ಮಕ್ಕಳ ಸಿಟ್ಟು, ಆತಂಕ, ಒತ್ತಡ ದೂರ ಮಾಡುವುದು ಹೇಗೆ? ಈ ರೀತಿಯಾಗಿ ಬಾಲ್ಯದಲ್ಲೇ ರೂಢಿಸಿ ಧ್ಯಾನ ಮತ್ತು ಸಂಯಮ
ಮಕ್ಕಳಿಗೆ ಬಾಲ್ಯದಲ್ಲಿಯೇ ಧ್ಯಾನ ಕಲಿಸುವುದರಿಂದ ಮಕ್ಕಳು ಮತ್ತು ಪೋಷಕರ ನಡುವೆ ಬಾಂಧವ್ಯ ಹೆಚ್ಚಿಸುತ್ತದೆ. ಮಕ್ಕಳಲ್ಲಿ ಶಾಂತಿ, ವೈಯಕ್ತಿಕ ಬೆಳವಣಿಗೆ, ಜಾಣತನ, ಸೃಜನಶೀಲತೆ ಮತ್ತು ಮಾನಸಿಕ ಯೋಗಕ್ಷೇಮ ಹೆಚ್ಚಿಸಲು ನೆರವಾಗುತ್ತದೆ. ಭವಿಷ್ಯದ ಪೀಳಿಗೆಯನ್ನು ರೂಪಿಸಲು ಧ್ಯಾನವು ಉತ್ತಮ ಸಾಧನವಾಗಿದೆ. (ಬರಹ: ಅರ್ಚನಾ ವಿ.ಭಟ್)
ಧ್ಯಾನವು ಮನುಷ್ಯನನ್ನು ಉತ್ತಮನನ್ನಾಗಿಸಲು ಇರುವ ದಾರಿ ಎಂದು ಹೇಳಲಾಗುತ್ತದೆ. ಧ್ಯಾನದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ, ಒತ್ತಡ, ಆತಂಕ ನಿವಾರಣೆಯಾಗುತ್ತದೆ. ಬೌದ್ಧ ಧರ್ಮಗುರು ದಲೈ ಲಾಮಾ ಹೀಗೆ ಹೇಳುತ್ತಾರೆ ‘ಜಗತ್ತಿನಲ್ಲಿರುವ ಎಲ್ಲಾ 8 ವರ್ಷದ ವಯಸ್ಸಿನ ಮಕ್ಕಳಿಗೆ ಧ್ಯಾನವನ್ನು ಕಲಿಸುವುದರಿಂದ ಜಗತ್ತಿನಲ್ಲಿರುವ ಹಿಂಸೆಯನ್ನು ಈ ತಲೆಮಾರಿನಲ್ಲಿಯೇ ದೂರಮಾಡಬಹುದು’. ನಿಮ್ಮ ಪುಟ್ಟ ಮಗುವಿನ ಹಟ, ಸಿಟ್ಟನ್ನು ಸುಲಭವಾಗಿ ಕಡಿಮೆ ಮಾಡಬಹುದಾಗಿದ್ದರೆ ಹೇಗಿರುತ್ತದೆ? ಕೋಪವನ್ನು ನಿಯಂತ್ರಿಸುವ, ಶಾಂತರಾಗಿ ಬದುಕುವ ಕಲೆ ಬಾಲ್ಯದಲ್ಲಿಯೇ ಮಕ್ಕಳಿಗೆ ಗೊತ್ತಿದ್ದರೆ ಮುಂದೆ ಅದನ್ನೇ ಜೀವನದುದ್ದಕ್ಕೂ ಅಳವಡಿಸಿಕೊಂಡರೆ ಹೇಗಿರುತ್ತದೆ? ಇದು ಧ್ಯಾನದಿಂದ ಸಾಧ್ಯ ಎಂದು ಅಧ್ಯಯನಗಳು ಹೇಳುತ್ತಿವೆ. ಆದರೆ ಎಳೆಯ ವಯಸ್ಸಿನಲ್ಲಿ ಮಕ್ಕಳಿಗೆ ಧ್ಯಾನ, ಸಂಯಮ ಇವೆಲ್ಲವನ್ನು ಕಲಿಸುವುದು ಅಷ್ಟು ಸುಲಭವಲ್ಲ. ಆದರೆ ಇಲ್ಲಿ ಹೇಳಿರುವ ಕೆಲವು ಸಲಹೆಗಳನ್ನು ಪಾಲಿಸುವುದರ ಮೂಲಕ ನಿಮ್ಮ ಎಳೆಯ ಮಕ್ಕಳಿಗೆ ಧ್ಯಾನವನ್ನು ಸುಲಭವಾಗಿ ಕಲಿಸಬಹುದಾಗಿದೆ.
ಬಾಲ್ಯದಲ್ಲಿಯೇ ಮಕ್ಕಳಿಗೆ ಧ್ಯಾನದ ಅವಶ್ಯಕತೆ ಏಕೆ ಬೇಕು?
ಮಕ್ಕಳಿಗೆ ಧ್ಯಾನ ಮಾಡುವುದನ್ನು ಕಲಿಸುವುದು ಈಗಿನ ಟ್ರೆಂಡ್ ಮಾತ್ರವಲ್ಲ. ಅದು ಅವರನ್ನು ಶಕ್ತಿಶಾಲಿಗೊಳಿಸಲು ಇರುವ ಸಾಧನ. ಈ ಪ್ರಪಂಚವನ್ನು ಎದುರಿಸಲು ಬೇಕಾಗಿರುವ ಜಾಣತನ. ಎಳೆಯ ವಯಸ್ಸಿನಲ್ಲಿಯೇ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಭವಿಷ್ಯದಲ್ಲಿ ಬೇಕಾಗುವ ಸಂಯಮ, ಜಾಣತನ, ಸೃಜನಶೀಲತೆ, ನೆಮ್ಮದಿ ಮುಂತಾದವುಗಳನ್ನು ಕಲಿಸಿದಂತಾಗುತ್ತದೆ.
ಗಮನವನ್ನು ಕೇಂದ್ರೀಕರಿಸುತ್ತದೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ
ಧ್ಯಾನ ಒಂದು ಮಾನಸಿಕ ವ್ಯಾಯಾಮವಾಗಿದೆ. ಅದು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಮನಸ್ಸನ್ನು ಶಾಂತಗೊಳಿಸುವ ಮೂಲಕ ಮಕ್ಕಳಲ್ಲಿರುವ ಸಹಜ ಕುತೂಹಲ, ಕಲ್ಪನೆ ಮತ್ತು ಹೊಸತವನ್ನು ಪೋಷಿಸಬಹುದು. ಇದು ಅವರ ಶೈಕ್ಷಣಿಕ ಮತ್ತು ದೈನಂದಿನ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸಲು ಅತ್ಯಮೂಲ್ಯವಾಗಿದೆ.
ಮೌಲ್ಯಗಳು ಮತ್ತು ಭಾವನಾತ್ಮಕ ಬುದ್ಧಿವಂತಿಕೆ ಬೆಳಸುತ್ತದೆ
ಧ್ಯಾನದಿಂದ ಮಕ್ಕಳು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಇತರರೊಂದಿಗೆ ಸಹಾನುಭೂತಿಯಿಂದ ನಡೆದುಕೊಳ್ಳುವುದನ್ನು ಕಲಿಯುತ್ತಾರೆ. ಸುತ್ತಮುತ್ತಲಿನ ವಿಷಯಗಳಿಂದ ಹೆಚ್ಚು ಜಾಗೃತರಾಗಿರುತ್ತಾರೆ. ದಯೆ, ಕರುಣೆ, ಸಹಾನುಭೂತಿಗಳನ್ನು ಬೆಳೆಸಿಕೊಳ್ಳುತ್ತಾರೆ. ಜೀವನದಲ್ಲಿ ಬರುವ ಏರಿಳಿತಗಳಲ್ಲಿ ಶಾಂತಿಯುವಾಗಿ ವರ್ತಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.
ಉತ್ತಮ ನಡುವಳಿಕೆ ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ
ಧ್ಯಾನವು ಮಕ್ಕಳಿಗೆ ಅಗತ್ಯವಿರುವ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಇದು ಎಡಿಎಚ್‌ಡಿ ತೊಂದರೆಯಿರುವ ಮಕ್ಕಳಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ತೋರಿಸಿದೆ. ಶಾಲೆಯ ದಿನಚರಿಗಳಲ್ಲಿ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಏಕಾಗ್ರತೆ, ಗ್ರಹಿಸುವ ಕೌಶಲ, ಮತ್ತು ಶೈಕ್ಷಣಿಕ ಗುಣಮಟ್ಟ, ಉತ್ತಮ ನಡುವಳಿಕೆ ಮಕ್ಕಳದ್ದಾಗುತ್ತದೆ.
ಆಘಾತ ಮತ್ತು ಒತ್ತಡ ನಿವಾರಿಸುತ್ತದೆ
ಬಾಲ್ಯದಲ್ಲಿಯೇ ಧ್ಯಾನ ರೂಢಿಸಿಕೊಂಡರೆ ಒತ್ತಡ ಮತ್ತು ಆಘಾತವನ್ನು ಸರಿಯಾಗಿ ನಿಭಾಯಿಸಬಹುದಾಗಿದೆ. ಆದರೆ ಕೆಲವು ಮಕ್ಕಳಲ್ಲಿ ಕಂಡುಬರುವ ಆಘಾತವನ್ನು ಧ್ಯಾನದಿಂದ ಮಾತ್ರ ಪರಿಹರಿಸಲು ಸಾಧ್ಯವಾಗದಿರಬಹುದು. ಅಂತಹ ಮಕ್ಕಳಿಗೆ ಆಘಾತದಿಂದ ಹೊರಬರಲು ಕೆಲವು ಚಟುವಟಿಕೆಗಳನ್ನು ರೂಡಿಸಿಕೊಳ್ಳಬೇಕಾಗುತ್ತದೆ. ಅದು ಕ್ರಮೇಣ ಆಘಾತ ಮತ್ತು ಅದರಿಂದಾಗುವ ಒತ್ತಡ ನಿವಾರಿಸಬಲ್ಲದು.
ಮಾನಸಿಕ ಆರೋಗ್ಯ ಬಲಪಡಿಸುತ್ತದೆ
ನಿಯಮಿತವಾಗಿ ಮಾಡುವ ಧ್ಯಾನ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಬಲಪಡಿಸುತ್ತದೆ. ಒತ್ತಡ, ಆತಂಕ ನಿಭಾಯಿಸುವ ಸಾಮರ್ಥ್ಯ ತಂದುಕೊಡುತ್ತದೆ. ಇದರಿಂದ ಮಕ್ಕಳು ಸ್ವಯಂ ಅರಿವು, ಆಲೋಚನೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯುತ್ತಾರೆ. ನಿತ್ಯದ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಕಲಿಯುತ್ತಾರೆ.
ಸಾಮಾಜಿಕವಾಗಿ ವಿಕಾಸ ಹೊಂದುತ್ತಾರೆ
ಧ್ಯಾನವು ಮಕ್ಕಳಲ್ಲಿ ಜಾಣ್ಮೆ, ಮಾತನಾಡುವ ಕಲೆ, ಮತ್ತೊಬ್ಬರ ಮಾತುಗಳನ್ನು ಗಮನವಿಟ್ಟು ಕೇಳುವುದು, ಸಹಾನುಭೂತಿ ಮುಂತಾದವುಗಳನ್ನು ಕಲಿಸುತ್ತದೆ ಎಂದು ಅಧ್ಯಯನಗಳು ಸಲಹೆ ನೀಡಿವೆ. ಧ್ಯಾನದಿಂದ ಮಕ್ಕಳು ಸಾಮಾಜಿಕವಾಗಿಯೂ ವಿಕಾಸ ಹೊಂದುತ್ತಾರೆ. ಕಲಿಕೆಯ ಜೊತೆಗೆ ವಿವಿಧ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳುತ್ತಾರೆ.
ಬಾಲ್ಯದಲ್ಲಿಯೇ ಮಕ್ಕಳಿಗೆ ಧ್ಯಾನ ಹೀಗೆ ಕಲಿಸಿ
ಮಕ್ಕಳಿಗೆ ಬಾಲ್ಯದಲ್ಲಿಯೇ ಧ್ಯಾನ ಕಲಿಸುವುದು ಸುಲಭವಲ್ಲ. ನಿರ್ದಿಷ್ಟ ಸಮಯದವರೆಗೆ ಒಂದು ಜಾಗದಲ್ಲಿ ಕುಳಿತುಕೊಳ್ಳುವುದು ಸ್ವಲ್ಪ ಕಷ್ಟವೆನಿಸುತ್ತದೆ. ಅದನ್ನೇ ಕೆಲವು ಆಕರ್ಷಕ ಚಟುವಟಿಕೆಗಳ ಮೂಲಕ ಸುಲಭವಾಗಿ ಕಲಿಸಬಹುದು.
1) ನಿಮ್ಮ ಮಕ್ಕಳಿಗೆ ಸುತ್ತಮುತ್ತಲಿನ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಲು ಹೇಳಿ. ಅಲ್ಲಿರುವ ವಸ್ತುಗಳನ್ನು ಗುರುತಿಸುವ ಆಟ ಆಡಿ. ಇದು ಅವರ ಏಕಾಗ್ರತೆ ಹೆಚ್ಚಿಸುತ್ತದೆ.
2) ಮಕ್ಕಳಿಗೆ ಅವರ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಡಿಸಲು ಪ್ರೋತ್ಸಾಹಿಸಿ. ಅದೇ ರೀತಿ ಇತರರ ಭಾವನೆಗಳನ್ನು ಗೌರವಿಸುವುದನ್ನು ಕಲಿಸಿಕೊಡಿ.
3) ಪ್ರಕೃತ್ತಿಯಲ್ಲಿನ ಶಬ್ದ, ಬಣ್ಣ ಮತ್ತು ವಾಸನೆಗಳನ್ನು ಗುರುತಿಸಲು ಹೇಳಿ. ಇದು ಅವರ ಇಂದ್ರೀಯಗಳ ಜ್ಞಾನ ಹೆಚ್ಚಿಸುತ್ತದೆ.
4) ಆಹಾರದ ವಿವಿಧ ರುಚಿ ಮತ್ತು ವಿನ್ಯಾಸಗಳನ್ನು ಗುರುತಿಸಲು ಹೇಳಿ. ಆಹಾರ ತಯಾರಿಸುವಾಗ ಅವರನ್ನು ಸೇರಿಸಿಕೊಳ್ಳಿ. ಇದು ನಮ್ಮ ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸುತ್ತದೆ.
5) ಬಾಲ್ಯದಲ್ಲೇ ಧ್ಯಾನವನ್ನು ರೂಡಿಸಿಕೊಳ್ಳಲು ಓಂ ಮಂತ್ರವನ್ನು ಕಲಿಸಿ. ಒಂದು ನಿಮಿಷದಲ್ಲಿ ಎಷ್ಟು ಬಾರಿ ಓಂ ಅನ್ನು ಹೇಳಲು ಸಾಧ್ಯ ಎಂದು ಎಣಿಸುವ ಆಟ ಆಡಿ.
6) ಮಕ್ಕಳ ಮನಸ್ಸನ್ನು ಶಾಂತಗೊಳಿಸಲು ಉಸಿರಾಟ ಎಣಿಸುವ ಆಟವಾಡಿ. ಸಂಖ್ಯೆಗಳನ್ನು ಹಿಮ್ಮುಖವಾಗಿ ಎಣಿಸಲು ಹೇಳಿ. ಅದರಿಂದ ಒತ್ತಡ, ಆತಂಕ ದೂರವಾಗುತ್ತದೆ. ತಾಳ್ಮೆ ಬರುತ್ತದೆ.