Parenting Tips: ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಸ್ಕ್ರೀನ್‌ಟೈಮ್‌ ವಿಚಾರದಲ್ಲಿ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು-parenting tips how can parents help to balance screen time and outdoor activities for childrens mental health rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಸ್ಕ್ರೀನ್‌ಟೈಮ್‌ ವಿಚಾರದಲ್ಲಿ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

Parenting Tips: ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಸ್ಕ್ರೀನ್‌ಟೈಮ್‌ ವಿಚಾರದಲ್ಲಿ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ಇತ್ತೀಚಿನ ದಿನಗಳಲ್ಲಿ ಅತಿಯಾದ ಸ್ಕ್ರೀನ್‌ಟೈಮ್‌ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿರುವುದು ಸುಳ್ಳಲ್ಲ. ದೈಹಿಕ ಚಟುವಟಿಕೆ ಕೊರತೆಯು ಮಕ್ಕಳಲ್ಲಿ ದೈಹಿಕ ಸಮಸ್ಯೆಗಳ ಜೊತೆಗೆ ಮಾನಸಿಕ ತೊಂದರೆಗಳಿಗೂ ಕಾರಣವಾಗುತ್ತಿದೆ. ಹಾಗಾಗಿ ಸ್ಕ್ರೀನ್‌ಟೈಮ್‌ ಮಿತಿಗೊಳಿಸುವ ವಿಚಾರದಲ್ಲಿ ಪೋಷಕರು ತಪ್ಪದೇ ಗಮನಹರಿಸಬೇಕು.

ಸ್ಕ್ರೀನ್‌ಟೈಮ್‌ ಮಿತಿಗೊಳಿಸಿ ಮಕ್ಕಳ ಮಾನಸಿಕ ಯೋಗಕ್ಷೇಮ ವೃದ್ಧಿಗೆ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು
ಸ್ಕ್ರೀನ್‌ಟೈಮ್‌ ಮಿತಿಗೊಳಿಸಿ ಮಕ್ಕಳ ಮಾನಸಿಕ ಯೋಗಕ್ಷೇಮ ವೃದ್ಧಿಗೆ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ಇತ್ತೀಚಿನ ದಿನಗಳಲ್ಲಿ ಮಕ್ಕಳು ಸ್ಕ್ರೀನ್‌ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಮೊಬೈಲ್‌, ಲಾಪ್‌ಟಾಪ್‌, ಟಿವಿ ಇದೇ ಅವರ ಪ್ರಪಂಚವಾಗಿ ಬಿಟ್ಟಿದೆ. ಮಕ್ಕಳು ಕೂಡ ದೊಡ್ಡವರಂತೆ ಒಂದೇ ಬಾರಿಗೆ ಎರಡೆರಡು ಗ್ಯಾಜೆಟ್‌ಗಳನ್ನು ಬಳಸುತ್ತಿದ್ದಾರೆ. ಯುಟ್ಯೂಬ್‌, ಇನ್‌ಸ್ಟಾಗ್ರಾಂ, ನೆಟ್‌ಫ್ಲಿಕ್ಸ್‌ನಂತಹ ಆನ್‌ಲೈನ್‌ ಪ್ಲಾಟ್‌ಫಾರಂಗಳನ್ನು ಹೆಚ್ಚೆಚ್ಚು ಬಳಸುವ ಜೊತೆಗೆ ಅದನ್ನು ಸ್ಕೋಲ್‌ ಮಾಡುವ ಮೂಲಕ ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಕೆಲವೊಮ್ಮೆ ಶಾಲೆಯ ಹೋಮ್‌ವರ್ಕ್‌ ಉದ್ದೇಶದಿಂದಲೂ ಮಕ್ಕಳು ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಬಳಸುತ್ತಾರೆ.

ಅತಿಯಾದ ಸ್ಕ್ರೀನ್‌ಟೈಮ್‌ ಕಾರಣದಿಂದ ಮಕ್ಕಳಲ್ಲಿ ಸ್ಥೂಲಕಾಯ, ಅಸಮರ್ಪಕ ನಿದ್ದೆ, ಹೊತ್ತಿಗೆ ಸರಿಯಾಗಿ ಮಲಗದೇ ಇರುವುದು, ತಡವಾಗಿ ಏಳುವುದು, ಭಾಷೆ ಹಾಗೂ ಸಾಮಾಜಿಕ ಕೌಶಲಗಳ ಅಭಿವೃದ್ಧಿಯಲ್ಲಿ ವಿಳಂಬ, ಗಮನಶಕ್ತಿಯ ಕೊರತೆ ಹೀಗೆ ಹಲವು ಸಮಸ್ಯೆಗಳು ಕಾಡುತ್ತಿವೆ.

ಇತ್ತೀಚೆಗೆ ಪ್ರತಿ ಮನೆಯಲ್ಲೂ ಐದಾರು ಮೊಬೈಲ್‌, ಒಂದೆರಡು ಲ್ಯಾಪ್‌ಟಾಪ್‌, ಟಿವಿ ಎಲ್ಲವೂ ಇರುವ ಕಾರಣ ಮಕ್ಕಳ ಸ್ಕ್ರೀನ್‌ಟೈಮ್‌ ಮೇಲೆ ಗಮನ ಹರಿಸುವುದು ಪೋಷಕರಿಗೆ ಸವಾಲಾಗಿದೆ.

ಅದೇನೇ ಇದ್ದರೂ ಪೋಷಕರು ಮಕ್ಕಳ ಸ್ಕ್ರೀನ್‌ಟೈಮ್‌ ವಿಚಾರದಲ್ಲಿ ಗಮನ ಹರಿಸಲೇಬೇಕು. ಸ್ಕ್ರೀನ್‌ಟೈಮ್‌ ಹಾಗೂ ಹೊರಾಂಗಣ ಚಟುವಟಿಕೆಯನ್ನು ಬ್ಯಾಲೆನ್ಸ್‌ ಮಾಡುವ ವಿಚಾರದಲ್ಲಿ ಪೋಷಕರು ಗಮನಿಸಬೇಕಾದ ಅಂಶಗಳಿವು.

ಟೆಕ್‌ ಮುಕ್ತ ವಲಯ

ನಿಮ್ಮ ಮನೆಯ ಕೆಲವು ಪ್ರದೇಶಗಳನ್ನು ಅಂದರೆ ಮಲಗುವ ಕೋಣೆ ಮತ್ತು ಊಟದ ಕೋಣೆಯನ್ನು ಟೆಕ್‌ ಮುಕ್ತ ವಲಯಗಳನ್ನಾಗಿ ಮಾಡಿ. ಇದನ್ನು ಗಂಭೀರವಾಗಿ ನೀವು ಅನುಸರಿಸಿ. ಕುಟುಂಬದವರು ಎಲ್ಲರೂ ಸೇರಿ ಊಟ ಮಾಡುವಾಗ, ನಿದ್ದೆಯ ಸಮಯದಲ್ಲಿ ತಪ್ಪಿಯೂ ಮೊಬೈಲ್‌ ನೋಡಬಾರದು ಎಂಬ ಅಂಶವನ್ನು ಪರಿಗಣಿಸಿ.

ಪ್ರಾಮಾಣಿಕ ಸಂವಹನ

ನಿಮ್ಮ ಸ್ಕ್ರೀನ್‌ಟೈಮ್‌ ಕುರಿತು ಮುಕ್ತ ಮತ್ತು ವಿವೇಚನಾರಹಿತ ಸಂವಾದವನ್ನು ಪ್ರೋತ್ಸಾಹಿಸಿ. ಇಂಟರ್‌ನೆಟ್‌ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಅವರೊಂದಿಗೆ ಮಾತನಾಡಿ. ಮಕ್ಕಳನ್ನು ಕಾಡುತ್ತಿರುವ ಚಿಂತೆ ಹಾಗೂ ಈ ವಿಚಾರವಾಗಿ ಅವರ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿ.

ದೈಹಿಕ ಚಟುವಟಿಕೆಗೆ ಆದ್ಯತೆ ನೀಡಿ

ಸ್ಕ್ರೀನ್‌ಟೈಮ್‌ನಿಂದ ಮಕ್ಕಳ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿ. ದೈಹಿಕ ವ್ಯಾಯಾಮದಂತಹ ಚುಟವಟಿಕೆಗಳನ್ನು ಪ್ರೋತ್ಸಾಹಿಸಿ. ನೃತ್ಯ ಅಥವಾ ಕ್ರೀಡೆಗಳಂತಹ ಅವರು ಆನಂದಿಸುವ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ. ಅವರ ಆಸಕ್ತಿಗಳನ್ನು ಗಮನಿಸಿ, ಅದನ್ನು ಪ್ರೋತ್ಸಾಹಿಸಿ.

ಆನ್‌ಲೈನ್‌ನಲ್ಲಿ ಏನನ್ನು ನೋಡುತ್ತಾರೆ ಎಂಬುದ ಮೇಲೆ ಗಮನವಿರಲಿ

ನಿಮ್ಮ ಮಕ್ಕಳು ಸಾಮಾಜಿಕ ಜಾಲತಾಣ ಅಥವಾ ಆನ್‌ಲೈನ್‌ನಲ್ಲಿ ಏನನ್ನು ನೋಡುತ್ತಾರೆ ಎಂಬುದರ ಮೇಲೆ ನಿಗಾ ಇಡುವುದು ಮುಖ್ಯವಾಗುತ್ತದೆ. ಪೇರೆಂಟಲ್‌ ಕಂಟ್ರೋಲ್‌ ಟೂಲ್‌, ಫಿಲ್ಟರ್‌ಗಳನ್ನು ಬಳಸುವ ಮೂಲಕ ಮಕ್ಕಳು ತಮ್ಮ ವಯಸ್ಸಿಗೆ ಸೂಕ್ತವಾದುದ್ದನ್ನೇ ನೋಡುತ್ತಿದ್ದಾರಾ ಇಲ್ಲವಾ ಎಂಬುದನ್ನು ಗಮನಿಸಿ. ಅವರು ಬಳಸುವ ಆಪ್‌ಗಳು, ಭೇಟಿ ನೀಡುವ ವೆಬ್‌ಸೈಟ್‌ಗಳು ಮತ್ತು ಆನ್‌ಲೈನ್‌ನಲ್ಲಿ ಸಂವಹನ ನಡೆಸುವ ವ್ಯಕ್ತಿಗಳ ಬಗ್ಗೆ ನಿಗಾ ಇಡಿ.

ತಜ್ಞರ ಸಲಹೆ ಪಡೆಯಿರಿ

ನಿಮ್ಮ ಮಗುವಿನ ನಡವಳಿಕೆ ಹಾಗೂ ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ಗಮನಿಸಿದರೆ ತಜ್ಞರ ಸಹಾಯ ಪಡೆಯುವುದು ಉತ್ತಮ.

ಡಿಜಿಟಲ್‌ ಸಾಕ್ಷರತೆಯನ್ನು ಉತ್ತೇಜಿಸಿ

ಇಂದಿನ ಮಕ್ಕಳನ್ನು ಸಂಪೂರ್ಣವಾಗಿ ಗ್ಯಾಜೆಟ್‌ಗಳಿಂದ ದೂರವಿಡಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ಅವರಲ್ಲಿ ಡಿಜಿಟಲ್‌ ಸಾಕ್ಷರತೆ ಮೂಡಿಸುವುದು ಬಹಳ ಮುಖ್ಯವಾಗುತ್ತದೆ. ಇಂಟ್‌ರ್ನೆಟ್‌ ಏನನ್ನು ನೋಡಬೇಕು ಏನನ್ನು ನೋಡಬಾರದು ಎಂಬುದರ ಅರಿವು ಮೂಡಿಸಿ. ಆನ್‌ಲೈನ್‌ ಪರಿಚಯವಾಗುವವರರ ಜೊತೆ ಹೇಗಿರಬೇಕು ತಿಳಿಸಿ. ಅಂತರ್ಜಾಲ ಬಳಕೆಯಲ್ಲಿನ ಎಚ್ಚರಿಕೆ ಬಗ್ಗೆ ಅರಿವು ಮೂಡಿಸಿ.

ಸರಿಯಾದ ನಡವಳಿಕೆ ಕಲಿಸಿ

ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಸಂಬಂಧಗಳು ಈಗ ಹದಿಹರೆಯದ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಮಕ್ಕಳಿಗೆ ಉತ್ತಮ ನಡವಳಿಕೆ ಕಲಿಸುವುದು ಬಹಳ ಮುಖ್ಯವಾಗುತ್ತದೆ. ಆನ್‌ಲೈನ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು, ಸೆಕ್ಸ್‌ಟಿಂಗ್ ಮತ್ತು ಸೈಬರ್‌ಬುಲ್ಲಿಂಗ್ ಸೇರಿದಂತೆ ಸ್ವೀಕಾರಾರ್ಹ ಮತ್ತು ಸ್ವೀಕಾರಾರ್ಹವಲ್ಲದ ನಡವಳಿಕೆಯನ್ನು ವಿವರಿಸಿ.

ಹೊರಗಡೆ ಸ್ವಲ್ಪ ಶಾಂತ ವಾತಾವರಣದಲ್ಲಿ ಸಮಯ ಕಳೆಯಿರಿ

ಸ್ಕ್ರೀನ್‌ಟೈಮ್‌ನಿಂದ ಮಕ್ಕಳನ್ನು ದೂರ ಮಾಡಲು ಶಾಂತ ವಾತಾವರಣದಲ್ಲಿ ಸಮಯ ಕಳೆಯುವಂತೆ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. ಪ್ರತಿದಿನ ಪ್ರಕೃತಿಯೊಂದಿಗೆ ಸಮಯ ಕಳೆಯಲು ಅವಕಾಶ ನೀಡಿ. ನದಿ, ಸರೋವರ ಸಮೀಪ ಮಕ್ಕಳ ಜೊತೆ ಸುತ್ತಾಡಿ.

ಪ್ರಸ್ತುತ ಡಿಜಿಟಲ್ ಯುಗದಲ್ಲಿ, ಪರದೆಯ ಸಮಯ ಮತ್ತು ಮಕ್ಕಳ ಮಾನಸಿಕ ಆರೋಗ್ಯದ ನಡುವೆ ನಿಕಟ ಸಂಬಂಧವಿದೆ. ಪರದೆಗಳಿಗೆ ಸಾಮಾಜಿಕ ಸಂಪರ್ಕಗಳು ಮತ್ತು ಶೈಕ್ಷಣಿಕ ಸಾಧ್ಯತೆಗಳಂತಹ ಅನೇಕ ಪ್ರಯೋಜನಗಳಿದ್ದರೂ, ಅತಿಯಾದ ಅಥವಾ ತಪ್ಪಾದ ಪರದೆಯ ಬಳಕೆಯು ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. . ಪಾರದರ್ಶಕ ಸಂವಹನ ಮತ್ತು ಇತರ ರಚನಾತ್ಮಕ ನಡವಳಿಕೆಗಳ ಜೊತೆಗೆ ಜವಾಬ್ದಾರಿಯುತ ಪರದೆಯ ಬಳಕೆಯನ್ನು ಉತ್ತೇಜಿಸುವ ಸಾಮರಸ್ಯದ ಸಮತೋಲನವನ್ನು ಸ್ಥಾಪಿಸುವುದು ಡಿಜಿಟಲ್ ಯುಗದಲ್ಲಿ ಮಕ್ಕಳ ಕಲ್ಯಾಣವನ್ನು ಹೆಚ್ಚಿಸಲು ನಿರ್ಣಾಯಕವಾಗಿದೆ. ಪಾಲಕರು ಮತ್ತು ಮಕ್ಕಳನ್ನು ಕಾಳಜಿ ವಹಿಸುವ ಇತರ ವಯಸ್ಕರು ಪರದೆಯ ಸಮಯ ಮತ್ತು ಅದರ ಪರಿಣಾಮಗಳ ಬಗ್ಗೆ ತಿಳಿದಿರುವ ಮೂಲಕ ಅವರ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಡಿಜಿಟಲ್ ಜಗತ್ತಿನಲ್ಲಿ ನ್ಯಾವಿಗೇಟ್ ಮಾಡಲು ಅವರನ್ನು ಬೆಂಬಲಿಸಬಹುದು.