Parenting Tips: ಗಂಡು ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪ್ರತಿ ಪೋಷಕರು ಗಮನ ಹರಿಸಬೇಕಾದ ಅಂಶಗಳಿವು, ಈ ವಿಚಾರ ಕಡೆಗಣಿಸದಿರಿ-parenting tips to raising a boy child parents must follow this rules while raising boy child raising tips to parents rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಗಂಡು ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪ್ರತಿ ಪೋಷಕರು ಗಮನ ಹರಿಸಬೇಕಾದ ಅಂಶಗಳಿವು, ಈ ವಿಚಾರ ಕಡೆಗಣಿಸದಿರಿ

Parenting Tips: ಗಂಡು ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪ್ರತಿ ಪೋಷಕರು ಗಮನ ಹರಿಸಬೇಕಾದ ಅಂಶಗಳಿವು, ಈ ವಿಚಾರ ಕಡೆಗಣಿಸದಿರಿ

ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿವೆ. ಕೊಲ್ಕತ್ತಾದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ, ಮಾತ್ರವಲ್ಲ ಮಕ್ಕಳನ್ನು ಬೆಳೆಸುವ ವಿಚಾರದ ಬಗ್ಗೆಯೂ ಚರ್ಚೆಯಾಗುತ್ತಿದೆ. ಗಂಡುಮಕ್ಕಳ ಪೋಷಕರು ಗಮನಿಸಬೇಕಾದ ಅಂಶಗಳಿವು.

ಗಂಡು ಮಕ್ಕಳನ್ನು ಹೇಗೆ ಬೆಳೆಸಬೇಕು
ಗಂಡು ಮಕ್ಕಳನ್ನು ಹೇಗೆ ಬೆಳೆಸಬೇಕು

ಕೊಲ್ಕೊತ್ತಾದ ಆರ್‌ಜಿ ಕರ್‌ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಭಾರತದಾದ್ಯಂತ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿ ಹಲವು ಕಡೆ ಪ್ರತಿಭಟನೆಗಳೂ ನಡೆಯುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಭಾರತದಲ್ಲಿ ನಡೆಯುತ್ತಿರುವ ಲೈಂಗಿಕ, ದೌರ್ಜನ್ಯ ಹಾಗೂ ಅತ್ಯಾಚಾರಗಳಂತ ಪ್ರಕರಣಗಳ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ಕೆಲವು ಸಿನಿಮಾ ನಟ–ನಟಿಯರು ಈ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈ ಘಟನೆಯ ನಂತರ ಮಕ್ಕಳನ್ನು ಅದರಲ್ಲೂ ಗಂಡು ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪೋಷಕರು ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಗಂಡುಮಕ್ಕಳ ಪೋಷಕರು ಕೆಲವು ವಿಚಾರಗಳ ಮೇಲೆ ಹೆಚ್ಚು ಗಮನ ಹರಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ, ಮಾತ್ರವಲ್ಲ ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ಶುರುವಾಗಿದೆ. ನಟಿ ಸುದೀಪ್ತ ಚಕ್ರವರ್ತಿ ಈ ವಿಚಾರವಾಗಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅದಿತಿ ರಾಯ್ ಎನ್ನುವ ತಾಯಿ ತನ್ನ 10 ವರ್ಷ ಬಗ್ಗೆ ಬರೆದಿರುವ ಅಂಶಗಳಿವೆ.

ಸುದೀಪ್ತ ಅವರು ಅದಿತಿ ಅವ ಪೋಸ್ಟ್ ಅನ್ನು ಶೇರ್ ಮಾಡಿದ್ದು ಈ ಮಾತುಗಳು ಒಪ್ಪುವಂಥದ್ದು, ಈ ವಿಚಾರಗಳನ್ನು ಎಲ್ಲಾ ಪೋಷಕರು ತಿಳಿದಿರಬೇಕು ಎಂದಿದ್ದಾರೆ.

ಅದಿತಿ ಅವರ ಪೋಸ್ಟ್‌ನಲ್ಲಿದ್ದ ಅಂಶಗಳು

ಅದಿತಿ ರಾಯ್ ಅವರು ತಮ್ಮ ಪೋಸ್ಟ್‌ನಲ್ಲಿ ಒಟ್ಟು 8 ಅಂಶಗಳನ್ನು ಬರೆದಿದ್ದಾರೆ.

* ನಿಮ್ಮ ಗಂಡು ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಮನೆಯಲ್ಲೂ ಬಟ್ಟೆ ತೊಟ್ಟು ಓಡಾಡುವಂತೆ ತಿಳಿಸಿ. ಎಷ್ಟೇ ಸೆಖೆ ಬಿಸಿಲು ಇದ್ದರೂ ಯಾವುದೇ ಕಾರಣಕ್ಕೂ ಬೆತ್ತಲೆ ಅಥವಾ ಶರ್ಟ್ ಇಲ್ಲದೇ ಓಡಾಡಲು ಬಿಡಿದರಿ

* ಮಕ್ಕಳು ಯಾವುದೇ ಕಾರಣಕ್ಕೂ ಪದೇ ಪದೇ ಖಾಸಗಿ ಅಂಗಾಗಗಳ ಮೇಲೆ ಕೈ ಇರಿಸದಂತೆ ನೋಡಿಕೊಳ್ಳಿ. ಒಂದು ವೇಳೆ ಮಗು ಖಾಸಗಿ ಅಂಗಾಂಗದಲ್ಲಿ ತುರಿಕೆ ಅಥವಾ ಸಮಸ್ಯೆ ಇದ್ದು ಮಗು ಆ ಭಾಗವನ್ನು ಪದೇ ಪದೇ ಮುಟ್ಟುತ್ತಿದೆ ಎಂದರೆ ಅದನ್ನು ಪರೀಕ್ಷಿಸಲು ಬಾತ್‌ರೂಮ್‌ಗೆ ಹೋಗುವಂತೆ ಹೇಳಿ. ಅವಶ್ಯ ಬಿದ್ದರೆ ನೀವು ಮಗುವಿನ ಜೊತೆ ಹೋಗಿ.

* ಅದಿತಿ ರಾಯ್ ಅವರ ಪ್ರಕಾರ ತಾಯಂದಿರು ಮನೆಯಲ್ಲಿ ಶಾರ್ಟ್‌, ಥ್ರಿ ಫೋರ್ತ್ ರೀತಿಯ ಬಟ್ಟೆ ಧರಿಸಬೇಕು. ಆಗ ಮಗು ಹೊರಗಡೆ ಬೇರೆ ಮಹಿಳೆಯರು ಅಂತಹ ಬಟ್ಟೆಗಳನ್ನು ಧರಿಸಿದಾಗ ಆಸಕ್ತಿಯಿಂದ ನೋಡುವುದಿಲ್ಲ. ಇಂತಹ ಬಟ್ಟೆಗಳು ಧರಿಸುವುದು ಸಹಜ ಎಂದು ಮಗುವಿಗೆ ಎನ್ನಿಸುತ್ತದೆ.

* ಮುಟ್ಟಿನ ಬಗ್ಗೆ ಕೇವಲ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ತಿಳಿಸಬೇಕು. ಮುಟ್ಟಾಗುವ ಹಂತ, ವಯಸ್ಸು, ನಂತರ ಬೆಳವಣಿಗೆಗಳು ಈ ಎಲ್ಲಾ ಅಂಶಗಳ ಬಗ್ಗೆ ಹುಡುಗರಿಗೂ ತಿಳಿವಳಿಕೆ ಬರುವಂತೆ ಪೋಷಕರು ಮಾಡಬೇಕು.

* ಒಳಉಡುಪುಗಳನ್ನು ಧರಿಸುವ ಉದ್ದೇಶವೇನು, ಬ್ರಾ ಪಟ್ಟಿ ಹೊರಗಡೆ ಕಂಡರೆ ಅದನ್ನು ಸರಿ ಪಡಿಸಿಕೊಳ್ಳುವಂತೆ ಹೇಳಬೇಕು ಈ ಅಂಶಗಳನ್ನೂ ಗಂಡುಮಕ್ಕಳಿಗೆ ಕಲಿಸಿ ಎಂದು ಅದಿತಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

* ಗಂಡುಮಕ್ಕಳು ಸಹಜ ಕಾರಣಕ್ಕೆ ಅಳುತ್ತಿದ್ದರೆ ಅವರಿಗೆ ಅಳಲು ಬಿಡಿ. ಅದೇನು ಹೆಣ್ಣುಮಕ್ಕಳಂತೆ ಯಾವಾಗಲೂ ಅಳುತ್ತೀಯಾ ಎಂದು ಹಂಗಿಸಬೇಡಿ.

ಇವರ ಪೋಸ್ಟ್‌ಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಕಾಮೆಂಟ್‌ಗಳು ಬಂದಿವೆ. ‘ಅಮ್ಮ ಮನೆಯಲ್ಲಿ ಶಾರ್ಟ್ ಧರಿಸಬೇಕು ಎಂಬುದು ಎಷ್ಟು ಸರಿ. ಇದು ಸರಿ ಎಂಬ ಭಾವನೆ ನನಗೆ ಬರುತ್ತಿಲ್ಲ‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

‘ಒಬ್ಬ ಹುಡುಗ ಅಥವಾ ಕೆಲವು ಹುಡುಗರಿಂದ ಎಲ್ಲಾ ಹುಡುಗರನ್ನು ಕೆಟ್ಟದಾಗಿ ಕರೆಯಬೇಡಿ. ಮಗುವಿನ ತಲೆಯಲ್ಲಿ ಹುಡುಗರು ಮತ್ತು ಹುಡುಗಿಯರ ನಡುವಿನ ವ್ಯತ್ಯಾಸವನ್ನು ಪರಿಚಯಿಸದಿರುವುದು ಉತ್ತಮ‘ ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ತಾಯಿಯು ತನ್ನ ಮಗನನ್ನು ಸರಿಯಾದ ದಾರಿಯಲ್ಲಿ ಬೆಳೆಸಿದಾಗ ಮಾತ್ರ ಇಂತಹ ಘಟನೆಗಳನ್ನು ತಡೆಯಲು ಸಾಧ್ಯ‘ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇದು ಅದಿತಿ ಅವರ ಅಭಿಪ್ರಾಯವಾದರೂ ಕೂಡ ಗಂಡು ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪೋಷಕರು ಈ ಅಂಶಗಳನ್ನು ಗಮನಿಸಬೇಕು.

ಗಂಡು ಮಕ್ಕಳನ್ನು ಬೆಳೆಸುವಾಗ ಈ ವಿಚಾರ ತಿಳಿದಿರಲಿ

* ಮಗುವಿನೊಂದಿಗೆ ಸಮಯ ಕಳೆಯಿರಿ. ನಿಮ್ಮ ಮಗನಿಗೆ ಯಾವತ್ತಿಗೂ ತಾನು ಒಂಟಿ ಎನ್ನಿಸುವ ಭಾವನೆ ಬರದಂತೆ ನೋಡಿಕೊಳ್ಳಿ. ಈ ವಿಚಾರದಲ್ಲಿ ತಂದೆ–ತಾಯಿ ಇಬ್ಬರೂ ಮಗುವಿನೊಂದಿಗೆ ಸಮಯ ಕಳೆಯಬೇಕು.

* ಮಹಿಳೆಯರಿಗೆ ಗೌರವ ಕೊಡುವುದನ್ನು ಬಾಲ್ಯದಿಂದಲೇ ಕಲಿಸಬೇಕು. ಬಹುತೇಕ ಮನೆಗಳಲ್ಲಿ ತಂದೆಯಾದವನೂ ತನ್ನ ಹೆಂಡತಿಗೆ ಗೌರವ ಕೊಡುವುದಿಲ್ಲ. ಇದು ಗಂಡುಮಕ್ಕಳ ಮನಸ್ಸಿಗೆ ಮೇಲೆ ಬಹಳ ಪರಿಣಾಮ ಬೀರುತ್ತದೆ. ಮುಂದೆ ಅವರು ಕೂಡ ಹೆಣ್ಣುಮಕ್ಕಳನ್ನು ಅಗೌರವದಿಂದ ನಡೆಸಿಕೊಳ್ಳುತ್ತಾರೆ ನೆನಪಿರಲಿ.

* ಬಾಲ್ಯದಿಂದಲೇ ಸಾಮಾಜಿಕ ಜಾಲತಾಣಗಳಿಗೆ ಜೋತು ಬೀಳುವುದನ್ನು ತಪ್ಪಿಸಿ. ಆಗಾಗ ಮಗು ಬಳಸುವ ಮೊಬೈಲ್, ಕಂಪ್ಯೂಟರ್ ಪರಿಶೀಲನೆ ಮಾಡುತ್ತಿರಿ.

* ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಹೆಣ್ಣು ಗಂಡು ಎಂಬ ಭೇದ ಭಾವ ಮಾಡದಿರಿ, ಬಾಲ್ಯದಿಂದಲೇ ಹೆಣ್ಣು–ಗಂಡು ಸಮಾನರು ಎಂಬ ಭಾವ ಮಕ್ಕಳ ಮನದಲ್ಲಿ ಮೂಡುವಂತೆ ಮಾಡಿ.

* ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಬಹಳಷ್ಟು ಪೋಷಕರು ಈ ವಿಚಾರದಲ್ಲಿ ಎಡವುತ್ತಾರೆ. ಆದರೆ ಗಂಡು ಮಗುವಿಗೂ ಮನಸ್ಸಿಗೆ ಭಾವನೆಗಳಿರುತ್ತವೆ ಎಂಬುದನ್ನ ಪೋಷಕರು ಮರೆಯುವಂತಿಲ್ಲ.

* ಬಾಲ್ಯದಲ್ಲಿ ವರ್ತನೆ ಬದಲಾಯಿಸಿ. ಮಗು ಬಾಲ್ಯದಲ್ಲೇ ತುಂಬಾನೇ ಹಠಮಾರಿಯಾಗಿರುವುದು, ಹೆಣ್ಣುಮಕ್ಕಳಿಗೆ ಅಗೌರವ ತೋರುವುದ ಇಂತಹ ವರ್ತನೆಗಳನ್ನು ತೋರಿಸುತ್ತಿದ್ದರೆ ಬಾಲ್ಯದಲ್ಲೇ ತಿದ್ದಿ ಬುದ್ದಿ ಹೇಳಿ.

* ಮಕ್ಕಳ ಎದುರು ಪೋಷಕರು ನಡೆದುಕೊಳ್ಳುವ ರೀತಿಯ ಕೂಡ ಬಹಳ ಮುಖ್ಯವಾಗುತ್ತದೆ. ಗಂಡ–ಹೆಂಡತಿಯ ಆತ್ಮೀಯ ಭಾವವು ನಾಲ್ಕು ಗೋಡೆಯ ಮಧ್ಯೆ ಇದ್ದರೆ ಚೆನ್ನ, ಅದನ್ನು ಮಗುವಿನ ಎದುರು ತೋರ್ಪಡಿಸಬೇಡಿ.

* ತಂತ್ರಜ್ಞಾನಗಳ ಅತಿಯಾದ ಬಳಕೆಯ ಮಕ್ಕಳ ಮನಸ್ಸಿಗೆ ಇಲ್ಲದ ಯೋಚನೆಗಳು ಬರಲು ಆರಂಭವಾಗಲು ಕಾರಣವಾಗುತ್ತದೆ. ಹಾಗಾಗಿ ಬಳಕೆಗೆ ಮಿತಿ ಹೇರುವುದು ಅವಶ್ಯ.

* ಸಹಪಾಠಿಗಳ ಬಗ್ಗೆ ಗಮನ ಹರಿಸಿ. ಶಾಲೆಗೆ ಹೋಗುವ ಮಗುವಿನ ಜೊತೆ ಇರುವ ಸ್ನೇಹಿತರ ಬಗ್ಗೆಯೂ ಪೋಷಕರು ಗಮನ ಹರಿಸಬೇಕು. ಸ್ನೇಹಿತರ ವಿಚಾರದಲ್ಲೂ ಮಗು ಎಡವದಂತೆ ನೋಡಿಕೊಳ್ಳಿ.