ಮಕ್ಕಳು ಪದೇ ಪದೇ ಶೀತ, ಜ್ವರದಿಂದ ಬಳಲುತ್ತಿದ್ದರೆ ಈ ವಿಚಾರಗಳತ್ತ ಗಮನ ಹರಿಸಿ; ಹೀಗಿರಲಿ ಮಗುವಿನ ಆರೈಕೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳು ಪದೇ ಪದೇ ಶೀತ, ಜ್ವರದಿಂದ ಬಳಲುತ್ತಿದ್ದರೆ ಈ ವಿಚಾರಗಳತ್ತ ಗಮನ ಹರಿಸಿ; ಹೀಗಿರಲಿ ಮಗುವಿನ ಆರೈಕೆ

ಮಕ್ಕಳು ಪದೇ ಪದೇ ಶೀತ, ಜ್ವರದಿಂದ ಬಳಲುತ್ತಿದ್ದರೆ ಈ ವಿಚಾರಗಳತ್ತ ಗಮನ ಹರಿಸಿ; ಹೀಗಿರಲಿ ಮಗುವಿನ ಆರೈಕೆ

Winter Care: ಚಳಿಗಾಲ ಮುಕ್ತಾಯವಾದರೂ ಚಳಿ ಇನ್ನೂ ಕಡಿಮೆ ಆಗಿಲ್ಲ. ಹವಾಮಾನ ಬದಲಾದಂತೆ ಮಕ್ಕಳ ಆರೋಗ್ಯದಲ್ಲೂ ಬದಲಾವಣೆ ಉಂಟಾಗುವುದು ಸಹಜ. ನಿಮ್ಮ ಮಕ್ಕಳು ಪದೇ ಪದೇ ಶೀತ, ಜ್ವರದಿಂದ ಬಳಲುತ್ತಿದ್ದರೆ ಪೋಷಕರು ಈ ಬಗ್ಗೆ ಗಮನ ಹರಿಸಬೇಕು. ಮಕ್ಕಳ ಆರೈಕೆ ವಿಚಾರದಲ್ಲಿ ಪೋಷಕರಿಗೆ ಇಲ್ಲಿದೆ 5 ಉತ್ತಮ ಸಲಹೆ.

ಚಳಿಗಾಲದಲ್ಲಿ ಚಿಕ್ಕ ಮಕ್ಕಳ ಆರೈಕೆಗೆ 5 ಉತ್ತಮ ಸಲಹೆಗಳು
ಚಳಿಗಾಲದಲ್ಲಿ ಚಿಕ್ಕ ಮಕ್ಕಳ ಆರೈಕೆಗೆ 5 ಉತ್ತಮ ಸಲಹೆಗಳು (HT File Photo)

ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಕಡೆ ಎಲ್ಲ ಪೋಷಕರು ಸ್ವಲ್ಪ ಹೆಚ್ಚೇ ಗಮನ ಹರಿಸಬೇಕಾಗುತ್ತದೆ. ಪೋಷಕರು ಚಿಕ್ಕ ಮಕ್ಕಳ ಮೇಲೆ ತೋರಿಸುವ ಕಾಳಜಿ, ಪ್ರೀತಿ ಅವರನ್ನು ಆರೋಗ್ಯವಂತರನ್ನಾಗಿಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಎಲ್ಲರೂ ಜಾಗರೂಕರಾಗಿಬೇಕು. ಮಕ್ಕಳು ಅದರಲ್ಲೂ ಒಂದು ವರ್ಷದ ಒಳಗಿನ ಮಕ್ಕಳಿಗೆ ವಿಶೇಷ ಕಾಳಜಿಯ ಅವಶ್ಯಕತೆಯಿರುತ್ತದೆ. ಮಕ್ಕಳ ಊಟ, ಆಟ, ಅವರ ಬಟ್ಟೆ, ಹಾಸಿಗೆ ಹೀಗೆ ಎಲ್ಲದರ ಮೇಲೂ ನಿಗಾವಹಿಸಬೇಕಾಗುತ್ತದೆ. ಚಳಿಯಾಗದ ಬೆಚ್ಚಗಿನ ಉಡುಪುಗಳನ್ನೇ ಆಯ್ದುಕೊಳ್ಳಬೇಕಾಗುತ್ತದೆ. ಮಕ್ಕಳ ಊಟದಲ್ಲೂ ಅಷ್ಟೇ ಬೆಚ್ಚಗಿನ ಆಹಾರಗಳನ್ನೇ ನೀಡಬೇಕಾಗುತ್ತದೆ. ಹಾಗಾಗಿ ಚಳಿಗಾಲವೆಂದರೆ ಚಿಕ್ಕ ಮಕ್ಕಳಿಗೂ ಮತ್ತು ಅವರ ಆರೋಗ್ಯವನ್ನು ಕಾಳಜಿಮಾಡುವ ಪೋಷಕರಿಗೂ ಸ್ವಲ್ಪ ಕಷ್ಟವಾದ ಸಮಯ ಎನ್ನಬಹುದು. ನಿಮ್ಮ ಮಕ್ಕಳನ್ನು ಚಳಿಗಾಲದ ಸಾಮಾನ್ಯ ಕಾಯಿಲೆಗಳಾದ ಶೀತ, ಜ್ವರದಿಂದ ರಕ್ಷಿಸಲು ನೀವು ನಿಮ್ಮ ಆರೈಕೆಯ ವಿಧಾನದಲ್ಲಿ ಕೆಲವು ಅಂಶಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಅವು ನಿಮ್ಮ ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ನಿಮ್ಮ ಚಿಕ್ಕ ಮಕ್ಕಳನ್ನು ಈ ರೀತಿಯಾಗಿ ಆರೈಕೆ ಮಾಡಿ

1) ಸೂಕ್ತ ಬಟ್ಟೆ ಆರಿಸಿಕೊಳ್ಳಿ

ಚಿಕ್ಕ ಮಕ್ಕಳಿಗೆ ಚಳಿಗಾಲಕ್ಕಾಗಿ ಸೂಕ್ತ ಬಟ್ಟೆಗಳನ್ನು ಆರಿಸಿಕೊಳ್ಳುವುದು ಜಾಣತನ. ಅದು ಮೃದುವಾಗಿದ್ದು ಕೈ–ಕಾಲುಗಳನ್ನು ಮುಚ್ಚುವಂತಿರಬೇಕು. ಉಣ್ಣೆಯ ಬಟ್ಟೆಗಳು ಉತ್ತಮ ಆಯ್ಕೆಯಾಗಿದೆ. ದೇಹವನ್ನು ಬೆಚ್ಚಗಿಡಲು ಇವು ಪರಿಣಾಮಕಾರಿ ಮಾರ್ಗವಾಗಿದೆ. ಮಕ್ಕಳ ದೇಹದ ಭಾಗಗಳಿಗೆ ತಂಪು ಹವೆ ತಾಗದಂತೆ ಬಟ್ಟೆಗಳನ್ನು ಹಾಕಿ. ತಲೆ, ಕೈ–ಕಾಲು, ಪಾದಗಳಿಗೆ ಕ್ಯಾಪ್‌, ಸಾಕ್ಸ್‌ಗಳನ್ನು ಹಾಕಿ. ಮನೆಯಿಂದ ಹೊರಗಡೆ ಹೋಗುವಾಗ ಖಂಡಿತ ಸಾಕ್ಸ್‌ ಮತ್ತು ಕ್ಯಾಪ್‌ಗಳನ್ನು ಮರೆಯಬೇಡಿ.

2) ನೈಸರ್ಗಿಕ ತೈಲಗಳಿಂದ ಮಸಾಜ್‌ ಮಾಡಿ

ನಿಮ್ಮ ಮಗುವಿಗೆ ಮಸಾಜ್‌ನ ಅವಶ್ಯಕತೆ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಚಿಕ್ಕ ಮಕ್ಕಳ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ನೈಸರ್ಗಿಕ ತೈಲಗಳಿಂದ ಮಸಾಜ್‌ ಮಾಡುವುದು ಉತ್ತಮ. ಇದು ಮಗುವನ್ನು ಬೆಚ್ಚಗಾಗಿಸುವುದರ ಜೊತೆಗೆ ಮೂಳೆಗಳ ಬೆಳವಣಿಗೆಗೂ ಸಹಾಯ ಮಾಡುತ್ತದೆ.

3) ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಕೊಡಿ

ಮಗುವಿನ ಆರೋಗ್ಯಕರ ಬೆಳವಣಿಗೆಗೆ ತಾಯಿಯ ಹಾಲು ಉತ್ತಮವಾಗಿದೆ. ಇದು ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ನಿಮ್ಮ ಮಗು ಆರು ತಿಂಗಳಿಗಿಂತ ಮೇಲ್ಪಟ್ಟಿದ್ದರೆ ಆಗ ವಿವಿಧ ಹಣ್ಣು ಮತ್ತು ತರಕಾರಿಗಳನ್ನು ನೀಡಿ. ತರಕಾರಿಗಳನ್ನು ಮೃದುವಾಗಿ ಬೇಯಿಸಿ ಕೊಡಿ. ಇವು ಪೌಷ್ಟಿಕಾಂಶ ಭರಿತ ಆಹಾರಗಳು. ಇವುಗಳು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ಮಗುವನ್ನು ಆರೋಗ್ಯವಂತನನ್ನಾಗಿಸುತ್ತವೆ.

4) ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ನವಜಾತ ಶಿಶುಗಳ ಆರೈಕೆಯಲ್ಲಿ ಎಚ್ಚರಿಕೆಯಿಂದರಬೇಕು ಮತ್ತು ಅದಕ್ಕೆ ಸರಿಯಾದ ತಯಾರಿ ಮಾಡಿಕೊಂಡಿರಬೇಕು. ಎಚ್ಚರಿಕೆಯ ಆರೈಕೆಯು ಮಗುವನ್ನು ಸಾಮಾನ್ಯ ಶೀತ, ಜ್ವರಗಳಂತಹ ಸೋಂಕುಗಳಿಂದ ದೂರವಿರಸಬಹುದು. ಚಿಕ್ಕ ಮಕ್ಕಳಲ್ಲಿ ಅನಾರೋಗ್ಯದ ಲಕ್ಷಣಗಳನ್ನು ಗಮನಿಸುತ್ತಿರಬೇಕು. ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ ಬೇಡ.

5) ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಿ

ನೀವು ಹಾಲುಣಿಸುವ ತಾಯಿಯಾಗಿದ್ದರೆ, ಮೊದಲು ನೀವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಚಳಿಗಾಲದಲ್ಲಿ, ತಾಯಿಯೂ ಸಹ ಬೆಚ್ಚಗಿನ ಉಡುಪು ಧರಿಸಬೇಕು ಮತ್ತು ಬಿಸಿ ಆಹಾರಗಳನ್ನೇ ಸೇವಿಸಬೇಕು. ಏಕೆಂದರೆ ಸಾಮಾನ್ಯ ಶೀತ, ಜ್ವರ ಮುಂತಾದವುಗಳು ತಾಯಿಯಿಂದ ಮಗುವಿಗೆ ಮೊದಲು ಹರಡುತ್ತದೆ. ಹಾಗಾಗಿ ನೀವು ಮಲಗುವ ಕೋಣೆಯ ತಾಪಮಾನ ಕಡಿಮೆಯಾದಾಗ, ತಾಪಮಾನವನ್ನು ಸ್ಥಿರವಾಗಿಡಲು ರೂಮ್ ಹೀಟರ್‌ಗಳನ್ನು ಬಳಸಬಹುದು. ಕೋಣೆಯ ಸ್ವಚ್ಛತೆಯ ಕಡೆಗೂ ಗಮನ ಹರಿಸಬೇಕು. ಪರಿಸರ ಸ್ವಚ್ಛವಾಗಿದ್ದರೆ ಅರ್ಧದಷ್ಟು ರೋಗ ಹರಡುವುದನ್ನು ತಪ್ಪಿಸಬಹುದು.

Whats_app_banner