ಮಕ್ಕಳ ತಪ್ಪನ್ನು ಸರಿಪಡಿಸಲು ಅವರನ್ನು ಗದರಬೇಡಿ; ನಿಮ್ಮ ವರ್ತನೆ ಇಂದೇ ಬದಲಿಸಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ತಪ್ಪನ್ನು ಸರಿಪಡಿಸಲು ಅವರನ್ನು ಗದರಬೇಡಿ; ನಿಮ್ಮ ವರ್ತನೆ ಇಂದೇ ಬದಲಿಸಿಕೊಳ್ಳಿ

ಮಕ್ಕಳ ತಪ್ಪನ್ನು ಸರಿಪಡಿಸಲು ಅವರನ್ನು ಗದರಬೇಡಿ; ನಿಮ್ಮ ವರ್ತನೆ ಇಂದೇ ಬದಲಿಸಿಕೊಳ್ಳಿ

Parenting Tips: ನಮ್ಮಲ್ಲಿ ಕೆಲವು ಪೋಷಕರು ಮಕ್ಕಳಿಗೆ ಶಿಸ್ತು ಕಲಿಸುವ ಸಂದರ್ಭದಲ್ಲಿ ಅವರಿಗೆ ಬೈಯುವುದು ಅಥವಾ ಶಿಕ್ಷೆ ನೀಡುವುದನ್ನು ಮಾಡುತ್ತಾರೆ. ಹಾಗೆ ಮಾಡುವುದರಿಂದ ನಿಮ್ಮ ಮಗು ಮತ್ತಷ್ಟು ಒರಟು ಸ್ವಭಾವ ತೋರಬಹುದು. ಮಕ್ಕಳಿಗೆ ಶಿಸ್ತು ಕಲಿಸುವಾಗ ಈ 5 ಸಂದರ್ಭಗಳಲ್ಲಿ ತಾಳ್ಮೆಯಿಂದಿರಿ. ಸಮಾಧಾನದಿಂದ ಮಕ್ಕಳಿಗೆ ಶಿಸ್ತು ರೂಡಿಸಿ.

ಮಕ್ಕಳ ತಪ್ಪನ್ನು ಸರಿಪಡಿಸಲು ಅವರನ್ನು ಗದರಬೇಡಿ
ಮಕ್ಕಳ ತಪ್ಪನ್ನು ಸರಿಪಡಿಸಲು ಅವರನ್ನು ಗದರಬೇಡಿ (Pexel)

ತಪ್ಪು ಮಾಡುವುದು ಮಾನವನ ಸಹಜ ಗುಣ. ಅದರಲ್ಲೂ ಮಕ್ಕಳು ತಪ್ಪುಗಳನ್ನು ಮಾಡಿಯೇ ದೊಡ್ಡವರಾಗುತ್ತಾರೆ. ಅವರು ಮಾಡಿದ ತಪ್ಪುಗಳನ್ನು ಸರಿಪಡಿಸುವುದು ಪೋಷಕರ ಕರ್ತವ್ಯ. ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಬುದ್ದಿ ಹೇಳುವಾಗ ಪೋಷಕರು ಬೈಯುವುದು ಅಥವಾ ಶಿಕ್ಷೆ ನೀಡುವ ಮಾರ್ಗವನ್ನು ಆಯ್ದುಕೊಳ್ಳುತ್ತಾರೆ. ಅದು ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಮಾಡಬಾರದು ಎನ್ನುವ ಕೆಲಸವನ್ನು ಮಗು ಪದೇ ಪದೇ ಮಾಡಿದಾಗ ಅಥವಾ ತಪ್ಪಾಗಿ ವರ್ತಿಸಿದಾಗ ಕೋಪಗೊಳ್ಳುವುದು ಸಹಜ. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಕಠೋರವಾಗಿ ನಡೆದುಕೊಳ್ಳುವ ಬದಲು ಸಹಾನುಭೂತಿ ತೋರಿಸುವ ಸಂದರ್ಭಗಳು ಇರುತ್ತವೆ. ಮಗುವಿಗೆ ಶಿಸ್ತು ಕಲಿಸಬೇಕು ಅನ್ನುವುದು ಸರಿಯಾದ ಯೋಚನೆ. ಆದರೆ ಅದಕ್ಕೆ ಸಮಯ, ಸಂದರ್ಭಗಳನ್ನು ನೋಡಿಕೊಂಡು ಕಲಿಸಬೇಕು. ಇಲ್ಲವಾದರೆ ಮಗು ಶಿಸ್ತು ಕಲಿಯುವ ಬದಲಿಗೆ ಒರಟುತನವನ್ನು ಪ್ರದರ್ಶಿಸಬಹುದು. ಹಾಗಾಗಿ ಕೆಲವು ಸಂದರ್ಭಗಳಲ್ಲಿ ಪೋಷಕರು ಶಾಂತಚಿತ್ತರಾಗಿ ವರ್ತಿಸಬೇಕಾದ ಅವಶ್ಯಕತೆಯಿದೆ.

ಬೇರೆಯವರ ಮುಂದೆ ನಿಮ್ಮ ಮಗುವನ್ನು ಎಂದಿಗೂ ಬೈಯಬೇಡಿ

ನಿಮ್ಮ ಮಗುವಿಗೆ ಸಾರ್ವಜನಿಕ ಸ್ಥಳಗಳಲ್ಲಿ ಎಂದಿಗೂ ಬೈಯಬೇಡಿ. ಹಾಗೆ ಮಾಡುವುದರಿಂದ ಮಗು ಅಥವಾ ಮಕ್ಕಳು ತಪ್ಪಾಗಿ ತಿಳಿದುಕೊಳ್ಳುವ ಸಂದರ್ಭಗಳಿರುತ್ತವೆ. ನೀವು ಏನು ಬುದ್ಧಿ ಹೇಳುತ್ತಿದ್ದೀರಿ ಎಂಬುದರ ಬಗ್ಗೆ ಅವರಿಗೆ ಗಮನವಿರುವುದಿಲ್ಲ. ಇತರರ ಮುಂದೆ ನಿಮ್ಮ ಮಕ್ಕಳನ್ನು ಬೈದಾಗ ಅವರು ನಾಚಿಕೆಯಿಂದ ತಲೆತಗ್ಗಿಸಬಹುದು. ಆದರೆ ಅದೇ ಸಮಯದಲ್ಲಿ ಅವರು ತಮಗೆ ಅವಮಾನವಾಯಿತೆಂದೂ ಯೋಚಿಸುವ ಸಾಧ್ಯತೆಗಳಿರುತ್ತದೆ. ಹಾಗಾಗಿ ನಿಮ್ಮ ಮಕ್ಕಳು ಸಾರ್ವಜನಿಕವಾಗಿ ತಪ್ಪಾಗಿ ವರ್ತಿಸಿದಾಗ ನೀವು ಮೊದಲು ಶಾಂತವಾಗಿರಿ. ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಸಾಮಾಧಾನದಿಂದ ಅವರ ತಪ್ಪಿನ ಅರಿವು ಮಾಡಿಸಿ. ವಿನಯಶೀಲರಾಗಿದ್ದರೆ ಸಮಾಜ ಹೇಗೆ ಗೌರವಿಸುತ್ತದೆ ಎಂಬುದನ್ನು ತಿಳಿಹೇಳಿ.

1 ರಿಂದ 3 ವರ್ಷದ ಒಳಗಿನ ಮಕ್ಕಳಿಗೆ ಬೈಯಬೇಡಿ

1 ರಿಂದ 3 ವರ್ಷದ ಒಳಗಿನ ಮಕ್ಕಳಿಗೆ ಈ ಜಗತ್ತು ಹೊಸದಾಗಿರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ನಿಮ್ಮ ಕಡೆಯಿಂದ ಪ್ರೀತಿ, ಕಾಳಜಿ, ಒಲವು ಮತ್ತು ತಾಳ್ಮೆಯ ಅಗತ್ಯವಿರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಚಿಕ್ಕ ಚಿಕ್ಕ ವಿಷಯಗಳಿಗೂ ಹಟ ಹಿಡಿಯಬಹುದು. ಊಟ, ನಿದ್ದೆಯ ವೇಳಾಪಟ್ಟಿಯನ್ನು ಬದಲಿಸಬಹುದು. ಅವರಿಗೆ ಇಷ್ಟವಾಗುವುದರ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಅವರಿಗೆ ಪದೇ ಪದೇ ಗದರಬೇಡಿ. ಈ ವಯಸ್ಸಿನಲ್ಲಿ ಮಕ್ಕಳು ಬಹಳ ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಜೊತೆಗೆ ಪೋಷಕರ ವರ್ತನೆಯನ್ನೇ ನೋಡಿ ಕಲಿಯುತ್ತಾರೆ. ದೊಡ್ಡವರಾದ ಮೇಲೆ ಒಮ್ಮೆಲೇ ಈ ವರ್ತನೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ನಿಮ್ಮನ್ನೇ ನೋಡಿ ಕಲಿತು ಬೆಳೆದಿರುತ್ತಾರೆ. ಹಾಗಾಗಿ 1 ರಿಂದ 3 ವರ್ಷದ ಮಕ್ಕಳಿಗೆ ಪ್ರೀತಿ ತೋರಿಸಿ. ಅವರನ್ನು ಕಾಳಜಿ ಮಾಡಿ. ಸಮಾಧಾನದಿಂದ ಅವರ ಮನಸ್ಸನ್ನು ಗೆಲ್ಲಿ. ಅವರ ಜೊತೆ ಆಟವಾಡಿ. ಮಕ್ಕಳು ಹಟ ಮಾಡಬಹುದಾದ ವಿಷಯಗಳನ್ನು ಅರಿತು ಆದಷ್ಟು ಅವುಗಳಿಂದ ದೂರವಿಡಿ. ಅವರ ಮನಸ್ಸು ಯಾವಾಗಲೂ ಸಂತೋಷದಿಂದಿರುವಂತೆ ನೋಡಿಕೊಳ್ಳಿ.

ಒಡಹುಟ್ಟಿದವರೊಂದಿಗೆ ಜಗಳವಾಡಿದಾಗ

ನಿಮ್ಮ ಮಕ್ಕಳು ಜಗಳವಾಡುತ್ತಿದ್ದರೆ ಅವರಿಗೆ ಕಟ್ಟುನಿಟ್ಟಾಗಿ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಿ. ಆ ಸಮಯದಲ್ಲಿ ನೀವು ಗಂಭೀರತೆಯಿಂದ ನಡೆದುಕೊಳ್ಳಿ. ಅವರಿಗೆ ಬೈಯುವುದು ಅಥವಾ ಏಟು ಕೊಡಬೇಡಿ. ಮಕ್ಕಳು ಸಹ ಮುಂದೆ ದೊಡ್ಡವರಾದ ಮೇಲೆ ನೀವು ಅವರಿಗೆ ತೋರಿರುವ ನಡತೆಯನ್ನೇ ಪಾಲಿಸುತ್ತಾರೆ. ಹಲವು ಅಧ್ಯಯನಗಳ ಪ್ರಕಾರ ಚಿಕ್ಕ ವಯಸ್ಸಿನಲ್ಲಿ ಏಟು ತಿಂದ ಮಕ್ಕಳು, ಪ್ರೌಢಾವಸ್ಥೆಗೆ ತಲುಪಿದಾಗ ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸಬಹುದು. ಹಾಗಾಗಿ ಮಕ್ಕಳು ಜಗಳವಾಡಿದಾಗ ಅವರನ್ನು ದಂಡಿಸುವುದನ್ನು ಬಿಟ್ಟು ಇಬ್ಬರಿಗೂ ಸಮಾಧಾನದಿಂದ ತಿಳಿ ಹೇಳಿ. ನೀವಿಬ್ಬರೂ ಒಡಹುಟ್ಟಿದವರು, ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಪ್ರೀತಿ, ಕಾಳಜಿ ಇರಬೇಕು ಎಂದು ತಿಳಿಸಿಕೊಡಿ.

ಆಹಾರ ಚೆಲ್ಲಿದಾಗ

ಮನೆಯಲ್ಲಿ ಮಕ್ಕಳು ಆಹಾರ ಚೆಲ್ಲಿದಾಗ ಮೊದಲು ಕೋಪಗೊಳ್ಳುವುದು ತಾಯಿಯೇ. ಅದರಲ್ಲೂ ಗ್ಲಾಸ್‌ನಲ್ಲಿ ನೀಡಿದ ಹಾಲಿನಂತಹ ಪೌಷ್ಠಿಕ ಆಹಾರಗಳನ್ನು ಚೆಲ್ಲಿದಾಗ ತಾಳ್ಮೆ ಕಳೆದುಕೊಳ್ಳುವುದು ಹೆಚ್ಚು. ಗಾಜಿನ ಚೂರುಗಳು ಮಕ್ಕಳಿಗೆ ತಗುಲುತ್ತವೆ ಎಂಬ ಕಾಳಜಿ ಅದರ ಹಿಂದಿರುತ್ತದೆ. ಅಂತಹ ಸಂದರ್ಭಗಳಿಂದ ಆದಷ್ಟು ದೂರವಿಡಿ. ಗ್ಲಾಸ್‌ ಬದಲಿಗೆ ಸ್ಟೀಲ್‌ ಲೋಟ, ತಟ್ಟೆ ಬಳಸಿ. ಒಂದು ವೇಳೆ ಮಕ್ಕಳು ಆಹಾರ ಚೆಲ್ಲಿದರೆ ಅದನ್ನು ಅವರ ಬಳಿಯೇ ಸ್ವಚ್ಛಗೊಳಿಸಲು ಹೇಳಿ. ಹೀಗೆ ಮಾಡುವುದರಿಂದ ಮಕ್ಕಳಿಗೆ ಸರಿ ಹಾಗೂ ತಪ್ಪಿನ ಅರಿವಾಗುತ್ತದೆ.

ಮಕ್ಕಳು ಕೆಟ್ಟದಾಗಿ ಮಾತನಾಡಿದಾಗ

ಮಕ್ಕಳು ಕೆಲವೊಮ್ಮೆ ಕೆಟ್ಟದಾಗಿ ಮಾತನಾಡುವುದನ್ನು, ಕೂಗಾಡುವುದನ್ನು ಗಮನಿಸಿರಬಹುದು. ಅದು ನಿಮ್ಮಿಂದಲೇ ಮಕ್ಕಳು ಕಲಿತಿರಬಹುದು. ಏಕೆಂದರೆ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಶಿಸ್ತನ್ನು ಕಲಿಸಬೇಕೆಂದು ನೀವೂ ಆ ರೀತಿಯಾಗಿ ವರ್ತಿಸಿರಬಹುದು. ಪೋಷಕರನ್ನು ಸೂಕ್ಷ್ಮವಾಗಿ ಗಮನಿಸುವ ಮಕ್ಕಳು ಅದೇ ರೀತಿ ನಡೆದುಕೊಳ್ಳುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದ್ದರಿಂದ ಮಕ್ಕಳು ತಪ್ಪು ಮಾಡಿದಾಗ ಅವರ ಮೇಲೆ ಕೂಗಾಡುವ ಅಥವಾ ಬೈಯುವ ಬದಲು ಸಮಾಧಾನದಿಂದಲೇ ಶಿಸ್ತನ್ನು ರೂಢಿಸಿ. ಮಕ್ಕಳು ಮಾತನಾಡುವ ಶಬ್ದಗಳನ್ನು ತಿದ್ದಲು ನೀವು ಕಠೋರ ಶಬ್ದಗಳನ್ನು ಬಳಸಿದರೆ ಆಗ ಮಕ್ಕಳು ಸುಧಾರಿಸುವುದಿಲ್ಲ. ಮೊದಲು ನಿಮ್ಮ ಮಕ್ಕಳನ್ನು ಗೌರವಿಸಿ. ಏನೇ ಹೇಳುವುದಿದ್ದರೂ ಸರಿಯಾದ ಕ್ರಮದಲ್ಲೇ ಹೇಳಿ. ನೀವು ಕೋಪಗೊಳ್ಳುವ ಬದಲು ಶಾಂತ ರೀತಿಯಿಂದ ವರ್ತಿಸಿ.