ಕನ್ನಡ ಸುದ್ದಿ  /  Lifestyle  /  Personal Finance Women Money Saving Tips Home Management Savings Investment Gold Purchase Kannada News Rst

Women Money Saving: ಹೆಣ್ಣುಮಕ್ಕಳೇ, ಮನೆ ನಿರ್ವಹಣೆಯೊಂದಿಗೆ ಹಣ ಉಳಿತಾಯವೂ ಅವಶ್ಯ; ಹೂಡಿಕೆ, ಉಳಿತಾಯಕ್ಕೆ ನಿಮಗಿದೆ ಹಲವು ದಾರಿ

ಹೆಣ್ಣುಮಕ್ಕಳು ಹಣ ಉಳಿತಾಯ ಮಾಡುವುದರಲ್ಲಿ ಎತ್ತಿದ ಕೈ. ಆದರೆ ಇತ್ತೀಚೆಗೆ ಹೆಣ್ಣುಮಕ್ಕಳು ಬದಲಾಗಿದ್ದಾರೆ. ಉಳಿತಾಯದ ಮೇಲೆ ಹೆಚ್ಚು ಗಮನ ನೀಡುತ್ತಿಲ್ಲ. ಆದರೆ ಮಹಿಳೆಯರು ಮನೆ ನಿರ್ವಹಣೆಯ ಜೊತೆ ಜೊತೆಗೆ ಹಣ ಉಳಿತಾಯ ಹಾಗೂ ಹೂಡಿಕೆಯ ಮೇಲೂ ಗಮನ ಹರಿಸುವುದು ಭವಿಷ್ಯದ ದೃಷ್ಟಿಯಿಂದ ಅವಶ್ಯ. ಮದುವೆಯಾದ ಹಾಗೂ ದುಡಿಯುವ ಹೆಣ್ಣುಮಕ್ಕಳ ಹಣ ಉಳಿಕೆಗೆ ಇಲ್ಲಿದೆ ಟಿಪ್ಸ್‌.

ಹೆಣ್ಣುಮಕ್ಕಳು ಮನೆ ನಿರ್ವಹಣೆಯೊಂದಿಗೆ ಹಣ ಉಳಿತಾಯ ಮಾಡುವುದು ಅವಶ್ಯ
ಹೆಣ್ಣುಮಕ್ಕಳು ಮನೆ ನಿರ್ವಹಣೆಯೊಂದಿಗೆ ಹಣ ಉಳಿತಾಯ ಮಾಡುವುದು ಅವಶ್ಯ

ಹಿಂದಿನ ಕಾಲದಿಂದಲೂ ಮನೆ ನಿರ್ವಹಣೆ ಹೆಣ್ಣುಮಕ್ಕಳ ಜವಾಬ್ದಾರಿ. ಹಿಂದೆಲ್ಲಾ ಗಂಡಸರು ದುಡಿಯುತ್ತಿದ್ದರೆ, ಹೆಣ್ಣುಮಕ್ಕಳು ಮನೆಯಲ್ಲಿ ಇರುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ. ಹೆಣ್ಣುಮಕ್ಕಳ ಹೆಗಲ ಮೇಲೆ ಎರಡೆರಡು ಜವಾಬ್ದಾರಿಗಳಿವೆ. ಮನೆ ನಿರ್ವಹಣೆ ಹಾಗೂ ದುಡಿಮೆ ಎರಡಲ್ಲೂ ಹೆಣ್ಣುಮಕ್ಕಳು ಕೈ ಜೋಡಿಸುತ್ತಿದ್ದಾರೆ.

ಅದೇನೇ ಇದ್ದರೂ ಭವಿಷ್ಯದ ದೃಷ್ಟಿಯಿಂದ ಹೆಣ್ಣುಮಕ್ಕಳು ಮನೆ ನಿರ್ವಹಣೆ ಮಾಡುತ್ತಾ, ಒಂದಿಷ್ಟು ಹಣ ಉಳಿತಾಯದ ಮೇಲೂ ಗಮನ ಹರಿಸುವುದು ಮುಖ್ಯವಾಗುತ್ತದೆ. ಇದು ಅವರ ಕುಟುಂಬ ಹಾಗೂ ಮಕ್ಕಳ ಭವಿಷ್ಯದ ಉದ್ದೇಶದಿಂದ ಅವಶ್ಯವೂ ಹೌದು. ಹೆಣ್ಣುಮಕ್ಕಳ ಹಣ ಉಳಿತಾಯಕ್ಕೆ ಹಲವು ಮಾರ್ಗಗಳಿವೆ. ಅಂತಹ ಕೆಲಸ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮನೆಯಿಂದಲೇ ಉಳಿತಾಯ

ಹೆಣ್ಣುಮಕ್ಕಳು ಮನೆಯಿಂದಲೇ ಹಣ ಉಳಿತಾಯದ ಮಾರ್ಗವನ್ನು ಕಂಡುಕೊಳ್ಳಬೇಕು. ಮನೆಗೆ ರೇಷನ್‌ ತರುವಾಗ ಆಫರ್‌ ಇರುವ ಕಡೆ ಗಮನಿಸಿ ಅಲ್ಲಿ ತರುವುದರಿಂದ ಹಣ ಉಳಿಸಬಹುದು. ಪದೇ ಪದೇ ರೇಷನ್‌ ತರುವ ಒಂದೇ ಬಾರಿ ಮೂರ್ನಾಲ್ಕು ತಿಂಗಳಿಗಾಗುವಷ್ಟು ತಂದರೆ ವಾಹನದ ಪೆಟ್ರೋಲ್‌ ಕೂಡ ಉಳಿಸಿದಂತಾಗುತ್ತದೆ. ತರಕಾರಿಗಳನ್ನು ರಾಶಿ ತಂದು ಕೊಳೆಸಿ ಹಾಳು ಮಾಡುವ ಬದಲು ಅವಶ್ಯವಿದ್ದಷ್ಟೇ ತನ್ನಿ. ಪ್ರತಿ ತಿಂಗಳು ರೇಷನ್‌ಗೆಂದೇ ಒಂದಿಷ್ಟು ಹಣವನ್ನು ನಿಗದಿ ಮಾಡಿ. ಅಷ್ಟೇ ಖರ್ಚು ಮಾಡಿ.

ತಂತ್ರಜ್ಞಾನ ಬಳಸಿಕೊಳ್ಳಿ

ಇಂದಿನ ತಂತ್ರಜ್ಞಾನ ಯುಗದಲ್ಲಿ ಯಾವುದೇ ವಿಷಯವನ್ನಾಗಲಿ ಅರಿಯುವುದು ಬಹಳ ಸುಲಭ. ಹೆಣ್ಣುಮಕ್ಕಳು ಯಾವ ರೀತಿ ಎಲ್ಲಾ ಹೂಡಿಕೆ ಮಾಡಬಹುದು ಎಂಬುದನ್ನು ಅಂತರ್‌ಜಾಲದಲ್ಲಿ ಹುಡುಕಿ. ಯಾವುದರಲ್ಲಿ ಹೂಡಿಕೆ ಮಾಡುವುದು ಉತ್ತಮ, ಎಲ್ಲಿ ಉಳಿತಾಯ ಮಾಡಿದರೆ ಉತ್ತಮ, ಎಲ್ಲಿ ಬಡ್ಡಿ ಜಾಸ್ತಿ ಇಂತಹ ಅಂಶಗಳನ್ನು ಗಮನಿಸಿ

ಹೂಡಿಕೆ ಮಾಡಿ

ಹಣ ಉಳಿತಾಯ ಮಾಡುವುದು ಮಾತ್ರವಲ್ಲ ಹೂಡಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ನಿಮ್ಮಲ್ಲಿರುವ ಹಣವನ್ನು ಮ್ಯುಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು, ಚಿನ್ನ ಖರೀದಿ ಮಾಡಬಹುದು, ಆಸ್ತಿ ಖರೀದಿ ಮಾಡಬಹುದು ಈ ರೀತಿ ಹೆಣ್ಣುಮಕ್ಕಳು ಹಣ ಹೂಡಿಕೆಯತ್ತಲೂ ಗಮನ ಹರಿಸಬಹುದು. ಇದರ ಬಗ್ಗೆ ನಿಮಗೆ ಸಾಕಷ್ಟು ಅರಿವು ಇಲ್ಲದೇ ಇದ್ದರೆ, ವೃತ್ತಿಪರರ ಸಲಹೆ ಪಡೆಯುವುದು ಉತ್ತಮ. ನಿಮ್ಮ ಹಣವನ್ನು ದುಪ್ಪಟ್ಟ ಮಾಡುವ ಯೋಗ್ಯ ಹಾಗೂ ನಂಬಿಕಾರ್ಹ ಸ್ಥಳದಲ್ಲಿ ಹೂಡಿಕೆ ಮಾಡಬಹುದು. ವಿಮೆ ಅಥವಾ ಶೇರ್‌ ಮಾರುಕಟ್ಟೆಯೂ ಹೂಡಿಕೆ ಬೆಸ್ಟ್‌.

ಆರ್‌ಡಿ, ಎಫ್‌ಡಿ ಮಾಡಿಸಿ

ಬ್ಯಾಂಕ್‌, ಪೋಸ್ಟ್‌ ಆಫೀಸ್‌, ಸಹಕಾರಿ ಸಂಘಗಳಲ್ಲಿ ಹೆಣ್ಣುಮಕ್ಕಳಿಗೆಂದೇ ಕೆಲವು ವಿಶೇಷ ಉಳಿತಾಯ ಯೋಜನೆಗಳಿವೆ. ಆ ಯೋಜನೆಗಳು ಹಲವು ರೀತಿಯ ಪ್ರಯೋಜನಗಳನ್ನು ಹೊಂದಿರುತ್ತವೆ. ಅಲ್ಲದೆ ಬಡ್ಡಿದರವು ಹೆಚ್ಚಿರುತ್ತದೆ. ಅಂತಹವನ್ನು ಕೇಳಿ ತಿಳಿದುಕೊಂಡು ಅದನ್ನು ಮಾಡಬಹುದು. ಆ ಮೂಲಕ ಪ್ರತಿ ತಿಂಗಳು ಇಂತಿಷ್ಟು ಹಣ ಉಳಿಸಲು ಸಾಧ್ಯ.

ಶಾಪಿಂಗ್‌ಗೆ ಕಡಿವಾಣ ಹಾಕಿ

ಹೆಣ್ಣುಮಕ್ಕಳು ಹೆಚ್ಚು ಹಣ ಕಳೆದುಕೊಳ್ಳುವುದು ಶಾಪಿಂಗ್‌ ಮಾಡುವ ಮೂಲಕ. ತಿಂಗಳ ಸಂಬಳ ಬಂದಾಕ್ಷಣ ಶಾಪಿಂಗ್‌ ಮಾಡಲು ಓಡುತ್ತಾರೆ, ಅದರಲ್ಲೂ ಆನ್‌ಲೈನ್‌ ಶಾಪಿಂಗ್‌ ಇನ್ನಷ್ಟು ಹಣ ಖಾಲಿಯಾಗುವಂತೆ ಮಾಡುತ್ತದೆ. ಆ ಕಾರಣಕ್ಕೆ ಅತಿಯಾಗಿ ಶಾಪಿಂಗ್‌ ಮಾಡುವುದು ನಿಲ್ಲಿಸಿ. ಆಫರ್‌ ಇರುವಾಗ ನಿಮಗೆ ಬೇಕಾಗಿದ್ದನ್ನು ಖರೀದಿಸಿ ಇಡಿ. ಇದರೊಂದಿಗೆ ಇಯರ್‌ ಎಂಡ್‌ ಸೇಲ್‌ಗಳು ಬಟ್ಟೆ ಖರೀದಿಗೆ ಬೆಸ್ಟ್‌ ಆಯ್ಕೆ, ಇದು ನಿಮ್ಮ ಹಣ ಉಳಿಸುತ್ತದೆ.

ಚಿನ್ನದ ಮೇಲೆ ಹೂಡಿಕೆ ಮಾಡಿ

ಹೆಣ್ಣುಮಕ್ಕಳಿಗೆ ಚಿನ್ನದ ಮೇಲಿನ ವ್ಯಾಮೋಹ ಎಂದಿಗೂ ಕಡಿಮೆಯಾಗಲು ಸಾಧ್ಯವಿಲ್ಲ. ಪ್ರತಿ ತಿಂಗಳು ಆಭರಣ ಮಳಿಗೆಯಲ್ಲಿ ಚಿನ್ನದ ಚೀಟಿ ಕಟ್ಟಬಹುದು. ಇದು ಕೂಡ ಹಣ ಉಳಿಸುವ ಉತ್ತಮ ವಿಧಾನ, ಅಲ್ಲದೆ ಇದರಿಂದ ಹೂಡಿಕೆ ಮಾಡದಂತೆಯೂ ಆಗುತ್ತದೆ.

ಇದನ್ನೂ ಓದಿ

Women Money Savings: ಉದ್ಯೋಗಸ್ಥ ಮಹಿಳೆಗೆ ಹಣ ಉಳಿತಾಯ ಮಾಡಲು 50:30:20 ನಿಯಮ, ಈ ರೂಲ್‌ ಫಾಲೋ ಮಾಡಿ ನೋಡಿ

Money Management Tips: ಉದ್ಯೋಗಸ್ಥ ಮಹಿಳೆ ಹಣ ಉಳಿತಾಯ ಮಾಡಲು ಸುವರ್ಣ ನಿಯಮವೊಂದಿದೆ. ನಿಮ್ಮ ವೇತನವನ್ನು ಮೂರು ಭಾಗವಾಗಿಸಿ ಅದನ್ನು ಉಳಿತಾಯ ಮತ್ತು ಅವಶ್ಯಕತೆಗೆ ಬಳಸಬಹುದು. ಈ ಕುರಿತು ವಿಶೇಷ ಲೇಖನ ಇಲ್ಲಿದೆ.

ವಿಭಾಗ