ಶಾಲೆ ಶುರುವಾಗಿದೆ, ಮಳೆಯೂ ಜೋರಾಗಿದೆ; ಮಕ್ಕಳ ಸುರಕ್ಷತೆ ವಿಚಾರದಲ್ಲಿ ಪೋಷಕರು ಗಮನಿಸಬೇಕಾದ ಅಂಶಗಳು
ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗಿದೆ. ಇದರೊಂದಿಗೆ ಮಳೆರಾಯನ ಅಬ್ಬರವೂ ಜೋರಾಗಿದೆ. ರಾಜ್ಯದಾದ್ಯಂತ ಮಳೆಯ ಪ್ರಮಾಣ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಪೋಷಕರು ಗಮನ ತಪ್ಪದೇ ಹರಿಸಬೇಕು.

ಮಕ್ಕಳೆಲ್ಲಾ ಬೇಸಿಗೆ ರಜೆ ಮುಗಿಸಿ, ಶಾಲೆಗೆ ಹೋಗಲು ಸಿದ್ಧರಾಗಿದ್ದಾರೆ. ಇಂದು (ಮೇ 29) ಬಹುತೇಕ ಕಡೆ ಶಾಲೆ, ಕಾಲೇಜುಗಳು ಆರಂಭವಾಗುತ್ತಿವೆ. ಆದರೆ ಶಾಲೆ ಆರಂಭದ ಜೊತೆ ಮಳೆರಾಯನ ಅಬ್ಬರವೂ ಜೋರಾಗಿದೆ. ರಾಜ್ಯದಾದ್ಯಂತ ಬಹುತೇಕ ಕಡೆ ಮಳೆ ಸುರಿಯುತ್ತಿದೆ. ಆ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸವಾಲು.
ಜೋರಾಗಿ ಬೀಸುವ ಗಾಳಿ, ರಭಸದಿಂದ ಸುರಿಯುತ್ತಿರುವ ಮಳೆ, ತುಂಬಿ ಹರಿಯುವ ಹಳ್ಳ–ಕೊಳ್ಳಗಳು, ಗುಡುಗು ಸಿಡಿಲು ಈ ನಡುವೆ ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸಬೇಕು. ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗೆ ಪೋಷಕರು ಏನೆಲ್ಲಾ ಗಮನ ಹರಿಸಬೇಕು ಎನ್ನುವ ವಿವರ ಇಲ್ಲಿದೆ.
ನದಿ, ಹಳ್ಳ ದಾಟುವಾಗ ಎಚ್ಚರ
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಕ್ಕಳು ಶಾಲೆಗೆ ಹೋಗುವಾಗ ಹಳ್ಳ, ನದಿ, ತೊರೆಗಳನ್ನು ದಾಟಿ ಹೋಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಅಪಾಯಗಳು ಎದುರಾಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಮಕ್ಕಳನ್ನು ಒಬ್ಬೊಬ್ಬರೇ ಬಿಡಬೇಡಿ. ನೀವು ಅವರ ಜೊತೆ ಹೋಗಿ ಶಾಲೆವರೆಗೆ ಬಿಟ್ಟು ಬಂದರೆ ಉತ್ತಮ. ಜೋರಾಗಿ ಹರಿಯುವ ನೀರು ಮಕ್ಕಳ ಪ್ರಾಣಕ್ಕೆ ಅಪಾಯ ಮಾಡಬಹುದು, ಹಾಗಾಗಿ ಎಚ್ಚರದಿಂದಿರುವುದು ಮುಖ್ಯವಾಗುತ್ತದೆ.
ಮರದ ಅಡಿ ನಿಲ್ಲದಂತೆ ಸೂಚಿಸಿ
ಜೋರಾಗಿ ಗುಡುಗು, ಸಿಡಿಲು, ಮಿಂಚು ಬರುವಾಗ ಮರದ ಅಡಿ ನಿಲ್ಲದಂತೆ ಮಕ್ಕಳಿಗೆ ತಿಳಿಸಿ ಹೇಳಿ. ಮರದಡಿ ನಿಲ್ಲುವುದರಿಂದ ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚು, ಹಸಿ ಮರಕ್ಕೆ ಸಿಡಲು ಬಡಿಯುವ ಸಾಧ್ಯತೆ ಹೆಚ್ಚು. ಹಾಗಾಗಿ ಮರದ ಅಡಿ ನಿಲ್ಲಬಾರದು ಎಂದು ಕಟ್ಟುನಿಟ್ಟಾಗಿ ಹೇಳಿ.
ಗಾಳಿ ಹೆಚ್ಚಿರುವ ಕಾರಣ ರೈನ್ ಕೋಟ್ ಉತ್ತಮ
ಶಾಲೆಗೆ ಹೋಗುವ ಮಕ್ಕಳಿಗೆ ಈ ಬಾರಿ ಛತ್ರಿ ಅಥವಾ ಕೊಡೆಗಿಂತ ರೈನ್‌ಕೋಟ್ ಉತ್ತಮ. ಗಾಳಿಯ ರಭಸ ಜೋರಾಗಿರುವ ಕಾರಣ ಕೊಡೆ ಹಾರಿ ಹೋಗುವುದು, ಮಕ್ಕಳಿಗೆ ಹಿಡಿಯಲು ಸಾಧ್ಯವಾಗದೇ ಇರುವುದು, ಮೈಯೆಲ್ಲಾ ಒದ್ದೆಯಾಗಿ ಮಕ್ಕಳು ಶಾಲೆಯಲ್ಲಿ ತೊಂದರೆ ಅನುಭವಿಸುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಅದಕ್ಕಾಗಿ ರೈನ್‌ಕೋಟ್ ಕೊಡಿಸಿ. ಇದರಿಂದ ಮಕ್ಕಳಿಗೆ ಕಿರಿಕಿರಿ ತಪ್ಪಿಸಬಹುದು.
ಗುಡ್ಡ, ಎತ್ತರ ಸ್ಥಳದಲ್ಲಿ ಎಚ್ಚರ ವಹಿಸುವಂತೆ ಹೇಳಿ
ಗುಡ್ಡ ಪ್ರದೇಶ, ಎತ್ತರದ ಸ್ಥಳಗಳಲ್ಲಿ ಸಾಕಷ್ಟು ಎಚ್ಚರದಿಂದಿರುವಂತೆ ಹೇಳಿ. ಮಳೆ ಬರುವಾಗ ಗುಡ್ಡ ಪ್ರದೇಶಗಳು ಇದ್ದಕ್ಕಿದ್ದಂತೆ ಕುಸಿಯುವ ಸಾಧ್ಯತೆ ಹೆಚ್ಚು, ಇದರಿಂದ ಅನಾಹುತಗಳ ಸಂಭವಿಸಬಹುದು. ಅದಕ್ಕಾಗಿ ಶಾಲೆಯಲ್ಲಿ ಅಥವಾ ಶಾಲೆಗೆ ಹೋಗಿ, ಬರುವ ಸಂದರ್ಭ ಗುಡ್ಡ ಪ್ರದೇಶಗಳ ಬಳಿ ತೆರಳದಂತೆ ಅವರಿಗೆ ಸಲಹೆ ನೀಡಿ. ಅದರಿಂದ ಆಗುವ ಅಪಾಯಗಳ ಬಗ್ಗೆ ತಿಳಿಸಿ ಹೇಳಿ.
ಶಾಲಾ ವಾಹನದವರೆಗೂ ಬಿಟ್ಟು ಬನ್ನಿ
ಇತ್ತೀಚಿನ ದಿನಗಳಲ್ಲಿ ಮಕ್ಕಳು ಶಾಲಾ ವಾಹನದಲ್ಲಿಯೇ ಶಾಲೆಗೆ ತೆರಳುವುದು ಹಾಗೂ ಮನೆಗೆ ಮರಳುವುದು ಸಹಜ. ನಿಮ್ಮ ಮನೆಯ ಬಳಿಗೆ ಶಾಲಾ ವಾಹನ ಬರುವುದಿಲ್ಲ ಎಂದರೆ ನೀವೇ ಮಕ್ಕಳನ್ನು ಕರೆದುಕೊಂಡು ಹೋಗಿ ಬಿಟ್ಟು ಬನ್ನಿ. ಶಾಲೆಯಿಂದ ಬರುವಾಗಲೂ ಶಾಲಾ ವಾಹನದ ಬಳಿ ಹೋಗಿ ನೀವೇ ಕರೆದುಕೊಂಡು ಬನ್ನಿ.
ಶಾಲೆಯಲ್ಲೂ ಸುರಕ್ಷತೆಗೆ ಗಮನ ಕೊಡಿ
ಮನೆಯಲ್ಲಿ ಪೋಷಕರು ಮಾತ್ರವಲ್ಲ, ಶಾಲೆಯಲ್ಲಿ ಶಿಕ್ಷಕರು ಕೂಡ ಮಕ್ಕಳ ಸುರಕ್ಷತೆ ಬಗ್ಗೆ ಗಮನ ಕೊಡಬೇಕು. ಮಳೆಗಾಲದಲ್ಲಿ ಮಕ್ಕಳಿಗೆ ಒಳಾಂಗಣ ಕ್ರೀಡೆಯಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು, ಹೊರಾಂಗಣ ಕ್ರೀಡೆಗಳಿಂದ ಮಕ್ಕಳಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚು.