Parenting: ಮಕ್ಕಳಿಗೆ ಊಟ, ತಿಂಡಿ ಮಾಡಿಸಲು ಹರಸಾಹಸ ಪಡುತ್ತಿದ್ದೀರಾ? ಅವರ ಊಟದ ಹಸಿವು ಹೆಚ್ಚಿಸಲು ಈ ಟ್ರಿಕ್ಸ್‌ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting: ಮಕ್ಕಳಿಗೆ ಊಟ, ತಿಂಡಿ ಮಾಡಿಸಲು ಹರಸಾಹಸ ಪಡುತ್ತಿದ್ದೀರಾ? ಅವರ ಊಟದ ಹಸಿವು ಹೆಚ್ಚಿಸಲು ಈ ಟ್ರಿಕ್ಸ್‌ ಟ್ರೈ ಮಾಡಿ

Parenting: ಮಕ್ಕಳಿಗೆ ಊಟ, ತಿಂಡಿ ಮಾಡಿಸಲು ಹರಸಾಹಸ ಪಡುತ್ತಿದ್ದೀರಾ? ಅವರ ಊಟದ ಹಸಿವು ಹೆಚ್ಚಿಸಲು ಈ ಟ್ರಿಕ್ಸ್‌ ಟ್ರೈ ಮಾಡಿ

ನಿಮ್ಮ ಮಕ್ಕಳಿಗೆ ಹಸಿವು ಕಡಿಮೆಯೇ? ಊಟ, ತಿಂಡಿ ಬಿಡಲು ಏನೇನೋ ದಾರಿ ಕಂಡುಕೊಳ್ಳುತ್ತಿದ್ದಾರಾ? ಹಾಗಾದರೆ ಅವರ ಹಸಿವು ಹೆಚ್ಚಿಸಲು ನಿಮಗೆ ಸಹಾಯವಾಗುವ ಸಲಹೆಗಳು ಇಲ್ಲಿವೆ. ನೀವು ಪ್ರಯತ್ನಿಸಿ ನೋಡಿ, ಆಗ ನಿಮ್ಮ ಮಕ್ಕಳು ಸರಿಯಾಗಿ ಊಟ, ತಿಂಡಿ ಮಾಡುತ್ತಾರೆ.

ಮಕ್ಕಳ ಊಟದ ಹಸಿವು ಹೆಚ್ಚಿಸುವುದು ಹೇಗೆ? (HT File Photo)
ಮಕ್ಕಳ ಊಟದ ಹಸಿವು ಹೆಚ್ಚಿಸುವುದು ಹೇಗೆ? (HT File Photo)

ಸಾಮಾನ್ಯವಾಗಿ ಅನಾರೋಗ್ಯವುಂಟಾದಾಗ, ಹಸಿವು ಕಡಿಮೆಯಾಗಿ ಊಟ, ತಿಂಡಿಗಳನ್ನು ಬಿಡುವುದು ಸಹಜ. ಆದರೆ ಮಕ್ಕಳು ಹಾಗಲ್ಲ, ಅವರು ಆರೋಗ್ಯದಿಂದದ್ದರೂ ಸಹ ಸರಿಯಾಗಿ ಊಟ, ತಿಂಡಿಯ ಕಡೆ ಗಮನವೇ ಇರುವುದಿಲ್ಲ. ಊಟ ಬಿಡಲು ಹಲವು ದಾರಿಗಳನ್ನು ಅವರು ಹುಡುಕಿಕೊಂಡಿರುತ್ತಾರೆ. ವಿನಾಕಾರಣ ಹಟ ಮಾಡುವುದು, ಮನೆಯಲ್ಲಿ ಮಾಡಿದ ಅಡುಗೆಯ ಬದಲಿಗೆ ಬೇರ ಅಡುಗೆ ಕೇಳುವುದು, ಇದು ನನಗೆ ಸೇರಲ್ಲ, ಅದು ರುಚಿ ಇಲ್ಲ, ಹೀಗೆ ತಿನ್ನುವುದನ್ನು ತಪ್ಪಿಸಿಕೊಳ್ಳಲು ಏನೇನೋ ಸಬೂಬು ಅವರ ಹತ್ತಿರವಿರುತ್ತದೆ. ಆದರೆ ಎಳೆಯ ವಯಸ್ಸಿನಲ್ಲಿ ಈ ರೀತಿ ಮಾಡುವುದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮ ಮಕ್ಕಳ ಹಸಿವನ್ನ ಹೆಚ್ಚಿಸಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ಪಾಲಿಸಿ.

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಕಾರಣಗಳೇನು?

1. ಮೊಬೈಲ್‌, ಟೀವಿ ನೋಡುತ್ತಾ ಊಟಮಾಡುವ ರೂಢಿಯಿರುವ ಮನೆಯ ವಾತಾವರಣ.

2. ಆತಂಕ, ಒತ್ತಡ ಅಥವಾ ಭಾವನಾತ್ಮಕ ಸಮಸ್ಯೆಗಳು.

3. ಅನಿಯಮಿತ ಊಟ

4. ಊಟದ ಮೆನ್ಯುವಿನಲ್ಲಿ ಮಕ್ಕಳಿಗೆ ಇಷ್ಟವಾಗುವ ಒಂದೂ ಅಡುಗೆ ಇಲ್ಲದಿರುವುದು.

5. ಚಟುವಟಿಕೆಯಿಲ್ಲದಿರುವುದು.

6. ಮಕ್ಕಳ ದಿನಚರಿಯಲ್ಲಿ ಬದಲಾವಣೆ.

7. ಆಹಾರ ಅಲರ್ಜಿ ಅಥವಾ ಜೀರ್ಣಕಾರಿ ಸಮಸ್ಯೆಗಳು ಹಸಿವಿನ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಚಳಿಗಾಲದ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುವ 7 ಡ್ರೈ ಫ್ರೂಟ್‌ಗಳಿವು; ಇಂದೇ ಕೊಂಡು ತನ್ನಿ

ಮಕ್ಕಳ ಊಟದ ಹಸಿವನ್ನು ಹೆಚ್ಚಿಸುವುದು ಹೇಗೆ?

ನಿಮ್ಮ ಮಕ್ಕಳ ಊಟದ ಹಸಿವನ್ನು ಹೆಚ್ಚಿಸುವಂತೆ ಮಾಡಲು ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ.

1. ನಿಯಮಿತ ವೇಳಾಪಟ್ಟಿ: ಊಟ, ತಿಂಡಿಗೆ ನಿರ್ದಿಷ್ಟ ಸಮಯ ಗೊತ್ತುಪಡಿಸಿ. ತೀರಾ ಅನಿವಾರ್ಯದ ಹೊರತು ಅದನ್ನು ಬದಲಿಸಬೇಡಿ.

2. ವಿವಿಧ ಆಹಾರಗಳನ್ನು ನೀಡಿ: ಪ್ರತಿದಿನ ಒಂದೇ ರೀತಿಯ ತರಕಾರಿ ಊಟ ನೀಡುವುದರ ಬದಲು ವಿವಿಧ ರೀತಿಯ ಆಹಾರ ನೀಡಿ. ಆಹಾರವು ಪೌಷ್ಟಿಕವಾಗಿರುವಂತೆ ನೋಡಿಕೊಳ್ಳಿ.

3. ಮಕ್ಕಳ ಜೊತೆ ಕುಳಿತು ಊಟ ಮಾಡಿ: ನೀವು ಉದ್ಯೋಗದಲ್ಲಿದ್ದರೂ ಸಹ, ರಾತ್ರಿಯ ಊಟವನ್ನು ತಪ್ಪದೇ ಮಕ್ಕಳ ಜೊತೆ ಕುಳಿತು ಮಾಡಿ. ಮಕ್ಕಳನ್ನು ಮಾತನಾಡಿಸುತ್ತಾ, ದಿನದಲ್ಲಿ ನಡೆದ ವಿಷಯಗಳನ್ನು ಚರ್ಚಿಸುತ್ತಾ, ಸಂತೋಷವಾಗಿ ಊಟಮಾಡಿ. ಇದು ಮಕ್ಕಳ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಉತ್ತೇಜಿಸುತ್ತದೆ. ಯಾವುದೇ ಕಾರಣಕ್ಕೂ ಅಹಿತಕರ ವಿಷಯಗಳನ್ನು ಚರ್ಚಿಸಬೇಡಿ.

4. ಅತಿಯಾಗಿ ಲಘು ಉಪಹಾರಗಳನ್ನು ತಿನ್ನುವುದನ್ನು ತಪ್ಪಿಸಿ: ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ತಿಂಡಿಗಳನ್ನು ತಿನ್ನುವುದು ಉತ್ತಮವೇನೋ ಹೌದು, ಆದರೆ ಅತಿಯಾಗಿ ತಿಂಡಿಗಳನ್ನೇ ಕೊಡುವುದು ಅವರ ಹಸಿವನ್ನು ಹಾಳುಮಾಡಬಹುದು.

5. ಅಡುಗೆ ತಯಾರಿಸುವಾಗ ಮಕ್ಕಳನ್ನು ಸೇರಿಸಿಕೊಳ್ಳಿ: ಅಡುಗೆ ತಯಾರಿಸುವಾಗ ಮಕ್ಕಳನ್ನು ಜೊತೆಗೆ ಸೇರಿಸಿಕೊಳ್ಳಿ. ಆಸಕ್ತಿಯ ವಿಷಯವನ್ನು ಚರ್ಚಿಸಿ. ಉದಾಹರಣೆಗೆ, ತರಕಾರಿಗಳ ಹಾಡು, ಕಥೆ ಹೀಗೆ. ಮಕ್ಕಳಿಗೆ ಅತಿಯಾಗಿ ರುಚಿಸದ ಆಹಾರಗಳನ್ನು ತಿನ್ನಲು ಅತಿ ಒತ್ತಾಯಿಸಬೇಡಿ.

Whats_app_banner