Parenting: ನಿಮ್ಮ ಮಕ್ಕಳಿಗೂ ಟಿವಿ ನೋಡ್ತಾ ಊಟ ಮಾಡೋ ಅಭ್ಯಾಸ ಇದ್ಯಾ; ಹಾಗಿದ್ರೆ ಈ ವಿಚಾರ ಪೋಷಕರಿಗೆ ತಿಳಿದಿರಲೇಬೇಕು
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಕ್ಕಳು ಟಿವಿ ನೋಡುತ್ತಾ, ಮೊಬೈಲ್ ನೋಡುತ್ತಾ ಊಟ, ತಿಂಡಿ ಸೇವಿಸುವುದು ಸಾಮಾನ್ಯ. ಆದರೆ ಇದು ಖಂಡಿತ ಉತ್ತಮ ಅಭ್ಯಾಸವಲ್ಲ. ಇದರಿಂದ ದೈಹಿಕ ಸಮಸ್ಯೆ ಮಾತ್ರವಲ್ಲದೇ ಮಾನಸಿಕ ಸಮಸ್ಯೆಗಳೂ ಎದುರಾಗುತ್ತವೆ. ಟಿವಿ ನೋಡುತ್ತಾ ಊಟ ಮಾಡುವ ವಿಚಾರವಾಗಿ ಪೋಷಕರು ಈ ವಿಚಾರಗಳನ್ನು ತಿಳಿದಿರಲೇಬೇಕು.
ಇಂದಿನ ಮಕ್ಕಳು ಹೊಟ್ಟೆ ತುಂಬಾ ಉಣ್ಣುವುದೇ ಕಮ್ಮಿಯಾಗಿದೆ. ರುಚಿಕರ ಹಾಗೂ ಆರೋಗ್ಯಕರವಾದುದನ್ನು ಕೊಟ್ಟರೆ ಬೇಡ ಎನ್ನುವ ಮಕ್ಕಳು ಕುರುಕಲು ತಿಂಡಿ, ಚಾಕ್ಲೇಟ್, ಬಿಸ್ಕೆಟ್‌ನಂತಹ ತಿನಿಸುಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅಂತಹ ಮಕ್ಕಳನ್ನು ಊಟ, ತಿಂಡಿಯ ಸಮಯದಲ್ಲಿ ಬಟ್ಟಲ ಮುಂದೆ ಕೂರಿಸುವುದಕ್ಕಾಗಿ ಹೆತ್ತವರು ಪಡುವ ಕಷ್ಟ ಅಷ್ಟಿಷ್ಟಲ್ಲ.
ಊಟದ ಸಮಯದಲ್ಲಿ ಮಗುವಿಗೆ ಸಮತೋಲಿತ ಆಹಾರವನ್ನು ನೀಡುವುದು, ಆರೋಗ್ಯಕರ ಆಹಾರ ಪದ್ಧತಿಯನ್ನು ಪೋಷಿಸುವುದು ಮತ್ತು ಮಗುವಿನ ದೈಹಿಕ ಆರೋಗ್ಯವನ್ನು ಹೆಚ್ಚಿಸಲು ವಿವಿಧ ಆಹಾರಗಳನ್ನು ಪರಿಚಯಿಸುವುದು ಪೋಷಕರ ಹೊಣೆಯಾಗಿರುತ್ತದೆ. ಇದಲ್ಲದೆ, ಅದರ ಪೌಷ್ಟಿಕಾಂಶದ ಪ್ರಯೋಜನಗಳನ್ನು ಮೀರಿ, ಊಟದ ಸಮಯವು ತಮ್ಮ ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕಗಳನ್ನು ರೂಪಿಸಲು ಪೋಷಕರಿಗೆ ಅಮೂಲ್ಯವಾದ ಅವಕಾಶವಾಗಿದೆ.
ಮಕ್ಕಳು ಊಟ ಮಾಡುವಾಗ ಟಿವಿ ನೋಡಬಾರದು ಏಕೆ?
ಶಿಶು ವೈದ್ಯರಾದ ಡಾ. ಹಿಮಾನಿ ನರುಲಾ ಅವರ ಪ್ರಕಾರ, ಟಿವಿ ನೋಡುವುದು ಅಥವಾ ಊಟದ ಸಮಯದಲ್ಲಿ ಮೊಬೈಲ್ ಸಾಧನಗಳನ್ನು ಬಳಸುವುದರಿಂದ ಮಕ್ಕಳ ಗಮನ ಊಟದಿಂದ ಹೊಟ್ಟೆ ತುಂಬುವುದರ ಬಗ್ಗೆ ಇರಲಾರದು. ಇದು ಅತಿಯಾಗಿ ತಿನ್ನುವುದು ಅಥವಾ ಕಡಿಮೆ ತಿನ್ನುವುದು, ಪೌಷ್ಟಿಕಾಂಶದ ಅಸಮತೋಲನದ ಅಪಾಯವನ್ನು ಹೆಚ್ಚಿಸುತ್ತದೆ. ಊಟದ ಸಮಯದಲ್ಲಿ ಮಕ್ಕಳು ತಮ್ಮ ಆಹಾರದ ಮೇಲೆ ಮಾತ್ರ ಗಮನಹರಿಸುವಂತೆ ಪ್ರೋತ್ಸಾಹಿಸುವುದರಿಂದ ಶಿಸ್ತಿನಿಂದ ಆಹಾರ ಸೇವಿಸುವ ಅಭ್ಯಾಸಗಳನ್ನು ಬೆಳೆಸುತ್ತದೆ. ಅಲ್ಲದೆ ಆಹಾರದ ರುಚಿ, ವಿನ್ಯಾಸದ ಅರಿವನ್ನು ಹೆಚ್ಚಿಸುತ್ತದೆ.
ಊಟದ ವೇಳೆ ಟಿವಿ ನೋಡದೇ ಇದ್ದರೆ ಮಕ್ಕಳು ತಮ್ಮ ಊಟದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಮಾಡುತ್ತದೆ. ಆಹಾರದ ಬಗ್ಗೆ ಆರೋಗ್ಯಕರ ಮನೋಭಾವವನ್ನು ಮತ್ತು ಪೌಷ್ಟಿಕಾಂಶದ ಬಗ್ಗೆ ಅರಿವನ್ನು ಮೂಡಿಸುತ್ತದೆ.
ಟೆಲಿವಿಷನ್ ಜಾಹೀರಾತುಗಳಲ್ಲಿ ಕಾಣುವ ಕಲರ್‌ಫುಲ್ ಆಹಾರ ಪದಾರ್ಥಗಳ ಮೋಡಿಗೆ ಮಾರುಹೋಗುವ ಮಕ್ಕಳು, ಸಕ್ಕರೆ, ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಉತ್ಪನ್ನಗಳತ್ತ ಹೆಚ್ಚು ಆಸಕ್ತರಾಗುತ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಊಟದ ಸಮಯದಲ್ಲಿ ಟಿವಿಯ ಮೊರೆ ಹೋಗದೇ ಇದ್ದರೆ ಆಹಾರದ ಆದ್ಯತೆಗಳ ಮೇಲೆ ಈ ಜಾಹೀರಾತುಗಳ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಆಹಾರ ಪದ್ಧತಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಇಂಡಿಯಾ ಡಾಮ್ ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾ. ಹಿಮಾನಿ.
ಹೆತ್ತವರಿಗಾಗಿ ಒಂದಷ್ಟು ಸಲಹೆಗಳು
ಆಹಾರದ ಮೇಲೆ ಮಕ್ಕಳಿಗೆ ಆಸಕ್ತಿ ಬೆಳೆಸಲು ಊಟದ ವಾತಾವರಣವನ್ನು ಚೆನ್ನಾಗಿರಿಸುವುದು ಅವಶ್ಯ. ಇದರಿಂದ ಮಕ್ಕಳಲ್ಲಿ ಸಂತಸದಿಂದ, ಅನುಭವಿಸಿ ತಿನ್ನುವ ಕಲೆ ವೃದ್ಧಿಯಾಗುತ್ತದೆ. ಮಕ್ಕಳಿಗೆ ತಮ್ಮ ಸ್ವಯಂ ಆಹಾರ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಆಯ್ಕೆ ಸ್ವಾತಂತ್ರ್ಯವನ್ನು ಉತ್ತೇಜಿಸಲು ನೆರವಾಗುತ್ತದೆ. ತಿಂಡಿಗಳನ್ನು ಆಯ್ಕೆ ಮಾಡುವುದು ಅಥವಾ ಊಟ ತಯಾರಿಕೆಯಲ್ಲಿ ಸಹಾಯ ಮಾಡುವುದು ಮುಂತಾದ ಆಹಾರ ಸಂಬಂಧಿತ ಆಯ್ಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಅವರ ಸ್ವಾಯತ್ತತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲವನ್ನು ಹೆಚ್ಚಿಸುತ್ತದೆ. ಅಲ್ಲದೆ ಕುಟುಂಬದ ಸದಸ್ಯರೆಲ್ಲರೂ ಜೊತೆ ಸೇರಿ ಊಟ ಮಾಡುವುದರಿಂದ ಮಕ್ಕಳಿಗೆ ಸಾಮಾಜಿಕ ಕೌಶಲಗಳು, ನಡವಳಿಕೆಗಳು ಮತ್ತು ಸಂವಹನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ನೀಡುತ್ತದೆ.
ಮಗು ಇಂತಹ ಆಹಾರವನ್ನು ಇಷ್ಟು ಪ್ರಮಾಣದಲ್ಲೇ ಸೇವಿಸಬೇಕೆಂಬ ಹೇರಿಕೆಯ ವಾತಾವರಣವು ಮಗುವಿನ ಮೇಲೆ ಕೆಟ್ಟ ಪರಿಣಾಮವನ್ನೂ ಬೀರಬಲ್ಲದು. ಮಗುವಿನ ಹಸಿವು ಮತ್ತು ಆದ್ಯತೆಗಳನ್ನು ಅಂಗೀಕರಿಸುವುದು ಮತ್ತು ಗೌರವಿಸುವುದು ಬಹಳ ಮುಖ್ಯ. ಆರಾಮದಾಯಕ ಊಟದ ವಾತಾವರಣವನ್ನು ಕಲ್ಪಿಸುವುದು ಆಹಾರದೊಂದಿಗೆ ಸಕಾರಾತ್ಮಕ ಸಂಪರ್ಕಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಊಟದ ವೇಳೆ ಮಕ್ಕಳನ್ನು ಟಿವಿಯಿಂದ ದೂರವಿರಿಸಲು ಹೀಗೆ ಮಾಡಿ
ಊಟದ ವೇಳೆ ಟಿವಿ ಆನ್ ಇರದಂತೆ ನೋಡಿಕೊಳ್ಳುವ ರೂಢಿ ಮಾಡಿಕೊಳ್ಳಿ. ಟಿವಿಯಿಂದ ಸ್ವಲ್ಪ ದೂರವಿರುವಂತೆ ಹಾಗೂ ಟಿವಿಯ ಬಗ್ಗೆ ಆಸಕ್ತಿ ತೋರದೆ ಆಹಾರದ ಬಗ್ಗೆ ಗಮನವಹಿಸುವಂತಹ ವಾತಾವರಣ ನಿರ್ಮಾಣ ಮಾಡಿ. ಹೆತ್ತವರನ್ನೇ ಮಕ್ಕಳು ಮಾದರಿಯನ್ನಾಗಿಸಿಕೊಂಡು ಅನುಕರಣೆ ಮಾಡುವುದರಿಂದಾಗಿ ಹೆತ್ತವರು ಟಿವಿ ಇಲ್ಲದೆಯೇ ಊಟದ ಸಮಯವನ್ನು ಕಳೆಯುವ ಉದಾಹರಣೆಯನ್ನು ನೀಡಿ.
ಊಟದ ಸಮಯದಲ್ಲಿ ಟಿವಿ ನೋಡುವುದು ಈಗಾಗಲೇ ಅಭ್ಯಾಸವಾಗಿದ್ದರೆ, ಅದರಲ್ಲಿ ಕಳೆಯುವ ಸಮಯವನ್ನು ಒಮ್ಮಿಂದೊಮ್ಮೆಲೇ ಕಡಿಮೆ ಮಾಡುವುದಕ್ಕಿಂತ, ಕ್ರಮೇಣ ಕಡಿಮೆ ಮಾಡುವುದು ಉತ್ತಮ. ಮಕ್ಕಳಿಗೆ ಊಟದ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ. ಅಲ್ಲದೆ, ಆಹಾರದ ಬಗ್ಗೆ ಆಸಕ್ತಿ ಹುಟ್ಟು ಹಾಕುವುದಕ್ಕಾಗಿ ಊಟ ತಯಾರಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ.
ಒಟ್ಟಿನಲ್ಲಿ ಮಕ್ಕಳಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಪ್ರೋತ್ಸಾಹಿಸುವುದೊಂದಿಗೆ ಆಹಾರದ ಜೊತೆಗೆ ಸಕಾರಾತ್ಮಕ ಸಂಬಂಧವನ್ನು ಬೆಳೆಸಿ, ಪೋಷಕಾಂಶಯುಕ್ತ ಆಹಾರ ಕ್ರಮವನ್ನು ಬೆಳೆಸುವುದು ಅತಿ ಅವಶ್ಯಕ. ಇದಕ್ಕೆ ಊಟದ ವೇಳೆ ಟಿವಿ ಮುಕ್ತ ವಾತಾವರಣ ಮಾತ್ರವೇ ನೆರವಾಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)