Parenting: ಮಕ್ಕಳ ಪ್ರತಿಭೆ ಗುರುತಿಸುವುದು ಹೇಗೆ? ಪೋಷಕರು, ಶಿಕ್ಷಕರಿಗೆ ಇಲ್ಲಿದೆ ಸರಳ ಟಿಪ್ಸ್ -ಮನದ ಮಾತು
Parenting Tips: ಪ್ರತಿ ಮಗುವೂ ವಿಶಿಷ್ಟ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಮಕ್ಕಳ ಪ್ರತಿಭೆ ಮುಕ್ತವಾಗಿ ಹೊರಹೊಮ್ಮಲು ಏನು ಮಾಡಬೇಕು ಎಂಬ ಪ್ರಶ್ನೆ ಪೋಷಕರನ್ನು ಮತ್ತು ಶಿಕ್ಷಕರನ್ನು ಕಾಡುವುದು ಸಹಜ. ಮಕ್ಕಳ ಪ್ರತಿಭೆ ಕಂಡುಕೊಳ್ಳಲು ಏನು ಮಾಡಬೇಕೆಂದು ಸರಳವಾಗಿ ವಿವರಿಸಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್.
ಮಕ್ಕಳ ಪ್ರತಿಭೆಯು ಎಷ್ಟು ಬೇಗನೆ ಹೊರಹೊಮ್ಮುತ್ತದೆ? ಪ್ರತಿಭೆಯ ಆರಂಭಿಕ ಚಿಹ್ನೆಗಳು ಏನಿರುತ್ತವೆ ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿದ್ದರೆ, ಈಗಾಗಲೇ ಉತ್ತರ ಹುಡುಕಲು ಎಷ್ಟು ಮುಖ್ಯ? ಪ್ರತಿ ಮಗುವಿಗೆ ಪ್ರತಿಭಾನ್ವಿತ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಕೆಲವು ಮಕ್ಕಳ ಉಡುಗೊರೆಗಳು ಜಗತ್ತು ನೋಡಲು ತೆರೆದಿರುತ್ತವೆ. ಇತರರು ತಮ್ಮ ಪ್ರತಿಭೆಯನ್ನು ಮರೆಮಾಚಬಹುದು. ಇಂತಹ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಪೋಷಕರ ಪಾತ್ರ ಹಾಗು ಪೋಷಣೆ ಬಹಳ ಮುಖ್ಯ. ತಮ್ಮ ಮಕ್ಕಳ ವಿಶೇಷ ಪ್ರತಿಭೆಯನ್ನು ಯಶಸ್ವಿಯಾಗಿ ಗುರುತಿಸಿದ ಪೋಷಕರು ಸಹ ಹಲವು ಸಲ ಮಕ್ಕಳ ತೀರ್ಮಾನಗಳನ್ನು, ಅವರ ನಡೆಯನ್ನು ಪ್ರಶ್ನಿಸುವುದು ಉಂಟು. ಹಾಗಾದರೆ, ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಕಂಡುಕೊಳ್ಳುವುದು ಹೇಗೆ? - ನಿಮ್ಮನ್ನೂ ಈ ಪ್ರಶ್ನೆ ಕಾಡುತ್ತಿದ್ದರೆ ಮುಂದಿನ ಸಾಲುಗಳನ್ನು ನೀವು ಓದಲೇಬೇಕು.
1) ಮಕ್ಕಳನ್ನು ಮಾತನಾಡಿಸಿದರೆ ಅವರ ಪ್ರತಿಭೆ ಏನೆಂದು ಅರ್ಥ ಮಾಡಿಕೊಳ್ಳಬಹುದೇ?
ಪ್ರಿಯ ಪೋಷಕರೇ ಮತ್ತು ಶಿಕ್ಷಕರೇ, ಮಕ್ಕಳನ್ನು ಪ್ರಶ್ನಿಸುವುದು ನಿಮಗೆ ಸುಲಭ. ಆದರೆ ನಿಮ್ಮ ಪ್ರಶ್ನೆ ಅರ್ಥ ಮಾಡಿಕೊಂಡು ಉತ್ತರಿಸುವುದು ಮಕ್ಕಳಿಗೆ ಕಷ್ಟ. ಮಕ್ಕಳಿಗೆ ಅವರ ಪ್ರತಿಭೆ ಮತ್ತು ಆಸಕ್ತಿ ಕುರಿತು ತಿಳಿದಿರುವುದಿಲ್ಲ. ತಮಗೆ ಅನ್ನಿಸಿದ್ದನ್ನು ವ್ಯಕ್ತಪಡಿಸುವ ರೀತಿಯೂ ಸಹ ಗೊತ್ತಿರುವುದಿಲ್ಲ. ಅವರಿಗೆ ಕೆಲವೊಮ್ಮೆ ಗೆೊಂದಲಗಳು ಇರುತ್ತವೆ. ಹೀಗಾಗಿ ನೀವು ಅವರನ್ನು ಪ್ರಶ್ನಿಸಿ, ಉತ್ತರ ಪಡೆದು ಅವರ ಪ್ರತಿಭೆ ಗುರುತಿಸುವುದು ಕಷ್ಟವಾಗಬಹುದು.
2) ಮಕ್ಕಳ ಪ್ರತಿಭೆ ತಿಳಿಯಲು ಸಾಧ್ಯವೇ ಇಲ್ಲವೇ?
ಖಂಡಿತ ಸಾಧ್ಯವಿದೆ, ಚಿಂತೆ ಮಾಡಬೇಡಿ. ಈ ಕೆಳಕಂಡ ಅಂಶಗಳನ್ನು ಸೂಕ್ಷ್ಮವಾಗಿ ನಿಮ್ಮ ಮಕ್ಕಳಲ್ಲಿ ಗಮನಿಸಿ:
* ನಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕೆಂದರೆ, ಅವರ ಸ್ವಾಭಾವಿಕ ಮತ್ತು ಸ್ವಯಂ ಪ್ರೇರಿತ ಆಸಕ್ತಿಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.
* ಮಕ್ಕಳು ಯಾವುದೇ ಒಂದು ಚಟುವಟಿಕೆ ಅಥವಾ ಕಲೆಗಳನ್ನು ಪದೇಪದೇ ಸ್ವಯಂ ಪ್ರೇರಣೆಯಿಂದ ಮಾಡಿದಾಗ ಅದು ಅವರ ಆಸಕ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
* ಕೆಲ ವಿಷಯಗಳ ಬಗ್ಗೆ ಮಕ್ಕಳು ಪೋಷಕರ ಬಲವಂತವಿಲ್ಲದೆ, ಯಾವುದೇ ವಿಳಂಬವಿಲ್ಲದೆ, ಕುಂಟು ನೆಪಗಳಿಲ್ಲದೆ ಸ್ವಂತ ಆಸಕ್ತಿಯಿಂದ ಸತತ ಪ್ರಯತ್ನ ಮತ್ತು ಅಭ್ಯಾಸ ಮಾಡುತ್ತಿರುತ್ತಾರೆ.
* ತಮ್ಮ ಇಷ್ಟದ ವಿಷಯಗಳ ಅಭ್ಯಾಸದ ವೇಳೆಯಲ್ಲಿ ಮನಸ್ಸಿಗೆ ಕಿರಿಕಿರಿ ಮಾಡಿಕೊಳ್ಳುವುದಿಲ್ಲ ಬದಲು ಸಂತೋಷವಾಗಿ ಮಾಡುತ್ತಾರೆ. ನಂತರದ ಸಮಯದಲ್ಲಿ ಉತ್ಸಾಹದಿಂದಲೂ , ಸಮಾಧಾನದಿಂದಲೂ ಇರುತ್ತಾರೆ
* ಬಿಡುವಿನ ವೇಳೆಯಲ್ಲಿ ತಮಗೆ ಆಸಕ್ತಿಯಿರುವ ಹವ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲಿ ಬಹಳ ಸಮಯ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ.
* ಅಭ್ಯಾಸದ ವೇಳೆ ಅಡೆತಡೆಗಳು, ತೊಂದರೆಗಳು ಬಂದರೂ ಸಹ ನಿರಾಸೆಗೊಳ್ಳದೆ ಪುನಃ ಪ್ರಯತ್ನಿಸುತ್ತಾರೆ. ಸರಾಗವಾಗಿ ಕಾರ್ಯನಿರ್ವಹಿಸುತ್ತಾರೆ.
* ತಮಗೆ ಆಸಕ್ತಿ ಮತ್ತು ಪ್ರತಿಭೆಯಿರುವ ಚಟುವಟಿಕೆಗಳ ಬಗ್ಗೆ ಹೆಚ್ಚು ಕುತೂಹಲವಿರುತ್ತದೆ. ಇನ್ನಷ್ಟು ತಿಳಿದುಕೊಳ್ಳುವ ಆಸೆ ಮತ್ತು ಸ್ವಂತ ಪ್ರಯೋಗ ಮಾಡಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ.
* ಕೆಲ ವಿಷಯಗಳ ಬಗ್ಗೆ ಅವರಿಗೆ ನಾನು ಮಾಡಬಲ್ಲೆ, ಸಾಮರ್ಥ್ಯ ನನಗಿದೆ ಎನ್ನುವ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ
* ತಮ್ಮ ಇಷ್ಟದ ವಿಷಯಗಳ ಬಗ್ಗೆ ಕೂಲಂಕಶವಾಗಿ ತಿಳಿದುಕೊಂಡಿರುತ್ತಾರೆ. ಸೋತರೂ, ವೈಫಲ್ಯ ಅನುಭವಿಸಿದರೂ ಮರು ಪ್ರಯತ್ನ ಮಾಡುತ್ತಿರುತ್ತಾರೆ.
3) ಕಾಲಕ್ಕೆ ತಕ್ಕಂತೆ ಮಕ್ಕಳ ಹವ್ಯಾಸಗಳು ಬದಲಾಗುವುದಿಲ್ಲವೇ? ಅಂಥ ಸಂದರ್ಭದಲ್ಲಿ ಅವರ ಪ್ರತಿಭೆ ಗುರುತಿಸುವುದು ಹೇಗೆ?
* ಮಕ್ಕಳಿಗೆ ಪ್ರತಿಭೆ ಇರುವುದು ಖಂಡಿತ ನಿಜ. ಆದರೆ ಅದೇನೆಂದು ತಿಳಿಯಲು ಆತುರ ಬೇಡ. ನಿಧಾನವಾಗಿ ಸಂಯಮದಿಂದ ಅವರನ್ನು ಗಮನಿಸಿ.
* 10ರಿಂದ 12ನೇ ವಯಸ್ಸಿನವರೆಗೂ ಮಕ್ಕಳು ಬೇರೆಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿರುತ್ತಾರೆ. ಕೆಲವು ಮಕ್ಕಳಲ್ಲಿ ಆಸಕ್ತಿಗಳು ಸಹ ಬದಲಾಗುತ್ತಿರುತ್ತವೆ.
* ತಮ್ಮ ಆಸಕ್ತಿಯ ವಿಷಯದ ಅಭ್ಯಾಸ ಅಥವಾ ಅದರಲ್ಲಿ ತೊಡಗಿಸಿಕೊಳ್ಳುವುದನ್ನು ಕಾರಣಾಂತರದಿಂದ ಕೆಲದಿನಗಳ ಕಾಲ ನಿಲ್ಲಿಸಬಹುದು. ಮತ್ತೆ ಪುನಃ ಪ್ರಾರಂಭಿಸಬಹುದು. ಇಂಥ ಸಮಯದಲ್ಲಿ ಯಾವುದೇ ರೀತಿಯ ನಕಾರತ್ಮಕ ನಿರ್ಣಯ ತೆಗೆದುಕೊಳ್ಳಬೇಡಿ.
* ಮಕ್ಕಳಿಗೆ ಸಮಸ್ಯೆಯಿದ್ದರೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಹಾಯ ಮಾಡಿ. ಆದರೆ ದುಡುಕಿ ಅವಹೇಳನ ಮಾಡುವುದು ಹಣೆಪಟ್ಟಿ ಹಚ್ಚುವುದನ್ನು ತಡೆಯಿರಿ.
* ಮಕ್ಕಳಿಗೆ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಾಕಷ್ಟು ಸಮಯ ಕೊಡಿ. ಅವರ ಪ್ರತಿಭೆಯನ್ನು ಗುರುತಿಸಿಕೊಂಡು ಬೆಳೆಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡಿ. ಅವರು ಯಾವಾಗಲೂ ಹೊಸ ಚಟುವಟಿಕೆಗಳನ್ನು ಅನ್ವೇಷಿಸಲು ಅಥವಾ ಹೊಸ ವಿಷಯಗಳನ್ನು ಕಲಿಯಲು ಸಿದ್ಧರಿರುತ್ತಾರೆ. ಪೋಷಕರು ಅವರಿಗೆ ಕಲಿಯುವುದಕ್ಕೆ ಅವಕಾಶವನ್ನು ಒದಗಿಸಬೇಕು.
4) ಪ್ರತಿಭೆ ಗುರುತಿಸಲು ಆಸೆ ಇರುವವರು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ.
* ಪ್ರತಿ ಮಕ್ಕಳು ಅವರದೇ ಆದ ಅಭಿರುಚಿಯನ್ನು ಹೊಂದಿರುತ್ತಾರೆ. ಅವರ ಅಭಿರುಚಿಗೆ ತಕ್ಕ ಹಾಗೆ ಆಯ್ಕೆಗಳನ್ನು ಮಾಡಿ ಅಭ್ಯಾಸ ಮಾಡುತ್ತಿರುತ್ತಾರೆ. ಆದ್ದರಿಂದ ಬೇರೆ ಮಕ್ಕಳಿಗೆ ಹೋಲಿಕೆ ಮಾಡುವುದು ಅಗತ್ಯವಿಲ್ಲ. ಅಥವಾ ಮಗುವಿನ ಆಸಕ್ತಿಯ ಬಗ್ಗೆ ಟೀಕಿಸುವುದು, ತಮಾಷೆ ಮಾಡುವುದು, ಬಾಲಿಶ ಎಂದು ಹೀಗಳೆಯುವುದು ತಪ್ಪು.
ಉದಾ: ಒಂದು ಪಕ್ಷ ಹುಡುಗನಿಗೆ ಅಡುಗೆ ಮಾಡುವ ಆಸಕ್ತಿ ಇದ್ದಲ್ಲಿ ಹೆಣ್ಣಿಗ ಎಂದು ಆಡಿಕೊಳ್ಳಬಾರದು. ಹಾಗೆಯೇ, ಹುಡುಗಿಗೆ ಆಟಗಳಲ್ಲಿ ಹೆಚ್ಚು ಆಸಕ್ತಿಯಿದ್ದು, ಕ್ರಿಕೆಟ್ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರೆ ಅಂಥವರನ್ನು ಗಂಡುಬೀರಿ ಎಂದು ಆಡಿಕೊಳ್ಳಬಾರದು.
* ಪೋಷಕರ ಪ್ರತಿಭೆ, ಆಸಕ್ತಿ, ಕನಸು ಮಕ್ಕಳದ್ದು ಆಗಿರಬೇಕೆನ್ನುವ ನಿರೀಕ್ಷೆಯಿಂದ ಹೊರಬಂದು ಮಕ್ಕಳ ಪ್ರತಿಭೆಯನ್ನು ಭಿನ್ನವಾದರೂ ಗುರುತಿಸಿ ಪ್ರೋತ್ಸಾಹಿಸಬೇಕು.
* ಪ್ರಸಿದ್ಧವಾದ ಮತ್ತು ಪರಿಚಿತ ಹವ್ಯಾಸಗಳನ್ನೇ ಬೆಳೆಸಿಕೊಳ್ಳಬೇಕೆಂಬ ಅಭಿಪ್ರಾಯವನ್ನು ಮಕ್ಕಳ ಮೇಕೆ ಹೊರಿಸಬಾರದು.
* ಸ್ಪರ್ಧೆ, ದುಡಿಮೆ, ವ್ಯವಹಾರಗಳಿಗೋಸ್ಕರ ಪ್ರತಿಭೆ ಬೆಳೆಸಿಕೊಳ್ಳಬೇಕೆಂಬ ಹೊರೆಯನ್ನು ಮಕ್ಕಳ ಮೇಲೆ ಹೇರಬೇಡಿ.
* ನೀವು ಪೋಷಕರಾಗಿದ್ದರೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದಕ್ಕೆ ಶಿಕ್ಷಕರ ಸಹಾಯ ಮತ್ತು ಮಾರ್ಗದರ್ಶನ ತೆಗೆದುಕೊಳ್ಳಿ. ನೀವು ಶಿಕ್ಷಕರಾಗಿದ್ದರೆ ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಲು ಪೋಷಕರ ಸಹಕಾರ ಪಡೆಯಿರಿ.