ಹೆಣ್ಣು ಮಗುವಿಗೆ ತಂದೆಯ ಪ್ರೀತಿ, ಮಮತೆ ಎಷ್ಟು ಅವಶ್ಯ; ಪ್ರತಿ ಹೆಣ್ಣು ಕೂಸಿನ ತಂದೆ–ತಾಯಿಗಿದು ಎಚ್ಚರಿಕೆಯ ಕಿವಿಮಾತು – ರೂಪಾ ರಾವ್ ಬರಹ
ರೂಪಾ ರಾವ್ ಬರಹ: ಹೆಣ್ಣುಮಕ್ಕಳಿಗೆ ತಂದೆ ರಕ್ಷಾ ಕವಚದಂತೆ, ಅವಳ ಹೆಣ್ತನಕ್ಕೆ ಗೌರವ ಕೊಡುವ ಮೊದಲ ಗಂಡೂ ಹೌದು. ಹಾಗಾಗಿ ಇರಬೇಕು ಹೆಣ್ಣುಮಕ್ಕಳಿಗೆ ತಂದೆಯೇ ಮೊದಲ ಹೀರೊ. ಹೆಣ್ಣುಮಕ್ಕಳ ಸ್ವಯಂಕೃತ ಅಪರಾಧದ ಕಥೆಗಳನ್ನು ಕೇಳುವಾಗ ಅನಿಸಿದ್ದು ಈ ಕೆಲವು ವಿಷಯಗಳಲ್ಲಿ ತಾಯಿ-ತಂದೆ ಇಬ್ಬರೂ ಮಗಳ ವರ್ತಮಾನ ಮಾತ್ರವಲ್ಲ, ಭವಿಪ್ಯದ ಪ್ರತಿ ಹೆಜ್ಜೆಗೂ ಹೊಣೆಗಾರರು ಎಂದು.

ನೀವು ಹೆಣ್ಣು ಮಗುವಿನ ತಾಯಿ ಅಥವಾ ತಂದೆ ಆಗಿದ್ದರೆ ಇದೋ ನಿಮಗೊಂದು ಕಿವಿಮಾತು. (ಎಲ್ಲರಿಗೂ ಹೀಗೆ ಅಂತಲ್ಲ, ಆದರೆ ತಂದೆಯ ಪ್ರೀತಿ ಇಲ್ಲದೇ ಬೆಳೆಯುವ ಕೆಲವು ಹೆಣ್ಣುಮಕ್ಕಳ ಯೋಚನಾ ಶಕ್ತಿಯ ವೈರಿಂಗ್ ಬೇರೆಯೇ ಆಗಿಬಿಡಬಹುದು, ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು). ಹೆಣ್ಣುಮಕ್ಕಳಿಗೆ ತಂದೆ ಒಂದು ರಕ್ಷಾ ಕವಚದಂತೆ. ಮಾತ್ರವಲ್ಲ, ಅವಳ ಹೆಣ್ತನಕ್ಕೆ ಗೌರವ ಕೊಡುವ ಮೊದಲ ಗಂಡೂ ಹೌದು. ಹಾಗಾಗಿ ಇರಬೇಕು ಹೆಣ್ಣುಮಕ್ಕಳಿಗೆ ತಂದೆಯೇ ಮೊದಲ ಹೀರೊ ಅನ್ನುವುದು.
ನಾನು ಕೌನ್ಸೆಲಿಂಗ್ ಮಾಡಿದ, ಮಾಡುತ್ತಿರುವ ತಂದೆ ಇಲ್ಲದ ಅಥವಾ ಇದ್ದೂ ಕೂಡ ತಿರಸ್ಕಾರಕ್ಕೆ ಒಳಗಾದ ಅಥವಾ ತಂದೆಯ ಪ್ರೀತಿ ಸಿಗದ ಕೆಲವು ಹೆಣ್ಣುಮಕ್ಕಳ ಸ್ವಯಂಕೃತ ಅಪರಾಧದ ಕಥೆಗಳನ್ನು ಕೇಳುವಾಗ ಅನಿಸಿದ್ದು ಈ ಕೆಲವೊಂದು ವಿಷಯಗಳಲ್ಲಿ ತಾಯಿ ಹಾಗೂ ತಂದೆ ಇಬ್ಬರೂ ತಮ್ಮ ಮಗಳ ವರ್ತಮಾನ ಮಾತ್ರವಲ್ಲ ಅವಳ ಭವಿಷ್ಯತ್ತಿನ ಪ್ರತಿಯೊಂದೂ ಹೆಜ್ಜೆಗೂ ಹೊಣೆಗಾರರು ಅಂತ.
ಹಾಗಾಗಿ ಇಲ್ಲಿ ಒಂದಷ್ಟು ವಿಷಯಗಳನ್ನು ಅಂಶಗಳನ್ನಾಗಿ ಬರೆದಿರುವೆ. ದಯವಿಟ್ಟು ಸಾಧ್ಯವಾದಷ್ಟೂ ಹಂಚಿಕೊಳ್ಳಿ.
1. ಸಾಮಾನ್ಯವಾಗಿ ತಂದೆಯ ಪ್ರೀತಿ ಕಾಳಜಿ ಸಿಗದ ಅಥವಾ ತಂದೆಯಿಂದ ತಿರಸ್ಕಾರಕ್ಕೆ ಒಳಗಾದ ಹೆಣ್ಣುಮಕ್ಕಳಲ್ಲಿ ಆತ್ಮಗೌರವ ಕಡಿಮೆ ಆಗಿರುತ್ತದೆ. ಇದರಿಂದ ತಮ್ಮ ಮೌಲ್ಯ ಅಥವಾ ಬೆಲೆಯನ್ನು ಹೊರಗಿನವರಿಂದ ಪಡೆಯಲು ಯತ್ನಿಸುತ್ತಾರೆ. ಇವರ ಈ ದೌರ್ಬಲ್ಯಗಳನ್ನು ತಿಳಿದ ಸಮಾಜ ಘಾತುಕ ಮೃಗಗಳು ಆ ಸೆಲ್ಫ್‌ರೆಸ್ಪೆಕ್ಟ್ ಮತ್ತು ಪ್ರೀತಿಯನ್ನು ಕೊಡುವಂತೆ ನಟಿಸಿ ಹುರಿದು ಮುಕ್ಕುತ್ತಾರೆ.
2. ತಂದೆಯ ಪ್ರೀತಿ ಅಥವಾ ಗಮನದ ಅನುಪಸ್ಥಿತಿಯಿಂದ ಆಗುವ ಮಾನಸಿಕ ಗಾಯಗಳು ಆಳವಾಗಿ ನಿರಾಕರಿಸಲ್ಪಡುವ ಭಯವನ್ನು ಉಂಟು ಮಾಡಬಹುದು. ಹಾಗಾಗಿ, ಅವರು ಕಮಿಟೆಡ್ ಸಂಬಂಧಗಳಲ್ಲಿ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ಇದರಿಂದ ಒಂದು ಪ್ರೇಮ ಸಂಬಂಧದಿಂದ ಇನ್ನೊಂದು ಪ್ರೇಮ ಸಂಬಂಧಕ್ಕೆ ಜಿಗಿದು ಹೋಗುವ ಮನಸ್ಥಿತಿ ಸಾಮಾನ್ಯವಾಗಿ ಬಿಡಬಹುದು.
3. ಇಂತಹ ಹೆಣ್ಣುಮಕ್ಕಳು ತಮಗೇ ಅರಿವಿಲ್ಲದೆ ಭಾವನಾತ್ಮಕವಾಗಿ ಸುಲಭವಾಗಿ ಸಿಗಲಾರದ ಅಥವಾ ನಿಲುಕಲಾಗದ ಪುರುಷರೊಂದಿಗೆ ಸಂಬಂಧವನ್ನು ಹುಡುಕುತ್ತಾರೆ, ಇದು ಅವರ ತಂದೆಯನ್ನು ಹುಡುಕುವ ಯತ್ನ. ಇದರಲ್ಲಿ ಆಯ್ಕೆಯ ಸಾಧ್ಯತೆಯೇ ಜಾಸ್ತಿ.
4. ಅಪ್ಪನೆಂಬ ರಕ್ಷಾ ಕವಚವಿರದ ಹೆಣ್ಣುಮಕ್ಕಳಲ್ಲಿ ಕೆಲವರು ಸ್ನೇಹ, ಮೋಹ ಹಾಗೂ ಕಾಮ ಸಂಬಂಧಗಳಲ್ಲಿ ಬೌಂಡರಿಗಳನ್ನು ಹಾಕಲು ಮರೆಯುತ್ತಾರೆ. ಇದರಿಂದ ಸ್ಮಾಡಿಸ್ಟ್ ಅಥವಾ ಸೋಶಿಯೋಪಾತ್ ಗಂಡಸರ ನಿಯಂತ್ರಣದಲ್ಲಿ ಸಿಕ್ಕಿ ಹಾಕಿಕೊಂಡು ಟಾಕ್ಸಿಕ್ ಸಂಬಂಧಗಳಿಗೆ ಬಲಿಯಾಗಬಹುದು.
5. ಬಾಲ್ಯದ ಬದುಕಲ್ಲಿ ಧನಾತ್ಮಕ ಪುರುಷ ರೋಲ್ ಮಾಡೆಲ್ ಇಲ್ಲದೇ ಬೆಳೆಯುವುದರಿಂದ ಗಂಡಸಿನ ಮೇಲೆ ನಂಬಿಕೆ ಇರುವುದು ಕಷ್ಟವಾಗುತ್ತದೆ, ಇದು ಮದುವೆಯಂತಹ ಕಮಿಟೆಡ್ ಸಂಬಂಧಗಳಲ್ಲಿ ಭಯ ಅಥವಾ ಆತಂಕ ತರಬಹುದು. ಕೆಲವೊಮ್ಮೆ ಸಂಬಂಧಗಳಿಂದ ಓಡಿ ಹೋಗಲೂ ಕಾರಣವಾಗುತ್ತದೆ.
6. ತಂದೆಯ ಸರಿಯಾದ ಬೆಂಬಲ ಅಥವಾ ಸಹಕಾರದ ಕೊರತೆಯು ಎಮೋಷನಲ್‌ಗಳನ್ನು ನಿರ್ವಹಿಸುವಲ್ಲಿ ತೊಂದರೆಗೆ ಕಾರಣವಾಗಬಹುದು, ಇದು ಅವರಲ್ಲಿ ಆತಂಕ, ಖಿನ್ನತೆ ಅಥವಾ ಇಂಪಲ್ಸೀವ್ (ದುಡುಕು) ಬುದ್ದಿ ತರಬಹುದು.
7. ಕೆಲವು ಹೆಣ್ಣುಮಕ್ಕಳು ತಮ್ಮ ಮೌಲ್ಯವನ್ನು ಸಾಬೀತುಪಡಿಸಲು ತಮಗೆ ಇನ್ನೂ ಬೇಕು ಬೇಕು ಎಂಬ ಟ್ರಾಪಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಪ್ರೀತಿ, ಕಾಳಜಿ, ಹಣ ಯಶಸ್ಸು ಏನೇ ಆಗಲೀ ತಮಗೆ ಸಾಲದು ಎಂದೇ ಭಾವಿಸುತ್ತಾರೆ. ಇದು ಮಾನಸಿಕ ದೈಹಿಕ ಅತೃಪ್ತಿಗೆ ಕಾರಣವಾಗುತ್ತೆ.
9. ಕೆಲವರಲ್ಲಿ ತಮ್ಮ ಸಂಬಂಧಗಳಲ್ಲಿ ವಿಚಿತ್ರ, ಅವಾಸ್ತವಿಕ ಫ್ಯಾಂಟಸಿ ನಿರೀಕ್ಷೆಗಳಿರುತ್ತವೆ. ಕೆಲವರಲ್ಲಿ ಪುರುಷರ ಬಗ್ಗೆ ಕಾಲ್ಪನಿಕ ಕಥೆಯ ನಿರೀಕ್ಷೆಗಳಿರುತ್ತವೆ. ಆದರ್ಶ, ಪ್ರಾಮಾಣಿಕ ಪಾರದರ್ಶಕತೆಯ ಬಗ್ಗೆ ವಿಚಿತ್ರ ನಂಬಿಕೆಗಳಿರುತ್ತವೆ. ಇದು ಅತೃಪ್ತಿ, ನಿರಾಶೆ ಹಾಗೂ ಜಗಳಕ್ಕೆ ಕಾರಣವಾಗುತ್ತದೆ.
10. ತಂದೆಯ ಮಾರ್ಗದರ್ಶನವಿಲ್ಲದ ಕೆಲವು ಹೆಣ್ಣುಮಕ್ಕಳು ತಮ್ಮತನವನ್ನ ಹುಡುಕಲು ಹೋಗಿ ತಮ್ಮನ್ನೇ ಕಳೆದುಕೊಳ್ಳುತ್ತಾರೆ. ತೀರಾ ಚಿಕ್ಕ ವಯಸ್ಸಿನಲ್ಲಿಯೇ ಸಂಬಂಧಗಳ ಆಸೆಗೆ ಬಿದ್ದು ಹಾದಿ ತಪ್ಪುತ್ತಾರೆ.
ಯಾವ ಮಕ್ಕಳೂ ತಮ್ಮನ್ನು ಹುಟ್ಟಿಸಿ ಎಂದು ಕೇಳಿಕೊಳ್ಳುವುದಿಲ್ಲ, ನಿಮ್ಮ ನಿಮ್ಮ ಸಂತೋಷಕ್ಕೆ ಹುಟ್ಟಿಸಿಕೊಂಡ ನಂತರ ಆ ಮಕ್ಕಳು ನಿಮ್ಮ ಬದ್ಧತೆ. ಅವರಿಗೆ ಕೇವಲ ಓದು ಬರಹ ಹೊಟ್ಟೆ ಬಟ್ಟೆ ನೋಡಿಕೊಂಡರೆ ಸಾಲದು ಅವರೊಂದಿಗೆ ಮಾನಸಿಕ ಬಾಂಧವ್ಯವನ್ನು ಏರ್ಪಡಿಸಿಕೊಳ್ಳಲಾಗದಿದ್ದರೆ ತಂದೆ ಇದ್ದೂ ಇಲ್ಲದಂತೆಯೇ ಲೆಕ್ಕ.
ಇನ್ನೂ ಐಡೆಂಟಿಟಿ ಸಿಗಲಿಲ್ಲ ಎಂದಾಗ ಸ್ವಯಂ ಪ್ರತಿಷ್ಠೆಗೋ ಅಥವಾ ಇನ್ನೊಂದು ಆಕರ್ಷಣೆಗೆ ಬಿದ್ದು ಮದುವೆಯಿಂದ ಹೊರ ಬರುವ ಹೆಂಗಸರಿಗೂ, ಗಂಡಸರಲ್ಲಿಯೂ ಒಂದು ವಿನಂತಿ.
1.ನಿಮ್ಮ ಬದುಕಿಗಿಂತ ನಿಮ್ಮ ಮಕ್ಕಳ ಬದುಕು ಮುಖ್ಯ. ಏಕೆಂದರೆ ಅದು ನೀವಾಗಿಯೇ ಬಯಸಿ ಪಡೆದ ಕಮಿಟ್ಮೆಂಟ್. ಅವರಿಗೊಂದು ಕುಟುಂಬ, ಒಂದು ಸರಿಯಾದ ಬಾಲ್ಯ ಕೊಡುವುದೂ ನಿಮ್ಮ ಜವಾಬ್ದಾರಿ.
2.ಸಿಂಗಲ್ ಪೇರೆಂಟ್ ಆಗಿದ್ದರಂತೂ ತಾಯಿ–ತಂದೆ ನೀವೇ ಆಗಿ ಬೆಳೆಸಬೇಕು ಅಂದರೆ ಅಡುಗೆ ಮಾಡಿ ದುಡಿದು ಹಣ ತರುವುದಷ್ಟೇ ಅಲ್ಲ, ತಾಯಿ–ತಂದೆಯ ಎರಡೂ ಪಾತ್ರಗಳನ್ನೂ ನಿರ್ವಹಿಸಬೇಕು.
3. ಹಾಗೊಂದು ವೇಳೆ ಮಾಡಲಾಗದು ಎಂದರೆ ಮಕ್ಕಳೇಕೆ ಬೇಕು? ಬೇಡ ನಿಮ್ಮ ಸುಖ ನೋಡಿಕೊಂಡು ನೆಮ್ಮದಿಯಾಗಿರಿ. ಮಗುವಿನ ಅದರಲ್ಲಿಯೂ ಹೆಣ್ಣು ಮಗುವಿನ ಬದುಕನ್ನೇ ಹಾಳು ಮಾಡುವ ಹಕ್ಕು ನಿಮಗಿಲ್ಲ
ಹೆಣ್ಣು ಮಕ್ಕಳು ಎಂದು ಒತ್ತಿ ಹೇಳುತ್ತಿರಲು ಕಾರಣವಿದು
ಯಾವುದೇ ಸಂಬಂಧಗಳಲ್ಲಿ ಯಾವಾಗಲೂ ಪ್ರೇಮ–ಕಾಮಗಳ ಸುಳಿಯಲ್ಲಿ ದೈಹಿಕವಾಗಿ ಹೆಚ್ಚು ಹಾನಿಗೊಳಗಾಗಿರುವವರು ಹೆಣ್ಣು ಮಕ್ಕಳೇ.
1. ಹತ್ತು ಹನ್ನೆರೆಡು ವರ್ಷಗಳಿಂದಲೇ ನಿಮ್ಮ ಹೆಣ್ಣುಮಕ್ಕಳ ಸ್ನೇಹಿತರಾಗಿ.
2.ಅವರ ಸ್ನೇಹಿತರು ಎಂತಹವರು ಎಂದು ತಿಳಿಯಿರಿ.
3.ಮಕ್ಕಳಿಗೆ ಸ್ವಾತಂತ್ರ್ಯ ಮುಖ್ಯ ಸ್ವೇಚ್ಛೆ ಅಲ್ಲ.
4.ಮಕ್ಕಳು ಹದಿ ಹರೆಯಕ್ಕೆ ಬರುವಾಗ ಅಮ್ಮನೋ ಅಪ್ಪನೋ ಕೊಂಚ ಫ್ಲೆಕ್ಸಿಬಲ್ ಆಗಿ ಕೆಲಸ ಮಾಡಿಕೊಂಡು ಮಕ್ಕಳಿಗಾಗಿ ಬಿಡುವು ಮಾಡಿಕೊಂಡು ಅವರ ಚಲನವಲನ, ವರ್ತನೆಗಳ ಮೇಲೆ ಗಮನ ಇರಿಸುವುದು ಬಹಳ ಮುಖ್ಯ.
5. ಅವರಿಗೆ ಪ್ರೀತಿ ಪ್ರೇಮಕ್ಕೂ ಗಂಡಿನ ಸ್ಪರ್ಶದಲ್ಲಿನ ಕಾಮಕ್ಕೂ ಇರುವ ವ್ಯತ್ಯಾಸ ತಿಳಿಸಬೇಕು.
6.ಪ್ರತಿದಿನ ನಿಮ್ಮಮಗಳೊಂದಿಗೆ ಒಂದಷ್ಟು ಮಾತು, ಹಗುರವಾದ ಅಪ್ಪುಗೆ ಪ್ರೀತಿಯ ಮುದ್ದು, ನಾ ನಿನ್ನೊಡನಿರುವೆನೆಂಬ ಭರವಸೆ ಬೇಕೇ ಬೇಕು. ಅಪ್ಪ ಅಮ್ಮ ಇಬ್ಬರೂ ಇದನ್ನೂ ನೀಡಬೇಕು.
7. ಮಗಳ ಫೋನ್ ಮೇಲೆ ನಿಗಾ ಇರಲಿ. ಅವಳ ಗೆಳೆಯರೊಡನೆ ಅತಿ ಸಲುಗೆ ಬೇಡ ಎಂದೇ ಹೇಳಿ. ಹದಿವಯಸಿಗೆ ಶುದ್ದ ಸ್ನೇಹಕ್ಕಿಂತ ಆಕರ್ಷಣೆ ಜಾಸ್ತಿ. 8.ಹುಡುಗರೊಂದಿಗೆ ಪಾರ್ಟಿ ಹೋಗುವುದಾದರೆ ನೀವ್ಯಾರಾದರೂ ಹೋಗಿ ಬಿಟ್ಟು ನಂತರ ಮರಳಿ ಕರೆದುಕೊಂಡು ಬನ್ನಿ.
9. ಸ್ಕೂಲು ಕಾಲೇಜುಗಳಲ್ಲಿನ ಅವರ ಸಮಯ, ವೇಳಾಪಟ್ಟಿ ಎಲ್ಲವೂ ಪಾರದರ್ಶಕವಾಗಿರಲಿ. ಅಂದರೆ ನಿಮಗೂ ಗೊತ್ತಿರಲಿ .
10.ಆಗಾಗ ಅವರ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಈ ಮಕ್ಕಳ ವರ್ತನೆಯ ಬಗ್ಗೆ ತಿಳಿದುಕೊಳ್ಳಿ.
ಮಕ್ಕಳಲ್ಲಿ ನಂಬಿಕೆ ಇಡಬೇಕು ನಿಜ, ಆದರೆ ನಂಬಿಕೆಗಿಂತ ಎಚ್ಚರಿಕೆ ಇಡುವುದು ಬಹಳ ಮುಖ್ಯ. ಹದಿನಾಲ್ಕು ವರ್ಷಗಳಿಗೆ ಸೇಫ್ ಸೆ*, ಪ್ರೆಗ್ನೆನ್ಸಿ, ಆಬಾರ್ಷನ್, ಕಾಂಟ್ರಿಸೆಪ್ಟ್ಸ ಎಂಬೆಲ್ಲವೂ ಕೇವಲ ಮಾಹಿತಿಗಳು ಹದಿ ವಯಸ್ಸಿನ ಮಕ್ಕಳ ನೈಜ ಬದುಕಿಗೆ ನುಸುಳಿ ನಿಂತಿವೆ.
ಹೀಗೆ ಒಮ್ಮೆ ದಾರಿ ತಪ್ಪಿದ ಹೆಣ್ಣು ಮಕ್ಕಳನ್ನು ಸುಲಿದು ಹಣ ಮಾಡಲು ಆಸ್ಪತ್ರೆ ಇಂದು ಕಾನೂನಿನವರೆಗೂ ರಣಹದ್ದುಗಳಂತೆ ಕಾದಿವೆ. ದಯವಿಟ್ಟು ನಿಮ್ಮ ಮಕ್ಕಳ ಮೇಲೆ ಗಮನ ಹರಿಸಿ.
(ನಾನು ಹಾಗಲ್ಲ, ನಾನು ಹೀಗೆ ಬೆಳೆಸಿದೆ ಬೆಳೆದೆ ಎಂದೆಲ್ಲಾ ಹೇಳುವವರಿಗೆ ಎಲ್ಲವೂ ಸರಿ. ಆದರೆ ನಿಮ್ಮ ವೈಯುಕ್ತಿಕ ಅನುಭವಗಳು ಎಲ್ಲರಿಗೂ ಇರಬೇಕಿಲ್ಲ. ಈ ಬರಹ ಓದಿದ ಕೆಲವು ಪೋಷಕರಾದರೂ ತಮ್ಮ ಮಕ್ಕಳ ಬಗ್ಗೆ ಇನ್ನಷ್ಟು ಎಚ್ಚರಿಕೆ ತೆಗೆದುಕೊಂಡರೇ ಅದು ಯಾವುದೋ ಮಗು ಹದಿನಾಲ್ಕು ವರ್ಷಕ್ಕೆ ಇಡೀ ಜೀವಮಾನದ ಶಿಕ್ಷೆ ಅನುಭವಿಸುವುದನ್ನು ತಪ್ಪಿಸಿದಂತಾಗುತ್ತದೆ).

ವಿಭಾಗ