ನಿಮ್ಮ ಮಗು ಪರೀಕ್ಷೆ ಅಂದ್ರೆ ಭಯಬೀಳುತ್ತಾ? ಮಕ್ಕಳಲ್ಲಿ ಕಂಡುಬರುವ ಪರೀಕ್ಷಾ ಒತ್ತಡ, ಆತಂಕ ದೂರಮಾಡಲು 6 ಸರಳ ತಂತ್ರಗಳು
Parenting Tips: ಪರೀಕ್ಷೆಅಂದ್ರೆ ಸಾಕು ಮಕ್ಕಳು ಭಯ, ಆತಂಕಕ್ಕೆ ಒಳಗಾಗುವುದು ಸಾಮಾನ್ಯ. ಇದು ಅವರಮೆದುಳಿನ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ಪರೀಕ್ಷೆ ಭಯವನ್ನು ದೂರಮಾಡಲು ಮತ್ತು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಪೋಷಕರ ಜವಾಬ್ದಾರಿ ಮಹತ್ತರವಾದುದು. ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಸಲಹೆಗಳನ್ನು ಅನುಸರಿಸಬಹುದು.
Parenting Tips: ಪರೀಕ್ಷೆ ಅನ್ನೋ ಪದ ಕೇಳಿದ್ರೆ ಸಾಕು ಬಹಳಷ್ಟು ಮಕ್ಕಳು ಆತಂಕಕ್ಕೆ ಒಳಗಾಗುತ್ತಾರೆ. ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯು ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಹೀಗಾಗಿ ಅನೇಕ ಮಕ್ಕಳು ಪರೀಕ್ಷೆ ಅಂದರೆ ಸಾಕು ಭಯಬೀಳುತ್ತಾರೆ. ಇದು ಅವರ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳನ್ನು ತರುತ್ತದೆ. ಅಧ್ಯಯನದ ಮೇಲೆ ಕೇಂದ್ರೀಕರಿಸುವ ಬದಲು, ಅದು ಎಲ್ಲವನ್ನೂ ಮರೆಯುವಂತೆ ಮಾಡುತ್ತದೆ. ಪರೀಕ್ಷೆಯ ಭಯದಿಂದ ಅವರ ಪ್ರಯತ್ನಗಳು ಮತ್ತು ಸಿದ್ಧತೆಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಅದನ್ನು ನಿವಾರಿಸುವ ಪ್ರಯತ್ನವನ್ನು ಪಾಲಕರು ಅಥವಾ ಪೋಷಕರು ಮಾಡಬೇಕು.
ನಿಮ್ಮ ಮಗು ಪರೀಕ್ಷೆ ಅಂದ್ರೆ ಭಯಬೀಳುತ್ತಾ
ನಿಮ್ಮ ಮಕ್ಕಳು ಸಹ ಪರೀಕ್ಷೆಗಳಿಗೆ ಹೆದರುತ್ತಿದ್ದರೆ ಪೋಷಕರಾಗಿ ನೀವು ಅವರಿಗೆ ಸಹಾಯ ಮಾಡಬೇಕು. ಪರೀಕ್ಷೆ ಸಮೀಪಿಸುತ್ತಿರುವುದರಿಂದ, ಅವರ ಬಗ್ಗೆ ಗಮನ ಹರಿಸುವುದು ಮತ್ತು ಅವರ ಭಯ ಹಾಗೂ ಆತಂಕವನ್ನು ದೂರಮಾಡುವುದು ಪೋಷಕರಾಗಿ ನಿಮ್ಮ ಕರ್ತವ್ಯ. ನೀವು ಅವರಿಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿ ಕೊಡಬೇಕು. ಅವರ ಭಯವನ್ನು ಹೋಗಲಾಡಿಸಿ, ಅವರಲ್ಲಿ ಅಧ್ಯಯನದಲ್ಲಿ ಆಸಕ್ತಿ ಮೂಡಿಸುವುದಕ್ಕೆ ಪ್ರಯತ್ನ ಪಡಬೇಕು. ಕೆಲವರು ಸಾಂಪ್ರದಾಯಿಕ ತಂತ್ರಗಳನ್ನು ಅನುಸರಿಸುತ್ತಿರಬಹುದು. ಇನ್ನು ಕೆಲವರು ಪರಿಣತರ ಸಲಹೆ ಪಡೆದು ಮುಂದುವರಿಯುತ್ತಿರಬಹುದು. ಇವೆಲ್ಲವೂ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಪ್ರಯತ್ನಗಳಾಗಿವೆ.
ಮಗುವಿನ ಒತ್ತಡ, ಆತಂಕ ದೂರಮಾಡಲು ಆರು ಸರಳ ತಂತ್ರಗಳು
ಪರೀಕ್ಷಾ ಕಾಲಘಟ್ಟದಲ್ಲಿ ಮಗುವಿಗೆ ಒತ್ತಡ, ಆತಂಕ ಕಾಡುವುದು ಸಹಜ. ಅಂತಹ ಒತ್ತಡ, ಆತಂಕ ದೂರ ಮಾಡಬೇಕಾದ್ದು, ಪಾಲಕರು ಮತ್ತು ಶಿಕ್ಷಕರ ಆದ್ಯ ಹೊಣೆಗಾರಿಕೆ. ಹಾಗಾಗಿ, ಮಕ್ಕಳು ಪರೀಕ್ಷೆಗೆ ಉತ್ತಮ ರೀತಿಯಲ್ಲಿ ತಯಾರಾಗಲು ನೀವು ಸಹಾಯ ಮಾಡಲು ಬಯಸಿದರೆ ಈ ಸಲಹೆಗಳನ್ನು ಪಾಲಿಸಬಹುದು.
1) ಒತ್ತಡ ಹೇರಬೇಡಿ: ಪರೀಕ್ಷೆ ವಿಷಯಕ್ಕೆ ಬಂದಾಗ ಕೆಲವು ಪೋಷಕರು ತಮ್ಮ ಮಕ್ಕಳಿಗಿಂತ ಹೆಚ್ಚು ಉದ್ವಿಗ್ನರಾಗುತ್ತಾರೆ. ಪರೀಕ್ಷೆ ಸಮೀಪಿಸುತ್ತಿದೆ. ಅವರು ಓದುವುದು, ಬರೆಯುವುದು, ಉತ್ತಮ ಅಂಕಗಳನ್ನು ಪಡೆಯುವುದು ಮುಂತಾದ ವಿಷಯಗಳನ್ನು ಮತ್ತೆ ಮತ್ತೆ ಹೇಳುತ್ತಾರೆ. ಈ ರೀತಿ ಒತ್ತಡ ಹೇರುವುದು ಪೋಷಕರು ಮಾಡುವ ಬಹಳ ದೊಡ್ಡ ತಪ್ಪು. ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಪದೇಪದೆ ಪರೀಕ್ಷೆಗಳನ್ನು ನೆನಪಿಸಬಾರದು ಹಾಗೆಯೇ ಪ್ರಶ್ನೆಗಳನ್ನು ಸಹ ಕೇಳಬಾರದು. ಈ ರೀತಿ ಮಾಡುವುದರಿಂದ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದು ಅವರಲ್ಲಿನ ಭಯ ಮತ್ತಷ್ಟು ಹೆಚ್ಚಾಗಿ, ಒತ್ತಡಕ್ಕೆ ಸಿಲುಕುತ್ತಾರೆ.
2) ಸಮಸ್ಯೆಗಳನ್ನು ಆಲಿಸಿ: ಪರೀಕ್ಷೆ ಸಮೀಪಿಸುತ್ತಿದ್ದ ಹಾಗೆ ಮಕ್ಕಳು ಹೆಚ್ಚಾಗಿ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹೊರಗೆ ಹೋಗುವುದಿಲ್ಲ. ಅವರು ಮನೆಯಲ್ಲಿಯೇ ಸಾಕಷ್ಟು ಸಮಯ ಕಳೆಯುತ್ತಾರೆ. ಹೀಗಾಗಿ, ಮಕ್ಕಳ ಸಮಸ್ಯೆಗಳನ್ನು ಆಲಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳುವುದು ಬಹಳ ಮುಖ್ಯ. ಸಮಸ್ಯೆಗಳನ್ನು ಆಲಿಸಿದ ನಂತರ, ನೀವು ಅವರಿಗೆ ಕೆಲವು ಸಲಹೆಗಳನ್ನು ನೀಡಬಹುದು. ಇದರಿಂದ ಅವರು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಬಹುದು. ನಿಮ್ಮ ಸಲಹೆಗಳನ್ನು ಇಷ್ಟಪಟ್ಟರೆ, ಮಕ್ಕಳು ಖಂಡಿತವಾಗಿಯೂ ಅವುಗಳನ್ನು ಅನುಸರಿಸುತ್ತಾರೆ. ಆದರೆ, ಒತ್ತಾಯಿಸುವುದು ತಪ್ಪು. ನಿಧಾನವಾಗಿ ಕುಳಿತು ತಿಳಿ ಹೇಳಬಹುದು.
3) ಕಲಿಕೆಯ ವಾತಾವರಣವನ್ನು ರಚಿಸಿ: ಮಕ್ಕಳಲ್ಲಿ ಪರೀಕ್ಷೆಯ ಭಯವನ್ನು ತೊಡೆದುಹಾಕಲು ಬಯಸಿದರೆ, ನೀವು ಅವರಿಗೆ ಉತ್ತಮ ಕಲಿಕೆಯ ವಾತಾವರಣವನ್ನು ರಚಿಸುವುದು ಮುಖ್ಯ. ಓದಿ-ಓದಿ ಬೇಸರವಾಗುವುದು ಸಹಜ. ಬೇಸರಗೊಂಡಾಗ ಕೊಂಚ ವಿಚಲಿತರಾಗುವುದು ಕೂಡ ಸ್ವಾಭಾವಿಕ. ಇದರಿಂದ ಅವರ ಮನಸ್ಸು ಬೇರೆ ಕಡೆಗೆ ತಿರುಗದಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯ. ಅಧ್ಯಯನ ಮಾಡುವ ಕೋಣೆಯಲ್ಲಿ ಸ್ಮಾರ್ಟ್‌ಫೋನ್, ವಿಡಿಯೋ ಗೇಮ್ ಸೇರಿದಂತೆ ಇತರೆ ವಸ್ತುಗಳು ಇಲ್ಲ ಎಂಬುದನ್ನು ಗಮನಿಸಿ. ಅಲ್ಲದೆ, ಕೋಣೆಯಲ್ಲಿ ಸಾಕಷ್ಟು ಗಾಳಿ, ಬೆಳಕಿನ ವ್ಯವಸ್ಥೆಯೂ ಇರಬೇಕು. ಕುಳಿತು ಓದಲು ಆರಾಮದಾಯಕ ಕುರ್ಚಿಯನ್ನು ನೀಡಿ.
4) ಮುಂಚಿತ ತಯಾರಿಗೆ ಪ್ರೋತ್ಸಾಹಿಸಿ: ಪರೀಕ್ಷೆ ಇನ್ನೇನು ಹತ್ತಿರದಲ್ಲಿದೆ ಎನ್ನುವಾಗ ಓದುವುದಲ್ಲ ಪ್ರತಿದಿನ ಓದಲು ಪ್ರೇರೇಪಿಸಬೇಕು. ಕೊನೆಯ ಕ್ಷಣದಲ್ಲಿ ಹೆದರದೆ ಮುಂಚಿತವಾಗಿ ತಯಾರಿ ಮಾಡಲು ಅವರನ್ನು ಪ್ರೋತ್ಸಾಹಿಸಬೇಕು. ಈ ವೇಳೆ, ಅತ್ಯಂತ ಕಷ್ಟಕರವಾದ ವಿಷಯಗಳನ್ನು ವಿಭಜಿಸಿ, ಅವುಗಳನ್ನು ಹೆಚ್ಚು ಓದಿಸಿ. ಕಷ್ಟಕರವಾದವುಗಳನ್ನು ಮುಂಚಿತವಾಗಿ ಕಲಿಯುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪರೀಕ್ಷೆಯ ಭಯ ಕಡಿಮೆಯಾಗುತ್ತದೆ ಮತ್ತು ಪರೀಕ್ಷೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
5) ವೇಳಾಪಟ್ಟಿ ಹೊಂದಿಸಿ: ಮಗುವಿನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವಿಷಯಕ್ಕೆ ವೇಳಾಪಟ್ಟಿಯನ್ನು ನಿಗದಿಪಡಿಸಿ. ವೇಳಾಪಟ್ಟಿಯನ್ನು ನಿಗದಿಪಡಿಸುವುದರಿಂದ ಕೊನೆಯ ಸಮಯದಲ್ಲಿ ಯಾವುದು ಓದುವುದು ಎಂಬ ಗೊಂದಲ ಕಡಿಮೆಯಾಗುತ್ತದೆ. ಹಾಗೆಯೇ ಭಯ ಮತ್ತು ಆತಂಕ ಕಡಿಮೆಯಾಗುತ್ತದೆ.
6) ವೈದ್ಯರನ್ನು ಸಂಪರ್ಕಿಸಿ: ಇಷ್ಟೆಲ್ಲಾ ಕಾಳಜಿ ವಹಿಸಿದ ನಂತರವೂ, ಮಕ್ಕಳು ಪರೀಕ್ಷೆ ಬಗ್ಗೆ ಭಯಪಟ್ಟರೆ, ಅವರು ಮಾನಸಿಕವಾಗಿ ದುರ್ಬಲರಾಗಿದ್ದಾರೆ ಎಂದರ್ಥ. ಹೀಗಾಗಿ ನೀವು ತಕ್ಷಣ ಮನೋವೈದ್ಯರನ್ನು ಸಂಪರ್ಕಿಸಬೇಕಾದುದು ಅಗತ್ಯ. ಈ ಮೂಲಕ ಮಕ್ಕಳಿಗೆ ಸಲಹೆ ನೀಡಿ ಮತ್ತು ಸೂಕ್ತ ರೀತಿಯಲ್ಲಿ ಅವರ ಮನಸ್ಸನ್ನು ಗಟ್ಟಿಗೊಳಿಸುವ ಕೆಲಸಮಾಡಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)