ಕನ್ನಡ ಸುದ್ದಿ  /  Lifestyle  /  Pet Care How To Take Care Of Your Loving Pets During Summer Which Kind Of Food To Give Pets In Sunny Days Rsa

Pet Care: ಬೇಸಿಗೆಯಲ್ಲಿ ನಿಮ್ಮ ಪ್ರೀತಿಯ ಸಾಕು ಪ್ರಾಣಿಗಳನ್ನು ಯಾವ ರೀತಿ ಆರೈಕೆ ಮಾಡಬೇಕು? ಇಲ್ಲಿದೆ ಮಾಹಿತಿ

Pets Care in Summer: ಬೇಸಿಗೆಯಲ್ಲಿ ಮನುಷ್ಯರಷ್ಟೇ ಪ್ರಾಣಿಗಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು. ನೀವು ಪ್ರೀತಿಯಿಂದ ಸಾಕುತ್ತಿರುವ ಪ್ರಾಣಿಗಳು ಬೇಸಿಗೆಯ ಧಗೆಯಿಂದ ಅನಾರೋಗ್ಯಕ್ಕೀಡಾಗದಂತೆ ನೋಡಿಕೊಳ್ಳಲು ನೀವು ಕೆಲವೊಂದು ಅಂಶಗಳ ಕಡೆ ಗಮನ ಹರಿಸಬೇಕು.

ಬೇಸಿಗೆಯಲ್ಲಿ ಪ್ರಾಣಿಗಳ ಆರೈಕೆ
ಬೇಸಿಗೆಯಲ್ಲಿ ಪ್ರಾಣಿಗಳ ಆರೈಕೆ

Pets Care in Summer: ಬೇಸಿಗೆ ಬಂತೆಂದರೆ ಮಕ್ಕಳಿಗೆ, ವೃದ್ಧರು, ಗರ್ಭಿಣಿಯರಿಗೆ ಮಾತ್ರವಲ್ಲ, ನೀವು ಪ್ರೀತಿಯಿಂದ ಸಾಕುತ್ತಿರುವ ಪ್ರಾಣಿಗಳಿಗೂ ವಿಶೇಷ ಕಾಳಜಿ ತೋರಿಸುವ ಅವಶ್ಯಕತೆ ಇರುತ್ತದೆ. ಬೇಸಿಗೆ ಕಾಲದಲ್ಲಿ ಪ್ರಾಣಿಗಳನ್ನು ಹೊರಗೆ ಸುತ್ತಾಡಿಸುವ ಕೆಲಸ ಸುಲಭವಾಗಿದ್ದರೂ ಸಹ ಬಿಸಿಲಿನ ಬೇಗೆಯು ಸಾಕು ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆ ಮಾಡದಂತೆ ಕಾಳಜಿ ವಹಿಸುವುದು ಕೂಡ ಸಾಕು ಪ್ರಾಣಿಗಳ ಪೋಷಕರಗಾಗಿ ನಿಮ್ಮ ಕರ್ತವ್ಯವಾಗಿರುತ್ತದೆ.

ವಾಕಿಂಗ್ ಹೋಗುವುದಿರಬಹುದು, ಅಥವಾ ಅವುಗಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುವುದಿರಬಹುದು ಇಲ್ಲವೇ ಮೈದಾನದಲ್ಲಿ ಆಡಿಸುವುದೇ ಆಗಿರಬಹುದು. ಈ ಎಲ್ಲಾ ಸಂದರ್ಭಗಳಲ್ಲಿಯೂ ನೀವು ಪ್ರಾಣಿಗಳ ವಿಚಾರದಲ್ಲಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಬೇಸಿಗೆಯಲ್ಲಿ ಉಷ್ಣ ಗಾಳಿ ಬೀಸುವ ಸಂದರ್ಭದಲ್ಲಿ ನಿಮ್ಮ ಪ್ರೀತಿಯ ಪ್ರಾಣಿಗಳಲ್ಲಿ ಈ ಬದಲಾವಣೆಗಳು ಕಂಡು ಬರುತ್ತಿದೆಯೇ ಎಂಬುದನ್ನು ಸರಿಯಾಗಿ ಗಮನಿಸಿ.

ಜೊಲ್ಲು ಸುರಿಸುವಿಕೆ: ಬೇಸಿಗೆಯು ಮಿತಿ ಮೀರಿದಂತೆ ನಿಮ್ಮ ಸಾಕು ಪ್ರಾಣಿಗಳು ಅತಿಯಾಗಿ ಜೊಲ್ಲು ಸುರಿಸಬಹುದು ಹಾಗೂ ಇವುಗಳ ಹೃದಯ ಬಡಿತದ ಪ್ರಮಾಣ ಹೆಚ್ಚಬಹುದು. ಯಾವಾಗ ನಿಮ್ಮ ಶ್ವಾನವು ಅತಿಯಾಗಿ ಬೆವರಿದ್ದು ಮಾತ್ರವಲ್ಲದೇ ತೀವ್ರವಾಗಿ ಉಸಿರಾಡುತ್ತಾ ಜೊಲ್ಲು ಸುರಿಸುತ್ತಿದ್ದರೆ ಕೂಡಲೇ ಅವುಗಳನ್ನು ನೆರಳು ಇರುವ ಸ್ಥಳಕ್ಕೆ ಕರೆದುಕೊಂಡು ಬನ್ನಿ. ಕೆಲವು ನಿಮಿಷಗಳ ಕಾಲ ನಿಮ್ಮ ಶ್ವಾನವು ವಿಶ್ರಾಂತಿ ಪಡೆಯುವಂತೆ ನೀವು ನೋಡಿಕೊಳ್ಳಬೇಕು.

ಪ್ರಾಣಿಗಳನ್ನು ಎಂದಿಗೂ ಕಾರಿನಲ್ಲಿ ಬಿಟ್ಟು ಹೋಗಬೇಡಿ : ನಿಮ್ಮ ಸಾಕು ಪ್ರಾಣಿಗಳನ್ನು ಎಂದಿಗೂ ಕಾರಿನಲ್ಲಿ ಬಿಟ್ಟು ಹೋಗಬೇಡಿ. ಎಲ್ಲಾ ಗ್ಲಾಸ್‌ಗಳು ಬಂದ್ ಆಗಿರುವ ಸಂದರ್ಭದಲ್ಲಿ ಕಾರಿನ ಒಳಗೆ ವಿಪರೀತ ಸೆಖೆ ಇರುತ್ತದೆ. ಕಾರನ್ನು ನಿಲ್ಲಿಸಿದ 10 ನಿಮಿಷಗಳಲ್ಲಿ ಕಾರಿನ ಒಳಗಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಬಹುದು. ಅಲ್ಲದೇ ಸೂರ್ಯನ ಅಡಿಯಲ್ಲಿ ಇದ್ದಾಗ ಕಾರಿನ ಒಳಗಿನ ತಾಪಮಾನ 120 ಡಿಗ್ರಿ ಸೆಲ್ಸಿಯಸ್ ಕೂಡ ಆಗಬಹುದು. ಹೀಗಾಗಿ ಕಾರಿನಿಂದ ನೀವು ಇಳಿಯುವ ಸಂದರ್ಭದಲ್ಲಿ ನಿಮ್ಮ ಸಾಕು ಪ್ರಾಣಿಯನ್ನೂ ನಿಮ್ಮೊಂದಿಗೆ ಕರೆದುಕೊಂಡು ಹೋಗುವುದು ಉತ್ತಮ.

ಹುಳುಗಳ ಕಾಟದಿಂದ ನಿಮ್ಮ ಪ್ರಾಣಿಗಳನ್ನು ರಕ್ಷಿಸಿಕೊಳ್ಳಿ : ಶ್ವಾನ ಹಾಗೂ ಬೆಕ್ಕುಗಳಿಗೆ ಸಾಮಾನ್ಯವಾಗಿ ಉಣ್ಣೆ, ಚಿಗಟು , ಉಣುಗು ಸೇರಿದಂತೆ ವಿವಿಧ ಹುಳಗಳ ಕಾಟ ಇರುತ್ತದೆ. ಬೇಸಿಗೆಯಲ್ಲಿ ಪ್ರಾಣಿಗಳ ಮೈ ಬೆವರಿದಂತೆಲ್ಲ ಇವುಗಳ ಕಾಟ ಜಾಸ್ತಿಯಾಗುತ್ತಲೇ ಹೋಗುತ್ತದೆ. ಮಾರ್ಚ್‌ನಿಂದ ಮೇ ಮಧ್ಯದವರೆಗೆ ಹಾಗೂ ಆಗಸ್ಟ್ ಮಧ್ಯಂತರದಿಂದ ನವೆಂಬರ್‌ವರೆಗೆ ಪ್ರಾಣಿಗಳಲ್ಲಿ ಈ ಹುಳುಗಳ ಕಾಟ ಹೆಚ್ಚಾಗಿ ಇರುತ್ತದೆ. ಹೀಗಾಗಿ ಪ್ರಾಣಿಗಳಿಗೆ ಆಗಾಗ ಹುಳುಗಳನ್ನು ಸಾಯಿಸುವಂತಹ ಸ್ಪ್ರೇಗಳನ್ನು ಸಿಂಪಡಿಸುತ್ತಲೇ ಇರಿ.

ಕೈ, ಕಾಲಿನ ಪಂಜುಗಳ ಕಡೆ ಗಮನವಿರಲಿ : ಸೂರ್ಯನು ನಿಗಿ ನಿಗಿ ಕೆಂಡಕಾರಲು ಆರಂಭಿಸಿದಂತೆಲ್ಲ ಪಾದಚಾರಿ ಮಾರ್ಗಗಳು ಅಥವಾ ರಸ್ತೆಗಳು ಹೆಚ್ಚು ಶಾಖವನ್ನು ಉತ್ಪತ್ತಿ ಮಾಡುತ್ತವೆ. ನಮಗೆ ಕೂಡ ಅತಿಯಾದ ಬಿಸಿಲಿನಲ್ಲಿ ಬರಿಗಾಲಿನಲ್ಲಿ ನಡೆಯಲು ಸಾಧ್ಯವಿಲ್ಲ. ಅದೇ ರೀತಿ ಪ್ರಾಣಿಗಳಿಗೂ ಕಷ್ಟವಾಗುತ್ತದೆ. ಕಾಂಕ್ರೀಟ್ ರಸ್ತೆಗಳಿಂದ ಬರುವ ಶಾಖವನ್ನು ತಡೆಯಲು ಅವುಗಳ ಪಂಜುಗಳಿಗೂ ಆಗುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋಗಲೇ ಬೇಡಿ. ಕಾಲ ಕಾಲಕ್ಕೆ ಪ್ರಾಣಿಗಳಿಗೆ ಕೈ ಕಾಲಿನ ಪಂಜುಗಳಿಗೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ.

ಸ್ವಚ್ಛವಾಗಿರಿಸಿ : ಬೇಸಿಗೆಯಲ್ಲಿ ಸ್ನಾನ ಮಾಡಿ ಬಂದ ಬಳಿಕ ದೇಹಕ್ಕೆ ಆಗುವ ಖುಷಿಯನ್ನು ಹೇಳಲು ಸಾಧ್ಯವಿಲ್ಲ. ಇದೇ ರೀತಿ ಭಾವನೆ ಪ್ರಾಣಿಗಳಿಗೂ ಇರುತ್ತದೆ. ಹೀಗಾಗಿ ಕಾಲ ಕಾಲಕ್ಕೆ ಅವುಗಳಿಗೂ ಚೆನ್ನಾಗಿ ಸ್ನಾನ ಮಾಡಿಸಿ, ಪ್ರತಿನಿತ್ಯ ಅವುಗಳಿಗೂ ಹಲ್ಲುಜ್ಜಿಸಿ. ತುಂಬಾ ಕೂದಲನ್ನು ಹೊಂದಿರುವ ಪ್ರಾಣಿಗಳಿಗೆ ಕೆಲವರು ಬೇಸಿಗೆಯಲ್ಲಿ ಕೂದಲು ಕತ್ತರಿಸುತ್ತಾರೆ. ಆದರೆ ಆ ಕೂದಲುಗಳು ಸಾಕು ಪ್ರಾಣಿಗಳಿಗೆ ದೇವರು ಕೊಟ್ಟ ವರ ಎಂದೇ ಹೇಳಬಹುದು. ಪ್ರಾಣಿಗಳ ತುಪ್ಪಳ ಅವರನ್ನು ಬೇಸಿಗೆಯಲ್ಲಿ ತಂಪಾಗಿರಿಸಲು ಹಾಗೂ ಚಳಿಗಾಲದಲ್ಲಿ ಬೆಚ್ಚಗೆ ಇರಿಸಲು ನೆರವಾಗುತ್ತದೆ. ಹೀಗಾಗಿ ಅವುಗಳಿಗೆ ಕ್ಷೌರ ಮಾಡಿಸುವ ಬದಲು ಶುಚಿಯಾಗಿ ಇಟ್ಟುಕೊಳ್ಳುವುದರ ಕಡೆಗೆ ಗಮನ ನೀಡಿ.

ಪ್ರಾಣಿಗಳ ತೂಕದ ಕಡೆಗೆ ಗಮನವಿರಲಿ : ನಿಮ್ಮ ಸಾಕು ಪ್ರಾಣಿಗಳ ತೂಕವನ್ನು ಆಗಾಗ ಪರೀಕ್ಷೆ ಮಾಡುತ್ತೀರಿ. ಮುಂಜಾನೆ ಹಾಗೂ ಸಂಜೆ ಅವುಗಳನ್ನು ತಪ್ಪದೇ ವಾಕಿಂಗ್‌ ಕರೆದುಕೊಂಡು ಹೋಗಿ. ಇದರಿಂದ ಸೂರ್ಯನ ನೇರಳಾತೀತ ಕಿರಣಗಳು ಅವುಗಳ ಮೈಮೇಲೆ ಬೀಳುವುದಿಲ್ಲ. ಅಲ್ಲದೇ ಈ ಸಮಯದಲ್ಲಿ ತಂಪಾದ ಗಾಳಿ ಕೂಡ ಬೀಸುವುದರಿಂದ ಪ್ರಾಣಿಗಳಿಗೆ ವಿಹಾರ ಮಾಡುವುದು ಖುಷಿ ಎನಿಸಲಿದೆ.

ಸೂಕ್ತ ಆಹಾರ ಕೊಡಿ : ಬೇಸಿಗೆ ಕಾಲದಲ್ಲಿ ಪ್ರಾಣಿಗಳಿಗೆ ಅವುಗಳನ್ನು ಹೆಚ್ಚಾಗಿ ತಂಪಾಗಿಸುವ ಆಹಾರವನ್ನು ನೀಡಿ. ಕೆಲವೊಂದು ಶ್ವಾನಗಳು ಸೌತೆಕಾಯಿ, ಕ್ಯಾರೆಟ್, ಕಲ್ಲಂಗಡಿ ಹಣ್ಣುಗಳನ್ನು ತಿನ್ನುತ್ತವೆ. ಬೇಸಿಗೆಯಲ್ಲಿ ಇವುಗಳನ್ನು ಹೆಚ್ಚಾಗಿ ನೀಡಿ. ಇವುಗಳನ್ನು ಸೇವಿಸದ ಶ್ವಾನಗಳಿಗೆ ನೀರು ಹಾಗೂ ತಿಳಿ ಮಜ್ಜಿಗೆ ಹೆಚ್ಚಾಗಿ ಕೊಡಬಹುದು.

ಬೆಲ್ಟ್‌ ಹಾಕಬೇಡಿ : ಕೆಲವರು ತಮ್ಮ ಶ್ವಾನ ಚೆನ್ನಾಗಿ ಕಾಣಬೇಕೆಂದು ಅವುಗಳಿಗೆ ಅಂಗಿಯನ್ನು ಹಾಕುತ್ತಾರೆ. ಆದರೆ ಬೇಸಿಗೆಯಲ್ಲಿ ಈ ಅಭ್ಯಾಸವನ್ನು ತಪ್ಪಿಸಿ. ಅವುಗಳ ಕುತ್ತಿಗೆಗೆ ಹಾಕಿದ ಬೆಲ್ಟ್‌ ತೆಗೆದಿಡಿ. ಬೆಲ್ಟ್‌ ಹಾಕಿದ ಸ್ಥಳದ ಅಡಿಯಲ್ಲಿ ಹುಳುಗಳು ಇರುವ ಸಾಧ್ಯತೆ ಜಾಸ್ತಿ ಇರುವುದರಿಂದ ಈ ಭಾಗದ ಕಡೆಗೆ ಗಮನ ನೀಡಿ.

ಪಶು ಆಸ್ಪತ್ರೆಗೆ ಭೇಟಿ : ನಿಮ್ಮ ಶ್ವಾನವು ಬೇಸಿಗೆಯ ಧಗೆಗೆ ನಿರ್ಜಲೀಕರಣದಂತಹ ಸ್ಥಿತಿಯನ್ನು ಅನುಭವಿಸುತ್ತಿದ್ದರೆ ಕೂಡಲೇ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಅವುಗಳಿಗೆ ಆಗಾಗ ಚೆಕಪ್ ಮಾಡಿಸಿ. ವೈದ್ಯರ ಸಲಹೆಯಂತೆ ಪ್ರಾಣಿಗಳಿಗೆ ಔಷಧಿಗಳನ್ನು ಒದಗಿಸಿ.

ಒಂದು ವೇಳೆ ನೀವು ಬೆಕ್ಕು, ಪಕ್ಷಿಗಳನ್ನು ಸಾಕಿದ್ದರೆ ಅದಕ್ಕೆ ನೀರಿನ ವ್ಯವಸ್ಥೆ ಮಾಡಿ, ಆಗ್ಗಾಗ್ಗೆ ಅವುಗಳ ಹಿಕ್ಕೆಗಳನ್ನು ಸ್ವಚ್ಛ ಮಾಡಿ. ಪ್ರಾಣಿಗಳು ಸೇವಿಸಲು ಊಟ, ಆಹಾರದ ಬೌಲ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ವಿಭಾಗ