Adolescence: ನಮ್ಮ ಮಕ್ಕಳ ಬಗ್ಗೆ ನಮಗೆಷ್ಟು ಗೊತ್ತು? ಪೋಷಕರಿಗೆ ಹಲವು ಪಾಠ ಹೇಳುವ ನೆಟ್‌ಫ್ಲಿಕ್ಸ್‌ ವೆಬ್ ಸರಣಿ -ಮನದ ಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  Adolescence: ನಮ್ಮ ಮಕ್ಕಳ ಬಗ್ಗೆ ನಮಗೆಷ್ಟು ಗೊತ್ತು? ಪೋಷಕರಿಗೆ ಹಲವು ಪಾಠ ಹೇಳುವ ನೆಟ್‌ಫ್ಲಿಕ್ಸ್‌ ವೆಬ್ ಸರಣಿ -ಮನದ ಮಾತು

Adolescence: ನಮ್ಮ ಮಕ್ಕಳ ಬಗ್ಗೆ ನಮಗೆಷ್ಟು ಗೊತ್ತು? ಪೋಷಕರಿಗೆ ಹಲವು ಪಾಠ ಹೇಳುವ ನೆಟ್‌ಫ್ಲಿಕ್ಸ್‌ ವೆಬ್ ಸರಣಿ -ಮನದ ಮಾತು

Adolescence Web Series: ‘ಅಡಾಲಸೆನ್ಸ್‘ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿರುವ ವೆಬ್‌ಸರಣಿ. ಇದರಲ್ಲಿ ಈಗೀನ ಪೋಷಕರು ತಿಳಿಯಬೇಕಾದ, ಕಲಿಯಬೇಕಾದ ಹಲವು ಪಾಠಗಳಿವೆ. ಇದರ ಆಧಾರದ ಮೇಲೆ ಪೋಷಕರಿಗೆ ಒಂದಿಷ್ಟು ಸಲಹೆ ನೀಡಿದ್ದಾರೆ ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್‌.

 ಪೋಷಕರಿಗೆ ಹಲವು ಪಾಠ ಹೇಳುವ ವೆಬ್‌ಸರಣಿ ಅಡಾಲಸೆನ್ಸ್ ಚಿತ್ರದ ದೃಶ್ಯ
ಪೋಷಕರಿಗೆ ಹಲವು ಪಾಠ ಹೇಳುವ ವೆಬ್‌ಸರಣಿ ಅಡಾಲಸೆನ್ಸ್ ಚಿತ್ರದ ದೃಶ್ಯ

ನೆಟ್‌ಫ್ಲಿಕ್ಸ್‌ನಲ್ಲಿರುವ ‘ಅಡಾಲಸೆನ್ಸ್ (Adolescence - ಹದಿಹರೆಯ)‘ ಎಂಬ ಬ್ರಿಟಿಷ್ ವೆಬ್‌ಸೀರೀಸ್ ಕುರಿತು ಬಹಳ ಚರ್ಚೆಗಳಾಗುತ್ತಿವೆ. ಇದು ಕಾಲ್ಪನಿಕ ಕಥೆಯಾಗಿದ್ದು, ಇಂಗ್ಲೆಂಡ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಇಂಗ್ಲೆಂಡಿನ 13 ವರ್ಷದ ಬಾಲಕ (ಜೆಮ್ಮಿ) ತನ್ನ ಶಾಲೆಯಲ್ಲಿ ಓದುತ್ತಿರುವ ಹುಡುಗಿಯನ್ನು ಹತ್ಯೆ ಮಾಡಿರುತ್ತಾನೆ. ಪ್ರಾರಂಭದಲ್ಲೇ ಪೋಲಿಸರು ಸಿಸಿಟಿವಿ ಕ್ಲಿಪ್ಸ್ ಆಧಾರದ ಮೇಲೆ ಈ ಬಾಲಕನೇ ತಪ್ಪಿಸ್ಥತನೆಂದು ಅರೆಸ್ಟ್ ಮಾಡುತ್ತಾರೆ. ಬಾಲಕನೇ ಈ ಕೃತ್ಯ ಮಾಡಿರುವುದೆಂದು ಸಾಬೀತು ಕೂಡ ಆಗುತ್ತದೆ. ಆದರೆ ಬಾಲಕ ತಪ್ಪು ಒಪ್ಪಿಕೊಳ್ಳುವುದಿಲ್ಲ. ಪಶ್ಚಾತ್ತಾಪವನ್ನೂ ಪಡುವುದಿಲ್ಲ.

ಹಾಗಾಗಿ ಮುಂದಿನ ಕಥೆಯಲ್ಲಿ ಯಾವುದೇ ಸಸ್ಪೆನ್ಸ್ ಉಳಿದುಕೊಳ್ಳುವುದಿಲ್ಲ. ಹಾಗಾಗಿ, ಇದು ಖಂಡಿತವಾಗಿಯೂ ಥ್ರಿಲರ್ ಅಥವಾ ಸಸ್ಪೆನ್ಸ್ ಸೀರಿಸ್ ಅಂತೂ ಅಲ್ಲ. ಆದರೆ ವೀಕ್ಷಿಸುವಾಗ ಕುತೂಹಲ ಹೆಚ್ಚಾಯಿತು. ಯಾವ ಕಾರಣಕ್ಕಾಗಿ ಆ ಬಾಲಕ ಇಂತಹ ಕೃತ್ಯ ಮಾಡಿರಬಹುದು? ಜೈಲಿನಲ್ಲಿ ಅವನ ಜೈಲಿನ ಬದುಕು ಹೇಗಿರಬಹುದು ಎನ್ನುವ ಕಾರಣಕ್ಕೆ ಕುತೂಹಲ ಹೆಚ್ಚಾಯಿತು. ಡಿಟೆಕ್ಟಿವ್ ಕಂಡುಹಿಡಿದ ಹಾಗೆ, ಬಾಲಕನಿಗೂ ಮತ್ತು ಹುಡುಗಿಗೂ ಯಾವುದಾದರೂ ಸಂಬಂಧವಿದ್ದು, ಮನಸ್ತಾಪಗಳಾಗಿ ಹೀಗೆ ಮಾಡಿರಬಹುದು ಎಂದು ಮನಸ್ಸು ಊಹೆಗೆ ಜಾರಿತು.

ಆದರೆ ಇಂಥ ಯಾವುದೇ ವೈಯಕ್ತಿಕ ಸಂಬಂಧ ಇರಲಿಲ್ಲ. ಕಥೆಯ ಮುಂದಿನ ಭಾಗದಲ್ಲಿ ಹತ್ಯೆಯ ಹಿಂದಿರುವ ಕಾರಣವನ್ನು ತೋರಿಸಲಾಗಿದೆ. ಮುಂದೆ, ಮಕ್ಕಳ ಕಾರಾಗೃಹ ಮತ್ತು ಸುಧಾರಣೆ ವಿಭಾಗದಲ್ಲಿ ಬಾಲಕನಿಗೆ ಆಪ್ತಸಮಾಲೋಚಕಿ ಮತ್ತು ಮನಃಶಾಸ್ತ್ರಜ್ಞೆಯಿಂದ (Briony Ariston) ಚಿಕಿತ್ಸೆಯು ನಡೆಯುತ್ತದೆ. ಚಿಕಿತ್ಸೆಯ ಸಮಯದಲ್ಲಿ ಬಾಲಕ ಮತ್ತು ಮನಃಶಾಸ್ತ್ರಜ್ಞೆ ನಡುವೆ ನಡೆಯುವ ಸಂಭಾಷಣೆಗಳು ಮಹತ್ವದ ಭಾಗವಾಗಿದೆ. ಸಹಜವಾದ ಮತ್ತು ಗಂಭೀರವಾದ ನಟನೆ, ಪ್ರಬುದ್ಧ ಹಾಗೂ ಆಳವಾದ ಸಂಭಾಷಣೆಗಳಿದ್ದು ಇಡೀ ಸಂಚಿಕೆ ಬಹಳ ಅದ್ಭುತವಾಗಿ ಮೂಡಿಬಂದಿದೆ. ಆಪ್ತಸಮಾಲೋಚನೆಯಲ್ಲಿ, ಬಾಲಕನ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಅತಿ ಸೂಕ್ಷ್ಮವಾಗಿ ಹತ್ಯೆಯ ಹಿಂದಿರುವ ಉದ್ದೇಶವನ್ನು ತೋರಿಸಲಾಗಿದೆ.

ಹಾಗೆಯೇ, ಮಕ್ಕಳ ಬದುಕನ್ನು ರೂಪಿಸುವಲ್ಲಿ, ಪೋಷಕರ ಪಾತ್ರ ಮತ್ತು ಸತತ ಹೋರಾಟವನ್ನು ಸ್ಪಷ್ಟ ಮತ್ತು ಆಳವಾಗಿ ತೋರಿಸಲಾಗಿದೆ. ಮಕ್ಕಳ ಮನಸ್ಥಿತಿ, ಪೋಷಕರ ಹೋರಾಟ, ಮತ್ತು ಬದಲಾಗುತ್ತಿರುವ ಸಮಾಜ ಮತ್ತು ನೀರಿಕ್ಷೆಗಳನ್ನು ವರ್ಣಿಸಲಾಗಿದೆ. ಈ ಸರಣಿಯನ್ನು ವೀಕ್ಷಿಸಿದಾಗ, ಪೋಷಕಳಾದ ನನ್ನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಸಾಮಾಜಿಕ ಮಾಧ್ಯಮದ ಈ ಕಾಲದಲ್ಲಿ, ಎಲ್ಲಾ ವಯಸ್ಸಿನ ಮಕ್ಕಳ ಮೇಲೆ ಭಾರಿ ಪ್ರಭಾವ ಬೀರುವ ಆನ್‌ಲೈನ್ ವಿಷಯ ಮತ್ತು ಪ್ರವೃತ್ತಿಗಳ ಬಗ್ಗೆ ಪೋಷಕರು ಬಹಳ ‘ಜಾಗೃತರಾಗಿರಬೇಕು‘ ಎನ್ನುವುದು ನನ್ನ ಅಭಿಪ್ರಾಯ.

ನನ್ನಲ್ಲಿ ಉದ್ಭವಿಸಿದ ಪ್ರಶ್ನೆಗಳಿವು. ಬಹುಶಃ ಎಲ್ಲ ಪೋಷಕರೂ ಈ ಹೊತ್ತಿನಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು.

1. ನನ್ನ ಮಗುವಿನ ಬಗ್ಗೆ ನನಗೆ ಸಾಕಷ್ಟು ತಿಳಿದಿದೆಯೇ?

2. ನನ್ನ ಮಗು ನನಗೆ ಏನನ್ನಾದರೂ ಹೇಳಲು ಪ್ರಯತ್ನಿಸುತ್ತಿದೆಯೇ?

3. ಮಗುವಿಗೆ ನನ್ನ ಬಳಿ ಮಾತನಾಡಲು ನಾನು ಸಾಕಷ್ಚು ಕಾಲಾವಕಾಶ ನೀಡುತ್ತೇನೆಯೇ?

4. ಶಾಲೆಯಲ್ಲಿ ನನ್ನ ಮಗು ಏನಾದರೂ ತೊಂದರೆ ಎದುರಿಸುತ್ತದೆಯೇ?

6. ನನ್ನ ಮಗು ಯಾವ ರೀತಿಯ ಸ್ನೇಹಿತರನ್ನು ಹೊಂದಿದೆ ಮತ್ತು ಅವರು ಯಾವ ರೀತಿಯ ಸಂಭಾಷಣೆಗಳನ್ನು ನಡೆಸುತ್ತಿದ್ದಾರೆ?

7. ನನ್ನ ಮಗು ಸಂತೋಷವಾಗಿದೆಯೇ?

8. ನನ್ನ ಮಗುವಿಗೆ ತನ್ನ ಬಗ್ಗೆ ಏನು ಅನಿಸುತ್ತದೆ?

10. ಮಗುವಿಗೆ ತನ್ನ ಬಗ್ಗೆ ಒಳ್ಳೆಯ ಭಾವನೆ ಇದೆಯೇ ಅಥವಾ ಆತ್ಮಗೌರವದ ಕೊರತೆ ಕಾಡುತ್ತಿದೆಯೇ?

12. ನನ್ನ ಮಗುವಿಗೆ ತಾನು ಒಂದು ಮುಖ್ಯವಾದ ಜೀವಿ ಮತ್ತು ತನ್ನನ್ನು ಎಲ್ಲರೂ ಪ್ರೀತಿಸುತ್ತಾರೆ ಎಂದು ಅನಿಸುತ್ತದೆಯೇ?

14. ನನ್ನ ಅಭಿಪ್ರಾಯಗಳು, ಸನ್ನೆಗಳು, ಮಾತುಗಳು ನನ್ನ ಮಗುವಿನ ಆತ್ಮಗೌರವ ಮೇಲೆ ಪರಿಣಾಮ ಬೀರುತ್ತವೆಯೇ?

15. ನಾನು ನನ್ನ ಮಗುವಿನೊಂದಿಗೆ ಭಾವನಾತ್ಮಕವಾದ ಸಂಪರ್ಕ ಹೊಂದಿದ್ದೇನೆಯೇ?

16. ನಮ್ಮ ನಡುವೆ ದಿನ ನಿತ್ಯ ಸಾಕಷ್ಟು ಸಂವಹನ ನಡೆಯುತ್ತದೆಯೇ?

17. ನನ್ನ ಮಗುವು ನನ್ನ ಬಳಿ ಮಾತಾನಾಡುವಾಗ ನಾನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಗಮನಕೊಟ್ಟು ಕೇಳಿಸಿಕೊಳ್ಳುತ್ತೇನೆಯೇ?

19. ನನ್ನ ಮಗುವು ಯಾವುದೇ ಹಿಂಜರಿಕೆಯಿಲ್ಲದೆ ನನ್ನೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತದೆಯೇ?

21. ನನ್ನ ಮಗುವು ನನ್ನೊಂದಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ನಾನು ಸುರಕ್ಷಿತವಾದ ವಾತಾವರಣವನ್ನು ನೀಡುತ್ತಿದ್ದೇನೆಯೇ?

22. ನನ್ನಿಂದ ನನ್ನ ಮಗುವು ಯಾವುದೇ ಹಿಂಜರಿಕೆಯಿಲ್ಲದೆ ತನಗೆ ಅಗತ್ಯವಾದ ಸಹಾಯವನ್ನು ಪಡೆಯುತ್ತದೆಯೇ?

ಎಲ್ಲ ಪೋಷಕರಿಗೆ ಪ್ರಶ್ನೆಗಳು

1. 13 ವರ್ಷದ ಮಗುವಿಗೆ ಇನ್‌ಸ್ಟಾಗ್ರಾಮ್‌ ಅಥವಾ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಯನ್ನು ಹೊಂದಿರುವುದು ಅಗತ್ಯವೇ ಮತ್ತು ಸರಿಯೇ?

2. ಎಮೋಜಿಗಳು, ಕೋಡ್ಸ್ ಮತ್ತು ಭಾಷೆ, ಆನ್‌ಲೈನ್ ಸಮುದಾಯಗಳ ಬಗ್ಗೆ ಪೋಷಕರಿಗೆ ಸಾಕಷ್ಟು ತಿಳಿದಿದೆಯೇ? (ಸಾಮಾಜಿಕ ಮಾಧ್ಯಮದಲ್ಲಿ ಅಗಾಧ ಉಪಸ್ಥಿತಿಯನ್ನು ಹೊಂದಿದ್ದ ಮತ್ತು ಯುವ ಮನಸ್ಸುಗಳ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತಿರುವ ಸಮುದಾಯಗಳು)

3. ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಿದ್ದಾರೆಯೇ?

5. ನಾವು ನಮ್ಮ ಮಕ್ಕಳೊಂದಿಗೆ ಪ್ರತಿದಿನ ಸಂವಾದ ನಡೆಸುತ್ತೇವೆಯೇ?

6. ನಮಗೆ ನಮ್ಮ ಮಕ್ಕಳ ಸ್ನೇಹಿತರ ಪರಿಚಯವಿದೆಯೇ?

7. ನಾವು ಮಕ್ಕಳ ಮನಸ್ಸು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೇ?

8. ಅವರ ಮಕ್ಕಳ ಮೌನವನ್ನು ನಾವು ಅರ್ಥಮಾಡಿಕೊಳ್ಳಲು ಸಮರ್ಥರಾಗಿದ್ದೇವೆಯೇ?

9. ಅವರ ಭಾವನೆಗಳನ್ನು ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಳ್ಳಲು ಸಮಯ ನೀಡುತ್ತಿದ್ದೇವೆಯೇ?

10. ನಾವು ನಮ್ಮ ಗಂಡು ಮಕ್ಕಳಿಗೆ ಮಹಿಳೆಯರನ್ನು ಗೌರವಿಸಲು ಕಲಿಸುತ್ತಿದ್ದೇವೆಯೇ?

11. ಬಾಡಿ ಶೇಮಿಂಗ್ ಮತ್ತು ಇದರ ದುಷ್ಪರಿಣಾಮಗಳ ಬಗ್ಗೆ ಮಕ್ಕಳೊಂದಿಗೆ ಬಳಿ ಚರ್ಚೆ ಮಾಡಿದ್ದೇವೆಯೇ?

ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಿ

ಮಗುವಿಗೆ ಶಿಕ್ಷಣ ಖಂಡಿತವಾಗಿಯೂ ಅತ್ಯಗತ್ಯ. ಅದೇ ರೀತಿ ಸೌಲಭ್ಯಗಳನ್ನು ಒದಗಿಸುವುದು ಸಹ ಪೋಷಕರ ಕರ್ತವ್ಯ. ಆದರೆ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸುವುದನ್ನು ಎಂದಿಗೂ ಮರೆಯಬಾರದು. ಮಗುವಿನ ಮನದಾಳದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಂಡು, ಸಮಂಜಸವಾಗಿ ನಡೆದುಕೊಳ್ಳುವುದು ತಂದೆ ತಾಯಿಗಳ ಆದ್ಯತೆಯಾಗಿರಬೇಕು.

ವಿಶೇಷವಾಗಿ, ಪ್ರೀ ಟೀನೇಜ್(10-14) ಮತ್ತು ಟೀನೇಜ್(15-19) ಮಕ್ಕಳು ದೈಹಿಕ ಬೆಳವಣಿಗೆ ಮತ್ತು ಬದಲಾವಣೆಗಳಿಂದಾಗಿ ಬಹಳಷ್ಟು ಮಾನಸಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು. ದೇಹದ ಸೌಂದರ್ಯ ಹೆಚ್ಚು ಗಮನವಿದ್ದು, ಸಹಜವಾದ ಅನ್ಯ ಲಿಂಗ ಆಕರ್ಷಣೆಗಳು ಇರುತ್ತವೆ. ಜೊತೆಗೆ ಮಾನಸಿಕ ಅಗತ್ಯಗಳು ಕೂಡ ಇರುತ್ತವೆ. ಎಲ್ಲರ ಮಧ್ಯೆ ಗುರುತಿಸಿಕೊಳ್ಳಬೇಕು, ತನ್ನನ್ನು ಬೇರೆಯವರು ಪ್ರೀತಿಸಬೇಕು, ಪ್ರಶಂಸಿಸಬೇಕು ಹೀಗೆ ಕೆಲವು ಮೂಲಭೂತವಾದ ನಿರೀಕ್ಷೆಗಳು ಇರುತ್ತವೆ. ಇದು ಆಗದೇ ಇದ್ದಾಗ, ಮಾನಸಿಕವಾಗಿ ಕುಗ್ಗುತ್ತಾರೆ, ಮತ್ತು ಕೆಲವೊಮ್ಮೆ ಸಿಟ್ಟಾಗುತ್ತಾರೆ.

ಈ ಕಾರಣಗಳಿಂದಾಗಿ, ಪೋಷಕರು ತಮ್ಮ ಮಕ್ಕಳ ಜೊತೆ ಮಾನಸಿಕ ಸಂಪರ್ಕವನ್ನು ಭದ್ರಗೊಳಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

ಮನದ ಮಾತು– ಭವ್ಯಾ ವಿಶ್ವನಾಥ್
ಮನದ ಮಾತು– ಭವ್ಯಾ ವಿಶ್ವನಾಥ್

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner