ಚಂಚಲ ಮನಸ್ಸು ದೂರವಾಗಿ, ಏಕಾಗ್ರತೆ ಹೆಚ್ಚಿಸಲು ಈ ಯೋಗಾಸನಗಳು ಬೆಸ್ಟ್: ಬೋರ್ಡ್ ಪರೀಕ್ಷೆಗೂ ಮುನ್ನ ಮಕ್ಕಳಿಗೆ ಈ ಅಭ್ಯಾಸ ರೂಢಿಸಿ
ಬೋರ್ಡ್ ಪರೀಕ್ಷೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಪರೀಕ್ಷೆಯ ತಯಾರಿಗೆ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಅಗತ್ಯವಾಗಿ ಬೇಕು. ಹೆಚ್ಚಿನ ಪೋಷಕರು ಇದೇ ವಿಷಯಕ್ಕೆ ಚಿಂತೆಗೆ ಒಳಗಾಗಿರುತ್ತಾರೆ. ಅದಕ್ಕೆ ಪರಿಹಾರವನ್ನು ಹುಡುಕಲು ಕಷ್ಟಪಡುತ್ತಾರೆ. ಆದರೆ ನಿಮ್ಮ ಮಕ್ಕಳಿಗೆ ಈ ಯೋಗಾಸನಗಳನ್ನು ಅಭ್ಯಾಸ ಮಾಡಿಸಿ, ಪರಿಣಾಮ ನೀವೇ ನೋಡಿ.
ವಿದ್ಯಾರ್ಥಿಗಳ ಜೀವನದಲ್ಲಿ ಬೋರ್ಡ್ ಪರೀಕ್ಷೆ ಬಹಳ ಮುಖ್ಯವಾದ ಹಂತ. ಬೋರ್ಡ್ ಪರೀಕ್ಷೆಗೆ ಕೆಲವು ತಿಂಗಳು ಮಾತ್ರ ಉಳಿದಿದೆ. ಇದಕ್ಕಾಗಿ ವಿದ್ಯಾರ್ಥಿಗಳು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪೋಷಕರು ಮತ್ತು ಮಕ್ಕಳಲ್ಲಿ ಒಂದು ರೀತಿಯ ಒತ್ತಡ ಹೆಚ್ಚುತ್ತಿರುವುದನ್ನು ಕಾಣಬಹುದಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸುವುದು, ಅವರ ಊಟ, ನಿದ್ದೆ ಬಗ್ಗೆ ಕಾಳಜಿವಹಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಪರೀಕ್ಷೆಗೆ ಕೇವಲ ತಯಾರಿಸಿ ನಡೆಸಿದರೆ ಮಾತ್ರ ಸಾಕಾಗುವುದಿಲ್ಲ. ಓದಿದ್ದನ್ನು ಅರ್ಥಮಾಡಿಕೊಂಡು, ನೆನಪಿಟ್ಟುಕೊಳ್ಳುವುದು, ಸಮಯಕ್ಕೆ ಸರಿಯಾಗಿ ಅದನ್ನು ಅಚ್ಚುಕಟ್ಟಾಗಿ ಬರೆಯುವುದು ಕೂಡ ಅಷ್ಟೇ ಮುಖ್ಯವಾಗಿದೆ. ನಿಮ್ಮ ಮಕ್ಕಳ ಮನಸ್ಸು ವಿಚಲಿತವಾಗದೆ, ಏಕಾಗ್ರತೆಯಿಂದ ಓದಿ, ನೆನಪಿನ ಶಕ್ತಿ ಚುರುಕುಗೊಳಿಸಲು ಯೋಗಾಸನಗಳು ಬಹಳ ಪ್ರಯೋಜನಕಾರಿಯಾಗಿವೆ. ಇದು ಅವರ ಮನಸ್ಸನ್ನು ಶಾಂತಗೊಳಿಸುವುದಲ್ಲದೆ, ಬುದ್ಧಿಯನ್ನು ಚುರುಕಾಗಿಸುತ್ತದೆ. ಇದರಿಂದಾಗಿ ಓದಿದ ಪಾಠ ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಪರೀಕ್ಷೆಯ ಭಯ ಮೂಡಿಸುವ ಬದಲಿಗೆ ಶಾಂತ ರೀತಿಯ ವರ್ತನೆ ಮತ್ತು ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸುವಂತೆ ಪ್ರೇರೇಪಿಸುವುದು ಮುಖ್ಯವಾಗಿದೆ. ಮಕ್ಕಳ ದಿನಚರಿಯಲ್ಲಿ ಯೋಗಾಭ್ಯಾಸದಂತಹ ದೈಹಿಕ ಚಟುವಟಿಕೆಯನ್ನು ಸೇರಿಸುವುದರಿಂದ ಬೋರ್ಡ್ ಪರೀಕ್ಷೆಯ ಭಯವನ್ನು ಹೋಗಲಾಡಿಸಿ ಹೆಚ್ಚಿನ ಅಂಕ ಪಡೆಯುವಂತೆ ಮಾಡಬಹುದು. ಆ ಯೋಗಾಸನಗಳು ಯಾವುವು ಮತ್ತು ಅದರಿಂದ ಸಿಗುವ ಪ್ರಯೋಜನಗಳನ್ನು ತಿಳಿಯೋಣ.
ಚಂಚಲ ಮನಸ್ಸು ದೂರಮಾಡಿ, ಏಕಾಗ್ರತೆ ಹೆಚ್ಚಿಸುವ ಯೋಗಾಸನಗಳು
ಪ್ರಾಣಾಯಾಮ: ಮಕ್ಕಳಿಗೆ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೆ 15 ರಿಂದ 20 ನಿಮಿಷಗಳ ಪ್ರಾಣಾಯಾಮ ಮಾಡುವ ಅಭ್ಯಾಸ ರೂಢಿಸಿ. ಇದರಿಂದ ಮಕ್ಕಳ ಮೈಂಡ್ ರಿಲ್ಯಾಕ್ಸ್ ಆಗುತ್ತದೆ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ಓದಿದ ವಿಷಯ ನೆನಪಿನಲ್ಲಿ ಉಳಿಯುತ್ತದೆ. ಆಳವಾದ ಉಸಿರಾಟ ಕ್ರಿಯೆಯು ಒತ್ತಡ, ಆತಂಕ, ಹೆದರಿಕೆಯನ್ನು ದೂರಮಾಡಿ, ಮನಸ್ಸನ್ನು ಶಾಂತ ಸ್ಥಿತಿಯಲ್ಲಿ ಇರಿಸಲು ಸಹಾಯ ಮಾಡುತ್ತದೆ.
ತಾಡಾಸನ: ಮಿದುಳು ಚುರುಕಾಗಿ ಕೆಲಸ ಮಾಡಲು ದೇಹವನ್ನು ಆರೋಗ್ಯದಿಂದಿಡುವುದು ಬಹಳ ಮುಖ್ಯವಾಗಿದೆ. ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುವ ಯೋಗಾಸನಗಳು ಮೆದುಳನ್ನು ಹೆಚ್ಚು ಕ್ರಿಯಾಶೀಲವಾಗಿರಿಸುತ್ತದೆ. ತಾಡಾಸನವು ಮಕ್ಕಳು ಮಾಡಬಹುದಾದಂತಹ ಸುಲಭದ ಯೋಗಾಸನವಾಗಿದೆ. ಈ ಯೋಗಾಸನದ ಜೊತೆಗೆ ಕ್ರಮಬದ್ಧ ಉಸಿರಾಟವು ಏಕಾಗ್ರತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ.
ವೃಕ್ಷಾಸನ: ವೃಕ್ಷಾಸನವು ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಜತೆಗೆ ಮನಸ್ಸು ವಿಚಲಿತಗೊಳ್ಳುವುದನ್ನು ದೂರಮಾಡುತ್ತದೆ. ದೇಹ ಮತ್ತು ಮನಸ್ಸಿಗೆ ಸ್ಪೂರ್ತಿಯನ್ನು ತುಂಬುತ್ತದೆ. ದೇಹದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪಶ್ಚಿಮೋತ್ತನಾಸನ: ಮಕ್ಕಳು ಸತತವಾಗಿ ಕುಳಿತು ಅಧ್ಯಯನ ಮಾಡಬೇಕಾಗಿರುವುದರಿಂದ ಬೆನ್ನು ಮತ್ತು ಸೊಂಟದ ಭಾಗದಲ್ಲಿ ನೋವು ಇರಬಾರದು. ಇನ್ನು ಕೆಲವು ಮಕ್ಕಳು ಓದುವಾಗ ಬೆನ್ನನ್ನು ಬಾಗಿಸಿ ಕುಳಿತುಕೊಳ್ಳುತ್ತಾರೆ. ಆದರೆ, ದೇಹವನ್ನು ಸರಿಯಾದ ಆಕಾರ ಮತ್ತು ಭಂಗಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಇದಕ್ಕಾಗಿ ಪ್ರತಿದಿನ ಪಶ್ಚಿಮೋತ್ತನಾಸನ ಮಾಡಲು ಹೇಳಿ. ಅಧ್ಯಯನದಿಂದ ಮಕ್ಕಳ ದೇಹವು ನಕಾರಾತ್ಮಕತೆ ಪಡೆಯುವುದನ್ನು ತಪ್ಪಿಸುವುದು ಪೋಷಕರ ಕರ್ತವ್ಯವಾಗಿದೆ. ಯೋಗಾಸನದಂತಹ ವ್ಯಾಯಾಮ ರೂಢಿಸಿಕೊಳ್ಳುವುದರಿಂದ ಬುದ್ಧಿ ಮತ್ತು ದೇಹ ಎರಡೂ ಚುರುಕಾಗಿರುತ್ತದೆ.
ಸರ್ವಾಂಗಾಸ: ಈ ಆಸನವನ್ನು ಮಾಡುವುದರಿಂದ ಮಕ್ಕಳ ದೇಹ ಮತ್ತು ಮನಸ್ಸು ಎರಡೂ ಒಂದಕ್ಕೊಂದು ಸರಿಯಾಗ ಸ್ಪಂದಿಸುತ್ತದೆ. ಇದರಿಂದ ಅಧ್ಯಯನವು ಸುಲಭವಾಗುತ್ತದೆ. ನೆಲದ ಮೇಲೆ ಮಲಗಿ ಮಾಡುವ ಆಸನವಾದ್ದರಿಂದ ರಕ್ತದ ಹರಿವು ಕೂಡ ಪೂರ್ತಿ ದೇಹಕ್ಕೆ ಸಂಚಾರವಾಗುತ್ತದೆ.
ಹಲಾಸನ: ಸರ್ವಾಂಗಾಸನದ ಜೊತೆಗೆ ಹಲಾಸವನ್ನು ಮಾಡಿಸಿ. ಇದರಿಂದ ಹೊಟ್ಟೆನೋವು, ಅಜೀರ್ಣದಂತಹ ಸಮಸ್ಯೆಗಳು ದೂರವಾಗುತ್ತವೆ. ಹಲಾಸವು ಮಕ್ಕಳ ಮನಸ್ಸನ್ನು ಜಾಗರೂಕರಾಗಿಸುತ್ತದೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.