ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡದೆ ಭವಿಷ್ಯ ಉಜ್ವಲವಾಗಲಿ, ದೇಶ ವಿಶ್ವಗುರುವಾಗಲಿ ಎಂದು ಆಶಿಸುವುದು ತಿರುಕನ ಕನಸಿನಂತೆ– ರಂಗ ನೋಟ
ರಂಗಸ್ವಾಮಿ ಮೂಕನಹಳ್ಳಿ ಬರಹ: ಕನ್ನಡದಲ್ಲಿ ಶಿಷ್ಟಾಚಾರ ಎಂದರೆ ಪಾಲಿಸಬೇಕಾದ ನಿಯಮ ಎನ್ನುವ ಅರ್ಥ ಕೊಡುತ್ತದೆ. ಆದರೆ ಜಪಾನ್‌ನಲ್ಲಿ ಇದು ಜೀವನಶೈಲಿ. ಕಾಟಾಚಾರಕ್ಕೆ ಪಾಲಿಸುವ ನಿಯಮವಲ್ಲ. ನಿಜವಾದ ವ್ಯಕ್ತಿತ್ವ ನಿರ್ಮಾಣ ಮಾಡುವುದು ಹೀಗೆ. ನಾವು ನಮ್ಮ ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡದೆ ಅವರ ಭವಿಷ್ಯ ಉಜ್ವಲವಾಗಲಿ, ಎಂದು ಆಶಿಸುವುದು ತಿರುಕನ ಕನಸಿನಂತೆ.
![ರಂಗ ನೋಟ ಅಂಕಣ ರಂಗ ನೋಟ ಅಂಕಣ](https://images.hindustantimes.com/kannada/img/2024/12/25/550x309/Ranga_Nota_1735100339576_1735100344190.png)
ನಾವು ಸಾಮಾನ್ಯವಾಗಿ ಸಮಾಜದಲ್ಲಿನ ನಮ್ಮ ರೆಪ್ಯೂಟೇಷನ್ ಕುಸಿದರೆ, ಅದಕ್ಕೆ ಧಕ್ಕೆ ಬಂದರೆ? ಎನ್ನುವ ಭಯದಲ್ಲಿ ಬದುಕುತ್ತೇವೆ. ರೆಪ್ಯೂಟೇಷನ್ ಎನ್ನುವುದು ಸಮಾಜ ನಮ್ಮನ್ನು ನೋಡುವ ರೀತಿ. ಸಮಾಜ ನಮ್ಮ ಬಗ್ಗೆ ಕಟ್ಟಿಕೊಂಡಿರುವ ಕಲ್ಪನೆ. ಆದರೆ ವ್ಯಕ್ತಿತ್ವ ಎನ್ನುವುದು ಅದನ್ನು ಮೀರಿದ್ದು. ನಮ್ಮನ್ನು ನಾವು ಕಂಡುಕೊಳ್ಳುವ ಕ್ರಿಯೆ.ಯಾವ ಪ್ರಚಾರ, ಅಪಪ್ರಚಾರ, ಹೊಗಳಿಕೆ, ತೆಗಳಿಕೆಗೂ ಬಗ್ಗದ, ಕುಗ್ಗದ, ಬದಲಾಗದ ಮನಸ್ಥಿತಿ. ಸಾಮಾನ್ಯವಾಗಿ ರೆಪ್ಯೂಟೇಷನ್ ಕಾಪಾಡಿಕೊಳ್ಳುವ ದರ್ದಿಗೆ ಬಿದ್ದವರು ಬಹುಪಾಲು ಅದನ್ನು ಸಂರಕ್ಷಿಸಿ ಇಟ್ಟುಕೊಳ್ಳಲು ಹೆಣಗಾಡುತ್ತಾರೆ. ತೀವ್ರ ಪ್ರತಿಕೂಲ ಪರಿಸ್ಥಿತಿಯಲ್ಲಿ ಅವರ ನಿಜವಾದ ಗುಣದ ಅನಾವರಣವಾಗುತ್ತದೆ. ಅರ್ಥ ಇಷ್ಟೇ , ರೆಪ್ಯೂಟೇಷನ್ ಎನ್ನುವುದು ತಾತ್ಕಾಲಿಕ. ಕ್ಯಾರೆಕ್ಟರ್ ಅಥವಾ ವ್ಯಕ್ತಿತ್ವ ಎನ್ನುವುದು ಶಾಶ್ವತ.
ಭಾರತದ ಇತಿಹಾಸ ತೆರೆದು ನೋಡಿದರೆ ಅಲ್ಲಿ ಕಾಣುವುದು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದ ಸಾಮಾನ್ಯ ಪ್ರಜೆಗಳ ಕಥೆ. ಬ್ರಿಟಿಷ್ ಅಧಿಕಾರಿಯೊಬ್ಬ ಇಂಗ್ಲೆಂಡ್‌ಗೆ ತನ್ನ ರಜಾ ದಿನ ಕಳೆಯಲು ಹೋಗಿದ್ದಾಗ ಆತನನ್ನು ಅಲ್ಲಿನ ಆತನ ಸ್ನೇಹಿತರು ಪ್ರಶ್ನಿಸುತ್ತಾರೆ. ಭಾರತ ಹೇಗಿದೆ? ಅಲ್ಲಿನ ಜನರ ಬಗ್ಗೆ ಸ್ವಲ್ಪ ಹೇಳುವೆಯ? ಆ ಬ್ರಿಟಿಷ್ ಅಧಿಕಾರಿ ಭಾವುಕನಾಗಿ ಭಾರತ ನಮ್ಮ ಇಂಗ್ಲೆಂಡ್‌ನಂತಲ್ಲ, ಅಲ್ಲಿನ ಜನರ ನಡವಳಿಕೆ ಅದ್ಬುತ. ಒಂದು ಸಣ್ಣ ಸುಳ್ಳು ಹೇಳಿದ್ದರೆ ಸಾಕು ಮರಣದಿಂದ ತಪ್ಪಿಸಿಕೊಳ್ಳುವ ಅವಕಾಶವಿದ್ದಾಗ ಕೂಡ ಅವರು ಸುಳ್ಳು ಹೇಳದೆ, ನಿಜಕ್ಕೆ ಬದ್ಧರಾಗಿ ನಿಲ್ಲುತ್ತಾರೆ. ನಗುತ್ತ ಸಾವಿಗೆ ಶರಣಾಗುತ್ತಾರೆ ಎಂದು ಹೇಳುತ್ತಾರೆ. ಸಾವಿಗೆ ಹೆದರಿ ಹೊಂದಾಣಿಕೆ ಮಾಡಿಕೊಳ್ಳದ ಅಚಲ ಬದ್ಧತೆಯನ್ನು ವ್ಯಕ್ತಿತ್ವ ಎನ್ನಬಹುದು.
ಭಾರತಕ್ಕೆ ಚರಿತ್ರೆಯಲ್ಲಿ ಸ್ಥಾನ ಸಿಕ್ಕಿದ್ದು ವ್ಯಕ್ತಿತ್ವದಿಂದ
ಭಾರತ ಮಹಾನ್ ಆಗಿದ್ದು, ಚರಿತ್ರೆಯಲ್ಲಿ ಅಂತಹ ಸ್ಥಾನ ಪಡೆದಿರುವುದು ವ್ಯಕ್ತಿತ್ವ ಹೊಂದಿದ್ದ ಪ್ರಜೆಗಳಿಂದ! ಇಂದು ಏನಾಗಿದೆ? ನಾವೆಷ್ಟೆ ಭಾರತವನ್ನು ವಿಶ್ವಗುರು ಎಂದು ಬಿಂಬಿಸಲು ಹೋದರೂ ನಾವು ವಿಶ್ವಗುರುವಾಗಲು ಸಾಧ್ಯವೇ? ಎನ್ನುವುದನ್ನು ವಿಮರ್ಶೆ ಮಾಡಿ ನೋಡಿಕೊಳ್ಳಬೇಕು. ಭಗವಂತನ ಕೃಪೆಯಿಂದ ಕಳೆದ ತಿಂಗಳು ಜಪಾನ್ ದೇಶಕ್ಕೆ ಹೋಗುವ ಅವಕಾಶವಾಗಿತ್ತು. ಪುಟಾಣಿ ಜಪಾನ್ ಜಗತ್ತಿನ ಇನ್ನಿತರ ದೇಶಗಳಿಗಿಂತ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಪಡೆಯಲು ಸಾಧ್ಯವಾದದ್ದು ಹೇಗೆ?
ಜಪಾನೀಯರ ಮಕ್ಕಳ ವ್ಯಕ್ತಿತ್ವ ಗೆಲ್ಲುವುದು ಹೀಗೆ
ಜಪಾನೀಯರು ತಮ್ಮ ಮಕ್ಕಳಲ್ಲಿ ಯಾರೂ ಸರಿಗಟ್ಟಲಾಗದ ವ್ಯಕ್ತಿತ್ವ ನಿರ್ಮಾಣದಲ್ಲಿ ತೊಡಗಿದ್ದಾರೆ. ಅದರಲ್ಲಿ ಅವರು ಗೆದ್ದಿದ್ದಾರೆ. ಹೀಗಾಗಿ ಅವರು ಆ ಮಟ್ಟದ ಯಶಸ್ಸನ್ನು ಕಂಡಿದ್ದಾರೆ. ಜಪಾನ್ ದೇಶದಲ್ಲಿ ಎಲ್ಲಕ್ಕೂ ಮೊದಲಿಗೆ ಸಮಾಜದ ಜೊತೆಗೆ, ಸಹಪಾಠಿಗಳ ಜೊತೆ, ಅಧ್ಯಾಪಕರ ಜೊತೆ, ಹಿರಿಯರ ಜೊತೆಗೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ಕಲಿಸುತ್ತಾರೆ.
ಇಂಗ್ಲಿಷ್‌ನಲ್ಲಿ ಎಟಿಕ್ವೆಟ್ಸ್ ಎನ್ನಲಾಗುತ್ತದೆ. ಕನ್ನಡದಲ್ಲಿ ಶಿಷ್ಟಾಚಾರ ಎಂದರೆ ಪಾಲಿಸಬೇಕಾದ ನಿಯಮ ಎನ್ನುವ ಅರ್ಥ ಕೊಡುತ್ತದೆ. ಆದರೆ ಜಪಾನ್‌ನಲ್ಲಿ ಇದು ಜೀವನ ಶೈಲಿ. ಕಾಟಾಚಾರಕ್ಕೆ ಪಾಲಿಸುವ ನಿಯಮವಲ್ಲ. ನಿಜವಾದ ವ್ಯಕ್ತಿತ್ವ ನಿರ್ಮಾಣ ಮಾಡುವುದು ಹೀಗೆ. ಎಳವೆಯಲ್ಲಿ ಮಕ್ಕಳು ನಾವು ಹೇಳಿದ್ದನ್ನು ನಂಬುತ್ತವೆ. ಅದರ ಜೊತೆಗೆ ಸಮಾಜದಲ್ಲಿ, ತನ್ನ ಸುತ್ತಮುತ್ತಲಿನ ಆಗುಹೋಗುಗಳನ್ನು ಗಮನಿಸುತ್ತವೆ. ಹೇಳಿ ಕೊಟ್ಟದಕ್ಕೂ ಅದು ಪಾಲನೆಯಾಗುತ್ತಿರುವುದಕ್ಕೂ ವ್ಯತ್ಯಾಸವಿದ್ದರೆ ಅವು ಹೇಳಿಕೊಟ್ಟದ್ದನ್ನು ಪಾಲಿಸುವುದಿಲ್ಲ. ಸಮಾಜದಲ್ಲಿ ಪಾಲನೆಯಾಗುತ್ತಿರುವ ಅಂಶವನ್ನು ಪಾಲಿಸುತ್ತವೆ. ಜಪಾನೀ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಹಜೀವಿಗೆ ನೀಡುವ ಗೌರವ ಅನನ್ಯ. ಅವರ ಸಮಯಕ್ಕೆ, ಅವರ ಕೆಲಸಕ್ಕೆ, ಅವರ ವ್ಯಕ್ತಿತ್ವಕ್ಕೆ ದೇಹ ಬಗ್ಗಿಸಿ ನಮಿಸುತ್ತಾರೆ. ಇದರರ್ಥ ಜಪಾನ್ ದೇಶದಲ್ಲಿ ಕೆಟ್ಟವರಿಲ್ಲ, ಕೆಡುಕಿಲ್ಲ ಎನ್ನುವುದಲ್ಲ. ಸಮಾಜದ ಬಹುಸಂಖ್ಯಾತ ಜನ ಉತ್ತಮರು ಎಂದರ್ಥ.
ಸಾಮಾನ್ಯವಾಗಿ ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಶಾಲೆ ಮತ್ತು ಅಲ್ಲಿನ ಸ್ಮಶಾನಕ್ಕೆ ಭೇಟಿ ಕೊಡುವುದು ಅಭ್ಯಾಸ. ಮುಂದಿನ ಜನಾಂಗ ಹೇಗೆ ತಯಾರಾಗುತ್ತಿದೆ ಎನ್ನುವುದನ್ನು ಶಾಲೆ ಹೇಳುತ್ತದೆ. ಕಳೆದ ಜನಾಂಗವನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಸ್ಮಶಾನ ತಿಳಿಸಿಕೊಡುತ್ತದೆ. ಆದರೆ ಜಪಾನ್ ದೇಶದಲ್ಲಿ ಇವೆರಡಕ್ಕೂ ಭೇಟಿ ಕೊಡುವ ಅವಶ್ಯಕತೆ ಬರಲಿಲ್ಲ. ಸಮಾಜದಲ್ಲಿನ ಜನರ ನಿತ್ಯ ಬದುಕನ್ನು ನೋಡಿದರೆ ಸಾಕು ಅವರ ಭೂತ, ಭವಿಷ್ಯ ತಿಳಿದುಕೊಳ್ಳಬಹುದು.
ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ನೀಡಿ ಆದ್ಯತೆ
ಈ ಸಾಲುಗಳನ್ನು ಭಾರತೀಯರು ಮತ್ತು ಜಪಾನಿಯರ ನಡುವೆ ತುಲನೆ ಮಾಡಲು ಬರೆದಿಲ್ಲ. ಆದರೆ ನಾವು ನಮ್ಮ ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡದೆ ಅವರ ಭವಿಷ್ಯ ಉಜ್ವಲವಾಗಲಿ, ದೇಶ ವಿಶ್ವಗುರುವಾಗಲಿ ಎಂದು ಆಶಿಸುವುದು ತಿರುಕನ ಕನಸಿನಂತೆ ಎನ್ನುವ ವಿಚಾರ ತಿಳಿದಿರಲಿ ಎನ್ನುವುದನ್ನು ಹೇಳುವುದಾಗಿದೆ. ನಾವು ಇನ್ನೊಂದು ವರ್ಷವನ್ನು ಕೂಡ ಮುಗಿಸಿ ಬಿಟ್ಟೆವು. ಅದರಲ್ಲೂ 2024 ಬಂದದ್ದು, ಹೋದದ್ದು ತಿಳಿಯಲಿಲ್ಲ. ಸಮಯಕ್ಕೆ ಸಾವಿರ ಕಾಲು, ಮಿಂಚಿನ ವೇಗ ಎನ್ನುವುದನ್ನು ನಾನು ಸದಾ ಹೇಳುತ್ತಿರುತ್ತೇನೆ. 2025 ರಲ್ಲಿ ನಾವು ವ್ಯಕ್ತಿತ್ವ ಬಳಸಿಕೊಳ್ಳುವ ಪ್ರಯತ್ನ ಮಾಡೋಣ. ನಮ್ಮ ಮಕ್ಕಳಲ್ಲಿ ಅಂತಹ ವ್ಯಕ್ತಿತ್ವ ಬೆಳೆಸುವ ಕಾರ್ಯಕ್ಕೂ ಮುನ್ನುಡಿ ಬರೆಯೋಣ.
ರಂಗಸ್ವಾಮಿ ಮೂಕನಹಳ್ಳಿ ಪರಿಚಯ
ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)