ಕನ್ನಡ ಸುದ್ದಿ  /  Lifestyle  /  Parenting Tips Parents Should Follow These Rules For Children To Be More Successful Arc

Parenting Tips: ಮನೆಯೇ ಮೊದಲ ಪಾಠಶಾಲೆ; ಮಕ್ಕಳು ಬದುಕಿನಲ್ಲಿ ಯಶಸ್ಸು ಗಳಿಸಲು ಹೀಗಿರಲಿ ಮನೆಯ ವಾತಾವರಣ

ಮಕ್ಕಳು ಶಾಲೆಗೆ ಹೋಗಿ ವಿದ್ಯೆ ಕಲಿಯುವುದರ ಜೊತೆಗೆ ಅವರು ಮನೆಯಲ್ಲಿ ಪಾಲಿಸುವ ಶಿಸ್ತು ಸಹ ಅಷ್ಟೇ ಮುಖ್ಯ. ಅದು ಅವರಿಗೆ ಬದುಕಿನಲ್ಲಿ ಯಶಸ್ಸು ಗಳಿಸಲು ನೆರವಾಗುತ್ತದೆ. ಪೋಷಕರು ಮನೆಯಲ್ಲಿ ಮಕ್ಕಳಿಗೆ ನೆರವಾಗುವ ಈ ರೀತಿಯ ವಾತಾವರಣ ಕಲ್ಪಿಸುವುದು ಮುಖ್ಯವಾಗುತ್ತದೆ. ಮಕ್ಕಳಿಗೆ ಜವಾಬ್ದಾರಿ ಕಲಿಸುವುದರ ಜೊತೆಗೆ ಪ್ರೋತ್ಸಾಹ ನೀಡುವುದು ಕೂಡ ಪೋಷಕರ ಕರ್ತವ್ಯ.

ಮನೆಯೇ ಮೊದಲ ಪಾಠಶಾಲೆ
ಮನೆಯೇ ಮೊದಲ ಪಾಠಶಾಲೆ

ಎಲ್ಲಾ ಪೋಷಕರು ತಮ್ಮ ಮಗುವಿಗೆ ಒಳಿತೇ ಆಗಬೇಕು ಎಂದು ಬಯಸುವುದು ಸಹಜ. ಮಕ್ಕಳು ಚಿಕ್ಕವರಿರುವಾಗಲೇ ಭದ್ರ ಅಡಿಪಾಯ ಹಾಕಬೇಕು, ಜೊತೆಗೆ ಮಕ್ಕಳಿಗೆ ಕಲಿಕೆಯಲ್ಲಿ ಪ್ರೀತಿಯನ್ನು ಮೂಡಿಸಬೇಕು. ಮುಂದೆ ಅದೇ ಅವರಿಗೆ ಶೈಕ್ಷಣಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಯಶಸ್ಸ ಗಳಿಸಲು ಸಹಾಯ ಮಾಡುತ್ತದೆ. ಪೋಷಕರು ಮಕ್ಕಳಿಗೆ ಸರಿಯಾಗಿ ಮಾರ್ಗದರ್ಶನ ಮಾಡುವುದರಿಂದ ಮಾತ್ರ ಭವಿಷ್ಯದಲ್ಲಿ ಮಕ್ಕಳು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಯಶಸ್ವಿಯಾಗಲು ಪೋಷಕರು ತಪ್ಪದೇ ಪಾಲಿಸಬೇಕಾದ ಕ್ರಮಗಳಿವು.

ಮನೆಯ ವಾತಾವರಣ ಉತ್ತಮವಾಗಿರಲಿ

ಮನೆಯಲ್ಲಿ ಮಕ್ಕಳಿಗೆ ಉತ್ತಮ ವಾತಾವರಣವನ್ನು ನಿರ್ಮಿಸಿ ಕೊಡುವುದು ಯಶಸ್ಸಿನ ಬೀಜ ಬಿತ್ತಿದಂತೆ. ಮಕ್ಕಳಿಗೆ ದಿನಚರಿ ಪಾಲಿಸುವುದನ್ನು ರೂಢಿಸಿ. ಅಂದರೆ ಅವರ ಹೋಂವರ್ಕ್‌, ಆಟ, ನಿದ್ದೆ ಇವುಗಳಿಗೆ ನಿರ್ದಿಷ್ಟ ಸಮಯ ಗೊತ್ತುಪಡಿಸಿ. ಟೈಮ್‌ ಟೇಬಲ್‌ ಹಾಕಿಕೊಡಿ. ಇದು ಅವರಿಗೆ ಹೊಸತನ್ನು ಕಲಿಯಲು ಅವಕಾಶ ಮಾಡಿಕೊಡುತ್ತದೆ. ಶಾಲೆಯಲ್ಲಿ ಕಲಿಯುವ ಕೌಶಲಗಳು ನಿಜ ಜೀವನಕ್ಕೆ ಹೇಗೆ ಸಂಬಂಧಿಸಿದೆ ಎಂದು ತಿಳಿಸಿಕೊಡಿ. ಮಗುವಿಗೆ ಶಾಲೆಯ ದಿನಗಳಲ್ಲಿ ಹೊಸದನ್ನು ಕಲಿಯುವ ತುಡಿತ, ಕುತೂಹಲಗಳನ್ನು ಬೆಳೆಸಿಕೊಳ್ಳುವಂತೆ ಮಾಡುವುದು ಅವರನ್ನು ಚಾಂಪಿಯನ್ನಾಗಿಸಲು ಸಹಾಯ ಮಾಡುತ್ತದೆ.

ಶಾಲೆಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

ನಿಮ್ಮ ಮಗುವಿನ ಶಾಲೆ ಒಂದು ಸಮುದಾಯ ಎಂದು ಯೋಚಿಸಿ. ಅಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿ. ನಿಯಮಿತವಾಗಿ ಶಾಲೆಗೆ ಭೇಟಿ ನೀಡಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತಿಳಿದುಕೊಳ್ಳಿ. ಶಾಲೆಯ ಚಟವಟಿಕೆ, ಕಾರ್ಯಕ್ರಮ ಮತ್ತು ಪೇರೆಂಟ್‌–ಟೀಚರ್ಸ್‌ ಮೀಟಿಂಗ್‌ಗಳಿಗೆ ತಪ್ಪದೆ ಹಾಜಾರಾಗಿ. ಅದರಲ್ಲಿ ನಿಮಗೆ ಆಸಕ್ತಿಯಿದೆ ಎಂಬುದನ್ನು ತೋರಿಸಿ. ಶಾಲೆಯೊಂದಿಗೆ ನೀವು ಬೆಳೆಸಿಕೊಳ್ಳುವ ಉತ್ತಮ ಬಾಂಧವ್ಯ ನಿಮ್ಮ ಮಗುವಿನ ಶೈಕ್ಷಣಿಕ ಪ್ರಗತಿಯ ಜೊತೆಗೆ ಭವಿಷ್ಯದಲ್ಲಿ ಯಶಸ್ಸು ಗಳಿಸಲು ನೆರವಾಗುತ್ತದೆ.

ಜವಾಬ್ದಾರಿ ಕಲಿಸಿ, ಸ್ವಾತಂತ್ರ್ಯ ನೀಡಿ

ನಿಮ್ಮ ಮಕ್ಕಳಿಗೆ ಅವರ ಜವಾಬ್ದಾರಿಗಳೇನೆಂಬುದನ್ನು ತಿಳಿಸಿಕೊಡಿ. ಕೆಲವು ವಿಷಯಗಳಿಗೆ ಸ್ಪಷ್ಟ ನಿಯಮಗಳನ್ನು ಹಾಕಿಕೊಡಿ. ಜೊತೆಗೆ ಯೋಚಿಸುವ ಸ್ವಾತಂತ್ರ್ಯವನ್ನು ನೀಡಿ. ನಿಮ್ಮ ಮಕ್ಕಳಿಗೆ ಅವರು ಅನುಸರಿಸಬೇಕಾದ ಜವಾಬ್ದಾರಿಗಳನ್ನು ಮೊದಲು ಅರ್ಥಮಾಡಿಸಿ. ಅವರು ವಿದ್ಯಾಭ್ಯಾಸದಲ್ಲಿ ಹೇಗೆ ಪ್ರಗತಿಹೊಂದುತ್ತಿದ್ದಾರೆ ಎಂಬುದನ್ನು ಆಗಾಗ ಮೇಲ್ವಿಚಾರಣೆ ಮಾಡಿ. ಅವರ ಪ್ರಯತ್ನಗಳನ್ನು ಮುಕ್ತ ಮನಸ್ಸಿನಿಂದ ಪ್ರಶಂಸಿಸಿ, ಪ್ರೋತ್ಸಾಹಿಸಿ. ಆದರೆ ವೈಭವೀಕರಿಸಬೇಡಿ. ಅವರ ಕೆಲಸಗಳ ಜವಾಬ್ದಾರಿಯನ್ನು ಅವರೇ ತೆಗೆದುಕೊಳ್ಳುವಂತೆ ಮಾಡಿ. ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ. ಇದು ಮಕ್ಕಳಿಗೆ ಅವರ ಹೋಂವರ್ಕ್‌ಗಳನ್ನು ಸ್ವತಂತ್ರವಾಗಿ ಮಾಡಲು ಸಹಾಯಮಾಡುತ್ತದೆ. ಯೋಚನಾ ಶಕ್ತಿ ಬೆಳೆಯುತ್ತದೆ. ಸವಾಲುಗಳನ್ನು ಎದುರಿಸುವ ಧೈರ್ಯ ಅವರಲ್ಲಿ ಮೂಡುತ್ತದೆ.

ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡಿ

ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. ಯಾವ ಯಾವ ವಿಷಯಗಳಿವೆ ಎಂಬುದನ್ನು ಗಮನಿಸಿ. ಪುಸ್ತಕದಲ್ಲಿರುವ ಸವಾಲುಗಳಿಗೆ ನಿಮ್ಮ ಮಕ್ಕಳು ಸರಿಯಾಗಿ ಉತ್ತರಿಸುತ್ತಾರಾ ಎಂಬುದರ ಮೇಲೂ ಗಮನ ಹರಿಸಿ. ಅಭ್ಯಾಸದ ಸರಿಯಾದ ಕ್ರಮ ಹೇಳಿಕೊಡಿ. ಅಧ್ಯಯನ ಮತ್ತು ಪರೀಕ್ಷೆಯ ತಯಾರಿಯಲ್ಲಿ ಅವರಿಗೆ ಸಹಾಯ ಮಾಡಿ. ವಿಷಯಗಳನ್ನು ಗಮನವಿಟ್ಟು ಓದುವುದು ಮತ್ತು ಪುನರಾವರ್ತನೆ ಮಾಡುವುದನ್ನು ಹೇಳಿಕೊಡಿ. ಪ್ರತಿದಿನ ಪೌಷ್ಟಿಕ ಆಹಾರ ನೀಡಿ. ನಿಗದಿತ ಸಮಯದಲ್ಲಿ ಮಲಗುವುದು ಮತ್ತು ಏಳುವುದನ್ನು ರೂಢಿಸಿ. ಮಕ್ಕಳು ದಿನಚರಿಯನ್ನು ತಪ್ಪದೆ ಪಾಲಿಸುವಂತೆ ತಿಳಿ ಹೇಳಿ.

ಮಕ್ಕಳನ್ನು ಮಾನಸಿಕವಾಗಿ ಸಿದ್ಧಪಡಿಸಿದರೆ ಭವಿಷ್ಯದಲ್ಲಿ ಅವರು ಎಂತಹ ಕಠಿಣ ಸವಾಲುಗಳನ್ನಾದರೂ ಎದುರಿಸಬಲ್ಲರು. ಇದು ಮಕ್ಕಳು ಯಶಸ್ಸನ್ನು ಗಳಿಸಲು ಪೋಷಕರು ಪಾಲಿಸಬೇಕಾದ ವಿಷಯಗಳು.

ವಿಭಾಗ