Yoga Asana: ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಿಸುವ ಯೋಗಭಂಗಿಗಳಿವು; ಪರೀಕ್ಷೆ ಸಮಯದಲ್ಲಿ ತಪ್ಪದೇ ಅಭ್ಯಾಸ ಮಾಡಿಸಿ
ಪರೀಕ್ಷೆ ಸಮಯ ಹತ್ತಿರದಲ್ಲಿದೆ. ಈ ಸಮಯದಲ್ಲಿ ಪೋಷಕರು ಮಕ್ಕಳ ಓದಿನ ಜೊತೆಗೆ ಆರೋಗ್ಯದ ಮೇಲೂ ಗಮನ ಹರಿಸಬೇಕು. ಕೆಲವು ಮಕ್ಕಳಿಗೆ ಎಷ್ಟೇ ಓದಿದ್ರೂ, ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಅಂತಹ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿ, ನೆನಪಿನ ಶಕ್ತಿ ವೃದ್ಧಿಯಾಗಲು ಈ ಯೋಗಾಸನಗಳನ್ನು ಅಭ್ಯಾಸ ಮಾಡಿಸಬೇಕು.

ಮಕ್ಕಳಿಗೆ ಪರೀಕ್ಷೆ ಸಮಯ ಹತ್ತಿರ ಬಂತು ಎಂದರೆ ಪೋಷಕರಿಗೆ ಇನ್ನಿಲ್ಲದ ಚಿಂತೆ ಕಾಡಲು ಶುರುವಾಗುತ್ತದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಂಕ ಕಡಿಮೆಯಾದರೆ ಪ್ರಯೋಜನವಿಲ್ಲ. ಆದರೆ ಕೆಲವು ಮಕ್ಕಳಿಗೆ ಎಷ್ಟೇ ಓದಿದ್ರೂ ಓದಿದ್ದು ತಲೆಗೆ ಹತ್ತುವುದಿಲ್ಲ, ನೆನಪಿನಲ್ಲಿ ಉಳಿಯುವುದೂ ಇಲ್ಲ. ಕಷ್ಟಪಟ್ಟು ಓದಿದ್ರೂ ತಲೆಯಲ್ಲಿ ಏನೂ ಇರುವುದಿಲ್ಲ. ಅಂತಹ ಮಕ್ಕಳು ಕೆಲವು ಯೋಗಾಸನಗಳನ್ನು ಅಭ್ಯಾಸ ಮಾಡಬೇಕು.
ಈ ಕೆಲವು ಯೋಗಭಂಗಿಗಳು ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವ ಜೊತೆಗೆ ಏಕಾಗ್ರತೆ ಹೆಚ್ಚಲು ನೆರವಾಗುತ್ತವೆ. ಅಂತಹ ಯೋಗಭಂಗಿಗಳು ಯಾವುವು, ಇವುಗಳನ್ನು ಅಭ್ಯಾಸ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತವೆ ಎಂಬದರ ವಿವರ ಇಲ್ಲಿದೆ.
ಪ್ರಾಣಾಯಾಮ
ಪ್ರಾಣಾಯಾಮವು ಮಕ್ಕಳಲ್ಲಿ ಪರೀಕ್ಷೆ ಸಮಯದಲ್ಲಿನ ಭಯ, ಆತಂಕ, ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಮನಸ್ಸು ಶಾಂತವಾಗಿ ನೆನಪಿನ ಶಕ್ತಿ ವೃದ್ಧಿಸಲು ಸಹಾಯವಾಗುತ್ತದೆ. ಇದು ಗಮನಶಕ್ತಿ ಹೆಚ್ಚಿಸಲು ನೆರವಾಗುತ್ತದೆ.
ತಾಡಾಸನ
ಇದನ್ನು ಪರ್ವತ ಭಂಗಿ ಎಂದು ಕೂಡ ಕರೆಯುತ್ತಾರೆ. ಈ ಭಂಗಿ ನೀವು ಕಾಲುಗಳನ್ನು ಹಿಂದಕ್ಕೆ ಚಾಚಬೇಕು, ದೇಹವನ್ನು ಬಗ್ಗಿಸಿ ಕೈಗಳನ್ನು ಮುಂದಕ್ಕೆ ಚಾಚಬೇಕು. ಇದು ಏಕಾಗ್ರತೆ ಹೆಚ್ಚಲು ಹೇಳಿ ಮಾಡಿಸಿದ ವ್ಯಾಯಾಮವಾಗಿದೆ.
ವೃಕ್ಷಾಸನ
ಈ ಆಸನವನ್ನು ಟ್ರೀ ಪೋಸ್ ಎಂದೂ ಕರೆಯುತ್ತಾರೆ. ಇದು ಮಾಡುವುದು ಸುಲಭ. ನೇರವಾಗಿ ನಿಂತು ಒಂದು ಕಾಲನ್ನು ಮಡಿಸಿ ತೊಡೆಯ ಮೇಲೆ ಇಡಿ, ಕೈಗಳನ್ನು ಮೇಲೆ ಚಾಚಿ ಜೋಡಿಸಿ. ಇದು ಸಮತೋಲನ ಸಾಧಿಸಿಲು ಹಾಗೂ ಗಮನಶಕ್ತಿ ಹೆಚ್ಚಲು ನೆರವಾಗುವ ವ್ಯಾಯಾಮವಾಗಿದೆ.
ಪಶ್ಚಿಮೋತ್ತನಾಸನ
ಇದು ನೆಲದ ಮೇಲೆ ಮಲಗಿ ದೇಹವನ್ನು ಹಿಂದಕ್ಕೆ ಬಾಗಿಸುವ ಭಂಗಿ. ಇದು ಬೆನ್ನುಮೂಳೆಗಳನ್ನು ವಿಸ್ತರಿಸುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸಿ, ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ.
ಬಾಲಾಸನ
ಇದು ಪುಟ್ಟ ಮಗು ಮಲಗುವ ಭಂಗಿ. ಕಾಲುಗಳನ್ನು ಮಡಿಸಿ ಕೂತು ಕಾಲುಗಳ ಮೇಲೆ ಕೂತು ದೇಹವನ್ನು ಮುಂದಕ್ಕೆ ಚಾಚುವುದು. ಕೈಗಳಿಂದ ಪಾದಗಳನ್ನು ಹಿಡಿದಿರಬೇಕು. ಈ ಭಂಗಿಯು ಒತ್ತಡವನ್ನು ನಿವಾರಿಸುತ್ತದೆ. ಇದು ಮಾನಸಿಕ ಸ್ಪಷ್ಟತೆಗೆ ಹೇಳಿ ಮಾಡಿಸಿದ ಭಂಗಿ. ಇದರಿಂದಲೂ ಗಮನಶಕ್ತಿ, ಏಕಾಗ್ರತೆ ಎರಡೂ ಹೆಚ್ಚಾಗುತ್ತದೆ.
ಸರ್ವಾಂಗಾಸನ
ಇದು ಬೆನ್ನಮೇಲೆ ಮಲಗಿ ಕುತ್ತಿಗೆಯವರೆಗೆ ಸಂಪೂರ್ಣ ದೇಹವನ್ನು ಮೇಲಕ್ಕೆ ಎತ್ತುವುದು. ಇದು ರಕ್ತಪರಿಚಲನೆಯನ್ನು ಸುಧಾರಿಸಿ ನೆನಪಿನ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.
ಹಾಲಾಸನ
ಇದು ನೇರವಾಗಿ ನೆಲದ ಮೇಲೆ ಮಲಗಿ ಕಾಲುಗಳನ್ನು ಮೇಲಕ್ಕೆ ಎತ್ತಿ ತಲೆಯ ಹಿಂಭಾಗಕ್ಕೆ ತೆಗೆದುಕೊಂಡು ಹೋಗುವುದು. ಈ ಯೋಗಾಸನವು ನರಮಂಡಲವನ್ನು ಉತ್ತೇಜಿಸಿ, ಏಕಾಗ್ರತೆ ಹಾಗೂ ಗಮನಶಕ್ತಿ, ನೆನಪಿನ ಶಕ್ತಿ ಹೆಚ್ಚಲು ನೆರವಾಗುತ್ತದೆ.
ಅನುಲೋಮ ವಿಲೋಮ ಪ್ರಾಣಾಯಾಮ
ಇದು ಆರಾಮಾಗಿ ಕೂತು ಒಂದು ಬದಿಯ ಮೂಗನ್ನು ಮುಚ್ಚಿ, ಇನ್ನೊಂದು ಬದಿ ಮೂಗಿನಿಂದ ಉಸಿರು ಒಳಗೆ ಎಳೆದುಕೊಳ್ಳಿ. ಈಗ ಈ ಬದಿ ಮೂಗನ್ನು ತೆರೆದು ಉಸಿರು ಹೊರಗೆ ಬಿಡಿ. ಯಾಮ ತಂತ್ರವು ಮೆದುಳಿನ ಅರ್ಧಗೋಳಗಳನ್ನು ಸಮತೋಲನಗೊಳಿಸುತ್ತದೆ, ಗಮನವನ್ನು ಹೆಚ್ಚಿಸುತ್ತದೆ.
ಸೂರ್ಯ ನಮಸ್ಕಾರ
ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ದೇಹಕ್ಕೆ ಶಕ್ತಿ ಒದಗಿಸುವ ಜೊತೆಗೆ ಮಾನಸಿಕವಾಗಿ ನಮ್ಮನ್ನು ಜಾಗರೂಕಗೊಳಿಸುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
