Public Speaking: ಸಾರ್ವಜನಿಕವಾಗಿ ಮಾತನಾಡುವಾಗ ಭಯ ಕಾಡುತ್ತಾ? ನಿಮ್ಮ ಸಂವಹನ ಕೌಶಲ್ಯ ಹೆಚ್ಚಿಸಲು ಇಲ್ಲಿದೆ ಸೂಪರ್ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Public Speaking: ಸಾರ್ವಜನಿಕವಾಗಿ ಮಾತನಾಡುವಾಗ ಭಯ ಕಾಡುತ್ತಾ? ನಿಮ್ಮ ಸಂವಹನ ಕೌಶಲ್ಯ ಹೆಚ್ಚಿಸಲು ಇಲ್ಲಿದೆ ಸೂಪರ್ ಟಿಪ್ಸ್

Public Speaking: ಸಾರ್ವಜನಿಕವಾಗಿ ಮಾತನಾಡುವಾಗ ಭಯ ಕಾಡುತ್ತಾ? ನಿಮ್ಮ ಸಂವಹನ ಕೌಶಲ್ಯ ಹೆಚ್ಚಿಸಲು ಇಲ್ಲಿದೆ ಸೂಪರ್ ಟಿಪ್ಸ್

ಸ್ನೇಹಿತರ ಜೊತೆ ಜೊತೆ ಚಟ್‌ಪಟ್ ಅಂತ ಮಾತನಾಡುವ ಹಲವರು ಸಾರ್ವಜನಿಕವಾಗಿ ಮಾತನಾಡುವಾಗ ಹೆದರುತ್ತಾರೆ. ಭೀತಿ ಆವರಿಸಿ ಕಂಪಿಸುತ್ತಾರೆ. ಸಾರ್ವಜನಿಕವಾಗಿ ಮಾತನಾಡುವುದು ಒಂದು ಕಲೆ. ಪ್ರೇಕ್ಷಕರನ್ನು ಆಕರ್ಷಿಸಲು, ಅವರ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿರುತ್ತದೆ. ನಿಮ್ಮ ಸಂವಹನ ಕೌಶಲ ಸುಧಾರಿಸಿಕೊಳ್ಳಲು 10 ಸಲಹೆಗಳು ಇಲ್ಲಿವೆ... (ಬರಹ: ಪ್ರಿಯಾಂಕಾ)

ಸಾರ್ವಜನಿಕ ಭಾಷಣಕ್ಕೆ ಸಂವಹನ ಕೌಶಲ ಅತ್ಯಗತ್ಯ
ಸಾರ್ವಜನಿಕ ಭಾಷಣಕ್ಕೆ ಸಂವಹನ ಕೌಶಲ ಅತ್ಯಗತ್ಯ

ಸಾರ್ವಜನಿಕ ಮಾತನಾಡುವ ಕಲೆಯು ಒಂದು ಮುಖ್ಯ ಕೌಶಲವಾಗಿದೆ. ಅದು ಒಬ್ಬರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಒಂದು ಸಣ್ಣ ಗುಂಪಾಗಿರಲಿ ಅಥವಾ ದೊಡ್ಡ ಪ್ರೇಕ್ಷಕರ ಮುಂದೆ ಭಾಷಣ ಮಾಡುತ್ತಿರಲಿ, ನೀವೆಷ್ಟು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುತ್ತಿದ್ದೀರಿ ಅನ್ನುವುದು ಇಲ್ಲಿ ಮುಖ್ಯವಾಗಿರುತ್ತದೆ. ಕೆಲವರು ತುಂಬಾ ಮಾತನಾಡುವವರಾಗಿದ್ದರೂ, ವೇದಿಕೆಯಲ್ಲಿ ನಿಂತು ಮುಂಭಾಗದಲ್ಲಿ ಕುಳಿತಿರುವ ಜನರ ಗುಂಪನ್ನು ಕಂಡಾಕ್ಷಣ ನಾಲಿಗೆಯೇ ಹೊರಳದಂತಾಗಿ ಗಲಿಬಿಲಿಗೊಳ್ಳುವವರಿದ್ದಾರೆ. ತಾನು ತುಂಬಾ ಚೆನ್ನಾಗಿ ಸಿದ್ಧವಾಗಿ ಬಂದಿದ್ದೆ, ಆದರೆ ವೇದಿಕೆಗೆ ಹತ್ತಿ ಪ್ರೇಕ್ಷಕರನ್ನು ನೋಡುತ್ತಿದ್ದಂತೆ ಜಂಘಾಬಲವೆಲ್ಲಾ ಉಡುಗಿ ಹೋಯ್ತು ಅಂತಾ ಬಹುತೇಕರು ಹೇಳುವ ಮಾತನ್ನು ಬಹುಶಃ ನೀವೂ ಕೇಳಿರಬಹುದು.

ನೀವು ಎಷ್ಟು ಪರಿಣಾಮಕಾರಿಯಾಗಿ ಸಾರ್ವಜನಿಕ ಭಾಷಣ ಮಾಡುತ್ತೀರೋ ಅದು ನಿಮ್ಮ ಆಲೋಚನೆಗಳನ್ನು ತಿಳಿಸಲು, ಇತರರನ್ನು ಮನವೊಲಿಸಲು ಸಾಧ್ಯವಾಗಿಸುತ್ತದೆ. ನಿಮ್ಮ ಸಾರ್ವಜನಿಕ ಭಾಷಣವನ್ನು ಸುಧಾರಿಸಲು ಮತ್ತು ಹೆಚ್ಚು ಪರಿಣಾಮಕಾರಿ ಸಂವಹನಕಾರರಾಗಲು ನಾವು ನಿಮಗೆ ಸಹಾಯ ಮಾಡುತ್ತೇವೆ. ಎಲ್ಲರ ಎದುರು ಬೆಸ್ಟ್ ಎನ್ನುವಂತೆ ಮಾತನಾಡಲು ಇಲ್ಲಿವೆ 10 ಟಿಪ್ಸ್.

ನಿಮ್ಮ ಮಾತು ಕೇಳಿಸಿಕೊಳ್ಳುವ ಪ್ರೇಕ್ಷಕರ ಬಗ್ಗೆ ತಿಳಿದುಕೊಳ್ಳಿ

ವೇದಿಕೆಯ ಮೇಲೆ ಮಾತನಾಡುವ ಮುನ್ನ ನಿಮ್ಮ ಪ್ರೇಕ್ಷಕರ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಜನರಿಗಿರುವ ಆಸಕ್ತಿಗಳು ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ. ಪ್ರೇಕ್ಷಕರ ಆದ್ಯತೆಗಳು ಮತ್ತು ಅಗತ್ಯಗಳಿಗೆ ಅನುಸಾರವಾಗಿ ಯಾವ ರೀತಿ ಭಾಷಣ ಮಾಡಬೇಕು ಅನ್ನುವುದನ್ನು ನೀವೇ ಯೋಚಿಸಿ ಮುಂದುವರೆಯಿರಿ.

ಪರಿಣಾಮಕಾರಿ ಭಾಷಣಕ್ಕೆ ಅಭ್ಯಾಸ ಅತ್ಯಗತ್ಯ

ಸಾರ್ವಜನಿಕ ಭಾಷಣವನ್ನು ಕರಗತ ಮಾಡಿಕೊಳ್ಳುವ ಕಲೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿಮ್ಮ ಭಾಷಣ ಅಥವಾ ಪ್ರಸ್ತುತಪಡಿಸುತ್ತಿರುವ ವಿಷಯವನ್ನು ಹಲವು ಬಾರಿ ಪೂರ್ವಾಭ್ಯಾಸ ಮಾಡಿ. ಭಾಷೆಯಲ್ಲಿ ಸ್ಪಷ್ಟತೆಯಿರಲಿ. ಏನು ಮಾತನಾಡಬೇಕು ಅನ್ನುವುದನ್ನು ಮೊದಲೇ ಬರೆದಿಟ್ಟುಕೊಳ್ಳಿ. ವಿಷಯದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಜನರನ್ನು ಉದ್ದೇಶಿಸಿ ಮಾತನಾಡಲು ಭಯ ಕಾಡಿದರೆ, ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡಿ. ನೀವು ಅಭ್ಯಾಸ ಮಾಡುವಾಗ ಭಾಷಣವನ್ನು ರೆಕಾರ್ಡ್ ಮಾಡಿಕೊಳ್ಳಿ ಅಥವಾ ತಪ್ಪು ಕಂಡುಹಿಡಿಯಲು ಇತ್ಯಾದಿಗಾಗಿ ನಿಮ್ಮ ವಿಶ್ವಾಸಾರ್ಹ ಸ್ನೇಹಿತರು, ಸಹೋದ್ಯೋಗಿ ಅಥವಾ ಕುಟುಂಬದ ಸಹಾಯವನ್ನು ಪಡೆದುಕೊಳ್ಳಿ.

ಮಾತಿನ ಆರಂಭ ಮತ್ತು ಮುಕ್ತಾಯ ಅತ್ಯುತ್ತಮವಾಗಿರಲಿ

ಪ್ರೇಕ್ಷಕರನ್ನು ಸೆಳೆಯುವ ವಿಶ್ವಾಸಾರ್ಹ ಮಾತುಗಳಿಂದ ಭಾಷಣ ಪ್ರಾರಂಭಿಸಿ. ಅಥವಾ ಅವರ ಆಸಕ್ತಿ ಕೆರಳಿಸುವ ವಿಚಾರದಿಂದ ಪ್ರಸ್ತುತಪಡಿಸಿ. ಸಭಿಕರ ವಿಶ್ವಾಸ ಸಂಪಾದಿಸುವಂತೆ ವಿಷಯ ಪ್ರಸ್ತುತಪಡಿಸಿ. ಪ್ರಾರಂಭದಿಂದಲೂ ನಿಮ್ಮ ಭಾಷಣ ಆಸಕ್ತಿದಾಯಕವಾಗಿದ್ದರೆ ಪ್ರೇಕ್ಷಕರ ಗಮನವನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಮುಕ್ತಾಯ ಕೂಡ ಅತ್ಯುತ್ತಮವಾದ ಮಾತುಗಳಿಂದ ಕೂಡಿರಲಿ. ಪ್ರಭಾವ ಬೀರುವ ಮಾತು, ಟಿಪ್ಪಣಿ, ಮುಂತಾದವವುಗಳಿಂದ ಮಾತು ಮುಗಿಸಿ.

ಮಾತಿನ ನಡುವೆ ವಿಡಿಯೊಗಳನ್ನು ಪರಿಣಾಮಕಾರಿಯಾಗಿ ಬಳಸಿ

ನೀವು ಹೇಳುವ ಪ್ರಮುಖ ಅಂಶಗಳಿಗೆ ಪೂರಕವಾಗಿ ಸ್ಲೈಡ್‌, ಗ್ರಾಫ್‌ ಅಥವಾ ದೃಶ್ಯವನ್ನು ತೋರಿಸುವುದರಿಂದ ಪ್ರೇಕ್ಷಕರ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಹಾಗಂತ ವಿಡಿಯೊವನ್ನು ಮಿತವಾಗಿ ಬಳಸಬೇಕು. ನಿಮ್ಮ ತೋರಿಸುವ ದೃಶ್ಯಗಳಿಂದ ವಿಷಯಾಂತರವಾಗದಿರಲಿ.

ಮಾತು ಕೇಳಿಸಿಕೊಳ್ಳುತ್ತಿರುವ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಿ

ನೀವು ಭಾಷಣ ಮಾಡುವಾಗ ಅದರ ಮಧ್ಯದಲ್ಲಿ ಪ್ರೇಕ್ಷಕರಿಗೆ ಪ್ರಶ್ನೆ ಕೇಳುವುದು, ಸಮೀಕ್ಷೆ ಕೈಗೊಳ್ಳುವುದು ಅಥವಾ ಗುಂಪು ಚಟುವಟಿಕೆಗಳಂತಹ ಸಂವಾದಾತ್ಮಕ ಅಂಶಗಳನ್ನು ನಿಮ್ಮ ಭಾಷಣವನ್ನು ಪ್ರಸ್ತುತಪಡಿಸುವಾಗ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಿ. ಪ್ರೇಕ್ಷಕರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿ. ನಿಮ್ಮ ಪ್ರೇಕ್ಷಕರ ಆಸಕ್ತಿಯನ್ನು ಕಾಪಾಡಿಕೊಳ್ಳಲು ಇದು ಬಹಳ ಮುಖ್ಯ.

ಪ್ರೇಕ್ಷಕರೊಂದಿಗೆ ಕಣ್ಣಿನ ಸಂಪರ್ಕ ಸಾಧಿಸಿ

ನಿಮ್ಮ ಪ್ರೇಕ್ಷಕರೊಂದಿಗೆ ಕಣ್ಣಿನ ಸಂಪರ್ಕವನ್ನು ಇರಿಸಿಕೊಳ್ಳಬೇಕು. ಇದು ವಿಶ್ವಾಸಾರ್ಹತೆ ಮತ್ತು ಬಾಂಧವ್ಯವನ್ನು ವೃದ್ಧಿಸುತ್ತದೆ. ನೆರೆದಿರುವ ಪ್ರೇಕ್ಷಕರನ್ನು ಸರಿಯಾಗಿ ಗಮನಿಸಿ, ಪ್ರತಿಯೊಬ್ಬರನ್ನೂ ನೋಡುತ್ತಾ ಮಾತನಾಡಿ.

ಬಾಡಿ ಲಾಂಗ್ವೇಜ್ ಕಡೆ ಇರಲಿ ಗಮನ

ನೀವು ಮಾತನಾಡುವಾಗ ಬಾಡಿ ಲಾಂಗ್ವೇಜ್ ಅನ್ನು ನಿಯಂತ್ರಿಸುವುದು ಮುಖ್ಯ. ಭಾಷಣವನ್ನು ಪ್ರಸ್ತುತಪಡಿಸುವಾಗ ಮುಕ್ತ ಮತ್ತು ಆತ್ಮವಿಶ್ವಾಸದ ಭಂಗಿಯನ್ನು ಕಾಪಾಡಿಕೊಳ್ಳಿ. ಭಾಷಣ ಮಾಡುವಾಗ ಒಂದೇ ಕಡೆ ನಿಲ್ಲಬೇಡಿ. ಸುತ್ತಲೂ ಚಲಿಸಿ. ಉತ್ಸಾಹ, ಸತ್ಯಾಸತ್ಯತೆಯನ್ನು ತಿಳಿಸಲು ನಿಮ್ಮ ಮುಖಭಾವ, ಧ್ವನಿ ಮತ್ತು ಸನ್ನೆಗಳನ್ನು ಬಳಸಿಕೊಳ್ಳಿ. ದೇಹ ಭಾಷೆಯು ಶಬ್ದಗಳಿಗಿಂತಲೂ ಪ್ರಭಾವಶಾಲಿ ಎನ್ನುವುದು ತಿಳಿದಿರಲಿ.

ಸ್ಪಷ್ಟವಾಗಿ ಮತ್ತು ವಿಶ್ವಾಸದಿಂದ ಮಾತನಾಡಿ

ನೀವು ಮಾತನಾಡುವ ಪದಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ, ತುಂಬಾ ಫಾಸ್ಟ್ ಆಗಿ ಮಾತನಾಡುವುದು ಬೇಡ. ವೇಗವಾಗಿ ಮಾತನಾಡಿದರೆ ಜನರಿಗೆ ಅರ್ಥವಾಗುವುದಿಲ್ಲ. ಹಾಗೆಂದು ಬಹಳ ನಿಧಾನವಾಗಿ ಮಾತನಾಡಿದರೆ ಅದು ನೀರಸ ಎನಿಸುತ್ತದೆ. ಹೀಗಾಗಿ ನಿಮ್ಮ ಭಾಷಣದ ಧಾಟಿಯನ್ನು ಮಧ್ಯಮ ವೇಗದಲ್ಲಿ ಕಾಪಾಡಿಕೊಳ್ಳಿ. ನಿಮ್ಮೊಳಗೆ ಆತಂಕ ಇರುವುದು ಬೇಡ. ಅಕಸ್ಮಾತ್ ಆತಂಕವಿದ್ದರೂ ಅದನ್ನು ಅದನ್ನು ನಿಮ್ಮ ಧ್ವನಿ ಮತ್ತು ನಡವಳಿಕೆಯ ಮೂಲಕ ತೋರಿಸಿಕೊಳ್ಳಬೇಡಿ. ಧ್ವನಿಯಲ್ಲಿ ಸದಾ ಆತ್ಮವಿಶ್ವಾಸವಿರಲಿ.

ವಿಶ್ವಾಸಾರ್ಹತೆ ಉಳಿಸಿಕೊಳ್ಳಿ, ಮಾತಿನಲ್ಲಿ ಪ್ರಾಮಾಣಿಕತೆ ಇರಲಿ

ಉತ್ತಮ ಬಾಂಧವ್ಯವನ್ನು ನಿರ್ಮಿಸಲು ಮತ್ತು ವೈಯಕ್ತಿಕ ಮಟ್ಟದಲ್ಲಿ ನಿಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ವಿಶ್ವಾಸಾರ್ಹತೆ ಸಂಪಾದಿಸುವುದು ಬಹಳ ಮುಖ್ಯ. ವಿಷಯ ಪ್ರಸ್ತುತಪಡಿಸುವಾಗ ಹೃದಯದಿಂದ ಮಾತನಾಡಿ. ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಮತ್ತು ಬೌದ್ಧಿಕವಾಗಿ ತೊಡಗಿಸಿಕೊಳ್ಳಲು ದುರ್ಬಲ್ಯ, ಸಹಾನುಭೂತಿ ಮತ್ತು ಉತ್ಸಾಹವನ್ನು ತೋರಿಸಿ.

ಪ್ರೇಕ್ಷಕರ ಪ್ರತಿಕ್ರಿಯೆ ಪಡೆಯಿರಿ

ಭಾಷಣ ಅಥವಾ ವಿಷಯ ಪ್ರಸ್ತುತಪಡಿಸಿದ್ದು ಮುಗಿದ ನಂತರ ಪ್ರತಿಕ್ರಿಯೆ ನೀಡಲು ಪ್ರೇಕ್ಷಕರಲ್ಲಿ ಕೋರಿಕೊಳ್ಳಿ. ಏನು ಬದಲಾವಣೆ ಮಾಡಲು ಸಾಧ್ಯ ಮುಂತಾದವುಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ. ಪ್ರೇಕ್ಷಕರ ಸಲಹೆಗಳನ್ನು ಮುಕ್ತವಾಗಿ ಪರಿಶೀಲಿಸಿ.

ಸಾರ್ವಜನಿಕವಾಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ, ಅಭ್ಯಾಸ, ಅನುಭವ ಬೇಕು. ನಿಮ್ಮ ಸಂವಹನ ಕೌಶಲ ವೃದ್ಧಿಸಿಕೊಳ್ಳುವ ಮೂಲಕ, ನಿಮ್ಮ ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳುವ ಮೂಲಕ, ಪ್ರೆಸೆಂಟೇಶನ್‌ಗಳನ್ನು ಪರಿಣಾಮಕಾರಿಯಾಗಿ ರೂಪಿಸುವ ಮೂಲಕ ನೀವು ಪ್ರಭಾವಶಾಲಿ ಭಾಷಣಕಾರರಾಗಬಹುದು. ಸಾರ್ವಜನಿಕವಾಗಿ ಮಾತನಾಡಲು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ.