆಳೆಸಿಕೊಳ್ಳುವುದಕ್ಕೆ ಬೆಂಬಲಿಸಿ.
ಮಕ್ಕಳ ಬೌದ್ಧಿಕ ಶಕ್ತಿಯನ್ನು ಸಹಜವಾಗಿ ಮತ್ತು ಆಸಕ್ತಿದಾಯಕವಾಗಿ ಬೆಳೆಸುವುದಕ್ಕೆ ಕಲ್ಪನೆಗಳು, ಕಥೆ ಕವನಗಳು, ಚಿತ್ರಗಳು ನೆರವಾಗುತ್ತವೆ. ಕಲ್ಪನೆಗಳ ಮೂಲಕ ವಿಜ್ಞಾನವನ್ನಾಗಲಿ, ಸಮಾಜ ಶಾಸ್ತ್ರವನ್ನಾಗಲಿ ಅಥವಾ ನೈತಿಕತೆಯ ಪಾಠಗಳಾದ ಪ್ರಾಮಾಣಿಕತೆ, ಸತ್ಯ, ಸೇವೆ, ದಾನ, ಆತ್ಮ ನಿಗ್ರಹ, ಆದರ್ಶ ಇತ್ಯಾದಿ ಪಾಠಗಳ ವಿಷಯವಸ್ತುವನ್ನಾಗಿ ತೆಗೆದುಕೊಂಡು ಹೇಳಿಕೊಡಬಹುದು.
ಕಥೆ ಹೇಳುವ ಮೂಲಕ ಆಸಕ್ತಿ ಹೆಚ್ಚಿಸಿ
ಮಕ್ಕಳ ಆಸಕ್ತಿಯನ್ನು ಹಿಡಿದಿಡುವುದಕ್ಕೆ ಉತ್ತಮ ಮಾರ್ಗವೆಂದರೆ ಕಥೆ ಹೇಳುವುದು ಮತ್ತು ಬಣ್ಣದ ಚಿತ್ರಗಳನ್ನು ಬಿಡಿಸುವುದು. ಇದು ಅವರ ಕಲ್ಪನಾ ಶಕ್ತಿ ಮತ್ತು ನೆನಪಿನ ಶಕ್ತಿಗಳನ್ನು ಅರಳಿಸುತ್ತದೆ. ಕಥೆ ಮತ್ತು ಬಣ್ಣಗಳು ಮಕ್ಕಳ ಹೃದಯವನ್ನು ಬಲು ಬೇಗ ತಲುಪಿ ಅವರ ಭಾವನೆಗಳನ್ನು ಉನ್ನತೀಕರಿಸುತ್ತದೆ ಮತ್ತು ಬುದ್ಧಿಯೂ ಚುರುಕಾಗುತ್ತದೆ. ಇದರಿಂದ ಮಕ್ಕಳ ಸೃಜನಶೀಲತೆ ಸಕ್ರಿಯವಾಗಿ ಹೊಸ ವಿಚಾರಗಳು, ಮಾರ್ಗಗಳತ್ತ ಸಾಗುತ್ತಾರೆ.
ಮಾಹಿತಿಯನ್ನು ಗಳಿಸುವುದೇ ಉದ್ದೇಶವಾದರೆ ಕಲಿಯುವಿಕೆ ನಿಮಿತ್ತವಾಗಿ ಮಕ್ಕಳ ಬುದ್ಧಿ ವಿಕಾಸಗೊಳ್ಳುವುದಿಲ್ಲ. ಇದು ಬರೀ ಗಿಳಿಯ ಪಾಠವಾಗುವುದೇ ಹೊರತು ಕಲಿಕೆಯಾಗುವುದಿಲ್ಲ.
ವಿಜ್ಞಾನಿ ಐನ್‌ಸ್ಟೈನ್ ಹೇಳಿದ ಹಾಗೆ, ‘ಜ್ಞಾನಕ್ಕಿಂತ ಕಲ್ಪನೆಯು ಮಹತ್ವವಾದುದು‘. ಶಕ್ತಿಯುತವಾದ ಕಲ್ಪನಾಶಕ್ತಿ ಹೊಂದಿರುವ ಮಕ್ಕಳು ಜ್ಞಾನವನ್ನು ದೃಶ್ಯೀಕರಿಸಲು ಸಹಾಯ ಮಾಡುತ್ತದೆ. ಅವರು ವಿಷಯಗಳನ್ನು ವಿಭಿನ್ನ ರೀತಿಯಲ್ಲಿ ನೋಡುತ್ತಾರೆ, ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಅವರಿಗೆ ಸುಲಭವಾಗುತ್ತದೆ. ಇದು ಹೆಚ್ಚಿನ ಸ್ಪಷ್ಟತೆಯೊಂದಿಗೆ ವಿಷಯಗಳನ್ನು ಅನ್ವೇಷಿಸಲು ಮತ್ತು ಅವುಗಳನ್ನು ದೀರ್ಘಕಾಲದವರೆಗೆ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಮಗುವಿಗೆ ಕಲ್ಪನೆ ಮಾಡುವುದನ್ನು ನಿಲ್ಲಿಸಲು ಎಂದಿಗೂ ಹೇಳಬೇಡಿ, ತಡೆದರೆ ಅವರ ಕಲಿಕೆಯು ಕುಂಠಿತವಾಗಬಹುದು.
ಇತ್ತೀಚಿನ ದಿನಗಳಲ್ಲಿ, ಹೆಚ್ಚು ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಟಿವಿ ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದ ಅವರು ತಮ್ಮ ಕಲ್ಪನಾಶಕ್ತಿಯನ್ನು ಕಡಿಮೆ ಬಳಸುತ್ತಾರೆ. ಅವರೊಳಗಿನ ಕಲ್ಪನಾಶಕ್ತಿ ಜೀವಂತವಾಗಿಡಲು ನೀವು ಬಯಸುವುದಾದರೆ, ನಿಮ್ಮ ಮಗುವಿನ ಸೃಜನಶೀಲತೆಯನ್ನು ಹೀಗೆ ಹೆಚ್ಚಿಸಬಹುದು.
1. ಓದುವುದು
ಮಕ್ಕಳು ಮತ್ತು ವಯಸ್ಕರಿಗೆ ಓದುವುದನ್ನು ಉತ್ತಮ ಚಟುವಟಿಕೆ ಎಂದು ಪರಿಗಣಿಸಲಾಗಿದೆ. ಮಕ್ಕಳಲ್ಲಿ, ನಿರ್ದಿಷ್ಟವಾಗಿ, ಈ ಪ್ರಪಂಚವನ್ನು ಮತ್ತು ಅವರು ಓದುತ್ತಿರುವ ಪಾತ್ರಗಳನ್ನು ದೃಶ್ಯೀಕರಿಸಲು ಸಹಾಯ ಮಾಡುತ್ತದೆ. ಅವರಿಗೆ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸಲು ಮಲಗುವ ಸಮಯದಲ್ಲಿ ನೀವು ಅವರಿಗೆ ಕಥೆ, ಕವನಗಳನ್ನು ಓದಿ ಹೇಳಬಹುದು.
2. ಚಿತ್ರ ಬಿಡಿಸುವುದು
ನೆನಪಿನಿಂದ ಏನನ್ನಾದರೂ ಚಿತ್ರಿಸುವುದನ್ನು ಅಭ್ಯಾಸ ಮಾಡಿಸಿ. ಬಹುಶಃ ಪ್ರಾಣಿ, ಪಕ್ಷಿ ಅಥವಾ ಅವರು ಇತ್ತೀಚೆಗೆ ಭೇಟಿ ನೀಡಿದ ಸ್ಥಳ, ಅವರ ಅಜ್ಜಿಯ ಮನೆ ಅಥವಾ ಅಂಗಡಿಯಲ್ಲಿ ಅವರು ನೋಡಿದ ಉಡುಗೆ ಇತ್ಯಾದಿ. ಈ ಚಟುವಟಿಕೆಗಳು ನೆನಪಿಗೆ ತಂದುಕೊಳ್ಳುವುದಕ್ಕೆ ಮತ್ತು ಕಲ್ಪನೆ ಮಾಡಿಕೆೊಳ್ಳುವುದಕ್ಕೆ ಎರಡಕ್ಕೂ ಸಹ ಅನುಕೂಲ ಮಾಡಿಕೊಡುತ್ತದೆ. ಮಗುವು ತಾನು ನೆನಪಿಸಿಕೊಳ್ಳುವ ಚಿತ್ರಣವನ್ನು ಚಿತ್ರಿಸಬೇಕು, ಇದರಿಂದ ಸೃಜನಶೀಲಯೂ ಹೆಚ್ಚುತ್ತದೆ.
3. ಬರೆಯುವುದು
ಬರವಣಿಗೆಯು ಸೃಜನಶೀಲ ಬಿಂಬಿಸುವ ಒಂದು ಉತ್ತಮ ವ್ಯಾಯಾಮವಾಗಿದೆ. ಪ್ರಬಂಧಗಳು, ಕಥೆಗಳು, ಕವನಗಳು, ನಿಯತಕಾಲಿಕೆಗಳು ಅವರ ಕಲ್ಪನೆಯನ್ನು ಬಳಸಲು ಅಗತ್ಯವಿರುವ ಯಾವುದನ್ನಾದರೂ ಬರೆಯಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿ. ಬರವಣಿಗೆಯು ಸ್ಪಷ್ಟ ಮತ್ತು ತಾರ್ಕಿಕ ಚಿಂತನೆಯನ್ನು ಪ್ರೋತ್ಸಾಹಿಸುತ್ತದೆ, ಇದು ಈ ಚಟುವಟಿಕೆಯ ಹೆಚ್ಚುವರಿ ಬೋನಸ್ ಆಗಿದೆ.
4. ಸಂಗೀತ
ಕಣ್ಣುಗಳನ್ನು ಮುಚ್ಚಿ ಸಂಗೀತವನ್ನು ಆಲಿಸುವಂತೆ ಹೇಳಿ. ಇದು ಮಗುವಿಗೆ ಸ್ವಲ್ಪ ಬೇಸರವೆನ್ನಿಸಬಹುದು, ಆದರೆ ಹೀಗೆ ಮಾಡುವುದರಿಂದ ಮಗುವಿಗೆ ಸಾಹಿತ್ಯ, ಗಾಯಕರು ಮತ್ತು ನುಡಿಸುವ ವಾದ್ಯಗಳು ಸೇರಿದಂತೆ ಹಾಡು ಹೇಗಿರುತ್ತದೆ ಎಂಬುದನ್ನು ತನ್ನ ಕಲ್ಪನಾಶಕ್ತಿಯಿಂದ ಊಹಿಸಲು ನೆರವಾಗುತ್ತದೆ.
5. ಪ್ರಶ್ನೆ ಕೇಳುವುದು
ಅವರಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಿ. ಪ್ರಶ್ನೆಗಳು ಯಾವುದೇ ರೀತಿಯದ್ದಾಗಿರಬಹುದು - ತರ್ಕಬದ್ಧ, ಕಷ್ಟಕರ, ವಿಶಿಷ್ಟ ಅಥವಾ ಹಾಸ್ಯಕರ ವಿಷಯವು ಅವರನ್ನು ಅಸಾಧಾರಣವಾಗಿ ಯೋಚಿಸುವಂತೆ ಮಾಡುತ್ತದೆ ಮತ್ತು ಸೃಜನಶೀಲ ಉತ್ತರ ನೀಡುವಂತೆ ಮಾಡುತ್ತದೆ.
6. ಸೃಜನಾತ್ಮಕ ಜನರೊಂದಿಗೆ ಸಮಯ ಕಳೆಯುವಂತೆ ಮಾಡಿ. ಸಮಸ್ಯೆಗಳನ್ನು ಎದುರಿಸಲು ಮುಕ್ತವಾಗಿ ಕಲ್ಪನಾಶಕ್ತಿಯನ್ನು ಬಳಸುವ ವಯಸ್ಕರ ಬಳಿ ಹೆಚ್ಚು ಸಮಯಕಳೆಯುವುದರಿಂದ ಪ್ರಭಾವಿತರಾಗುತ್ತಾರೆ.
ಮಗುವು ಕಲ್ಪನೆಯೊಂದಿಗೆ ಹುಟ್ಟಿದೆ ಅಥವಾ ಇಲ್ಲ ಎಂದು ಜನರು ಹೇಳುತ್ತಾರೆ. ಅದನ್ನು ಬೆಳೆಸಲು ಸಾಧ್ಯವಿಲ್ಲವೆಂದು ಭಾವಿಸುತ್ತಾರೆ. ಆದರೆ ಮಕ್ಕಳು ತಮ್ಮ ಕಲ್ಪನೆಯನ್ನು ಬಳಸಲು ಕಲಿಸುವ ವಿಧಾನಗಳಿವೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಸರಿಯಾದ ತಂತ್ರಗಳನ್ನು ಬಳಸಿ ಕಲ್ಪನಾಶಕ್ತಿಯನ್ನು ಬಳಸಲು ಹೇಳಿಕೊಟ್ಟರೆ ಸ್ವಲ್ಪ ಸಮಯದ ನಂತರ ನಿಮ್ಮ ಮಗು ತಾನೇತಾನಾಗಿ ಬಳಸಲು ಪ್ರಾರಂಭಿಸುತ್ತದೆ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
ವಿಭಾಗ