Parenting Tips: ಬೆಳ್ಳಂ ಬೆಳಗ್ಗೆ ಓದು ಅಂತ ಮಕ್ಕಳಿಗೆ ಒತ್ತಡ ಹಾಕ್ತಿದ್ದೀರಾ? ಓದಿನ ಅವಧಿ ಹೇಗಿರಬೇಕೆಂದು ತಿಳಿಸುತ್ತದೆ ಈ ಹೊಸ ಅಧ್ಯಯನ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಬೆಳ್ಳಂ ಬೆಳಗ್ಗೆ ಓದು ಅಂತ ಮಕ್ಕಳಿಗೆ ಒತ್ತಡ ಹಾಕ್ತಿದ್ದೀರಾ? ಓದಿನ ಅವಧಿ ಹೇಗಿರಬೇಕೆಂದು ತಿಳಿಸುತ್ತದೆ ಈ ಹೊಸ ಅಧ್ಯಯನ

Parenting Tips: ಬೆಳ್ಳಂ ಬೆಳಗ್ಗೆ ಓದು ಅಂತ ಮಕ್ಕಳಿಗೆ ಒತ್ತಡ ಹಾಕ್ತಿದ್ದೀರಾ? ಓದಿನ ಅವಧಿ ಹೇಗಿರಬೇಕೆಂದು ತಿಳಿಸುತ್ತದೆ ಈ ಹೊಸ ಅಧ್ಯಯನ

Parenting: ಮಕ್ಕಳು ಓದಿನಲ್ಲಿ ಮುಂದಿರಬೇಕು ಎಂಬ ಬಯಕೆ ಎಲ್ಲಾ ಪೋಷಕರಿಗೂ ಇರುತ್ತದೆ. ಆದರೆ ಯಾವ ಸಮಯದಲ್ಲಿ ಮಕ್ಕಳನ್ನು ಅಧ್ಯಯನ ಮಾಡಲು ಕೂರಿಸಬೇಕು ಎನ್ನುವುದರ ಬಗ್ಗೆ ಇಂದಿಗೂ ಅನೇಕ ಪೋಷಕರಿಗೆ ಸರಿಯಾದ ಮಾಹಿತಿಯಿಲ್ಲ. ಈ ಬಗ್ಗೆ ನಡೆಸಲಾದ ಅಧ್ಯಯನವೊಂದರಲ್ಲಿ ಮಕ್ಕಳ ಓದಿಗೆ ಯಾವ ಸಮಯ ಒಳ್ಳೆಯದು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ಮಕ್ಕಳ ಓದಿಗೆ ಅತ್ಯುತ್ತಮ ಸಮಯ
ಮಕ್ಕಳ ಓದಿಗೆ ಅತ್ಯುತ್ತಮ ಸಮಯ (PC: Unsplash)

Parenting: ನಮ್ಮ ಮಕ್ಕಳು ಚೆನ್ನಾಗಿ ಓದಬೇಕು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಪ್ರತಿಯೊಬ್ಬ ಪೋಷಕರಿಗೂ ಇರುತ್ತದೆ. ಆದರೆ ಮಕ್ಕಳಿಗೆ ಯಾವ ಸಮಯದಲ್ಲಿ ಓದಿಸಿದರೆ ಒಳ್ಳೆಯದು ಎಂಬುದರ ಬಗ್ಗೆ ಬಹುತೇಕ ಪೋಷಕರಿಗೆ ಮಾಹಿತಿ ಇರುವುದಿಲ್ಲ. ಮಕ್ಕಳು ಓದಿನಲ್ಲಿ ಯಶಸ್ಸು ಸಾಧಿಸಬೇಕು ಎಂದರೆ ಅವರಿಗೆ ಯಾವ ಸಮಯದಲ್ಲಿ ಓದಿಸಿದರೆ ಹೆಚ್ಚು ಲಾಭವಿದೆ ಎಂಬುದನ್ನು ಪೋಷಕರು ತಿಳಿದಿರಬೇಕು.

ಮಕ್ಕಳ ಮನಸ್ಸು ಯಾವಾಗ ಹೆಚ್ಚಿನದನ್ನು ಕಲಿಯಲು. ಕಲಿತಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ತಯಾರಿರುತ್ತದೆ ಎಂಬುದನ್ನು ಪೋಷಕರು ಅರಿತುಕೊಂಡರೆ ಮಕ್ಕಳನ್ನು ಯಶಸ್ಸಿನ ಮಾರ್ಗದಲ್ಲಿ ಕಲಿಸುವುದು ಪೋಷಕರಿಗೆ ಇನ್ನಷ್ಟು ಸುಲಭವಾಗುತ್ತದೆ.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ

ಬೆಳಗ್ಗಿನ ಹೊತ್ತಿನಲ್ಲಿ ಮಕ್ಕಳ ಮೆದುಳು ಹೆಚ್ಚೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ತಯಾರಿರುತ್ತದೆ. ಹೀಗಾಗಿ ಬೆಳಗಿನ ಜಾವ ನೀವು ಮಕ್ಕಳಿಗೆ ಓದುವುದನ್ನು ರೂಢಿ ಮಾಡಿಸಿದರೆ ಅವರಿಗೆ ಓದಿರುವ ವಿಷಯಗಳು ತಲೆಯಲ್ಲಿ ಇರುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದೆ.

ನೈಸರ್ಗಿಕ ಬೆಳಕು : ಮಕ್ಕಳು ಯಾವ ವಾತಾವರಣದಲ್ಲಿ ಓದುತ್ತಾರೆ ಎನ್ನುವುದು ಕೂಡ ತುಂಬಾ ಮುಖ್ಯವಾಗುತ್ತದೆ. ತಜ್ಞರು ಹೇಳುವ ಪ್ರಕಾರ ಕೃತಕ ಬೆಳಕಿಗಿಂತ ಮಕ್ಕಳು ನೈಸರ್ಗಿಕವಾಗಿ ಬೆಳಕಿನಲ್ಲಿ ಹೆಚ್ಚು ಕಲಿಯುತ್ತಾರೆ. ನೈಸರ್ಗಿಕ ಬೆಳಕು ಮಕ್ಕಳ ಮೂಡನ್ನು ಚೆನ್ನಾಗಿ ಇಡುತ್ತದೆ. ಹೀಗಾಗಿ ನೈಸರ್ಗಿಕ ವಾತಾವರಣವು ಮಕ್ಕಳಿಗೆ ಹೆಚ್ಚು ಅನುಕೂಲಕರವಾಗಿದೆ.

ಪೋಷಕಾಂಶಯುಕ್ತ ಆಹಾರ: ಮಕ್ಕಳ ಉತ್ತಮ ಓದಿಗೆ ನೀವು ನೀಡಬೇಕಾದ ಇಂಧನವೆಂದರೆ ಪೋಷಕಾಂಶಯುಕ್ತ ಆಹಾರ. ಬೆಳಗ್ಗಿನ ತಿಂಡಿಗೆ ಮಕ್ಕಳಿಗೆ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ತಾಜಾ ಆಹಾರವನ್ನೇ ನೀಡಬೇಕು. ಬೆಳಗ್ಗೆಯೇ ಮಕ್ಕಳಿಗೆ ಆರೋಗ್ಯಯುತ ಆಹಾರ ಸಿಕ್ಕಿಬಿಟ್ಟರೆ ಮಕ್ಕಳು ದಿನಪೂರ್ತಿ ಲವಲವಿಕೆಯಿಂದ ಇರುತ್ತಾರೆ.

ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 10 ಗಂಟೆ

ಈ ಅವಧಿಯಲ್ಲಿಯೂ ಕೂಡ ಮಕ್ಕಳ ಮೆದುಳು ಜಾಗೃತವಾಗಿ ಇರುತ್ತದೆ. ಮಕ್ಕಳಿಗೆ ಹೆಚ್ಚಿನ ವಿಷಯಗಳನ್ನು ಅರಿತುಕೊಳ್ಳಲು ಮೆದುಳು ಫಲವತ್ತಾದ ಜಾಗವನ್ನು ನೀಡುತ್ತದೆ. ಹೀಗಾಗಿ ಈ ಸಮಯದ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು.

ಶಾಲೆ ಮುಗಿಸಿ ಬಂದ ಮಕ್ಕಳಿಗೆ ಕೊಂಚ ಹೊತ್ತು ವಿಶ್ರಾಂತಿ ಪಡೆಯಲು ಸಮಯ ನೀಡಬೇಕು. ಇದರಿಂದ ಹೊಸ ಹೊಸ ವಿಷಯಗಳನ್ನು ಅರಿತುಕೊಳ್ಳಲು ಮಕ್ಕಳಿಗೆ ಅವರ ಮೆದುಳನ್ನು ಸಿದ್ಧಪಡಿಸಿಕೊಳ್ಳಲು ಸಮಯ ಸಿಗುತ್ತದೆ.

ಸಂಜೆಯ ತಿಂಡಿ : ಸಂಜೆಯ ವೇಳೆಗೆ ಮಕ್ಕಳಿಗೆ ಹೊಟ್ಟೆ ಬಿರಿಯುವಷ್ಟು ಆಹಾರ ನೀಡಬೇಡಿ. ಸ್ವಲ್ಪ ಆಹಾರ ನೀಡಿದರೆ ಸಾಕಾಗುತ್ತದೆ. ಮಕ್ಕಳ ಜೀರ್ಣ ವ್ಯವಸ್ಥೆಗೆ ತುಂಬಾ ಕೆಲಸವನ್ನು ನೀಡುವಂತಹ ಆಹಾರಗಳನ್ನು ನೀಡದೆಯೇ ಪೋಷಕಾಂಶ ಭರಿತ ಆಹಾರವನ್ನು ನೀಡುವುದರ ಕಡೆಗೆ ನಿಮ್ಮ ಗಮನವಿರಲಿ. ಒಮೆಗಾ 3 ಅಂಶವನ್ನು ಹೊಂದಿರುವ ಆಹಾರವನ್ನು ಮಕ್ಕಳಿಗೆ ನೀಡಿ.

ಮುಂಜಾನೆ ಓದುವಂತೆ ಮಕ್ಕಳಿಗೆ ಒತ್ತಡ ಹೇರಬೇಡಿ (4 ಗಂಟೆಯಿಂದ 7 ಗಂಟೆ)

ಕೆಲವರು ತಮ್ಮ ಮಕ್ಕಳನ್ನು ಮುಂಜಾನೆ 4 ಗಂಟೆಗೆ ಎಬ್ಬಿಸಿ ಓದಲು ಕೂರಿಸಿಬಿಡುತ್ತಾರೆ. ಆದರೆ ಆ ಸಮಯದಲ್ಲಿ ಮೆದುಳು ನಿದ್ರಾವಸ್ಥೆಯಿಂದ ಜಾಗೃತಾವಸ್ಥೆಗೆ ಬರುವ ಪ್ರಯತ್ನದಲ್ಲಿರುತ್ತದೆ. ಹೀಗಾಗಿ ಈ ಅವಧಿಯಲ್ಲಿ ಮಕ್ಕಳನ್ನು ಓದಲು ಕೂರಿಸಿದರೆ ಮಕ್ಕಳಿಗೆ ವಿದ್ಯೆ ತಲೆಗೆ ಹೋಗದೇ ಇರುವ ಸಾಧ್ಯತೆಗಳೇ ಹೆಚ್ಚಿರುತ್ತದೆ.

ಮಕ್ಕಳ ಒಳಗಿರುವ ಸುಪ್ತ ಮನಸ್ಸು ಈ ಹೊತ್ತಿನಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಿದ್ಧವಾಗಿರುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ಮಕ್ಕಳ ಓದಿನ ಮೇಲೆ ಒತ್ತಡ ಹೇರುವ ಬದಲು ಪೋಷಕರು ಮಕ್ಕಳಿಗೆ ವಿಶ್ರಾಂತಿ ಒದಗಿಸುವ ಕಡೆಗೆ ಗಮನಹರಿಸುವುದು ಒಳ್ಳೆಯದು.

ಮಕ್ಕಳನ್ನು ಓದಿಸುವ ಭರದಲ್ಲಿ ಅವರಿಗೆ ನಿದ್ದೆಯೇ ಇಲ್ಲದಂತೆ ಮಾಡಬೇಡಿ. ಅವರ ವಯಸ್ಸಿಗೆ ತಕ್ಕಂತೆ ಅವರಿಗೆ ನಿದ್ರೆ ಮಾಡಲು ಸಮಯಾವಕಾಶ ಸಿಗುತ್ತಿದೆಯೇ ಎಂಬುದನ್ನೂ ಗಮನಹರಿಸಿ. ಮೆದುಳಿಗೆ ಸರಿಯಾಗಿ ವಿಶ್ರಾಂತಿ ಸಿಕ್ಕಾಗ ಮಾತ್ರ ಮಕ್ಕಳ ಮೆದುಳು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಿದ್ಧವಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

Whats_app_banner