Parenting Tips: ಮಕ್ಕಳನ್ನು ತಿದ್ದುವ ಭರದಲ್ಲಿ ತಾಳ್ಮೆ ಕಳೆದುಕೊಳ್ಳದಿರಿ, ಉತ್ತಮ ಪೋಷಕರೆನ್ನಿಸಿಕೊಳ್ಳಲು ಹೀಗಿರಲಿ ನಿಮ್ಮ ವರ್ತನೆ
ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಂತೆ ಜವಾಬ್ದಾರಿ ಕೂಡ ಹೆಚ್ಚುತ್ತದೆ. ಇದರಿಂದ ಒತ್ತಡವೂ ಸಹಜ. ಅಂತಹ ಸಂದರ್ಭದಲ್ಲಿ ಎಷ್ಟು ತಾಳ್ಮೆಯಿಂದ ಇದ್ದರೂ ಉತ್ತಮ. ಆದರೆ ಕೆಲವೊಮ್ಮೆ ಬೇಡವೆಂದರೂ ತಾಳ್ಮೆ ಕಳೆದುಹೋಗುತ್ತದೆ. ನೀವು ಪೋಷಕರಾಗಿದ್ದರೆ, ತಾಳ್ಮೆ ಕಳೆದುಕೊಳ್ಳದಂತೆ ಮಕ್ಕಳನ್ನು ಬೆಳೆಸುವುದು ಹೇಗೆ ಎನ್ನುವುದಕ್ಕೆ ಇಲ್ಲಿವೆ ಸಲಹೆಗಳು.
ಪೋಷಕತ್ವ ಎಂದರೆ ಸಣ್ಣಪುಟ್ಟ ಜವಾಬ್ದಾರಿಯಲ್ಲ. ಮಗು ಎಷ್ಟೇ ತುಂಟಾಟಗಳನ್ನು ಮಾಡಿದರೂ ಸಹ ಅದನ್ನು ತಾಳ್ಮೆಯಿಂದ ನಿಭಾಯಿಸುವುದು ಸವಾಲೇ ಸರಿ. ಹೀಗಾಗಿ ನಿಮ್ಮ ಪೋಷಕ ಜವಾಬ್ದಾರಿಯನ್ನು ನಿರ್ವಹಿಸುವಾಗ ನೀವು ಬಹಳ ಜಾಗರೂಕತೆಯಿಂದ ಇರಬೇಕು. ಮಗು ಏನೋ ತಪ್ಪು ಮಾಡಿದಾಗ ತೀರಾ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಅದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು. ಹೀಗಾಗಿ ಮಕ್ಕಳ ಪಾಲನೆಯ ವಿಚಾರದಲ್ಲಿ ಪೋಷಕರು ಬಹಳ ಜಾಗರೂಕರಾಗಿರಬೇಕು.
ಮಗು ಏನೇ ತಪ್ಪು ಕೆಲಸ ಮಾಡಿದರೂ ಕೂಡಲೇ ಪ್ರತಿಕ್ರಿಯೆ ನೀಡಬಾರದು. ಮೊದಲು ನೀವು ಒಂದೆರಡು ನಿಮಿಷ ಮೌನವಾಗಿ ಯೋಚಿಸಬೇಕು. ಈ ವಿಷಯದಲ್ಲಿ ಮಗುವಿಗೆ ನಾನು ಹೇಗೆ ತಿದ್ದಿ ಬುದ್ಧಿ ಹೇಳಬಹುದು ಎಂದು ಯೋಚಿಸಿ ಬಳಿಕ ಮಾತನಾಡಬೇಕು.
ಮಗುವಿನ ಭಾವನೆ ಅರ್ಥ ಮಾಡಿಕೊಳ್ಳಿ
ಮಕ್ಕಳ ವಿಚಾರಕ್ಕೆ ಬಂದಾಗ ನೀವು ಕೇವಲ ಪೋಷಕರ ಸ್ಥಾನದಲ್ಲಿ ನಿಂತು ಮಾತ್ರ ವಿಷಯವನ್ನು ಅಳೆಯುವುದು ಸರಿಯಲ್ಲ. ಬದಲಾಗಿ ಮಕ್ಕಳ ಸ್ಥಾನದಲ್ಲಿಯೂ ನಿಂತು ಯೋಚಿಸಬೇಕು. ಮಕ್ಕಳು ಆ ವಯಸ್ಸಿನಲ್ಲಿ ನಮ್ಮಂತೆ ಗಂಭೀರವಾಗಿ ಇರಬೇಕು ಎಂದು ನಾವು ನಿರೀಕ್ಷೆ ಇಟ್ಟುಕೊಳ್ಳುವುದೇ ಮೊದಲ ತಪ್ಪು. ಹೀಗಾಗಿ ಮಗುವಿನ ದೃಷ್ಟಿಕೋನದಲ್ಲಿ, ಮಗುವಿನ ಭಾವನೆಗಳ ಮೂಲಕ ವಿಷಯ ಅರ್ಥ ಮಾಡಿಕೊಳ್ಳುವುದರ ಕಡೆಗೆ ಯೋಚಿಸುವುದು ತುಂಬಾನೇ ಒಳ್ಳೆಯದು. ಮಕ್ಕಳು ಆ ವಯಸ್ಸಿನಲ್ಲಿ ತುಂಟಾಟ ಮಾಡುವುದು, ತಪ್ಪು ಮಾಡುವುದು ಸಹಜ. ಪೋಷಕರಾಗಿ ಅವರನ್ನು ತಿದ್ದಿ ಸರಿ ಮಾಡುವುದೇ ನಮ್ಮ ಕೆಲಸ. ಹೀಗಾಗಿ ತಾಳ್ಮೆ ಇಲ್ಲದೇ ಮಗುವಿನ ಪೋಷಣೆ ಮಾಡಲು ಸಾಧ್ಯವೇ ಇಲ್ಲ.
ಪ್ರತಿಕ್ರಿಯೆ ನೀಡುವ ಮುನ್ನ ಗಮನಿಸಿ
ಮಕ್ಕಳ ಎದುರು ನಾವು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವ ಮುನ್ನ ಭಾರೀ ಜಾಗರೂಕರಾಗಿರಬೇಕು. ಅಲ್ಲದೇ ನಮ್ಮ ತಪ್ಪುಗಳಿಗೆ ಮಕ್ಕಳ ಎದುರು ಕ್ಷಮೆ ಕೇಳಲು ಎಂದಿಗೂ ಹಿಂಜರಿಯಬಾರದು. ನಾವು ದೊಡ್ಡವರು ಎಂಬ ಅಹಂ ಉತ್ತಮ ಪೋಷಕ ಗುಣವನ್ನು ಹೊಂದಲು ಅವಕಾಶ ನೀಡುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ. ಕೆಲವೊಂದು ಪರಿಸ್ಥಿತಿಗಳಿಂದ ನುಣುಚಿಕೊಳ್ಳಲು ಯತ್ನಿಸುವ ಮೊದಲು ಮಕ್ಕಳ ಜೊತೆಯಲ್ಲಿ ಕುಳಿತು ತಾಳ್ಮೆಯಿಂದ ವಿಷಯದ ಬಗ್ಗೆ ಆರೋಗ್ಯಕರ ಚರ್ಚೆ ಮಾಡುವುದು ಒಳ್ಳೆಯದು.
ಕೋಪವೇ ಉತ್ತರವಲ್ಲ
ಎಲ್ಲದಕ್ಕೂ ಕೋಪವೇ ಉತ್ತರವಲ್ಲ. ಮಕ್ಕಳ ಜೊತೆ ಮಗುವಿನಂತೆ ಬೆರೆತು ಅವರಿಗೆ ಎಲ್ಲವನ್ನೂ ಕಲಿಸಬೇಕು. ತಿದ್ದಿ ತೀಡಬೇಕು. ಬೈಯುವುದರಿಂದ, ಹೊಡೆಯುವುದರಿಂದ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ ಎಂದುಕೊಂಡಿದ್ದರೆ ಅದು ನಿಮ್ಮ ಊಹೆ ಮಾತ್ರ. ಇದರಿಂದ ಮಕ್ಕಳು ನಿಮ್ಮನ್ನು ದೂರ ಮಾಡಲು ಆರಂಭಿಸಬಹುದು. ಹೀಗಾಗಿ ಮಕ್ಕಳಿಗೆ ಚಿಕ್ಕ ಪುಟ್ಟ ವಿಚಾರಗಳನ್ನು ತಾಳ್ಮೆಯಿಂದ ತಿಳಿಸಿ ಹೇಳಿ. ಮಕ್ಕಳು ದೊಡ್ಡವಾರದ ಮೇಲೆ ಅವರ ಬಾಲ್ಯ ನೀವು ಬಯಸಿದರೂ ಮರಳಿ ಬರುವುದಿಲ್ಲ. ಪೋಷಕರಾಗಿ ನಿಮ್ಮ ಮಕ್ಕಳಿಗೆ ಉತ್ತಮ ಬಾಲ್ಯವನ್ನು ಕಟ್ಟಿಕೊಡುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಹೀಗಾಗಿ ಆದಷ್ಟು ಜಾಗರೂಕತೆಯಿಂದ ಪೋಷಕನ ಪಾತ್ರವನ್ನು ನಿರ್ವಹಿಸಿ.
ವಿಭಾಗ