Parenting Tips: ಮಗುವನ್ನು ಮೊದಲ ಸಲ ಶಾಲೆಗೆ ಕಳಿಸಲು ಈಗಿನಿಂದಲೇ ಸಿದ್ಧತೆ ಮಾಡ್ಕೊಳಿ, ಈ 10 ಟಿಪ್ಸ್‌ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಮಗುವನ್ನು ಮೊದಲ ಸಲ ಶಾಲೆಗೆ ಕಳಿಸಲು ಈಗಿನಿಂದಲೇ ಸಿದ್ಧತೆ ಮಾಡ್ಕೊಳಿ, ಈ 10 ಟಿಪ್ಸ್‌ ಗಮನಿಸಿ

Parenting Tips: ಮಗುವನ್ನು ಮೊದಲ ಸಲ ಶಾಲೆಗೆ ಕಳಿಸಲು ಈಗಿನಿಂದಲೇ ಸಿದ್ಧತೆ ಮಾಡ್ಕೊಳಿ, ಈ 10 ಟಿಪ್ಸ್‌ ಗಮನಿಸಿ

ಮಗುವನ್ನು ಮೊದಲ ಬಾರಿಗೆ ಶಾಲೆಗೆ ಕಳುಹಿಸುವಾಗ ಪೋಷಕರಿಗೆ ಒಂದಿಷ್ಟು ಆತಂಕ, ಗೊಂದಲ, ಭಯ ಇರುವುದು ಸಹಜ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಿಮ್ಮ ಮಗುವನ್ನು ಶಾಲೆಗೆ ಕಳುಹಿಸುವ ಪ್ಲಾನ್‌ ಇದ್ದರೆ ಈಗಿನಿಂದಲೇ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಿ.

ಮಗುವನ್ನು ಮೊದಲ ಸಲ ಶಾಲೆಗೆ ಕಳಿಸಲು ಈಗಿನಿಂದಲೇ ಸಿದ್ಧತೆ ಮಾಡ್ಕೊಳಿ
ಮಗುವನ್ನು ಮೊದಲ ಸಲ ಶಾಲೆಗೆ ಕಳಿಸಲು ಈಗಿನಿಂದಲೇ ಸಿದ್ಧತೆ ಮಾಡ್ಕೊಳಿ

ಮಗುವನ್ನು ಶಾಲೆಗೆ ಕಳುಹಿಸುವ ವಿಚಾರ ಬಂದಾಗ ಪೋಷಕರು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಯಾವ ಶಾಲೆಗೆ ಸೇರಿಸುವುದು ಎಂಬುದರಿಂದ ಹಿಡಿದು ಮಗು ಶಾಲೆಯಲ್ಲಿ ಹೇಗಿರುತ್ತದೆ ಎಂಬಲ್ಲಿಯವರೆಗೆ ಅಮ್ಮ-ಅಪ್ಪ ಸಾಕಷ್ಟು ಚಿಂತೆ ಮಾಡುತ್ತಾರೆ. ಇದರಿಂದ ಅವರ ಮನಸ್ಸಿನಲ್ಲಿ ಭಯ, ಆತಂಕ ಗೊಂದಲ ಕಾಡುವುದು ಸಹಜ. ಆದರೆ ಮಗುವನ್ನು ಶಾಲೆಗೆ ಸೇರಿಸುವ ಮೊದಲೇ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಂಡರೆ ಮಗುವಿಗೂ ಗೊಂದಲ ಇರುವುದಿಲ್ಲ, ನಿಮಗೂ ನೆಮ್ಮದಿ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಿಮ್ಮ ಮಗುವನ್ನು ಶಾಲೆಗೆ ಸೇರಿಸಬೇಕು ಎಂಬ ಆಲೋಚನೆ ನಿಮ್ಮಲ್ಲಿದ್ದರೆ ನಿಮಗಾಗಿ ಇಲ್ಲಿದೆ 10 ಟಿಪ್ಸ್‌.

ಮಗುವಿನ ಬಳಿ ಶಾಲೆಯ ವಾತಾವರಣ ಬಗ್ಗೆ ಮಾತನಾಡಿ

ಶಾಲೆಗೆ ಸೇರಿಸುವ ಬಗ್ಗೆ ಮೊದಲು ನಿಮ್ಮ ಮಗುವಿನಲ್ಲಿ ಮಾತನಾಡಿ. ಶಾಲೆಗೆ ಸೇರುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಮಗವಿಗೆ ತಿಳಿಸಿ ಹೇಳಿ. ಹೊಸ ಸ್ನೇಹಿತರು, ಶಾಲೆಯ ವಾತಾವರಣದ ಬಗ್ಗೆ ಆಸಕ್ತಿದಾಯಕವಾಗಿ ಹೇಳಿ. ಶಾಲೆಯಲ್ಲಿ ಆಡಬಹುದಾದ ಆಟಗಳ ಬಗ್ಗೆ, ಹೊಸತಾಗಿ ಏನೆಲ್ಲಾ ಕಲಿಯಬಹುದು ಎಂಬ ಬಗ್ಗೆ ತಿಳಿಸಿ ಹೇಳಿ. ಶಾಲೆಯ ಬಗ್ಗೆ ಎಂದಿಗೂ ಆತಂಕ ಮೂಡದೇ ಆಸಕ್ತಿ ಹುಟ್ಟುವಂತೆ ಮಾಡಿ.

ನಿದ್ದೆಯ ಅಭ್ಯಾಸ ಹೀಗಿರಲಿ

ಶಾಲೆ ಆರಂಭವಾದ ಮೇಲೆ ಮೊದಲು ನಿಮ್ಮ ಮಗು ನಿದ್ದೆಯ ಕ್ರಮವನ್ನು ಬದಲಿಸಿಕೊಳ್ಳಬೇಕು. ಕೆಲವು ಮಕ್ಕಳು ತಡವಾಗಿ ಮಲಗಿ ತಡವಾಗಿ ಏಳುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಅದನ್ನು ಬಿಡಿಸಿ. ಮಕ್ಕಳಿಗೆ ಕನಿಷ್ಠ 11 ಗಂಟೆಗಳ ನಿದ್ದೆ ಬೇಕು. ಅದಕ್ಕಾಗಿ ಹಗಲಿನ ವೇಳೆಯೂ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆದರೆ ಶಾಲೆಗೆ ಹೋಗಲು ಆರಂಭಿಸಿದ ಮೇಲೆ ಇದನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ. ಹೊಸ ದಿನಚರಿಗೆ ಮಗುವನ್ನು ಈಗಿನಿಂದಲೇ ರೂಢಿ ಮಾಡಿಸಿ. ಬೇಗ ಮಲಗಿ ಬೇಗ ಏಳುವ ಅಭ್ಯಾಸ ರೂಢಿ ಮಾಡಿಸಿ.

ಮಲಗುವ ಸಮಯ ಹಾಗೂ ಏಳುವ ದಿನಚರಿ ರೂಢಿಸಿ

ಮಗುವಿನ ನಿದ್ದೆ ಹಾಗೂ ಊಟದ ವಿಚಾರದಲ್ಲಿ ಸ್ಥಿರತೆ ಬಹಳ ಮುಖ್ಯ. ಹಾಗಾಗಿ ಮಗುವಿಗೆ ಒಂದೇ ಸಮಯದಲ್ಲಿ ಮಲಗಿ ಒಂದೇ ಸಮಯದಲ್ಲಿ ಏಳುವ ಅಭ್ಯಾಸವನ್ನು ರೂಢಿಸಿ. ಇದೇ ದಿನಚರಿಗೆ ಹೊಂದಿಕೊಳ್ಳುವಂತೆ ಅವರಲ್ಲಿ ಶಿಸ್ತು ರೂಢಿಸಿ.

ಓದಲು ಸಮಯ ಮೀಸಲಿಡಿ

ಮಕ್ಕಳಿಗೆ ಈಗಿನಿಂದಲೇ ಓದುವ ಅಭ್ಯಾಸವನ್ನು ರೂಢಿಸಿ. ಆರಂಭಿಕ ದಿನಗಳಿಂದಲೇ ಮಕ್ಕಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸುವುದು ಬಹಳ ಮುಖ್ಯ. ಇದು ಓದಿನ ಅಭಿರುಚಿ ಬೆಳೆಯುವುದಕ್ಕೆ ಮಾತ್ರವಲ್ಲ ಅವರಲ್ಲಿ ಶಬ್ದಭಂಡಾರವೂ ವೃದ್ಧಿಯಾಗುತ್ತದೆ. ನಿಮ್ಮ ಮಗುವಿನ ಭಾಷೆಯೂ ಸುಧಾರಿಸುತ್ತದೆ. ಮಲಗುವ ಮುನ್ನ ಓದುವ ಅಭ್ಯಾಸ ರೂಢಿಸುವುದರಿಂದ ಉತ್ತಮ ನಿದ್ದೆಗೂ ಸಹಕಾರಿ.

ಶೌಚಾಲಯ ಬಳಕೆಯ ಬಗ್ಗೆ ತಿಳಿಸಿ

ಮಗು ಶಾಲೆಗೆ ಹೋಗಲು ಆರಂಭಿಸುತ್ತದೆ ಎಂದಾಗ ಪೋಷಕರು ಮಗುವಿಗೆ ಟಾಯ್ಲೆಟ್‌ ಬಳಕೆಯ ಬಗ್ಗೆ ತಿಳಿವಳಿಕೆ ಮೂಡಿಸುವುದು ಬಹಳ ಮುಖ್ಯ. ಟಾಯ್ಲೆಟ್‌ ಬಳಕೆಯ ಬಗ್ಗೆ ತರಬೇತಿ ನೀಡುವುದರಿಂದ ಮಗು ಶಾಲೆಯಲ್ಲಿ ಟಾಯ್ಲೆಟ್‌ ಬಳಕೆಯ ವಿಚಾರದಲ್ಲಿ ಮುಜುಗರ ಎದುರಿಸುವುದಿಲ್ಲ.

ಸ್ವಾತಂತ್ರವಾಗಲು ಸಹಾಯ ಮಾಡಿ

ಊಟ ಮಾಡುವುದು, ಊಟ ಮಾಡಿದ ತಟ್ಟೆಯನ್ನು ಎತ್ತಿ ಇಡುವುದು, ಆಟದ ನಂತರ ಆಟಿಕೆಗಳನ್ನು ಜೋಡಿಸುವುದು, ಪುಸ್ತಕಗಳನ್ನು ಜೋಡಿಸಿಕೊಳ್ಳುವುದು ಇಂತಹ ಕೆಲಸಗಳನ್ನು ಸ್ವಾತಂತ್ರ್ಯರಾಗಿ ಮಾಡಿಕೊಳ್ಳುವುದನ್ನು ಮಕ್ಕಳಿಗೆ ಕಲಿಸಿ. ಕರ್ಚಿಫ್‌ ಮಡಿಚುವುದು, ಸಾಕ್ಸ್‌ ಧರಿಸುವುದು, ಶರ್ಟ್‌ ಬಟನ್‌ ಹಾಕಿಕೊಳ್ಳುವುದು ಇಂತಹ ಅಭ್ಯಾಸಗಳನ್ನು ರೂಢಿಸಿ.

ಮೊದಲೇ ಶಾಲೆಗೆ ಕರೆದುಕೊಂಡು ತೋರಿಸಿ

ಒಂದೇ ಸಲಕ್ಕೆ ಶಾಲೆ ಎಂದರೆ ಮಗು ಭಯಗೊಳ್ಳುವುದು ಸಹಜ. ಆಗಾಗ ಮಗುವಿಗೆ ಶಾಲೆಯ ಬಳಿ ಕರೆದುಕೊಂಡು ಹೋಗಿ ಶಾಲೆಯ ವಾತಾವರಣವನ್ನು ಪರಿಚಯ ಮಾಡಿಸಿ. ಶಾಲೆಯಲ್ಲಿನ ಪರಿಕರಗಳು, ಆಟೋಟಕ್ಕೆ ಬಳಸುವ ವಸ್ತುಗಳು ಇಂತವುಗಳ ಪರಿಚಯ ಮಾಡಿಸಿ. ಇದರಿಂದ ಮಗು ಶಾಲೆಗೆ ವಿಚಾರದಲ್ಲಿ ಧನಾತ್ಮಕ ಭಾವ ಬೆಳೆಸಿಕೊಳ್ಳುತ್ತದೆ.

ಅಳುವುದು ಸಹಜ

ಮಗು ಶಾಲೆಗೆ ಹೋಗುವಾಗ ಜೋರಾಗಿ ಅಳುವುದು ಸಹಜ. ನಿಮ್ಮ ಜೊತೆಗೆ ಇದ್ದ ಮಗುವನ್ನು ಶಾಲೆಗೆ ಕಳುಹಿಸುವಾಗ ನಿಮಗೂ ಅಳು ಬರುತ್ತದೆ. ಅದಕ್ಕಾಗಿ ನೀವು ಸಿದ್ಧರಾಗಬೇಕು. ಮಕ್ಕಳ ಶಾಲೆಯ ಆರಂಭದ ದಿನಗಳಲ್ಲಿ ಪೋಷಕರು ಸಾಕಷ್ಟು ತಾಳ್ಮೆಯಿಂದ ಇರುವುದು ಮುಖ್ಯ.

ಮಗುವನ್ನು ಮೊದಲ ಬಾರಿಗೆ ಶಾಲೆಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದರೆ ಈ ಎಲ್ಲವನ್ನೂ ಅನುಸರಿಸುವುದು ಬಹಳ ಮುಖ್ಯ. ಪೋಷಕರು ಈಗಿನಿಂದಲೇ ಮಗುವನ್ನು ಶಾಲೆಗೆ ಸಿದ್ಧತೆ ಮಾಡಲು ಈ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner