Money Savings: ದುಬಾರಿ ಬೆಂಗಳೂರಿನಲ್ಲಿ ಹಣ ಉಳಿತಾಯ ಮಾಡುವುದು ಹೇಗೆ? ರೆಡ್ಡಿಟ್ ಬಳಕೆದಾರರು ನೀಡಿದ ಉಪಯುಕ್ತ ಸಲಹೆಗಳು
Money Saving in Bengaluru: ಬೆಂಗಳೂರಿನಂತಹ ನಗರಗಳಲ್ಲಿ ಹಣ ಉಳಿತಾಯ ಮಾಡುವುದು ಹೇಗೆ? ಎಂಬ ವಿಷಯದ ಕುರಿತು ರೆಡ್ಡಿಟ್‌ನಲ್ಲಿ ಇತ್ತೀಚೆಗೆ ಉಪಯುಕ್ತ ಚರ್ಚೆ ನಡೆದಿದೆ. ಆನ್‌ಲೈನ್ ಫುಡ್ ಆರ್ಡರ್ ಬೇಡ, ವೀಕೆಂಡ್ ಶಾಪಿಂಗ್‌ಗೆ ಕಡಿವಾಣ ಹಾಕಿ, ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಎಂದೆಲ್ಲ ಜನರು ಸಲಹೆ ನೀಡಿದ್ದಾರೆ.

ರೆಡ್ಡಿಟ್ ತಾಣದ ಆಸ್ಕ್ ಬೆಂಗಳೂರು ವಿಭಾಗದಲ್ಲಿ ಇತ್ತೀಚೆಗೆ ಒಬ್ಬರು ಪ್ರಶ್ನೆಯೊಂದನ್ನು ಕೇಳಿದ್ದಾರೆ. "ನಾನು ಬೆಂಗಳೂರಿಗೆ ಬಂದು ಸುಮಾರು ಏಳು ವರ್ಷಗಳಾಗಿದೆ. ದಿನದಿಂದ ದಿನಕ್ಕೆ ಬೆಂಗಳೂರು ದುಬಾರಿಯಾಗುತ್ತಿದೆ. ಮನೆ ಬಾಡಿಗೆ, ನೀರಿನ ಬಿಲ್, ಇಂಟರ್‌ನೆಟ್ ಬಿಲ್ ಅಥವಾ ಕ್ರೆಡಿಟ್ ಕಾರ್ಡ್ ಇಎಂಐ ಇತ್ಯಾದಿಗಳನ್ನು ನಿರ್ವಹಣೆ ಮಾಡುವುದೇ ದುಸ್ತರವಾಗಿದೆ. ಕೆಲವೊಮ್ಮೆ ಅನಗತ್ಯ ವಸ್ತುಗಳನ್ನು ಖರೀದಿಸುವ ಒತ್ತಡವೂ ಇದೆ. ಬೆಂಗಳೂರಿನಲ್ಲಿ ಹಣ ಉಳಿಸಲು ಏನಾದರೂ ಸಲಹೆ ಇರುವುದೇ? ನನ್ನ ಬದುಕಿನ ಹಣಕಾಸು ಸ್ಥಿತಿ ದುಸ್ಥಿತಿಗೆ ತಲುಪಿದೆ" ಎಂದು ರೆಡ್ಡಿಟ್‌ನಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಸಾಕಷ್ಟು ಜನರು ಉತ್ತರ ನೀಡಿದ್ದಾರೆ. ಈ ಉತ್ತರ ಹಣ ಉಳಿತಾಯ ಮಾಡಲು ಬಯಸುವವರಿಗೆ ಉಪಯುಕ್ತವಾಗಬಹುದು.
ಮೊದಲ ಉಳಿತಾಯ ಮಾಡಿ, ಆಮೇಲೆ ಖರ್ಚು ಮಾಡಿ
ಮೊದಲ ಉಳಿತಾಯ ಮಾಡಿ, ಆಮೇಲೆ ಖರ್ಚು ಮಾಡಿ ಎಂದು ಒಬ್ಬರು ಸಲಹೆ ನೀಡಿದ್ದಾರೆ. ಅದಕ್ಕೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ಇದು ಹೇಗೆ ಸಾಧ್ಯ. ನಾನು 1 ಲಕ್ಷ ರೂ ತಿಂಗಳಿಗೆ ಸಂಪಾದನೆ ಮಾಡುವೆ. ತಿಂಗಳ ಖರ್ಚಿಗೆ 50 ಸಾವಿರ ರೂಪಾಯಿ ಬೇಕು. ಇದರಲ್ಲಿ ಐವತ್ತು ಸಾವಿರ ಉಳಿತಾಯ ಮಾಡಬೇಕು ಎಂದುಕೊಂಡರೂ ಆ ತಿಂಗಳು ಅನಿರೀಕ್ಷಿತ ಖರ್ಚು ಬಂದು ಮತ್ತೆ 20 ಸಾವಿರ ರೂಪಾಯಿ ಮುಗಿಯುತ್ತದೆ. ಆಮೇಲೆ ಉಳಿತಾಯಕ್ಕೆ ಇರುವುದು 30 ಸಾವಿರ ಅಷ್ಟೇ. ಹೀಗಾಗಿ, ಮೊದಲು ಖರ್ಚು, ಆಮೇಲೆ ಉಳಿತಾಯ ಎನ್ನುವುದೇ ಸರಿಯಾಗಿದೆ" ಎಂದು ಒಬ್ಬರು ಹೇಳಿದ್ದಾರೆ. ನೀವು ಬ್ಯಾಚುಲರ್ ಆಗಿದ್ದರೆ ನೀವು ಹೇಳಿದ ಮಾತು ಅನುಸರಿಸಬಹುದಿತ್ತು. ಆದರೆ, ಮನೆಯಲ್ಲಿ ಹಿರಿಯರು, ಮಕ್ಕಳು ಇದ್ದರೆ ಅನಿರೀಕ್ಷಿತ ಖರ್ಚುಗಳು ಬಂದು ಉಳಿತಾಯ ಕನಸಿನ ಮಾತಾಗುತ್ತದೆ" ಎಂದು ಅವರು ಹೇಳಿದ್ದಾರೆ. "ನೀವು ಹಣವನ್ನು ಅತ್ಯುತ್ತಮವಾಗಿ ಪ್ಲ್ಯಾನ್ ಮಾಡಿದರೆ ಅನಿರೀಕ್ಷಿತ ಸಂದರ್ಭಗಳಲ್ಲಿಯೂ ಭಯಪಡಬೇಕಾಗಿಲ್ಲ" ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.
ಆನ್‌ಲೈನ್ ಅವಲಂಬನೆ ಕಡಿಮೆ ಮಾಡಿ
"ಜೊಮೆಟೊ ಬೇಡ, ಸ್ವಿಗ್ಗಿ ಬೇಡ, ಝೆಪ್ಟೊ, ಬಿಗ್‌ಬಾಸ್ಕೆಟ್‌ನಲ್ಲಿ ಪ್ರತಿದಿನ ಹಾಲು ಹೊರತುಪಡಿಸಿ ಬೇರೆ ಖರೀದಿಸಬೇಡಿ. ಜೊಮೊಟೊ ದೊಡ್ಡ ಉದಾಹರಣೆ. ಮನೆಯ ಹತ್ತಿರ ಇರುವ ರೆಸ್ಟೂರೆಂಟ್‌ಗೆ ಹೋಗದೆ ಆನ್‌ಲೈನ್‌ನಲ್ಲಿ ಖರೀದಿಸುವ ಮೂಲಕ ಸಾಕಷ್ಟು ಜನರು ಹಣ ಕಳೆದುಕೊಳ್ಳುತ್ತಾರೆ. ಇಂತಹ ಹಣ ಸೋರಿಕೆ ಖರ್ಚುಗಳನ್ನು ಅರ್ಥ ಮಾಡಿಕೊಂಡರೆ ಹಣ ಉಳಿತಾಯ ಮಾಡಬಹುದು" ಎಂದು ಒಬ್ಬರು ರೆಡ್ಡಿಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಮನೆಯಲ್ಲೇ ಅಡುಗೆ ಮಾಡಿ. ಸ್ವಿಗ್ಗಿ ಜೊಮೆಟೊ ಬೇಡ" ಎಂದು ಇನ್ನೂ ಹಲವು ಜನರು ಸಲಹೆ ನೀಡಿದ್ದಾರೆ.
ಅನಗತ್ಯ ಖರೀದಿ ಬೇಡ
"ಎಂಜಿ ರೋಡ್‌ಗೆ ಅನಗತ್ಯ ಶಾಪಿಂಗ್‌ಗೆ ಹೋಗಬೇಡಿ. ಕೆಫೆ, ಪಬ್ ಸಹವಾಸ ಬೇಡ. ಹತ್ತು ಹಲವು ಒಟಿಟಿಗಳಿಗೆ ಚಂದಾದಾರರಾಗಬೇಡಿ. ಈ ರೀತಿ ಮಾಡಿ ನಾನು ತಿಂಗಳಿಗೆ 10 ಸಾವಿರ ರೂಪಾಯಿ ಉಳಿತಾಯ ಮಾಡುವೆ" ಎಂದು ಒಬ್ಬರು ಸಲಹೆ ನೀಡಿದ್ದಾರೆ. "ಈ ರೀತಿ ಮಾಡಿದರೆ ಜೀವನದ ಉದ್ದೇಶ ಏನು. ಹತ್ತು ಸಾವಿರ ರೂಪಾಯಿ ಉಳಿತಾಯ ಮಾಡುವ ಸಲುವಾಗಿ ಬದುಕಿನ ಸಂತೋಷದ ಸಮಯಗಳನ್ನು ಕಳೆದುಕೊಳ್ಳಬೇಕೆ" ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. "ನಮ್ಮ ಬದುಕಿನ ಖರ್ಚುಗಳು ಇದೇ ರೀತಿ ಸುಖ ಸಂತೋಷದ ನೆಪದಲ್ಲಿ ಹೋಗುತ್ತದೆ. ಸುಖ ಸಂತೋಷ ಶಾಪಿಂಗ್‌ನಲ್ಲಿ ದೊರಕುತ್ತದೆ ಎನ್ನುವುದು ಭ್ರಮೆ" ಎಂದು ಇನ್ನೊಬ್ಬರು ಹೇಳಿದ್ದಾರೆ.
ವೀಕೆಂಡ್ ಖರ್ಚಿಗೆ ಕಡಿವಾಣ
"ವೀಕೆಂಡ್‌ನಲ್ಲಿ ಹೊರಗೆ ಹೋಗದೆ ಇರುವ ಮೂಲಕ ಮತ್ತು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡದೆ ಇರುವ ಮೂಲಕ ನಾನು ಹಣ ಉಳಿತಾಯ ಮಾಡಲು ಆರಂಭಿಸಿದ್ದೇನೆ. ವೀಕೆಂಡ್‌ನಲ್ಲಿ ಮಾಲ್, ಹೋಟೆಲ್ ಎಂದು ಹೋದರೆ ಕಡಿಮೆಯೆಂದರೂ 5-6 ಸಾವಿರ ರೂಪಾಯಿ ಖರ್ಚಾಗುತ್ತದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಮೊದಲು ಸಾಕಷ್ಟು ಯೋಚಿಸುತ್ತೇನೆ. ಯುಪಿಐ, ಕಾರ್ಡ್ ಮೂಲಕ ಹಣ ಪಾವತಿಸುವುದು ಸುಲಭವೆಂದು ಕಂಡರೂ ನಮ್ಮ ಉಳಿತಾಯವನ್ನು ಸೈಲೆಂಟ್ ಆಗಿ ನಾಶ ಮಾಡುತ್ತದೆ" ಎಂದು ಒಬ್ಬರು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಣ ಉಳಿತಾಯಕ್ಕೆ ಸಲಹೆಗಳು
ರೆಡ್ಡಿಟ್‌ನಲ್ಲಿ ಈ ಕುರಿತು ಸುದೀರ್ಘವಾದ ಚರ್ಚೆಯೇ ನಡೆದಿದೆ. ಇನ್ನು ಕೆಲವರು ನೀಡಿರುವ ಸಲಹೆಗಳನ್ನು ಈ ಮುಂದಿನಂತೆ ಲಿಸ್ಟ್ ಮಾಡಬಹುದು.
- ಹಾಸಿಗೆ ಇದ್ದಷ್ಟೇ ಕಾಲು ಚಾಚು. ಅನಗತ್ಯ ಖರ್ಚಿಗೆ ಕಡಿವಾಣ ಹಾಕು.
- ಚೌಕಾಶಿ ಮಾಡಲು ಕಲಿಯಿರಿ. ಬೆಂಗಳೂರಿನಲ್ಲಿ ಏನೇ ಖರೀದಿಸುವುದಿದ್ದರೂ ಮಾರಾಟಗಾರರು ಹೇಳಿದಷ್ಟು ಮೊತ್ತವನ್ನು ಕಣ್ಣುಮುಚ್ಚಿ ನೀಡಬೇಡಿ.
- ಇಂತಿಷ್ಟೇ ಖರ್ಚು ಮಾಡಬೇಕು ಎಂದು ಮೊದಲೇ ನಿಗದಿಪಡಿಸಿ.
- ಕಡಿಮೆ ಬಾಡಿಗೆ ಮತ್ತು ಜೀವನ ವೆಚ್ಚ ಕಡಿಮೆ ಇರುವ ಸ್ಥಳಕ್ಕೆ ಶಿಫ್ಟ್ ಆಗಿ.
- ಹಣವನ್ನು ಹೂಡಿಕೆ ಮಾಡಿ. ಸಿಪ್ ಹೂಡಿಕೆಯ ಕುರಿತು ಗಮನ ನೀಡಿ.
- ಸಾರ್ವಜನಿಕ ಸಾರಿಗೆ ಬಳಕೆ ಮಾಡಿ, ಮನೆಯಲ್ಲಿಯೇ ಆಹಾರ ತಯಾರಿಸಿ.
- ಏನಾದರೂ ಖರೀದಿಸುವ ಮೊದಲು "ಇದು ನಿಜಕ್ಕೂ ಅಗತ್ಯವಿದೆಯೇ?" ಎಂದು ನಿಮ್ಮನ್ನು ನೀವು ಪ್ರಶ್ನಿಸಿ.
ಇದನ್ನೂ ಓದಿ: Success Tips: ಶ್ರೀಮಂತರಾಗುವುದು ಹೇಗೆ? ರಿಚ್ ಡ್ಯಾಡ್ ಪೂರ್ ಡ್ಯಾಡ್‌ನಲ್ಲಿ ತಿಳಿಸಿದ ಈ 10 ಹಣಕಾಸು ಸಲಹೆಗಳನ್ನು ಪಾಲಿಸಿ
