Parenting Tips: ಮಕ್ಕಳನ್ನು ಯಾವಾಗ ಪ್ರತ್ಯೇಕವಾಗಿ ಮಲಗಿಸಬೇಕು? ರೂಢಿ ಮಾಡಿಸುವುದು ಹೇಗೆ? ಇಲ್ಲಿದೆ ವಿವರ
Parenting Tips: ನಿಮ್ಮ ಮುದ್ದು ಮಕ್ಕಳನ್ನು ಎಷ್ಟನೇ ವಯಸ್ಸಿನಿಂದ ಪ್ರತ್ಯೇಕವಾಗಿ ಮಲಗಿಸಬೇಕು? ಪೋಷಕರು ಮಕ್ಕಳಿಗೆ ಅಗತ್ಯವಾಗಿ ರೂಢಿಸಬೇಕಾದ ಅಭ್ಯಾಸವಿದು. ಪೋಷಕರು ತಿಳಿಯಬೇಕಾದ ಪ್ರತಿ ಹಂತದ ಮಾಹಿತಿ ಇಲ್ಲಿದೆ.

ಮಕ್ಕಳು ಬೆಳೆದಂತೆಲ್ಲಾ ಪೋಷಕರ ಜವಾಬ್ದಾರಿ ಹೆಚ್ಚುತ್ತಾ ಹೋಗುತ್ತದೆ. ಅವರಿಗೆ ಸರಿ–ತಪ್ಪುಗಳನ್ನು ಕಲಿಸಿ, ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ಅವರ ಮೇಲಿರುತ್ತದೆ. ಮಗುವಿಗೆ ಅಚ್ಚುಕಟ್ಟಾಗಿ ಊಟ ಮಾಡುವುದನ್ನು ಹೇಳಿಕೊಡುವುದರಿಂದ ಹಿಡಿದು ಸ್ನಾನ, ನಿದ್ದೆ, ಸ್ವಚ್ಛತೆ ಮುಂತಾದ ಶಿಸ್ತನ್ನು ರೂಢಿಸುವ ಕೆಲಸ ಪೋಷಕರದ್ದಾಗಿರುತ್ತದೆ. ಮಕ್ಕಳು ಚಿಕ್ಕವರಿದ್ದಾಗ ತಂದೆ–ತಾಯಿಯೊಂದಿಗೆ ಮಲಗುವುದು ಸಹಜ. ಆದರೆ ಮಕ್ಕಳು 8–10 ವರ್ಷವಾಗುತ್ತಿದ್ದಂತೆ ಅವರನ್ನು ಪ್ರತ್ಯೇಕವಾಗಿ ಮಲಗುವ ಅಭ್ಯಾಸವನ್ನು ರೂಢಿಸುವುದು ಪೋಷಕರ ಜವಾಬ್ದಾರಿಗಳಲ್ಲಿ ಒಂದಾಗುತ್ತದೆ.
ಕೆಲವು ಮಕ್ಕಳು ತಮ್ಮ ತಾಯಿಯೊಂದಿಗೆ ಮಲಗಲು ಇಷ್ಟಪಡುತ್ತಾರೆ. ಪ್ರತ್ಯೇಕವಾಗಿ ಮಲಗಲು ಬಯಸುವುದಿಲ್ಲ. ಒಂಟಿಯಾಗಿ ಮಲಗಲು ಹೇಳಿದಾಗಲೆಲ್ಲ ನನಗೆ ಭಯವಾಗುತ್ತದೆ ಎನ್ನುವುದು ಸಾಮಾನ್ಯ ಸಂಗತಿ. ಎಲ್ಲಾ ಪ್ರಯತ್ನ, ತಿಳುವಳಿಕೆ ಹೇಳಿದ ನಂತರವೂ ಅವರು ತಮ್ಮ ಪೋಷಕರೊಂದಿಗೆ ಮಲಗುವುದಾಗಿಯೇ ಹಟ ಹಿಡಿಯುತ್ತಾರೆ. ನೀವು ನಿಮ್ಮ ಮಕ್ಕಳಿಗೆ ಪ್ರತ್ಯೇಕವಾಗಿ ಮಲಗುವುದನ್ನು ಕಲಿಸಬೇಕೆಂದರೆ, ನೇರವಾಗಿ ಅವರ ಹತ್ತಿರ ಹೋಗಿ, ಇಂದಿನಿಂದ ನೀನು ಒಂಟಿಯಾಗಿ ಮಲಗು ಎಂದು ಹೇಳಬೇಡಿ. ಬದಲಿಗೆ ತಜ್ಞರು ಸೂಚಿಸಿದ ಈ ವಿಧಾನವನ್ನು ಅಳವಡಿಸಿಕೊಳ್ಳಿ. ಇದರಿಂದ ಮಕ್ಕಳು ಸುಲಭವಾಗಿ ಒಂಟಿಯಾಗಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.
ಮೊದಲು ಮಕ್ಕಳ ವಿಶ್ವಾಸ ಗಳಿಸಿ
ನೀವು ನಿಮ್ಮ ಮಗುವಿನ ಹತ್ತಿರ ಹೋಗಿ, ಇಂದಿನಿಂದ ನೀನು ಒಂಟಿಯಾಗಿ ಮಲಗು ಎಂದು ನೇರವಾಗಿ ಹೇಳಬೇಡಿ. ಏಕೆಂದರೆ ಅನೇಕ ಮಕ್ಕಳಿಗೆ ಹೀಗೆ ನೇರವಾಗಿ ಹೇಳುವುದರಿಂದ ಭಾವನಾತ್ಮಕವಾಗಿ ನೊಂದುಕೊಳ್ಳುತ್ತಾರೆ. ಬೆಳೆಯುವುದೇ ಅಪರಾಧ ಎಂಬ ಭಾವನೆ ಅವರಲ್ಲಿ ಮೂಡತೊಡಗುತ್ತದೆ. ಆಗ ಅವರು ಪೋಷಕರನ್ನು ಹೆಚ್ಚೆಚ್ಚು ಅವಲಂಬಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಮಕ್ಕಳ ಮನಸ್ಸಿನಲ್ಲಿ ಮೊದಲು ವಿಶ್ವಾಸ ಗಳಿಸಿ.
ದೊಡ್ಡವರಾಗಿದ್ದೀರಿ ಎನ್ನುವ ಅರಿವು ಮೂಡಿಸಿ
ಮಗುವಿಗೆ 7–8 ವರ್ಷವಾಗಿದ್ದು ಇನ್ನೂ ಪೋಷಕರ ಜೊತೆ ಮಲಗುತ್ತಿದ್ದರೆ, ಅವರಿಗೆ ನೀನೂ ಎಲ್ಲರಂತೆ ಬೆಳೆದಿದ್ದೀ ಎನ್ನುವ ಬಗ್ಗೆ ಸರಿಯಾಗಿ ಅರ್ಥಮಾಡಿಸಿ. ಹೀಗೆ ಮಾಡಲು ಮಗುವಿಗೆ ಏನಾದರೊಂದು ಕೆಲಸ ಕೊಡಿ. ಆ ಕೆಲಸವನ್ನು ಮಗು ಪೂರ್ಣಗೊಳಿಸಿದ ನಂತರ ಮಗುವನ್ನು ಪ್ರಶಂಸೆ ಮಾಡಿ. ನೀನೂ ಕೂಡಾ ಸ್ವತಂತ್ರವಾಗಿ ಕೆಲಸ ಮಾಡಬಹುದು ಎಂಬ ಆತ್ಮವಿಶ್ವಾಸ ಮೂಡಿಸಿ. ಆಗ ಮಗು ಪ್ರತಿಯೊಂದು ಕೆಲಸ ಮಾಡುವ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳುತ್ತದೆ.
ತಿಂಗಳುಗಳ ಕಾಲ ನಿರಂತರವಾಗಿ ಪ್ರೇರೇಪಿಸಿ
ನೀವು ನಿಮ್ಮ ಮಗುವನ್ನು ನಿರಂತರವಾಗಿ ಈ ರೀತಿ ಪ್ರೇರೇಪಿಸಿದಾಗ, ನಿಮ್ಮ ಮಗುವಿಗೆ ತಾನು ಬೆಳೆಯುತ್ತಿದ್ದೇನೆ ಮತ್ತು ಎಲ್ಲಾ ಕೆಲಸಗಳನ್ನು ಸ್ವತಃ ಮಾಡಲು ಕಲಿಯುತ್ತಿದ್ದೇನೆ ಎನಿಸುತ್ತದೆ. ಮಗುವಿಗೆ ತಾನು ದೊಡ್ಡವನಾಗಿದ್ದೇನೆ ಎನ್ನುವ ಭಾವನೆ ಬರುತ್ತದೆ. ಇದನ್ನು ಮಗುವಿಗೆ ಪ್ರತಿದಿನ ಸುಮಾರು 30 ದಿನಗಳವರೆಗೆ ನಿರಂತರವಾಗಿ ಹೇಳಿದಾಗ, ಅವರಿಗೆ ಈ ವಿಚಾರದ ಬಗ್ಗೆ ನಂಬಿಕೆ ಹೆಚ್ಚಾಗುತ್ತದೆ. ಬದ್ಧತೆ ಬರುತ್ತದೆ.
ತಿಂಗಳ ನಂತರ ಪ್ರತ್ಯೇಕವಾಗಿ ಮಲಗಲು ಹೇಳಿ
ನಿಮ್ಮ ಮಗುವಿನ ಆತ್ಮವಿಶ್ವಾಸ ಹೆಚ್ಚಿಸಲು ಹಲವು ದಿನಗಳು ಪ್ರಯತ್ನಿಸಿದ ನಂತರ ಪ್ರತ್ಯೇಕವಾಗಿ ಮಲಗಲು ಸೂಚನೆ ಕೊಡಿ. ಹೀಗೆ ಹೇಳುವುದರಿಂದ, ಕೆಲವೇ ದಿನಗಳಲ್ಲಿ ನಿಮ್ಮ ಮಗು ಯಾವುದೇ ಕೋಪವಿಲ್ಲದೆ ಪ್ರತ್ಯೇಕವಾಗಿ ಮಲಗಲು ಪ್ರಾರಂಭಿಸುತ್ತದೆ.

ವಿಭಾಗ