Parenting Tips: ನಿಮ್ಮ ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸಲು ಪಾಲಕರಿಗೆ ಇಲ್ಲಿದೆ ಕೆಲವು ಬೆಸ್ಟ್ ಟಿಪ್ಸ್
ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸುವುದು ಪ್ರತಿಯೊಬ್ಬ ಪಾಲಕರ ಕನಸು. ಅದಕ್ಕಾಗಿ ಅವರು ಎಲ್ಲ ರೀತಿಯಲ್ಲೂ ಶ್ರಮ ಪಡುತ್ತಾರೆ. ಮಕ್ಕಳು ಹೇಗಿದ್ದರೆ ಚೆನ್ನ? ಅವರನ್ನು ಸಮರ್ಥವಾಗಿ ಬೆಳೆಸುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್..

ಮಕ್ಕಳ ಲಾಲನೆ ಪಾಲನೆ ಪಾಲಕರಿಗೆ ದೊಡ್ಡ ಸವಾಲಿನ ಕೆಲಸವೇ ಸರಿ. ಅವರ ಬೇಕು ಬೇಡಗಳನ್ನು ಗಮನಿಸುವ ಜತೆಗೇ, ಅವರ ಭವಿಷ್ಯವನ್ನು ಸುಂದರವಾಗಿ ರೂಪಿಸುವ ಮಹ್ವತದ ಜವಾಬ್ದಾರಿಯೂ ಪಾಲಕರ ಮೇಲಿರುತ್ತದೆ. ಮಕ್ಕಳನ್ನು ಕೆಲವು ಪಾಲಕರು ಪ್ರೀತಿಯಿಂದ ಅತಿಯಾದ ಮುದ್ದಿನಿಂದ ಬೆಳೆಸಿದರೆ, ಮತ್ತೆ ಕೆಲವರು ಶಿಸ್ತಿನಿಂದ ಬೆಳೆಸುತ್ತಾರೆ. ಏನೇ ಆದರೂ ಪಾಲಕರ ಪ್ರೀತಿ ಮತ್ತು ಕಾಳಜಿ ಮಗುವಿನ ಭವಿಷ್ಯಕ್ಕೆ ತೊಡಕಾಗಬಾರದು. ಅತಿಯಾದ ಪ್ರೀತಿಯೂ ಒಳ್ಳೆಯದಲ್ಲ, ಹಾಗೆಯೇ ಅತಿಯಾದ ಶಿಸ್ತು ಮತ್ತು ಕಟ್ಟುನಿಟ್ಟು ಕೂಡ ಮಕ್ಕಳಿಗೆ ಸಮಸ್ಯೆ ಉಂಟುಮಾಡಬಹುದು. ಮಕ್ಕಳ ದೈಹಿಕ ಬೆಳವಣಿಗೆ ಹೇಗೆ ಮುಖ್ಯವೋ, ಮಾನಸಿಕ ಬೆಳವಣಿಗೆಯೂ ಅಷ್ಟೇ ಮುಖ್ಯ. ಎರಡೂ ಸರ್ವತೋಮುಖ ಬೆಳವಣಿಗೆಯಾದರೆ ಮಾತ್ರ ಮಗು ಸಂತೋಷದಿಂದ ಇರಬಹುದು. ಅದರಲ್ಲಿ ವ್ಯತ್ಯಾಸವಾದರೆ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳನ್ನು ಭವಿಷ್ಯದ ಉತ್ತಮ ಪ್ರಜೆಗಳಾಗಿ, ನಿಮಗೆ ಹೆಮ್ಮೆ ತರುವಂತೆ ಬೆಳೆಸಲು ಇಲ್ಲಿದೆ ಕೆಲವು ಟಿಪ್ಸ್..
ಡಿಜಿಟಲ್ ಬೌಂಡರಿಯನ್ನು ಗೊತ್ತು ಮಾಡಿ
ಮಕ್ಕಳು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಆದರೆ ಪಾಲಕರು ಅವರ ಸ್ಮಾರ್ಟ್‌ಫೋನ್ ಬಳಕೆ ಕುರಿತು ಸ್ವಲ್ಪ ನಿಗಾ ವಹಿಸಿದರೆ ಒಳ್ಳೆಯದು. ಮಕ್ಕಳು ಹೊಸ ತಂತ್ರಜ್ಞಾನ ಬಳಸಲು ಕಲಿಯಬೇಕು ನಿಜ, ಆದರೆ ಅದನ್ನು ನಿರ್ವಹಿಸಲು ಮತ್ತು ಅದರ ಇತಿಮಿತಿಗಳನ್ನು ಕೂಡ ಕಲಿತಿರಬೇಕು. ಹಾಗಾದಾಗ ಮಾತ್ರ ಅದು ಪ್ರಯೋಜನಕಾರಿ. ಇಲ್ಲವಾದರೆ ಮಕ್ಕಳು ಡಿಜಿಟಲ್ ವ್ಯಸನಕ್ಕೆ ತುತ್ತಾಗಬಹುದು.
ಭಾವನೆಗಳ ಕುರಿತು ಅರಿವು ಮೂಡಿಸಿ
ಮಕ್ಕಳಿಗೆ ವಿವಿಧ ಭಾವನೆಗಳ ಕುರಿತು ಅರಿವು ಮೂಡಿಸಬೇಕು. ಎಳವೆಯಲ್ಲಿಯೇ ಅವರು ಭಾವನೆಗಳನ್ನು ನಿರ್ವಹಿಸಲು ಕಲಿತುಕೊಂಡರೆ, ಭವಿಷ್ಯದಲ್ಲಿ ಅವರಿಗೆ ಸಹಕಾರಿಯಾಗುತ್ತದೆ. ಸವಾಲಿನ ಕೆಲಸಗಳು ಮತ್ತು ಸಂದರ್ಭಗಳು ಎದುರಾದಾಗ ಮಕ್ಕಳು ಅದನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ಜತೆಗೆ ಅವುಗಳ ನಿರ್ವಹಣೆಯೊಂದು ಅವರಿಗೆ ಅಗತ್ಯದ ಜೀವನ ಕೌಶಲವಾಗಿಯೂ ನೆರವಾಗುತ್ತದೆ.
ಸೋತರೂ ಒಪ್ಪಿಕೊಳ್ಳಿ
ಮಕ್ಕಳು ಕೆಲವೊಮ್ಮೆ ತರಗತಿಯಲ್ಲಿ, ಪರೀಕ್ಷೆಯಲ್ಲಿ ಸೋಲುತ್ತಾರೆ. ಆ ಸಂದರ್ಭದಲ್ಲಿ ಆಕಾಶವೇ ತಲೆಕೆಳಗಾದಂತೆ ವರ್ತಿಸಬಾರದು. ಬದಲಾಗಿ ಅವರಿಗೆ ಧೈರ್ಯ ತುಂಬಬೇಕು ಮತ್ತು ಪರೀಕ್ಷೆಯೊಂದೇ ಜೀವನದ ಮಾನದಂಡ ಎಂಬ ಮನಸ್ಥಿತಿಯನ್ನು ತುಂಬಬಾರದು. ಕೆಲವೊಮ್ಮೆ ಸೋತರೆ ಮಕ್ಕಳು ಅದರಿಂದ ಪಾಠ ಕಲಿಯುತ್ತಾರೆ, ಮತ್ತು ತಿದ್ದಿಕೊಳ್ಳುತ್ತಾರೆ. ಮುಂದಿನ ಬಾರಿ ಎಚ್ಚರಿಕೆ ವಹಿಸು, ಚೆನ್ನಾಗಿ ಬರಿ ಎಂದು ಪಾಲಕರು ಸಹಜವಾಗಿ ಬುದ್ಧಿ ಹೇಳಿದರೆ ಮಕ್ಕಳು ಕಲಿಯುತ್ತಾರೆ. ಅದರ ಬದಲು, ಹೊಡಿದು ಬಡಿದು ಬುದ್ಧಿ ಹೇಳಿದರೆ ಅವರು ಮಾನಸಿಕವಾಗಿ ಕುಗ್ಗಿಹೋಗಬಹುದು.
ಇದನ್ನೂ ಓದಿ: ಒತ್ತಡದ ಜೀವನಕ್ಕೂ ಹೃದಯಾಘಾತಕ್ಕೂ ಇದೆ ಸಂಬಂಧ: ವೈದ್ಯರು ಹೇಳುವ ಕಾರಣ ಇದು
ಸಮಾಜದಲ್ಲಿ ಬೆರೆಯಲು ಕಲಿಸಿ
ಮಕ್ಕಳಿಗೆ ಸಂಬಂಧದ ಮಹತ್ವ, ಸಮಾಜದಲ್ಲಿ ಹೇಗೆ ವ್ಯವಹರಿಸಬೇಕು, ತೊಂದರೆ ಎದುರಾದಾಗ ಹೇಗೆ ವರ್ತಿಸಬೇಕು ಮತ್ತು ಸವಾಲುಗಳನ್ನು ಎದುರಿಸುವ ಬಗೆಯನ್ನು ತಿಳಿಸಿ. ಜತೆಗೆ ನೈಜ ಗೆಳೆತನದ ಮಹತ್ವವನ್ನೂ ತಿಳಿಸಿ, ಅದು ಅವರಿಗೆ ಸದೃಢವಾಗಿ ಬೆಳೆಯಲು ಸಹಾಯವಾಗುತ್ತದೆ.
ದೈಹಿಕ, ಮಾನಸಿಕ ಆರೋಗ್ಯದ ಮಹತ್ವ
ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಯಾಕೆ ಉತ್ತಮವಾಗಿರಬೇಕು ಎಂದು ಮಕ್ಕಳಿಗೆ ಸ್ಪಷ್ಟಪಡಿಸಿ. ಎಳವೆಯಲ್ಲಿಯೇ ಅದರ ಮಹತ್ವ ಅರಿವಾದರೆ, ಮುಂದೆ ಮಕ್ಕಳು ಉತ್ತಮ ರೀತಿಯಲ್ಲಿ ಬೆಳೆಯಲು ಸಹಕಾರಿ. ವ್ಯಾಯಾಮ, ದೈಹಿಕ ಚಟುವಟಿಕೆ ಮತ್ತು ಹೊರಗಡೆ ಆಟಕ್ಕೆ ಪ್ರೇರೇಪಿಸಿ.
ಹೊಸತನ್ನು ಕಲಿಯಲು ಪ್ರೇರಣೆ
ಮಕ್ಕಳು ಸ್ವರಕ್ಷಣೆ ಮಾಡಿಕೊಳ್ಳುವುದು ಮತ್ತು ಹೊಸತನ್ನು ಕಲಿಯಲು ಪ್ರೇರಣೆ ಒದಗಿಸುವುದು ಪಾಲಕರ ಕರ್ತವ್ಯ.
ಇದನ್ನೂ ಓದಿ: ಸಾಂಸಾರಿಕ ಜೀವನದಲ್ಲಿ ದಂಪತಿ ಮಾಡುವ ಸಾಮಾನ್ಯ ತಪ್ಪುಗಳು, ಸಂಬಂಧ ಸುಧಾರಿಸಲು ಈ ವಿಚಾರಗಳ ಮೇಲೆ ಗಮನ ಹರಿಸಿ
ಸಂಪರ್ಕದ ಮಹತ್ವ
ಬದುಕಿನ ವಿವಿಧ ಮಜಲುಗಳಲ್ಲಿ ಸಂಪರ್ಕ ಯಾವ ರೀತಿ ಸಹಕಾರಿ, ವಿವಿಧ ರೀತಿಯ ಸಮಾಜ, ಸಾಂಸ್ಕೃತಿಕ, ಸಾಮಾಜಿಕ ವೈವಿಧ್ಯತೆಗಳಿಗೆ ಮಕ್ಕಳು ತೆರೆದುಕೊಂಡಾಗ ಹೇಗೆ ಅದನ್ನು ಅರ್ಥಮಾಡಿಕೊಳ್ಳಬೇಕು, ಯಾವ ರೀತಿಯ ಸಂಪರ್ಕದಿಂದ ನಮಗೆ ಅನುಕೂಲವಾಗುತ್ತದೆ ಎನ್ನುವುದನ್ನು ಮಕ್ಕಳಿಗೆ ಅರಿವು ಮೂಡಿಸಿ. ಇದರಿಂದ ಅವರಲ್ಲಿ ಸಮಾಜದ ವಿವಿಧ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ಆತ್ಮವಿಶ್ವಾಸ ಮೂಡುತ್ತದೆ.
