Parenting Tips: 6 ವರ್ಷದೊಳಗಿನ ಮಕ್ಕಳ ಮುಂದೆ ತಾಯಿ–ತಂದೆ ಮಾಡಲೇಬಾರದಂತಹ 5 ಕೆಲಸಗಳಿವು, ಪೋಷಕರೇ ಇತ್ತ ಗಮನ ಹರಿಸಿ
ನಿಮ್ಮ ಮನೆಯಲ್ಲೂ 6 ವರ್ಷಕ್ಕಿಂತ ಒಳಗಿನ ಮಕ್ಕಳಿದ್ದಾರಾ? ಹಾಗಾದರೆ ಈ ವಿಚಾರ ನೀವು ತಿಳಿದುಕೊಂಡಿರಬೇಕು. ಅದರಲ್ಲೂ ಪೋಷಕರು ಈ ವಿಚಾರದ ಮೇಲೆ ಹೆಚ್ಚು ಗಮನಹರಿಸಬೇಕು. 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಮನೆಗಳಲ್ಲಿ ಪೋಷಕರು ಎಂದಿಗೂ ಮಾಡಬಾರದಂತಹ 5 ತಪ್ಪುಗಳು ಇವೇ ನೋಡಿ.
ಚಿಕ್ಕ ಮಕ್ಕಳ ಹೃದಯ, ಮನಸ್ಸು ಪರಿಶುದ್ಧವಾಗಿರುತ್ತದೆ. ಅವರು ಪೋಷಕರು ಮತ್ತು ತಮ್ಮ ಸುತ್ತಲಿನ ಪರಿಸರದಲ್ಲಿರುವ ಜನರು ಏನು ಮಾಡುತ್ತಾರೆ, ಹೇಗಿರುತ್ತಾರೆ ಅದರಂತೆ ಅವರು ಕೂಡ ಇರುತ್ತಾರೆ. ಮಕ್ಕಳ ಮಾನಸಿಕ ಬೆಳವಣಿಗೆ 6 ವರ್ಷಗಳವರೆಗೆ ವಿಶೇಷವಾಗಿ ವೇಗವಾಗಿರುತ್ತದೆ. ಅವರ ಮನಸ್ಸು ಅನೇಕ ಹೊಸ ವಿಷಯಗಳನ್ನು ಮತ್ತು ಹೊಸ ನಡವಳಿಕೆಗಳನ್ನು ಕಲಿಯಲು ಸಿದ್ಧವಾಗಿರುತ್ತದೆ. ಆರು ವರ್ಷದ ಒಳಗಿನ ಮಕ್ಕಳು ಮನೆಯಲ್ಲಿ ಇತರರನ್ನು ನೋಡುವ ಮೂಲಕ ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಕಲಿಯುತ್ತಾರೆ. ಅವರು ತಮ್ಮ ಸುತ್ತಲಿನ ಪರಿಸರವನ್ನು ಗಮನಿಸುವ ಮೂಲಕ ಅನೇಕ ವಿಷಯಗಳನ್ನು ಕಲಿಯುತ್ತಾರೆ. ಸುತ್ತಮುತ್ತಲಿನ ಪರಿಸರವು ಅವರ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಹಾಗಾಗಿ ಈ ವಯಸ್ಸಿನ ಮಕ್ಕಳ ಮೇಲೆ ಪೋಷಕರು ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯ. ಆರು ವರ್ಷದೊಳಗಿನ ಮಕ್ಕಳ ಮುಂದೆ ಪೋಷಕರು ಮಾಡಬಾರದ ಮತ್ತು ಮಾತನಾಡಬಾರದ ಕೆಲವು ವಿಷಯಗಳಿವೆ. ಅವು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಆರ್ಥಿಕ ತೊಂದರೆಗಳು
ಆರು ವರ್ಷದ ಮಗುವಿನ ಮುಂದೆ ಆರ್ಥಿಕ ಸಮಸ್ಯೆಗಳ ಬಗ್ಗೆ ಅಥವಾ ನಿಮ್ಮ ಆದಾಯದ ಬಗ್ಗೆ ಮಾತನಾಡಬೇಡಿ. ಅನೇಕ ಬಾರಿ ಪೋಷಕರು ತಮ್ಮ ಮಗು ಇನ್ನೂ ಚಿಕ್ಕವನು, ಈ ವಿಷಯಗಳನ್ನು ಅರ್ಥಮಾಡಿಕೊಳ್ಳುವಷ್ಟು ಅವನು ದೊಡ್ಡವನಾಗಿಲ್ಲ ಎಂದು ಭಾವಿಸುತ್ತಾರೆ. ಆದರೆ ಇಂತಹ ವಿಚಾರಗಳು ಮಗುವಿನ ಪುಟ್ಟ ಮೆದುಳಿಗೆ ಪೂರ್ತಿ ಅರ್ಥವಾಗದಿದ್ದರೂ, ಅವನ ಹೆತ್ತವರು ತೊಂದರೆಯಲ್ಲಿದ್ದಾರೆ ಮತ್ತು ಅವರಿಗೆ ಹಣದ ಕೊರತೆಯಿದೆ ಎಂದು ಅದು ಅರ್ಥಮಾಡಿಕೊಳ್ಳುತ್ತದೆ. ಇದರಿಂದಾಗಿ, ಆ ಮಗು ಅದರ ಬಗ್ಗೆ ಯೋಚಿಸುತ್ತಾ ಒತ್ತಡವನ್ನು ಅನುಭವಿಸುವ ಸಾಧ್ಯತೆ ಇದೆ.
ಜೋರಾಗಿ ಜಗಳ ಮಾಡುವುದು
ಮನೆಯಲ್ಲಿ ಗಂಡ–ಹೆಂಡತಿ ಪರಸ್ಪರ ಜಗಳವಾಡುವುದು ಸಹಜ. ಆದರೆ ನೀವು ಪೋಷಕರಾದಾಗ ಜವಾಬ್ದಾರಿಯಿಂದ ವರ್ತಿಸಬೇಕು. ಮಗುವಾಗ ಮೇಲೆ ವಾದಗಳು ಮತ್ತು ಘರ್ಷಣೆಗಳು ಬಂದಾಗ ನೀವು ಜಾಗರೂಕರಾಗಿರಬೇಕು. ಜೋರಾಗಿ ಕಿರುಚುವುದು ಮತ್ತು ಒಬ್ಬರನ್ನೊಬ್ಬರು ಶಪಿಸುವುದರಿಂದ ನಿಮ್ಮ ಮಗುವಿನ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಮಕ್ಕಳು ನಿಮ್ಮನ್ನು ನೋಡಿ ಎಲ್ಲವನ್ನೂ ಕಲಿಯುತ್ತಾರೆ. ಆದ್ದರಿಂದ ಅವರ ಮುಂದೆ ಒರಟಾಗಿ ವರ್ತಿಸಬೇಡಿ.
ದೆವ್ವಗಳ ಬಗ್ಗೆ, ಅಘಾತಕಾರಿ ಘಟನೆ ಬಗ್ಗೆ ಮಾತು ಬೇಡ
ಪ್ರತಿದಿನ ನೀವು ಪತ್ರಿಕೆ ಅಥವಾ ಟಿವಿಯಲ್ಲಿ ಹೃದಯವಿದ್ರಾವಕ ಘಟನೆಯ ಬಗ್ಗೆ ಕೇಳುತ್ತೀರಿ. ಮನೆಯಲ್ಲಿ ಇಂತಹ ಆಘಾತಕಾರಿ ಘಟನೆಗಳ ಬಗ್ಗೆ ಮಾತನಾಡುವುದು ಸಹಜ. ಆದರೆ ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅಂತಹ ವಿಷಯಗಳ ಬಗ್ಗೆ ಮಾತನಾಡುವುದನ್ನು ತಪ್ಪಿಸಬೇಕು. ಅಲ್ಲದೆ, ತಮಾಷೆಗಾಗಿಯೂ ಸಹ ದೆವ್ವಗಳ ಬಗ್ಗೆ ಮಾತನಾಡಬೇಡಿ. ದೆವ್ವದ ಹೆಸರು ಹೇಳಿ ಮಕ್ಕಳನ್ನು ಹೆದರಿಸುವುದನ್ನು ನಿಲ್ಲಿಸಿ. ಇದೆಲ್ಲವೂ ಮಗುವಿನ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತದೆ, ಇದು ಅವನ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಶಾಲೆ, ಶಿಕ್ಷಕರನ್ನು ಗೇಲಿ ಮಾಡದಿರಿ
ಹಲವು ಬಾರಿ ಪೋಷಕರು ಮಗುವಿನ ಶಾಲೆ ಮತ್ತು ಶಿಕ್ಷಕರನ್ನು ಗೇಲಿ ಮಾಡುತ್ತಾರೆ. ಶಿಕ್ಷಕರು ಅಥವಾ ಶಿಕ್ಷಣದ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಈ ರೀತಿಯ ವಿಷಯಗಳನ್ನು ಪದೇ ಪದೇ ಕೇಳುವುದರಿಂದ ಮಗುವಿನ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಉಂಟಾಗುತ್ತದೆ. ನೀವು ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ಮನೋಭಾವ ತೋರಿಸಿದರೆ, ಮಗು ನಿಮ್ಮನ್ನು ಅನುಕರಿಸುತ್ತದೆ. ಹಾಗಾಗಿ ಮಗುವಿನ ಶಿಕ್ಷಣ ಮತ್ತು ಶಿಕ್ಷಕರಿಗೆ ಸಂಪೂರ್ಣ ಗೌರವ ನೀಡಿ.
ಮಕ್ಕಳು ತಮ್ಮ ಹೆತ್ತವರನ್ನು ನೋಡಿ ಅರ್ಧಕ್ಕಿಂತ ಹೆಚ್ಚು ಕಲಿಯುತ್ತಾರೆ. ನೀವು ಇತರರೊಂದಿಗೆ ಹೇಗೆ ವರ್ತಿಸುತ್ತೀರಿ ಎಂಬುದನ್ನು ಮಕ್ಕಳು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ನೀವು ಯಾವಾಗಲೂ ಜನರ ಬಗ್ಗೆ ಕೆಟ್ಟದಾಗಿ ಅಥವಾ ನಕಾರಾತ್ಮಕವಾಗಿ ಮಾತನಾಡಿದರೆ, ನಿಮ್ಮ ಮಗುವೂ ಈ ನಡವಳಿಕೆಯನ್ನು ಅನುಕರಿಸಲು ಪ್ರಾರಂಭಿಸುತ್ತದೆ. ನೀವು ಯಾರನ್ನಾದರೂ ಬಯ್ಯಬೇಕು, ಕೆಟ್ಟದಾಗಿ ಮಾತನಾಡಬೇಕು ಅನ್ನಿಸಿದರೆ ಮಕ್ಕಳ ಮುಂದೆ ತಪ್ಪಿಯೂ ಅದನ್ನು ಮಾಡಬೇಡಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)