Parenting Tips: ಪಾಲಕರು ಮಾಡುವ ತಪ್ಪುಗಳು; ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಮಕ್ಕಳನ್ನು ಹೆತ್ತ ಬಳಿಕ, ಅವರ ಪಾಲನೆ-ಪೋಷಣೆಯ ಜತೆಗೆ ಮಾನಸಿಕ ಆರೋಗ್ಯ ವೃದ್ಧಿಗೂ ಪಾಲಕರು ಗಮನ ಕೊಡಬೇಕು. ಇಲ್ಲವಾದರೆ ಅವರ ಮನಸ್ಥಿತಿಯ ಮೇಲೆ ಗಾಢವಾದ ಪರಿಣಾಮ ಬೀರುವ ಸಾಧ್ಯತೆಯಿದೆ. ಪಾಲಕರು ಮಕ್ಕಳ ಎದುರು ಯಾವ ರೀತಿ ವರ್ತಿಸಬೇಕು? ಈ ಸ್ಟೋರಿ ಓದಿ..

ಮಕ್ಕಳನ್ನು ಹೆರುವುದು ಕಷ್ಟವಲ್ಲ, ಆದರೆ ಅವರನ್ನು ಬೆಳೆಸುವುದು ನಿಜಕ್ಕೂ ತುಂಬಾ ಕಷ್ಟದ ಕೆಲಸ ಎಂಬ ಮಾತಿದೆ. ಅದು ಹೌದು ಕೂಡ.. ಯಾಕೆಂದರೆ ಮಕ್ಕಳು ಹೇಳಿಕೊಟ್ಟದ್ದನ್ನು ಕಲಿಯುವುದಕ್ಕಿಂತ ಜಾಸ್ತಿ ನೋಡಿ ಕಲಿಯುತ್ತವೆ. ಹೀಗಾಗಿ ಅವರ ದೈಹಿಕ ಬೆಳವಣಿಗೆಯ ಜತೆಗೇ, ಮಾನಸಿಕ ಬೆಳವಣಿಗೆಯೂ ಪಾಲಕರು ಆದ್ಯತೆ ಕೊಡಬೇಕು. ಯಾಕೆಂದರೆ ತಂದೆ-ತಾಯಿಯ ಕೆಲವೊಂದು ಕೆಟ್ಟ ಅಭ್ಯಾಸಗಳು, ಹವ್ಯಾಸಗಳು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಅಂತಹ ಅಭ್ಯಾಸಗಳ ಕುರಿತು ಪಾಲಕರಿಗೇ ಅರಿವಿರುವುದಿಲ್ಲ, ಆದರೆ ಅವುಗಳನ್ನು ಮಕ್ಕಳು ಬೇಗನೇ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಅ ಕಾಲದ ಚಿತ್ರಣ ಅವರ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಹೀಗಾಗಿ ಪಾಲಕರು ಮಕ್ಕಳ ಬಾಲ್ಯದಲ್ಲಿ ಮಾಡುವ ಅಂತಹ ತಪ್ಪುಗಳನ್ನು ಅರಿತುಕೊಂಡರೆ, ಅದರಿಂದ ಮಗುವಿನ ಭವಿಷ್ಯದ ಮೇಲೆ ಬೀರಬಹುದಾದ ಪರಿಣಾಮವನ್ನು ತಪ್ಪಿಸಬಹುದು.
ಮಕ್ಕಳ ಜತೆ ಹೆಚ್ಚು ಕಟ್ಟುನಿಟ್ಟಾಗಿರುವುದು..
ನಾವು ಬಹಳ ಸ್ಟ್ರಿಕ್ಟ್ ಎಂದು ಹಲವು ಮಂದಿ ಪಾಲಕರು ಹೇಳಿಕೊಳ್ಳುತ್ತಿರುತ್ತಾರೆ. ಅಂದರೆ ನಾವು ಮಕ್ಕಳ ವಿಚಾರದಲ್ಲಿ ಹೆಚ್ಚು ಕಟ್ಟುನಿಟ್ಟಾಗಿ ಇದ್ದಷ್ಟು ಮಕ್ಕಳು ಕಡಿಮೆ ತಪ್ಪುಗಳನ್ನು ಮಾಡುತ್ತಾರೆ ಎನ್ನುವುದು ಅವರ ವಾದವಾಗಿರುತ್ತದೆ. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ. ಮಕ್ಕಳ ಮನಸಲ್ಲಿ ಅಂತಹ ಪಾಲಕರು ಭಯವನ್ನು ಮೂಡಿಸಿರುತ್ತಾರೆ. ಕೆಲವೊಂದು ವಿಚಾರದಲ್ಲಿ ಪಾಲಕರು ಸ್ವಲ್ಪ ಸ್ಟ್ರಿಕ್ಟ್ ಇರಬೇಕು ನಿಜ, ಆದರೆ ಮಕ್ಕಳಲ್ಲಿ ಭಯವನ್ನು ಹುಟ್ಟುಹಾಕಿ, ಅದನ್ನೇ ಬೆಳೆಸಿದರೆ, ಅಂತಹ ಮಕ್ಕಳು ಯಾವತ್ತೂ ಖುಷಿಯಾಗಿ ಮಾತನಾಡುವುದಿಲ್ಲ. ಹೃದಯ, ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ. ಅವರ ಮನಸ್ಸಿನ ಮೇಲೆ ನೀವು ಹೊರಿಸಿದ ಭಯ ಗಾಢವಾದ ಪರಿಣಾಮವನ್ನು ಬೀರಿರುತ್ತದೆ.
ಕ್ಲಾಸ್‌ಗೆ ಮೊದಲನೆಯವನಾಗು ಎಂಬ ಒತ್ತಡ
ಬಹಳಷ್ಟು ಮಂದಿ ಪಾಲಕರು, ಮಗುವಿನ ಮೇಲೆ ಸಾಕಷ್ಟು ಒತ್ತಡ ಹೇರುತ್ತಾರೆ. ಸಹಜವಾಗಿ ಅವರಿಗೆ ತಮ್ಮ ಮಗು ತರಗತಿಗೆ ಫಸ್ಟ್ ಬರಬೇಕು, ಕಲಿಕೆಯಲ್ಲಿ ಮುಂದಿರಬೇಕು, ಎಲ್ಲದರಲ್ಲೂ ಮೊದಲಿಗನಾಗಬೇಕು ಎಂಬ ಒತ್ತಾಸೆಯಿರುತ್ತದೆ. ಅದಕ್ಕಾಗಿ ಮಗುವಿನ ಮೇಲೆ ಒತ್ತಡ ಹೇರುತ್ತಿರುತ್ತಾರೆ. ಮಕ್ಕಳನ್ನು ಪ್ರೋತ್ಸಾಹಿಸಬೇಕು ನಿಜ, ಆದರೆ ಅವರ ಸಾಮರ್ಥ್ಯ ಎಷ್ಟಿದೆ ಎನ್ನುವ ಅರಿವು ಕೂಡ ನಮಗಿರಬೇಕು. ಆ ರೀತಿಯ ತೀವ್ರ ಒತ್ತಡ ಮಗುವಿನ ಮಾನಸಿಕ ಸ್ಥಿತಿಯ ಮೇಲೆ ತೀವ್ರ ಪ್ರಭಾವ ಬೀರುತ್ತದೆ, ಅದರಿಂದ ಮಗು ಮುಂದೆ ಸಮಸ್ಯೆ ಎದುರಿಸಬಹುದು.
ಇದನ್ನೂ ಓದಿ: ಮಕ್ಕಳಿಗೆ ಮಾಡಿ ಕೊಡಿ ಸ್ಟ್ರಾಬೆರಿ ಜ್ಯೂಸ್; ಇಲ್ಲಿದೆ ಸಿಂಪಲ್ ರೆಸಿಪಿ
ಅತಿಯಾದ ಕಾಳಜಿ ಮತ್ತು ಮೋಹ
ಕೆಲವು ಪಾಲಕರು ಮಕ್ಕಳ ಮೇಲೆ ಅತಿಯಾದ ಪ್ರೀತಿ, ಕಾಳಜಿ ತೋರುತ್ತಾರೆ. ಪ್ರೀತಿ ಮತ್ತು ಕಾಳಜಿ ಸಹಜವಾಗಿ ಬೇಕು, ಆದರೆ ಮಗುವಿನ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬಾರದು. ಮಕ್ಕಳು ಸದಾ ತಮ್ಮ ಕಣ್ಣೋಟದಲ್ಲೇ ಇರಬೇಕು, ತಮ್ಮನ್ನು ಕೇಳಿಯೇ ಮುಂದುವರಿಯಬೇಕು ಎಂದಿರುತ್ತದೆ. ಆಗ, ಮಕ್ಕಳು ಪ್ರತಿಯೊಂದಕ್ಕೂ ಅವರ ಪಾಲಕರ ಮೇಲೆ ಅವಲಂಬಿತರಾಗುತ್ತಾರೆ. ಅವರ ಸ್ವಂತ ಬುದ್ಧಿಯಲ್ಲಿ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮಗು ಮುಂದೆ ಸಮಾಜದಲ್ಲಿ ತೊಂದರೆ ಎದುರಿಸಬಹುದು.
ಮನೆಯಲ್ಲಿ ಜಗಳ
ಕೆಲವು ಹೆತ್ತವರು ಮನೆಯಲ್ಲಿ ಸದಾ ಜಗಳದಲ್ಲಿಯೇ ಕಳೆಯುತ್ತಾರೆ. ಸಣ್ಣಪುಟ್ಟ ವಿಚಾರಕ್ಕೂ ರೇಗಾಡುವುದು, ಕಿರುಚುವುದು ನಡೆಯುತ್ತದೆ. ಸಣ್ಣಪುಟ್ಟ ಕಿರಿಕಿರಿಯಾದರೆ ಸಮಸ್ಯೆಯಿಲ್ಲ. ಅಂತಹ ಜಗಳ ಇರುತ್ತದೆ. ಆದರೆ, ಕೆಲವು ಪಾಲಕರು ಪ್ರತಿ ದಿನವೂ ಮಕ್ಳಳ ಮುಂದೆಯೇ ಅತ್ಯಂತ ಕೆಟ್ಟ ಪದ ಬಳಸಿ, ಕೂಗಾಡಿ ಗಲಾಟೆ ಮಾಡುತ್ತಾರೆ. ಅದು ಮಗುವಿನ ಮನಸ್ಸಿನ ಮೇಲೆ ಖಂಡಿತ ಪ್ರಭಾವ ಬೀರುತ್ತದೆ. ಪಾಲಕರು ಎಂದರೆ ಹೀಗೆಯೇ ಎಂಬ ಭಾವನೆ ಅವರ ಮನಸ್ಸಲ್ಲಿ ಮೂಡುತ್ತದೆ.
ಇದನ್ನೂ ಓದಿ: ತಂದೆ-ತಾಯಿ ಹೀಗೆ ಮಾಡಿದರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಹುದು
ಪ್ರತಿಯೊಂದಕ್ಕೂ ಮಕ್ಕಳಿಗೆ ಶಿಕ್ಷೆ
ಮಕ್ಕಳಿಗೆ ಶಿಕ್ಷೆ ನೀಡುವ ಮೂಲಕವೇ ಅವರನ್ನು ತಿದ್ದುತ್ತೇವೆ ಎಂಬ ಮನಸ್ಥಿತಿಯ ಪಾಲಕರು, ಮಕ್ಕಳು ಮಾಡುವ ಸಣ್ಣಪುಟ್ಟ ತಪ್ಪುಗಳಿಗೂ ರೇಗಾಡುತ್ತಾರೆ. ಅವರನ್ನು ತಿದ್ದುವ ಭರದಲ್ಲಿ ನೀಡುವ ಶಿಕ್ಷೆಗಳು, ಮಗುವಿಗೆ ನಿಮ್ಮ ಮೇಲೆ ನಂಬಿಕೆ ಕಳೆದುಹೋಗುವಂತೆ ಮಾಡುತ್ತದೆ. ಜತೆಗೆ ನಿಮ್ಮ ಮತ್ತು ಮಗುವಿನ ನಡುವಿನ ಬಾಂಧವ್ಯಕ್ಕೂ ಧಕ್ಕೆಯಾಗುತ್ತದೆ.
