ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದುಕೊಂಡಿರುವ ಪೋಷಕರೇ ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ

Parenting tips: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದುಕೊಂಡಿರುವ ಪೋಷಕರೇ ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ

Parenting tips: ನಮ್ಮ ಮಕ್ಕಳಿಗೆ ಉತ್ತಮ ಗುಣ - ನಡತೆಗಳನ್ನು ಕಲಿಸಬೇಕು ಎಂದುಕೊಳ್ಳುವ ನಾವು ಪೋಷಕರಾಗಿ ಮಕ್ಕಳೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನೇ ಮರೆತುಬಿಡುತ್ತೇವೆ. ಆದರೆ ಪುಟ್ಟ ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ಪೋಷಕರಾಗಿ ನೀವು ಯಾವೆಲ್ಲ ವಿಚಾರಗಳ ಮೇಲೆ ಗಮನಹರಿಸಬೇಕು ಎಂಬುದಕ್ಕೆ ಮಾಹಿತಿ ಇಲ್ಲಿದೆ..

ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪೋಷಕರಿಗೆ ಸಲಹೆ (ಪ್ರಾತಿನಿಧಿಕ ಚಿತ್ರ)
ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪೋಷಕರಿಗೆ ಸಲಹೆ (ಪ್ರಾತಿನಿಧಿಕ ಚಿತ್ರ)

ಮಕ್ಕಳಿಗೆ ಎಲ್ಲದಕ್ಕಿಂತ ಉತ್ತಮವಾಗಿದ್ದನ್ನು ನೀಡಬೇಕು. ಅವರಿಗೆ ಶಿಸ್ತು, ನಡತೆ, ಉತ್ತಮ ಗುಣ, ಜೀವನವನ್ನು ಎದುರಿಸುವ ರೀತಿ ಇವೆಲ್ಲವನ್ನೂ ಸೂಕ್ತವಾಗಿ ತಿಳಿಸಬೇಕು ಎನ್ನುವುದು ಪ್ರತಿಯೊಬ್ಬ ಪೋಷಕನ ಕನಸು. ದಯಾ ಗುಣಗಳನ್ನು ಹೊಂದಿರುವ ಮಕ್ಕಳನ್ನು ಬೆಳೆಸಬೇಕು ಎಂದರೆ ನಾವು ನೀಡುವ ಸಂಸ್ಕಾರ ಕೂಡ ಅದೇ ರೀತಿ ಇರಬೇಕು. ನಮ್ಮ ಮಕ್ಕಳೊಂದಿಗೆ ನಾವು ಸುರಕ್ಷಿತವಾದ ಸಂಬಂಧವನ್ನು ಹೊಂದುವುದು ನಾವು ಅವರಿಗೆ ನೀಡಬಹುದಾದ ಒಂದು ದೊಡ್ಡ ಉಡುಗೊರೆಯೇ ಆಗಿದೆ. ಮಕ್ಕಳಿಗೆ ಗದರುವುದು, ಅವರನ್ನು ಆಡಿಕೊಂಡು ನಗುವುದು ಈ ರೀತಿಯ ನಡವಳಿಕೆಯು ಮಕ್ಕಳಲ್ಲಿ ನಮ್ಮ ಮೇಲೆ ಋಣಾತ್ಮಕ ಭಾವನೆ ಮೂಡಲು ಕಾರಣವಾಗಬಹುದು.

ಟ್ರೆಂಡಿಂಗ್​ ಸುದ್ದಿ

ಭಾವನೆಗಳು ಆಯ್ಕೆಗಳಲ್ಲ : ಭಾವನೆಗಳು ನಾವೆಂದುಕೊಂಡಂತೆ ಬರುವುದಿಲ್ಲ. ಕೆಲವೊಂದು ನಡವಳಿಕೆಗಳ ಮೇಲೆ ಮಕ್ಕಳಿಗೂ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಯಾವುದೋ ಒಂದು ಸಂಕಷ್ಟದ ಸಂದರ್ಭದಲ್ಲಿ ಮಕ್ಕಳು ನಿಮ್ಮೊಂದಿಗೆ ಬಂದು ಅದನ್ನು ನಿಮ್ಮ ಬಳಿ ಹೇಳಿಕೊಂಡಾಗ ಅವರನ್ನು ಅವಮಾನಿಸುವ ಬದಲು ಅವರೊಂದಿಗೆ ಸ್ನೇಹಿತರ ರೀತಿಯಲ್ಲಿ ವರ್ತಿಸುವುದು ಒಳ್ಳೆಯದು. ಇದಾದ ಬಳಿಕ ಮಕ್ಕಳು ಅವರಿಗೆ ತೊಂದರೆಯಾದಾಗ ನಿಮ್ಮನ್ನು ಸಂಪರ್ಕಿಸಬೇಕು ಎಂಬುದನ್ನು ಕಲಿತುಕೊಳ್ಳುತ್ತಾರೆ ಮಾತ್ರವಲ್ಲದೇ ಕ್ರಮೇಣವಾಗಿ ಜೀವನದ ಸವಾಲುಗಳನ್ನು ತಾಳ್ಮೆಯಿಂದ ಹೇಗೆ ಎದುರಿಸಬೇಕು ಎನ್ನುವುದನ್ನೂ ತಿಳಿಯುತ್ತಾರೆ.

ತಪ್ಪು ಮಾಡುವುದು ಸಹಜ : ನಾವು ಪರಿಪೂರ್ಣ ಪೋಷಕರಾಗಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಮನುಷ್ಯ ಎಂದ ಮೇಲೆ ತಪ್ಪುಗಳಾಗುವುದು ಸಹಜ. ಅದನ್ನು ಸರಿಪಡಿಸಿಕೊಳ್ಳಲು ಮಾರ್ಗವನ್ನು ಕಂಡುಕೊಳ್ಳುವುದು ಒಳ್ಳೆಯದು. ಹತಾಶರಾಗುವುದರಿಂದ ಏನೂ ಸಿಗುವುದಿಲ್ಲ.

ಮಕ್ಕಳಿಗಾಗಿ ನೀವೇನು ಮಾಡುತ್ತೀರಿ ಎಂಬುದು ಮುಖ್ಯ : ಮಕ್ಕಳಿಗೆ ಸುಮ್ಮನೇ ಭರವಸೆಗಳನ್ನು ನೀಡುವ ಬದಲು ಅವರಿಗಾಗಿ ನಾವೇನು ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು. ಮಕ್ಕಳು ತಮ್ಮ ಪೋಷಕರನ್ನು ನೋಡಿ ಸಾಕಷ್ಟು ವಿಚಾರಗಳನ್ನು ಕಲಿಯುತ್ತಿರುತ್ತಾರೆ. ನಮ್ಮ ಮಕ್ಕಳು ಸಮಾಜದಲ್ಲಿ ಗೌರವಯುತರಾಗಿ ಇರಬೇಕು , ಅವರು ಚಿಂತನಾಶೀಲರಾಗಿ ಇರಬೇಕು ಎಂದುಕೊಂಡರೆ ನಾವು ಅದೇ ರೀತಿ ವರ್ತನೆಯನ್ನು ಅವರೆದುರು ತೋರಿಸಬೇಕು.

ಮಕ್ಕಳ ಮೆದುಳಿನ ಮೇಲೆ ಪೋಷಕರಿಂದ ಪರಿಣಾಮ : ಪೋಷಕರೊಂದಿಗೆ ಮಕ್ಕಳ ಸಂಬಂಧ ಹೇಗಿದೆ ಎನ್ನುವುದರ ಆಧಾರದ ಮೇಲೆ ಮಕ್ಕಳ ಮೆದುಳಿನ ಬೆಳವಣಿಗೆ ಆಗುತ್ತಾ ಹೋಗುತ್ತದೆ. ಹೀಗಾಗಿ ನಾವು ಮಕ್ಕಳನ್ನು ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳಬೇಕು. ಆಗ ಮಕ್ಕಳು ಸಹ ಇತರರೊಂದಿಗೆ ಪ್ರೀತಿಯಿಂದ ವ್ಯವಹರಿಸುವುದನ್ನು ಕಲಿತುಕೊಳ್ಳುತ್ತಾರೆ. ಮಕ್ಕಳ ಮೆದುಳಿನ ಮೇಲೆ ಉತ್ತಮ ಪರಿಣಾಮ ಬೀರಬೇಕು ಎಂದರೆ ಅಲ್ಲಿ ಪೋಷಕರ ಪ್ರೀತಿ ತುಂಬಾ ಮುಖ್ಯವಾಗುತ್ತದೆ.

ಉದ್ವೇಗ ನಿಯಂತ್ರಣ : ವಯಸ್ಕರೇ ಇದನ್ನು ಕಲಿತುಕೊಳ್ಳಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳಿಗೂ ಕೂಡ ಅವರ ಉದ್ವೇಗ ನಿಯಂತ್ರಣವನ್ನು ಕಲಿತುಕೊಳ್ಳುವುದು ಕಷ್ಟಕರ ಕೆಲಸವೇ ಆಗಿದೆ. ಅವರ ಭಾವನಾತ್ಮಕ ಹಾಗೂ ದೈಹಿಕ ಸ್ಥಿತಿ ಹೇಗಿದೆ ಎನ್ನುವುದರ ಮೇಲೆ ಇದು ನಿರ್ಧಾರವಾಗುತ್ತದೆ. ಹೀಗಾಗಿ ಮಕ್ಕಳಲ್ಲಿ ಯಾವುದೇ ಬದಲಾವಣೆಗಳನ್ನು ನೀವು ತರಬೇಕು ಎಂದುಕೊಂಡಿದ್ದರೂ ಅದರ ಜೊತೆಗೆ ನೀವು ತಾಳ್ಮೆಯನ್ನು ಹೊಂದುವುದೂ ಸಹ ಮುಖ್ಯವಾಗಿದೆ

ವಿಭಾಗ