Parenting Tips: ಮಗುವಿನ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹೇಗಿರಬೇಕು? ಇಲ್ಲಿವೆ ಉಪಯುಕ್ತ ಸಲಹೆಗಳು
Parenting: ಮಕ್ಕಳನ್ನು ಸಲಹುವುದು ಎಂದರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ನೀವು ಮಕ್ಕಳನ್ನು ಬೆಳೆಸುತ್ತಿರುವ ರೀತಿ ಸರಿಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲ ಪೋಷಕರಿಗೂ ಇರುತ್ತದೆ. ಸಮಾಜದಲ್ಲಿ ನಿಮ್ಮ ಮಗು ಉತ್ತಮ ವ್ಯಕ್ತಿಯಾಗಿ ಬೆಳೆಯಲು ಪೋಷಕರು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದಕ್ಕೆ ಪ್ರಮುಖ ಸಲಹೆಗಳು ಇಲ್ಲಿವೆ.
Parenting: ಮಗುವಿನ ಜೀವನದ ಆರಂಭದ ಕೆಲವು ವರ್ಷಗಳ ಅವರ ಆರೋಗ್ಯ ಹಾಗೂ ಬೆಳವಣಿಗೆಗಳ ಮೇಲೆ ನಿರ್ಣಾಯಕ ಪರಿಣಾಮಗಳನ್ನು ಬೀರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಸಾಮಾಜಿಕವಾಗಿ, ಭಾವಾನಾತ್ಮಕವಾಗಿ ಹಾಗೂ ಶೈಕ್ಷಣಿಕವಾಗಿ ಯೋಗ್ಯ ಎನಿಸುವ ಪರಿಸರದಲ್ಲಿಯೇ ಬೆಳೆಯಬೇಕು. ಸೂಕ್ತ ನಿದ್ರೆ, ವ್ಯಾಯಾಮ ಹಾಗೂ ಸರಿಯಾದ ಪೋಷಣೆ ಮತ್ತು ಆಹಾರ ಕೂಡಾ ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಪ್ರತಿಯೊಂದು ಹಂತದಲ್ಲೂ ಪೋಷಕರು ಮಗುವಿನ ಬೆಳವಣಿಗೆ ಸೂಕ್ತವಾದ ರೀತಿಯಲ್ಲಿ ಆಗುತ್ತಿದೆಯೇ ಎಂಬುದನ್ನು ಗಮನಿಸುವುದು ತುಂಬಾನೇ ಮುಖ್ಯವಾಗಿದೆ.
ಮಗುವಿನ ಬೆಳವಣಿಗೆ ಎಂದರೇನು ?
ಮಗುವು ತನ್ನ ವಯಸ್ಸಿಗೆ ಅನುಗುಣವಾಗಿ ದೈಹಿಕವಾಗಿ ಹಾಗೂ ಭಾವನಾತ್ಮವಾಗಿ ಬೆಳಯಲು ಸೂಕ್ತವಾದ ಅವಕಾಶವನ್ನು ಕಲ್ಪಿಸಿಕೊಡಬೇಕು. ಇದರ ಪ್ರಮುಖ ಉಸ್ತುವಾರಿ ಪೋಷಕರದ್ದೇ ಆಗಿರುತ್ತದೆ. ಮಗುವು ವಯಸ್ಸಿಗೆ ತಕ್ಕಂತೆ ಕಲಿಯುತ್ತಾ ಹೋಗುವುದು ಹಾಗೂ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಮಾರ್ಪಾಡಾಗುವುದರಲ್ಲಿ ಪೋಷಕರ ಪಾತ್ರ ಮುಖ್ಯವಾಗಿರುತ್ತದೆ.
ಮಗುವಿನ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹೇಗಿರಬೇಕು..?
ಮಕ್ಕಳು ತಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಹೇಗೆ ವರ್ತಿಸಬೇಕು ಎನ್ನುವುದರ ಬಗ್ಗೆ ಪೋಷಕರು ನಿರ್ದೇಶನ ನೀಡುತ್ತಾ ಹೋದಂತೆ ಮಕ್ಕಳು ಹೆಚ್ಚು ಜಾಗೃತರಾಗುತ್ತಾರೆ. ಆದರೆ ಪೋಷಕರು ಮಕ್ಕಳಿಗೆ ಹೊರಗಿನ ವಾತಾವರಣದಲ್ಲಿ ಹೇಗೆ ವರ್ತಿಸಬೇಕು ಎನ್ನುವುದರನ್ನು ಸರಿಯಾದ ರೀತಿಯಲ್ಲಿ ಕಲಿಸದೇ ಹೋದರೆ ಮಕ್ಕಳು ಹಿರಿಯರಿಗೆ ಗೌರವ ನೀಡುವುದನ್ನು ಮರೆತುಬಿಡಬಹುದು. ಹೀಗಾಗಿ ಮಕ್ಕಳಿಗೆ ನಾವು ಏನನ್ನೂ ಸರಿಯಾಗಿ ಕಲಿಸದೇ ಹೋದರೆ ಮಕ್ಕಳ ಸ್ಥಿತಿ ಏನಾಗಬಹುದು ಎಂಬ ಕಾಳಜಿ ಪೋಷಕರಿಗೆ ಇರುವುದು ಅತ್ಯಗತ್ಯವಾಗಿದೆ.
ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪೋಷಕರು ಕಾಳಜಿ ವಹಿಸಬೇಕಾದ ವಿಷಯಗಳಿವು
ಮಕ್ಕಳ ಜೊತೆ ಮಾತನಾಡುತ್ತಿರಿ : ಪುಟಾಣಿ ಮಕ್ಕಳು ಅಳುವುದು ಹಾಗೂ ತಮ್ಮ ಚಲನೆಯ ಮೂಲಕವೇ ಹೆಚ್ಚು ಸಂವಹನ ನಡೆಸುತ್ತವೆ. ಮೊದಲ ಬಾರಿಗೆ ಪೋಷಕರಾದವರಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸವೇ ಸರಿ. ಇಂಥಹ ಸಂದರ್ಭದಲ್ಲಿ ನಾವು ತಾಳ್ಮೆಯನ್ನು ಕಳೆದುಕೊಳ್ಳದೆ ಮಕ್ಕಳಿಗೆ ಮಾತನಾಡುವುದನ್ನು ಕಲಿಸಬೇಕು. ಮಕ್ಕಳ ಚಟುವಟಿಕೆಗಳಲ್ಲಿ ನೀವೂ ಭಾಗಿಯಾಗಿ. ಮಕ್ಕಳಿಗೆ 2 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಮಕ್ಕಳ ಶಬ್ದಕೋಶ ಸಾಮರ್ಥ್ಯ ಕೂಡಾ ಹೆಚ್ಚುತ್ತದೆ. ಮಕ್ಕಳ ಮಾತುಗಳನ್ನು ನೀವು ನಿರ್ಲಕ್ಷ್ಯ ಮಾಡುವಂತಿಲ್ಲ. ಮಗುವಿನ ಬೆಳವಣಿಗೆಗೆ ಇದು ಅತ್ಯಮೂಲ್ಯವಾಗಿದೆ.
ಮಕ್ಕಳಲ್ಲಿ ಭಾಷಾ ಕೌಶಲ್ಯ ಹೆಚ್ಚಿಸುವುದು
ಮಕ್ಕಳು ಎಲ್ಲವನ್ನೂ ಕಲಿತುಕೊಳ್ಳಲು ಸಿದ್ಧರಾಗಿಯೇ ಜನಿಸಿರುತ್ತಾರೆ. ಮಗು ತನ್ನ ಮೂರು ವರ್ಷ ವಯಸ್ಸಿನ ಒಳಗೆ ಪ್ರತಿಯೊಂದು ಭಾಷೆಯ ಪ್ರತಿಯೊಂದು ಶಬ್ದವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೀಗಾಗಿ ನೀವು ಮಕ್ಕಳಿಗೆ ಭಾಷಾ ಕೌಶಲ್ಯವನ್ನು ಸುಧಾರಿಸಲು ನೆರವಾಗಬೇಕು.
ಸಂವಹನ ಕೌಶಲ್ಯ ಅಭಿವೃದ್ಧಿಪಡಿಸಿ
ಇತರರೊಂದಿಗೆ ಉತ್ತಮ ಸಂವಹನ ನಡೆಸುವುದನ್ನು ಕಲಿತುಕೊಳ್ಳುವುದು ಮನುಷ್ಯನಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ಮಗುವಿನ ಪ್ರಾಯ ಇರುವಾಗಲೇ ಆರಂಭವಾಗಬೇಕು. ನಿಮ್ಮ ಮಕ್ಕಳಿಗೆ ಉತ್ತಮ ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎನ್ನುವುದನ್ನು ಮರೆಯುವಂತಿಲ್ಲ .
ವಿಭಾಗ