ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಹದಿ ವಯಸ್ಸಿನ ಮಕ್ಕಳು ಪದೇ ಪದೇ ಕೋಪ ಮಾಡಿಕೊಳ್ತಾ ಇದ್ರೆ ಅವರಿಗೆ ಬಯ್ಯಬೇಡಿ, ಪರಿಸ್ಥಿತಿಯನ್ನು ಹೀಗೆ ನಿಭಾಯಿಸಿ

Parenting Tips: ಹದಿ ವಯಸ್ಸಿನ ಮಕ್ಕಳು ಪದೇ ಪದೇ ಕೋಪ ಮಾಡಿಕೊಳ್ತಾ ಇದ್ರೆ ಅವರಿಗೆ ಬಯ್ಯಬೇಡಿ, ಪರಿಸ್ಥಿತಿಯನ್ನು ಹೀಗೆ ನಿಭಾಯಿಸಿ

ಮಕ್ಕಳು ಹದಿವಯಸ್ಸಿಗೆ ಬಂದಾಗ ಅವರಲ್ಲಿ ದೈಹಿಕ ಬದಲಾವಣೆಗಳು ಮಾತ್ರ, ಮಾನಸಿಕ ಬದಲಾವಣೆಗಳೂ ಆಗುತ್ತವೆ. ಮಕ್ಕಳಲ್ಲಿ ವರ್ತನೆಯಲ್ಲೂ ಸಾಕಷ್ಟು ವ್ಯತ್ಯಾಸಗಳನ್ನು ಪೋಷಕರು ಗುರುತಿಸಬಹುದು. ಅದರಲ್ಲೂ ಹದಿ ವಯಸ್ಸಿನ ಮಕ್ಕಳು ಹೆಚ್ಚು ಸಿಟ್ಟಾಗುತ್ತಾರೆ. ಅಂತಹ ಸಂದರ್ಭದಲ್ಲಿ ಪೋಷಕರು ಅವರ ಮೇಲೆ ಕೋಪಗೊಂಡು ಕೂಗಾಡಬಾರದು. ಮಕ್ಕಳ ಕೋಪವನ್ನು ನಿರ್ವಹಿಸಲು ಪೋಷಕರಿಗೆ ಸಲಹೆ.

ಹದಿ ವಯಸ್ಸಿನ ಮಕ್ಕಳು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ತಾರಾ, ಅವರಿಗೆ ಬಯ್ಯಬೇಡಿ, ಪರಿಸ್ಥಿತಿಯನ್ನು ಹೀಗೆ ನಿಭಾಯಿಸಿ
ಹದಿ ವಯಸ್ಸಿನ ಮಕ್ಕಳು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ತಾರಾ, ಅವರಿಗೆ ಬಯ್ಯಬೇಡಿ, ಪರಿಸ್ಥಿತಿಯನ್ನು ಹೀಗೆ ನಿಭಾಯಿಸಿ

ಹದಿವಯಸ್ಸು ಎನ್ನುವುದನ್ನು ಹೀಗೆ ಎಂದು ಊಹಿಸಲು ಸಾಧ್ಯವಿಲ್ಲ. ಈ ಕಾಲಘಟ್ಟವು ಮಕ್ಕಳು ಹಾಗೂ ಪೋಷಕರು ಇಬ್ಬರಿಗೂ ಸವಾಲು. ಹದಿವಯಸ್ಸಿನಲ್ಲಿನ ಮಕ್ಕಳ ಮನಸ್ಥಿತಿಯನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಅವರ ವರ್ತನೆಗಳೂ ಸಂಪೂರ್ಣ ಬದಲಾಗುತ್ತದೆ. ಮಾತು ಮಾತು ಸಿಟ್ಟು ಮಾಡುವುದು, ಕೋಪಗೊಂಡು ಕಿರುಚಾಡುವುದು ಮಾಡುತ್ತಾರೆ. ಕೆಲವೊಮ್ಮೆ ಮಕ್ಕಳ ವರ್ತನೆ ಪೋಷಕರಿಗೆ ಭಯ, ಗೊಂದಲ ಮೂಡಿಸುತ್ತದೆ. ಪದೇ ಪದೇ ಮಕ್ಕಳು ಸಿಟ್ಟು ಮಾಡಿಕೊಳ್ಳುವುದನ್ನು ನೋಡಿ ಪೋಷಕರು ಕೋಪಗೊಂಡು ಬಯ್ಯುತ್ತಾರೆ. ಆದರೆ ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಇನ್ನಷ್ಟು ರೋಷ ಆಕ್ರೋಶ ಬೆಳೆಯುತ್ತದೆ.

ಟ್ರೆಂಡಿಂಗ್​ ಸುದ್ದಿ

ಮಕ್ಕಳು ಕೋಪಗೊಂಡಾಗ ನಿಮ್ಮ ವರ್ತನೆ ಹೀಗಿರದಿರಲಿ 

ಮಕ್ಕಳು ಪದೇ ಪದೇ ಕೋಪಗೊಂಡಾಗ ಪೋಷಕರು ತಾಳ್ಮೆ ಕಳೆದುಕೊಳ್ಳುವುದು ಸಹಜ. ಇದರಿಂದ ಸಿಕ್ಕ ಸಿಕ್ಕಲ್ಲಿ ಎಲ್ಲರೆದುರು ಬಯ್ಯುವುದು, ಹೊಡೆಯುವುದು ಮಾಡುವ ಪೋಷಕರು ಇದ್ದಾರೆ. ಆದರೆ ಹೀಗೆ ಮಾಡುವುದು ಸರಿಯಲ್ಲ. ಇದರಿಂದ ಪರಿಸ್ಥಿತಿ ಕೈಮೀರಿ ಹೋಗಬಹುದು. ಹಾಗಾಗಿ ಮಕ್ಕಳ ಕೋಪ ನಿಭಾಯಿಸುವುದನ್ನು ಪೋಷಕರು ಮೊದಲು ಕಲಿಯಬೇಕು. ಬೈದು, ಹೊಡೆದು ಬುದ್ದಿ ಹೇಳಲು ಅವರಿನ್ನೂ ಚಿಕ್ಕ ಮಕ್ಕಳಲ್ಲ ಎಂಬುದನ್ನು ನೀವು ಗಮನದಲ್ಲಿ ಇರಿಸಿಕೊಂಡಿರಬೇಕು.

ಹದಿವಯಸ್ಸಿನ ಮಕ್ಕಳು ತೋರುವ ಅಸಹಜ ಲಕ್ಷಣಗಳು

* ಕಿರುಚಾಡುವುದು

* ನಿಯಂತ್ರಣ ಕಳೆದುಕೊಂಡು ಮಾತನಾಡುವುದು

* ಕೈಗೆ ಸಿಕ್ಕಿದ್ದನ್ನು ಎಸೆಯುವುದು

* ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ನೋವು ಮಾಡಿಕೊಳ್ಳುವುದು

* ಹೊರಗಿನವರ ಜೊತೆ ಕೆಟ್ಟದಾಗಿ ವರ್ತಿಸುವುದು

* ಕುಡತ ಅಥವ ಡ್ರಗ್ಸ್‌ನಂತಹ ಚಟ ಅಂಟಿಸಿಕೊಳ್ಳುವುದು

* ತಮಗೆ ತಾವೇ ಹಾನಿ ಮಾಡಿಕೊಳ್ಳುವುದು

ಈ ರೀತಿ ವರ್ತನೆಗಳು ನಿಮ್ಮ ಮಗುವಿನಲ್ಲೂ ಕಂಡರೆ ನೀವು ಅದನ್ನು ಹೇಗೆ ಡೀಲ್‌ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಒಂದಿಷ್ಟು ಉದಾಹರಣೆ.

ಹದಿವಯಸ್ಸಿನ ಮಕ್ಕಳ ಸಿಟ್ಟನ್ನು ನಿಭಾಯಿಸೋದು ಹೇಗೆ?

ಸಹಾನೂಭೂತಿ ತೋರಿಸಿ: ಹದಿವಯಸ್ಸಿನ ಮಕ್ಕಳು ಕೋಪಗೊಂಡು ವಿಚಿತ್ರ ವರ್ತನೆ ತೋರುತ್ತಿದ್ದಾರೆ ಎಂದರೆ ನೀವು ಅವರ ಮೇಲೆ ಸಿಟ್ಟಾಗಬೇಡಿ, ಬದಲಾಗಿ ಸಹಾನುಭೂತಿ ತೋರಿಸಿ. ಅವರಿಗೆ ಯಾವ ಕಾರಣಕ್ಕೆ ಕೋಪ ಬರುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮಾತಿನಲ್ಲಿ ಅವರ ಬಗ್ಗೆ ಕಾಳಜಿ, ಸಹಾನುಭೂತಿ ಇದೆ ಎಂಬುದನ್ನು ತೋರಿಸಿ.

ಪರಿಣಾಮ ಹೇಗೆ ಇರಲಿ ನೀವು ಸ್ಥಿರವಾಗಿರಿ: ಹದಿವಯಸ್ಸಿನ ಮಕ್ಕಳನ್ನು ನಿರ್ವಹಿಸುವುದು ಎಂದರೆ ಬೆಣ್ಣೆಯಲ್ಲಿನ ಕೂದಲು ತೆಗೆದಂತೆ. ಮಕ್ಕಳ ವರ್ತನೆಯಂತೆ ನಿಮ್ಮ ವರ್ತನೆಯೂ ಇರಬಾರದು. ಅವರೊಂದಿಗೆ ಮಾತನಾಡುವಾಗ ಒಂದು ಗಡಿ ಹಾಕಿಕೊಳ್ಳಿ. ಅವರು ನಿಮ್ಮಿಂದ ಏನನ್ನು ನಿರೀಕ್ಷೆ ಮಾಡಬಹುದು ಎಂದು ಮೊದಲೇ ಊಹಿಸಿ. ಅಲ್ಲದೇ ಪರಿಸ್ಥಿತಿಗಳನ್ನು ಅವರಿಗೆ ಉದಾಹರಣೆ ಸಹಿತ ವಿವರಿಸಿ. ನೀವು ಸ್ಥಿರವಾಗಿರಿ. ಒಮ್ಮೆ ಬಯ್ಯುವುದು, ಒಮ್ಮೆ ತೆಗಳುವುದು ಇಂತಹ ಅಭ್ಯಾಸಗಳು ಸಲ್ಲ. ನಿಮ್ಮ ಮನಸ್ಥಿತಿ ಯಾವಾಗಲೂ ಒಂದೇ ರೀತಿ ಇರಬೇಕು.

ಮಾತಿಗೆ ಮಾತು ಬೆಳೆಸಬೇಡಿ: ಮಾತಿಗೆ ಮಾತಿಗೆ ಬೆಳೆಸಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಸಂಭಾಷಣೆ ತಾರಕಕ್ಕೇರುತ್ತಿದೆ ಎಂದರೆ ಅಲ್ಲಿಗೆ ಮುಕ್ತಾಯ ಮಾಡುವ ಅಭ್ಯಾಸ ರೂಢಸಿಕೊಳ್ಳಿ. ಹದಿವಯಸ್ಸಿನ ಮಕ್ಕಳೊಂದಿಗೆ ತೀವ್ರ ಜಗಳವಾಡುವುದು ತಪ್ಪು ನೆನಪಿರಲಿ. ಇಲ್ಲದೇ ಹೋದಲ್ಲಿ ನೀವು ನಂತರ ಪಶ್ಚಾತ್ತಾಪಪಡಬೇಕಾಗುತ್ತದೆ. ಉದಾಹರಣೆಗೆ ಮಾತು ಜೋರಾಗುತ್ತಿದೆ ಎನ್ನಿಸಿದರೆ ನೀವೇ ಮಾತಿನ ನಡುವೆ ಬ್ರೇಕ್‌ ಹಾಕಿ, ನಾನು ಬಾತ್‌ರೂಮ್‌ಗೆ ಹೋಗಬೇಕು, ಬಂದ ನಂತರ ಮಾತಾಡೋಣ ಅಂತ ಹೇಳಿ. ಈ ಚಿಕ್ಕ ಬ್ರೇಕ್‌ ಹೊತ್ತಿಗೆ ಅವರ ಮನಃಸ್ಥಿತಿ ಕೊಂಚ ತಿಳಿಯಾಗಿರುತ್ತದೆ.

ತಕ್ಷಣಕ್ಕೆ ಪ್ರತಿಕ್ರಿಯೆ ನೀಡಬೇಡಿ: ಮಕ್ಕಳು ಮೊಬೈಲ್‌ ಬಳಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುವುದನ್ನು ನೋಡಿದಾಗ ನೀವು ಕೋಪಗೊಂಡು ತಕ್ಷಣಕ್ಕೆ ಕೂಗಾಡುವುದು, ಬಯ್ಯವುದು ಮಾಡಬೇಡಿ. ಪರಿಸ್ಥಿತಿ ನೋಡಿಕೊಂಡು ಅದರಿಂದಾಗುವ ಪರಿಣಾಮಗಳ ಬಗ್ಗೆ ಅವರಿಗೆ ಬಿಡಿಸಿ ಹೇಳಿ. ಉದಾಹರಣೆ ಸಹಿತ ಹೇಳಿದಾಗ ಮಕ್ಕಳ ಮನಸ್ಸಿಗೆ ಬೇಗನೆ ಹೋಗುತ್ತದೆ.

ಕೋಪ ನಿಗ್ರಹಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸಿ: ಕೋಪ ನಿಭಾಯಿಸುವುದು ಹೇಗೆ ಎಂಬ ಬಗ್ಗೆ ನಿಮ್ಮ ಮಗುವಿಗೆ ಪಾಠ ಮಾಡಿ. ಅವರಿಗೆ ಧಾನ್ಯ, ಯೋಗ ಮಾಡಲು ಪ್ರೇರೇಪಿಸಿ. ಕೋಪದಿಂದ ಆಗುವ ಪರಿಣಾಮಗಳನ್ನು ರೋಚಕವಾಗಿ ಹೇಳಿ. ಕೋಪ ಮಾಡಿಕೊಳ್ಳುವುದರಿಂದ ಆಗುವ ಆರೋಗ್ಯ ಸಮಸ್ಯೆಗಳು ಬಗ್ಗೆಯೂ ತಿಳಿಸಿ.

ಕೋಪದ ಹಿಂದಿನ ಭಾವ ಗ್ರಹಿಸಿ: ಮಕ್ಕಳು ಕೋಪ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅದರ ಹಿಂದೆ ಏನೋ ಕಾರಣ ಖಂಡಿತ ಇರುತ್ತದೆ. ಅದು ದುಃಖ, ಅಪರಾಧ ಭಾವನೆ, ಅವಮಾನ ಹೀಗೆ ಹಲವು. ಖಿನ್ನತೆಯ ಭಾವವು ಹದಿವಯಸ್ಸಿನಲ್ಲಿ ಕೋಪದ ರೂಪದಲ್ಲಿ ವ್ಯಕ್ತವಾಗಬಹುದು. ಹಾಗಾಗಿ ಅವರ ಕೋಪಕ್ಕೆ ಕಾರಣ ಏನು ಎಂದು ಗ್ರಹಿಸುವುದು ಬಹಳ ಮುಖ್ಯವಾಗುತ್ತದೆ.

ತಜ್ಞರ ಸಲಹೆ ಪಡೆಯಿರಿ: ಮೇಲೆ ಹೇಳಿದ ಎಲ್ಲಾ ಕ್ರಮಗಳು ಪೋಷಕರಾಗಿ ನೀವು ಪಾಲಿಸಬೇಕಾಗಿರುವುದು. ಆದರೆ ಇದನ್ನೆಲ್ಲಾ ಮಾಡಿದ ಮೇಲೂ ನಿಮ್ಮ ಮಗ ಅಥವಾ ಮಗಳು ಕೋಪ ಮಾಡಿಕೊಳ್ಳುವುದು ಕಡಿಮೆ ಮಾಡಿಲ್ಲ ಎಂದರೆ ನೀವು ತಜ್ಞರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯುವುದು ಉತ್ತಮ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ