ಕನ್ನಡ ಸುದ್ದಿ  /  Lifestyle  /  Parenting Tips Children Till What Age Parents Should Sleep With Their Children Right Age To Sleep Child Alone Bgy

Parenting: ಯಾವ ವಯಸ್ಸಿನಿಂದ ಒಂಟಿಯಾಗಿ ಮಲಗುವುದನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು; ಪೋಷಕರಿಗೆ ಇಲ್ಲಿದೆ ಮಹತ್ವದ ಸಲಹೆ

ಭಾರತದಲ್ಲಿ ಪೋಷಕರು ಹಾಗೂ ಮಕ್ಕಳ ಬಾಂಧವ್ಯ ಉಳಿದ ದೇಶಗಳಂತಲ್ಲ. ಮಕ್ಕಳ ಮೇಲಿನ ಪ್ರೀತಿ ವಾತ್ಸಲ್ಯ, ಕಾಳಜಿ ಸ್ವಲ್ಪ ಹೆಚ್ಚಿಗೆಯೇ ಇರುವುದರಿಂದ ಮಕ್ಕಳು ಎಷ್ಟೇ ದೊಡ್ಡವರಾದರೂ ಪಕ್ಕದಲ್ಲೇ ಮಲಗಿಸಿಕೊಳ್ಳುವುದು ಸಾಮಾನ್ಯ ವಿಚಾರ. ಆದರೆ ಒಂದು ನಿರ್ದಿಷ್ಟ ವಯಸ್ಸಿನ ನಂತರ ಮಕ್ಕಳನ್ನು ಒಂಟಿಯಾಗಿ ಮಲಗಲು ಅಭ್ಯಾಸ ಮಾಡಿಸಿಬೇಕು ಎನ್ನುತ್ತದೆ ಅಧ್ಯಯನ.

ಯಾವ ವಯಸ್ಸಿನಿಂದ ಮಕ್ಕಳಿಗೆ ಒಂಟಿಯಾಗಿ ಮಲಗಲು ಅಭ್ಯಾಸ ಮಾಡಿಸಬೇಕು; ಪೋಷಕರಿಗೆ ಇಲ್ಲಿದೆ ಮಹತ್ವದ ಸಲಹೆ
ಯಾವ ವಯಸ್ಸಿನಿಂದ ಮಕ್ಕಳಿಗೆ ಒಂಟಿಯಾಗಿ ಮಲಗಲು ಅಭ್ಯಾಸ ಮಾಡಿಸಬೇಕು; ಪೋಷಕರಿಗೆ ಇಲ್ಲಿದೆ ಮಹತ್ವದ ಸಲಹೆ

ಮಕ್ಕಳೊಂದಿಗೆ ಕಾಲ ಕಳೆಯುವುದೆಂದರೆ ಹೆತ್ತವರಿಗೆ ಸ್ವರ್ಗಸುಖ. ಅದೊಂಥರ ಸಂತಸ, ಸಂಭ್ರಮ. ಮಗುವಿನ ಪ್ರತಿಯೊಂದು ಹಂತದಲ್ಲೂ ಅದರ ಜೊತೆಗಿದ್ದು, ನೆರವಾಗುವ ಖುಷಿ ಬೇರೊಂದಿಲ್ಲ. ಮಲಗುವಾಗಲೂ ಮಗುವಿನ ಪಕ್ಕದಲ್ಲೇ ಬೆಚ್ಚನೆಯ ಅಪ್ಪುಗೆಯೊಂದಿಗೆ ನಿದ್ರಿಸುವ ಸುಖ ಹೆತ್ತವರಿಗೆ ಬೇರೇನಿದೆ ಹೇಳಿ. ಆದರೆ ಪೋಷಕರು ತಮ್ಮ ಮಕ್ಕಳನ್ನು ಯಾವ ವಯಸ್ಸಿನವರೆಗೆ ಪಕ್ಕದಲ್ಲಿ ಮಲಗಿಸಿಕೊಳ್ಳಬಹುದು ಎಂಬ ವಿಚಾರ ಹಲವರಿಗೆ ತಿಳಿದಿಲ್ಲ. ಯಾವ ವಯಸ್ಸಿನಿಂದ ನಾವು ಮಕ್ಕಳಿಗೆ ಪ್ರತ್ಯೇಕವಾಗಿ ಮಲಗುವ ಅಭ್ಯಾಸವನ್ನು ಕಲಿಸಬೇಕು, ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಇದರ ಬಗ್ಗೆ ಹೇಳಬೇಕು? ಎಂಬಿತ್ಯಾದಿ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ.

ಪಾಶ್ಚಾತ್ಯ ದೇಶಗಳಲ್ಲಿ ಹುಟ್ಟಿದ ಕೆಲವೇ ದಿನಗಳಿಂದಲೂ ಮಗುವನ್ನು ಪ್ರತ್ಯೇಕವಾಗಿ ಮಲಗಿಸಲು ಪ್ರಾರಂಭಿಸುತ್ತಾರೆ. ಆದರೆ ಭಾರತದಲ್ಲಿ ಮಕ್ಕಳು ಸುಮಾರು 14 ರಿಂದ 15 ವರ್ಷ ವಯಸ್ಸಿನವರೆಗೆ ತಮ್ಮ ಪೋಷಕರೊಂದಿಗೆ ಮಲಗುತ್ತಾರೆ. ಆದರೆ ಅಧ್ಯಯನವೊಂದು ಹೇಳುವ ತಮಾಷೆಯ ವಿಚಾರವೆಂದರೆ, ಮಕ್ಕಳನ್ನು ಪ್ರತ್ಯೇಕವಾಗಿ ಮಲಗಿಸುವುದರಿಂದ ಹೆಚ್ಚಿನ ಕರೆಂಟ್ ಬಿಲ್ ಬರುವ ಕಾರಣಕ್ಕೆ ಪಾಲಕರು ತಮ್ಮ ಜೊತೆಗೆ ಮಲಗಿಸಿಕೊಳ್ಳುತ್ತಾರಂತೆ.

ಅದೇನೇ ಆದರೂ ತಜ್ಞರು ಹೇಳುವ ಪ್ರಕಾರ, ಬಾಲ್ಯದಿಂದಲೂ ಮಕ್ಕಳಿಗೆ ಪ್ರತ್ಯೇಕ ಕೊಠಡಿಗಳನ್ನು ನೀಡುವುದು, ಹೆತ್ತವರಿಂದ ಪ್ರತ್ಯೇಕಿಸಿ ಮಲಗುವ ಅಭ್ಯಾಸ ಮಾಡುವುದು ಉತ್ತಮ. ಮಗುವಿಗೆ ಪ್ರತ್ಯೇಕ ಕೊಠಡಿ ನೀಡಲು ಸರಿಯಾದ ವಯಸ್ಸು 3 ರಿಂದ 4 ವರ್ಷ.

ಮಕ್ಕಳನ್ನು ಅವರ ಹೆತ್ತವರೊಂದಿಗೆ ಹಾಸಿಗೆಯಲ್ಲಿ ಮಲಗಿಸಿಕೊಳ್ಳುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಪೋಷಕರು ತಮ್ಮೊಂದಿಗೆ ಇರುವ ಧೈರ್ಯದಿಂದ ನೆಮ್ಮದಿಯಿಂದ ಮಲಗುತ್ತಾರೆ. ಅಲ್ಲದೆ ಹೆತ್ತವರೊಂದಿಗೆ ಮಕ್ಕಳ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಲು ಇದು ನೆರವಾಗುತ್ತದೆಯಾದರೂ, ಮಗು 3 ರಿಂದ 4 ವರ್ಷ ವಯಸ್ಸಿಗೆ ಬರುವ ವೇಳೆ ಹೆತ್ತವರಿಂದ ಪ್ರತ್ಯೇಕ ಮಲಗುವ ರೂಢಿ ಮಾಡಿಕೊಳ್ಳುವುದು ಉತ್ತಮ ಎಂಬುದು ತಜ್ಞರು ಅಭಿಪ್ರಾಯ.

ಒಂಟಿಯಾಗಿ ಮಲಗಿಸುವುದರ ಪ್ರಯೋಜನಗಳು

ಮಕ್ಕಳು ಪ್ರಿ-ಪ್ಯೂಬರ್ಟಿ ಹಂತಕ್ಕೆ ಬಂದಾಗ ಪೋಷಕರು ಮಕ್ಕಳ ಜೊತೆ ಮಲಗುವುದನ್ನು ನಿಲ್ಲಿಸಬೇಕು. ಮಕ್ಕಳು ಪ್ರೌಢಾವಸ್ಥೆಗೆ ಕಾಲಿರಿಸುವ ಸಮಯದಲ್ಲಿ ಅವರಿಗೆ ಪ್ರೈವೆಸಿ ನೀಡಬೇಕು. ಇದು ಅವರನ್ನು ತಮ್ಮ ಭಾವನೆಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಪೋಷಕರು ಬೇರೆ ಮಲಗುವುದು ಉತ್ತಮ ಎನ್ನುತ್ತಾರೆ ತಜ್ಞರು. ಅಲ್ಲದೆ ಮಗುವಿಗೆ ಪ್ರತ್ಯೇಕ ಕೋಣೆಯನ್ನು ನೀಡುವುದರಿಂದ ಮಗುವಿನ ಜವಾಬ್ದಾರಿಯ ಪ್ರಜ್ಞೆ ಹೆಚ್ಚಾಗುತ್ತದೆ. ಅವರು ಚಿಕ್ಕ ವಯಸ್ಸಿನಿಂದಲೇ ತಮ್ಮ ಸ್ವಾತಂತ್ರ್ಯವನ್ನು ಆನಂದಿಸಬಹುದು.

ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ ನಂತರ ಮಕ್ಕಳು ಎಲ್ಲವನ್ನೂ ಗಮನಿಸುತ್ತಾರೆ. ಪುಟ್ಟ ಮನಸ್ಸುಗಳ ಮೇಲೆ ಪ್ರತಿಯೊಂದು ಸಂದರ್ಭ, ಸನ್ನಿವೇಶಗಳು ಅಚ್ಚೊತ್ತಿದಂತೆ ಉಳಿದುಕೊಳ್ಳುವುದರಿಂದ ಮಕ್ಕಳನ್ನು ಪಕ್ಕದಲ್ಲಿ ಮಲಗಿಸಿಕೊಳ್ಳುವ ಮುನ್ನ ಪೋಷಕರು ಎಚ್ಚರಿಕೆಯಿಂದಿರಬೇಕು. ಚಿಕ್ಕದಿಂನಿಂದಲೇ ಮಕ್ಕಳನ್ನು ಪ್ರತ್ಯೇಕ ಕೊಠಡಿ, ಇಲ್ಲವೇ ಹಾಸಿಗೆಯನ್ನು ರೂಢಿಸುವುದರಿಂದ ಹೆತ್ತವರಿಗೂ, ಮಕ್ಕಳಿಗೂ ಇದು ಅನುಕೂಲಕರವಾಗಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ