Parenting: ಮಗು ಶಾಲೆಗೆ ಹೋಗಲು ಹಟ ಮಾಡುತ್ತಿದೆಯೆ; ಮಕ್ಕಳು ಶಾಲೆಯನ್ನು ಪ್ರೀತಿಸುವಂತೆ ಮಾಡಲು ಇಲ್ಲಿದೆ ಟಿಪ್ಸ್
School and Children: ಜೂನ್ ತಿಂಗಳು ಬಂತೆಂದರೆ ಮಕ್ಕಳಿಗೆ ಶಾಲೆ ಆರಂಭವಾಗುವ ಚಿಂತೆ. ರಜೆಯನ್ನು ಸಂತಸದಿಂದ ಕಳೆಯುವ ಮಕ್ಕಳು ಪುನಃ ಶಾಲೆಗೆ ಹೋಗಬೇಕು ಎಂದಾಗ ಬೇಸರಗೊಳ್ಳುವುದು ಸಹಜ. ಆ ಕಾರಣಕ್ಕೆ ಮೊದಲ ದಿನ ಶಾಲೆಗೆ ಹೋಗಲು ಹಿಂದೇಟು ಹಾಕುತ್ತವೆ. ಆದರೆ ಮಕ್ಕಳು ಶಾಲೆಯನ್ನು ಪ್ರೀತಿಸುವಂತೆ ಮಾಡಿ, ಶಾಲೆಗೆ ಕಳುಹಿಸಲು ಪೋಷಕರಿಗೆ ನೆರವಾಗುವ ಟಿಪ್ಸ್ ಇಲ್ಲಿದೆ.
ಜೂನ್ ತಿಂಗಳು ಆರಂಭವಾಗಿ ಶಾಲೆಯೂ ಶುರುವಾಗಿದೆ. ಮಕ್ಕಳೆಲ್ಲಾ ಶಾಲೆಯಲ್ಲಿ ಮೊದಲ ದಿನವನ್ನು ಸಂಭ್ರಮದಿಂದ ಕಳೆದು ಬಂದಿದ್ದಾರೆ. ಕೆಲವು ಮಕ್ಕಳಿಗೆ ಹೊಸ ಶಾಲೆ, ಸ್ನೇಹಿತರು. ಇನ್ನೂ ಕೆಲವರಿಗೆ ಹಳೆ ಶಾಲೆ, ಹಳೆ ಸ್ನೇಹಿತರು. ಶಿಕ್ಷಕರು ಕೂಡ ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಸ್ವಾಗತಿಸಿದ್ದಾರೆ.
ಈ ಎಲ್ಲದರ ನಡುವೆ ಇಂದು ಸಾಕಷ್ಟು ಮಕ್ಕಳು ಶಾಲೆಗೆ ಹೋಗಿಲ್ಲ. ಎರಡು ತಿಂಗಳ ದೀರ್ಘರಜೆಯಲ್ಲಿ ಪೋಷಕರು ಹಾಗೂ ಮನೆಯವರೊಂದಿಗೆ ರಜೆಯ ಮಜ ಅನುಭವಿಸಿದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಹೊಟ್ಟೆ ನೋವು, ತಲೆನೋವಿನ ನೆಪ ಹೇಳಿ ಮನೆಯಲ್ಲೇ ಉಳಿಯುತ್ತಿದ್ದಾರೆ. ಹೊಸ ಶಾಲೆಯಾದರಂತೂ ಭಯದಿಂದಲೇ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಹಾಗಂತ ಸುಮ್ಮನೆ ಬಿಡುವ ಹಾಗಿಲ್ಲವಲ್ಲಾ. ಹೇಗಾದರೂ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಅಲ್ಲದೆ ಶಾಲೆಯನ್ನು ಪ್ರೀತಿಸುವಂತೆ ಮಾಡಬೇಕು.
ಮಕ್ಕಳು ಶಾಲೆಗೆ ಖುಷಿಪಟ್ಟು ಹೋಗುವಂತೆ ಮಾಡಲು ಹಾಗೂ ಶಾಲೆಯನ್ನು ಪ್ರೀತಿಸುವಂತೆ ಮಾಡಲು ಪರಿಣಾಮ ಸಲಹೆಗಳು ಇಲ್ಲಿವೆ.
ಮಕ್ಕಳು ಸರಿಯಾಗಿ ನಿದ್ದೆ ಮಾಡುವಂತೆ ನೋಡಿಕೊಳ್ಳಿ
ಹಲವು ಮಕ್ಕಳು ನಿದ್ದೆಯ ಕಾರಣದಿಂದಲೂ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ರಾತ್ರಿ ತಡವಾಗಿ ಮಲಗುವ ಅಭ್ಯಾಸ ಇರುವ ಮಕ್ಕಳು ಬೆಳಿಗ್ಗೆ ಬೇಗ ಏಳುವುದಿಲ್ಲ. ಇದರಿಂದ ಶಾಲೆಗೆ ಹೋಗಲು ಹಟ ಮಾಡಬಹುದು. ಆ ಕಾರಣಕ್ಕೆ ಶಾಲೆ ಶುರುವಾದ ಮೇಲೆ ಮಕ್ಕಳಿಗೆ ಬೇಗನೆ ಮಲಗಲು ಅಭ್ಯಾಸ ಮಾಡಿಸಬೇಕು.
ಒಂದೆರಡು ದಿನ ಮಕ್ಕಳನ್ನು ಶಾಲೆಗೆ ಬಿಟ್ಟು ಬನ್ನಿ
ಮಕ್ಕಳು ಹೊಸ ಶಾಲೆ ಅಥವಾ ಮೊದಲ ದಿನದ ಶಾಲೆಗೆ ಹೋಗುವುದು ಎಂದಾಗ ಹಿಂದೇಟು ಹಾಕುವುದು ಸಹಜ. ಅವರು ಶಾಲಾ ಬಸ್ ಅಥವಾ ಆಟೊದಲ್ಲಿ ಹೋಗಲು ಹಿಂದೇಟು ಹಾಕಬಹುದು. ಆ ಕಾರಣಕ್ಕೆ ಮೊದಲ ಬಾರ ಅಥವಾ ಮೊದಲ ಎರಡು ಮೂರು ದಿನ ಮಕ್ಕಳನ್ನು ಶಾಲೆವರೆಗೆ ಬಿಟ್ಟು ಬರುವುದು ಉತ್ತಮ.
ಹೊಸ ಬಟ್ಟೆ ಬ್ಯಾಗ್, ಚಪ್ಪಲಿ ಕೊಡಿಸಿ
ಚಿಕ್ಕ ಮಕ್ಕಳು ಹೊಸ ಬಟ್ಟೆ, ಬ್ಯಾಗ್, ಛತ್ರಿ ಇದನ್ನೆಲ್ಲಾ ತಂದು ಶಾಲೆಗೆ ಹೋಗು ಎಂದರೆ ಹೋಗಬಹುದು. ಆಮಿಷಗಳನ್ನು ಒಡ್ಡುವ ಮೂಲಕವು ಮಕ್ಕಳಲ್ಲಿ ಶಾಲೆಯ ಮೇಲೆ ಪ್ರೀತಿ ಬರುವಂತೆ ಮಾಡಬಹುದು.
ಗದರಿಸಬೇಡಿ
ಮಕ್ಕಳು ಶಾಲೆಗೆ ಹೋಗಿಲ್ಲ ಎಂದಾಕ್ಷಣ ಗದರುವುದು, ಬಯ್ಯುವುದು, ಹೊಡೆಯುವುದು ಮಾಡದಿರಿ. ಇದರಿಂದ ಅವರು ನಾಳೆಯೂ ಶಾಲೆಗೆ ಹೋಗದಿರಬಹುದು. ಸಮಾಧಾನದಿಂದ ಒಂದು ಹೋಗದೇ ಇದ್ದರೆ ಪರ್ವಾಗಿಲ್ಲ, ನಾಳೆ ಹೋಗು, ನಾಳೆ ನಿನ್ನ ಇಷ್ಟದ ಬಟ್ಟೆ ಧರಿಸಿ ಹೋಗು, ನಾಳೆ ನಿನಗೆ ಇಷ್ಟದ ತಿಂಡಿ ಮಾಡಿಕೊಡುತ್ತೇನೆ, ಅದನ್ನು ಬಾಕ್ಸ್‌ನಲ್ಲಿ ಹಾಕಿಕೊಂಡು ಹೋಗಿ ಶಾಲೆಯಲ್ಲಿ ಎಲ್ಲರಿಗೂ ಕೊಡು ಈ ರೀತಿ ಹೇಳಿ ರಮಿಸುವ ಮೂಲಕ ಮಗುವಿನ ಮನವೊಲಿಸಿ.
ಓದಲು ಒತ್ತಡ ಹೇರಬೇಡಿ
ಶಾಲೆ ಆರಂಭವಾದ ಮೊದಲ ದಿನದಲ್ಲೇ ಅಥವಾ ಮೊದಲ ವಾರದಲ್ಲೇ ಓದು, ಬರೆ, ಹೋಂವರ್ಕ್ ಮಾಡು ಎಂದು ಒತ್ತಡ ಹೇರಬೇಡಿ. ಈ ರೀತಿ ಒತ್ತಡ ಹೇರುವುದರಿಂದ ಮಗು ಶಾಲೆಯನ್ನು ದ್ವೇಷಿಸಬಹುದು. ರಜೆಯ ಗುಂಗಿನಿಂದ ಹೊರ ಬರಲು ಒಂದಿಷ್ಟು ಸಮಯ ನೀಡಿ.
ಚೆನ್ನಾಗಿ ಡ್ರೆಸ್ ಮಾಡಿ
ಮಗುವಿನ ಯೂನಿಫಾರ್ ಇದ್ದರೂ ಕೂಡ ಚೆನ್ನಾಗಿ ಡ್ರೆಸ್ ಮಾಡಿ. ಮ್ಯಾಚಿಂಗ್ ಬಳೆ, ರಿಬ್ಬನ್ ತೊಡಿಸಿ. ಚೆಂದಾಗಿ ಡ್ರೆಸ್ ಮಾಡಿದ ಮಕ್ಕಳು ಹೊರಗಡೆ ಹೊರಡುವ ಖುಷಿಯಲ್ಲಿ ಶಾಲೆಗೆ ಹೋಗಬಹುದು.
ಶಿಕ್ಷಕರ ಜೊತೆ ಮಾತನಾಡಿ
ಮಗು ಶಾಲೆಗೆ ಹೋಗಲು ಹಿಂಜರಿಯಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಿ. ಶಿಕ್ಷಕರ ಬಳಿ ಒಮ್ಮೆ ಮಾತನಾಡಿ. ಆರಂಭದಲ್ಲಿ ಮಗು ಶಾಲೆಗೆ ಬಾರದೇ ಇರುವುದಕ್ಕೆ ಗದುರುವುದು, ಬಯ್ಯುವುದು ಮಾಡಬೇಡಿ ಎಂದು ಹೇಳಿ, ಅಲ್ಲದೆ ಮಗು ಶಾಲೆಗೆ ಬರಲು ಹೆದರುತ್ತಿದೆ ಎಂದು ಸ್ವಲ್ಪ ದಿನ ಮಗುವಿನ ಮೇಲೆ ಗಮನ ಹರಿಸಿ ಎಂಬುದನ್ನು ಹೇಳಿ.
ಈ ಕೆಲವು ಸಲಹೆಗಳನ್ನು ಅನುಸರಿಸಿ ಮಕ್ಕಳು ಖುಷಿಯಿಂದ ಶಾಲೆಗೆ ಹೋಗುವಂತೆ ಮಾಡಬಹುದು.