Teenage Stress: ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಮಾನಸಿಕ ಒತ್ತಡ; ಕಾರಣ ಮತ್ತು ಅದರಿಂದ ಹೊರಬರುವುದು ಹೇಗೆ; ಇಲ್ಲಿದೆ ಉತ್ತರ
ಹದಿಹರೆಯದಲ್ಲಿ ಎಲ್ಲವೂ ಅಚ್ಚರಿಯ ಸಂಗತಿಗಳೇ.. ವಿವಿಧ ರೀತಿಯ ಕುತೂಹಲ ಮತ್ತು ಏನಾಗಬಹುದು ಎಂದು ಆಸಕ್ತಿ, ಪ್ರಶ್ನೆಗಳು ಮನಸ್ಸನ್ನು ಸದಾ ಕೊರೆಯುತ್ತವೆ. ಈ ರೀತಿಯ ಚಂಚಲತೆಯಿಂದ ಮನಸ್ಸು ಗೊಂದಲಕ್ಕೆ ಈಡಾಗುತ್ತದೆ. ಇದಕ್ಕೆ ಕಾರಣವೇನು? ತರುಣರಲ್ಲಿ ಮಾನಸಿಕ ಒತ್ತಡ ಉಂಟಾಗುತ್ತಿರುವುದು ಏಕೆ?

ಜನವರಿ ತಿಂಗಳು ಮುಗಿಯುತ್ತಾ ಬಂತು. ಶಾಲಾ-ಕಾಲೇಜುಗಳಲ್ಲಿ ಇನ್ನು ಪರೀಕ್ಷೆಯ ಗದ್ದಲ ಆರಂಭವಾಗುತ್ತದೆ. ಶಾಲಾ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸ, ವಾರ್ಷಿಕ ಕ್ರೀಡಾಕೂಟ ಎಲ್ಲವೂ ಮುಗಿದು ಇನ್ನು ವಾರ್ಷಿಕ ಪರೀಕ್ಷೆಯತ್ತ ಹೊರಳುವ ಸಮಯ. ಇಲ್ಲಿಯವರೆಗೆ ಸಂಭ್ರಮದಿಂದ ಕಳೆದ ಶಾಲಾ ಮಕ್ಕಳು ಮತ್ತು ಹದಿಹರೆಯದವರು, ಇನ್ನು ಪರೀಕ್ಷೆ, ಫಲಿತಾಂಶದ ಕುರಿತು ಚಿಂತಿಸತೊಡಗುತ್ತಾರೆ. ಈ ಸಂದರ್ಭದಲ್ಲಿ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ. ಅದಕ್ಕೆ ಹಲವು ಕಾರಣವೂ ಇರುತ್ತದೆ. ಅದರಿಂದ ಹೊರಬರುವುದು ಹೇಗೆ? ಒತ್ತಡವನ್ನು ನಿಭಾಯಿಸಿ, ಗೆಲ್ಲುವುದು ಹೇಗೆ?
ಒತ್ತಡ ಉಂಟಾಗುತ್ತಿದ್ದಂತೆ, ಮನಸ್ಸಿನಲ್ಲಿ ಗೊಂದಲ ಮೂಡುತ್ತದೆ. ಇದರಿಂದ ದೇಹದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಹದಿಹರೆಯದಲ್ಲಿ ಉಂಟಾಗುವ ಹಾರ್ಮೋನ್ ಏರುಪೇರಿನ ಜತೆ ಕೆಲವೊಂದು ರಾಸಾಯನಿಕ ಪ್ರಕ್ರಿಯೆಗಳು ಜರಗುತ್ತವೆ. ಇದರಿಂದ ತರುಣರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅಂತಹ ಏರುಪೇರುಗಳು ದೇಹದಲ್ಲಿರುವ ಪ್ರೊಟೀನ್, ಡಿಎನ್‌ಎ ಮತ್ತು ರಕ್ತಕೋಶಗಳಿಗೆ ತೊಂದರೆ ಉಂಟುಮಾಡುತ್ತದೆ. ಇದರ ಒಟ್ಟಾರೆ ಪರಿಣಾಮ ದೇಹದ ಮೇಲಾಗುತ್ತದೆ.
ಮಾನಸಿಕ ಆರೋಗ್ಯ ವೃದ್ಧಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳ ಹೇಗೆ?
ಸಾಕಷ್ಟು ನಿದ್ರೆ ಮಾಡಿ
ಒತ್ತಡದ ಸಂದರ್ಭದಲ್ಲಿ ಮಾನಸಿಕ ಕಿರಿಕಿರಿ ಉಂಟಾಗುತ್ತಿದೆ ಎಂದಾದರೆ ಸಾಕಷ್ಟು ನಿದ್ರೆಯನ್ನು ನೀವು ಮಾಡಲೇಬೇಕು. ಅಂದರೆ ಕನಿಷ್ಠ 10 ಗಂಟೆಯಾದರೂ ನಿದ್ರೆ ಮಾಡಿ. ಗ್ಯಾಜೆಟ್‌ಗಳನ್ನು ದೂರವಿರಿಸಿ.
ಚಟುವಟಿಕೆಯಿಂದಿರಿ
ಹೊರಗಡೆ ಸ್ವಲ್ಪ ಸುತ್ತಾಡಿ, ನಡಿಗೆಯಲ್ಲಿ ಪಾಲ್ಗೊಳ್ಳಿ, ಯೋಗ, ಧ್ಯಾನ ಮಾಡಿ.
ಟೆಕ್ ಬ್ರೇಕ್ ತೆಗೆದುಕೊಳ್ಳಿ
ಟಿವಿ, ಟ್ಯಾಬ್, ಸ್ಮಾರ್ಟ್‌ಫೋನ್‌ಗಳಿಂದಾಗಿ ಖಂಡಿತವಾಗಿಯೂ ನಿಮ್ಮ ಏಕಾಗ್ರತೆಗೆ ಭಂಗವಾಗುತ್ತದೆ. ಅವುಗಳಿಂದ ದೂರವಿರಿ. ಸ್ಕ್ರೀನ್ ಟೈಮ್ ಕಡಿಮೆ ಮಾಡಿ.
ಪ್ಲ್ಯಾನ್ ಮೂಲಕ ಟಾಸ್ಕ್ ಪೂರ್ತಿಗೊಳಿಸಿ
ಯಾವುದೇ ಟಾಸ್ಕ್ ಇದ್ದರೂ, ಅದಕ್ಕಾಗಿ ಪ್ಲ್ಯಾನ್ ಮಾಡಿಕೊಳ್ಳಿ, ಅದರಂತೆ ಮುಂದುವರಿಯಿರಿ.
ಆಹಾರ ಕ್ರಮದಲ್ಲಿ ಶಿಸ್ತು ಇರಲಿ
ಕಾಫಿ, ಸಕ್ಕರೆ ಇರುವ ಪಾನೀಯ ಕಡಿಮೆ ಮಾಡಿ. ಹಣ್ಣು-ತರಕಾರಿ ಹೆಚ್ಚು ಸೇವಿಸಿ, ಸಾಕಷ್ಟು ನೀರು ಕುಡಿಯಿರಿ.
ಆತಂಕದ ಲಕ್ಷಣವನ್ನು ಗುರುತಿಸಿ
ಮನಸ್ಸಿಗೆ ಕಿರಿಕಿರಿಯಾಗುತ್ತಿದೆ ಮತ್ತು ಆತಂಕವಾಗುತ್ತಿದೆ ಎಂದಾದರೆ ಅದರ ಲಕ್ಷಣವನ್ನು ಗುರುತಿಸಿ. ಮಕ್ಕಳಿಗೆ ಅನಾರೋಗ್ಯ ಉಂಟಾದರೆ, ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿ, ವಿಶ್ರಾಂತಿ ಪಡೆಯಲಿ.
ಅಧಿಕ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು
ಹೃದಯಕ್ಕೆ ಸಂಬಂಧಿಸಿದ ಕಾಯಿಲೆ
ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಗಂಭೀರ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು.
ಅಜೀರ್ಣ ಸಮಸ್ಯೆ
ಆತಂಕ ಮತ್ತು ಒತ್ತಡ ಹೆಚ್ಚಾದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇರಬಹುದು.
ಮಾನಸಿಕ ಸಮಸ್ಯೆ
ಒತ್ತಡ ಮತ್ತು ಆತಂಕ ವಿವಿಧ ರೀತಿಯ ಮಾನಸಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
ಚರ್ಮದ ಸಮಸ್ಯೆ
ಚರ್ಮದಲ್ಲೂ ತೊಂದರೆ ಕಾಣಿಸಿಕೊಂಡು, ಕಿರಿಕಿರಿಯುಂಟಾಗಬಹುದು. ಸಣ್ಣ ಸಣ್ಣ ಗುಳ್ಳೆಗಳು, ಮೊಡವೆ, ಚರ್ಮದಲ್ಲಿ ಉರಿ ಉಂಟಾಗುವ ಸಾಧ್ಯತೆಯಿದೆ.
ನಿದ್ರಾಹೀನತೆ
ಅಧಿಕ ಒತ್ತಡದಿಂದ ನಿದ್ರೆ ದೂರಾಗಬಹುದು. ಸೂಕ್ತ ನಿದ್ರೆ ಲಭ್ಯವಾಗದೇ ಹೋದರೆ, ಅದರಿಂದ ವಿವಿಧ ರೀತಿಯ ಸಮಸ್ಯೆ ಉಂಟಾಗುವ ದಿನ ದೂರವಿಲ್ಲ.
ತೂಕದಲ್ಲಿ ಹೆಚ್ಚಳ ಅಥವಾ ಇಳಿಕೆ
ಆರೋಗ್ಯವಂತರಾಗಿರುವ ವ್ಯಕ್ತಿ ಒತ್ತಡಕ್ಕೆ ಸಿಲುಕಿದಾಗ, ಅವರ ತೂಕದಲ್ಲಿ ದಿಢೀರ್ ಇಳಿಕೆ ಅಥವಾ ಏರಿಕೆ ಉಂಟಾಗಿ ತೊಂದರೆಯಾಗಬಹುದು.

ವಿಭಾಗ