ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆಯಲ್ಲಿ ಸಾಕುಪ್ರಾಣಿಗಳಿಗೆ ಯಾವ ರೀತಿಯ ಆಹಾರ ಕೊಡಬೇಕು, ಯಾವುದನ್ನು ತಿನ್ನಲು ಬಿಡಬಾರದು; ಇಲ್ಲಿದೆ ಮಾಹಿತಿ

ಬೇಸಿಗೆಯಲ್ಲಿ ಸಾಕುಪ್ರಾಣಿಗಳಿಗೆ ಯಾವ ರೀತಿಯ ಆಹಾರ ಕೊಡಬೇಕು, ಯಾವುದನ್ನು ತಿನ್ನಲು ಬಿಡಬಾರದು; ಇಲ್ಲಿದೆ ಮಾಹಿತಿ

ಬೇಸಿಗೆಯಲ್ಲಿ ಮನುಷ್ಯರಂತೆ ಸಾಕುಪ್ರಾಣಿಗಳ ಆಹಾರದ ಮೇಲೂ ಗಮನ ಹರಿಸಬೇಕು. ಈ ಸುಡುವ ಬಿರು ಬಿಸಿಲಿನಲ್ಲಿ ಮನೆಯಲ್ಲಿರುವ ಬೆಕ್ಕು-ನಾಯಿಗೆ ಯಾವ ರೀತಿಯ ಆಹಾರ ಪದಾರ್ಥಗಳನ್ನು ನೀಡಬೇಕು, ಯಾವ ಆಹಾರಗಳನ್ನು ನೀಡಬಾರದು ಎಂದು ಗೊಂದಲ ನಿಮ್ಮಲ್ಲಿದ್ದರೆ ಇಲ್ಲಿದೆ ಉತ್ತರ.

ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಆಹಾರ ಪದ್ಧತಿ ಹೇಗಿರಬೇಕು
ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಆಹಾರ ಪದ್ಧತಿ ಹೇಗಿರಬೇಕು

ಬೇಸಿಗೆಯ ಸುಡು ಬಿಸಿಲಿನ ತಾಪ ಹೆಚ್ಚಿದ್ದು, ಬಿಸಿಲಿನ ದಾಹ ತೀರಿಸಿಕೊಳ್ಳಲು ನಾವು ಎಳನೀರು, ಜ್ಯೂಸ್, ಮಜ್ಜಿಗೆ ಮುಂತಾದ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದೇವೆ. ಜೊತೆಗೆ ದೇಹ ತಣಿಸಲು ನೆರವಾಗುವ ಆಹಾರಗಳನ್ನೇ ಹೆಚ್ಚು ಸೇವಿಸುತ್ತಿದ್ದೇವೆ. ಈ ಬಿಸಿಲಿನ ತಾಪ ನಮಗಷ್ಟೇ ಅಲ್ಲ, ಪ್ರಾಣಿಗಳಿಗೂ ಇರುತ್ತದೆ. ಹಾಗಾಗಿ ಅವುಗಳಿಗೆ ನೀಡುವ ಆಹಾರದ ಮೇಲೂ ಹೆಚ್ಚು ಗಮನ ಹರಿಸಬೇಕು.

ಟ್ರೆಂಡಿಂಗ್​ ಸುದ್ದಿ

ಬೇಸಿಗೆಯ ಋತುಮಾನದಲ್ಲಿ ಸಾಕುಪ್ರಾಣಿಗಳಿಗೆ ಯಾವ ರೀತಿಯ ಆಹಾರಗಳನ್ನು ನೀಡಬೇಕು. ಸುಡು ಬಿಸಿಲಿನ ವಾತಾವರಣದಲ್ಲಿ ಸಾಕುಪ್ರಾಣಿಗಳ ಆಹಾರವನ್ನು ಬದಲಾಯಿಸಬೇಕೇ ಬೇಡವೇ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲೂ ಮೂಡಬಹುದು. ಸಾಕುಪ್ರಾಣಿಗಳು ಆರೋಗ್ಯವಂತವಾಗಿದ್ದು ಸರಿಯಾದ ಆಹಾರ ಕ್ರಮ ಪಾಲಿಸುತ್ತಿದ್ದರೆ, ಬೇಸಿಗೆಯಲ್ಲಿ ಅವುಗಳ ಆಹಾರಕ್ರಮವನ್ನು ಬದಲಿಸುವ ಅಗತ್ಯವಿಲ್ಲ. ಆದರೆ ನಾಯಿ ಅಥವಾ ಬೆಕ್ಕು ಅಲರ್ಜಿ, ಸ್ಥೂಲಕಾಯತೆ ಅಥವಾ ಸಂಧಿವಾತ ಮುಂತಾದ ಸಮಸ್ಯೆಯನ್ನು ಹೊಂದಿದ್ದರೆ, ಅವುಗಳ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ನಾಯಿ ಹಾಗೂ ಬೆಕ್ಕಿಗೆ ಯಾವ ರೀತಿಯ ಆಹಾರವನ್ನು ನೀಡಬೇಕು ಎಂಬುದನ್ನು ನೋಡಿ.

ಶ್ವಾನಗಳಿಗೆ ಹಣ್ಣುಗಳು ಮತ್ತು ತರಕಾರಿಗಳು ನೀಡಿ ಉಪಚರಿಸಿ

ಹಣ್ಣುಗಳು ಮತ್ತು ತರಕಾರಿಗಳು ನಾಯಿಗೆ ಉತ್ತಮ ಹಾಗೂ ಸುರಕ್ಷಿತ ಆಯ್ಕೆಯಾಗಿದೆ. ವಿಶೇಷವಾಗಿ ನೀರಿನ ಅಂಶ ಹೊಂದಿರುವ ಕಲ್ಲಂಗಡಿ ಮತ್ತು ಸೌತೆಕಾಯಿಗಳನ್ನು ನೀಡುವುದು ಉಪಯುಕ್ತ. ಅಲ್ಲದೆ, ಬೀಜರಹಿತ ಕರ್ಬೂಜ (musk melon) ವನ್ನು ನಾಯಿಗಳಿಗೆ ನೀಡುವುದರಿಂದ ದೇಹವನ್ನು ತಂಪಾಗಿಸುತ್ತದೆ.

ಈ ಆಹಾರವನ್ನು ಅಪ್ಪಿ-ತಪ್ಪಿಯೂ ನೀಡದಿರಿ

ಕೊಬ್ಬಿನ ಮಾಂಸ (fatty meats) ಮತ್ತು ಬಿಸಿ ಆಹಾರವನ್ನು ನಾಯಿಮರಿಗೆ ನೀಡದಿರಿ. ದ್ರಾಕ್ಷಿ ಹಾಗೂ ಒಣದ್ರಾಕ್ಷಿಗಳನ್ನು ಸಹ ನಾಯಿಗಳು ತಿನ್ನಬಾರದು. ಇದನ್ನು ಸೇವಿಸಿದರೆ ನಾಯಿಗಳಲ್ಲಿ ವಾಂತಿ ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಬೆಕ್ಕುಗಳ ಆರೋಗ್ಯದತ್ತ ಇರಲಿ ಗಮನ

ಬೆಕ್ಕುಗಳು ಏನಾದರೂ ತಿಂದ ಬಳಿಕ ತನ್ನ ಬಾಯಿಯನ್ನು ಕೈಯನ್ನು ನಾಲಿಗೆ ಮೂಲಕ ನೆಕ್ಕುತ್ತದೆ. ಬೆಕ್ಕುಗಳಿಗೆ ತುಂಬಾ ಶುದ್ಧವಾಗಿರಬೇಕು, ಗಲೀಜನ್ನು ಅವು ಸಹಿಸುವುದಿಲ್ಲ. ಅದಕ್ಕೆ ಈ ರೀತಿ ನೆಕ್ಕುತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ, ಬೆಕ್ಕುಗಳು ಗಲೀಜು ನೀರು ಕುಡಿಯುತ್ತವೆ ಎಂಬ ಕುಖ್ಯಾತಿ ಪಡೆದಿವೆ. ಹೀಗಾಗಿ, ಮಾಲೀಕರು ತಮ್ಮ ಬೆಕ್ಕುಗಳ ಆಹಾರದ ಬಗ್ಗೆ ಗಮನ ಹರಿಸಬೇಕು. ತಜ್ಞರ ಪ್ರಕಾರ, ಬೆಕ್ಕುಗಳಿಗೆ ನೀಡುವ ಆಹಾರದಲ್ಲಿ ಶೇ 60ರಷ್ಟು ದ್ರವಾಹಾರ ಮತ್ತು ಶೇ 40ರಷ್ಟು ಘನ ಆಹಾರ ಇರಬೇಕು. ಬೆಕ್ಕುಗಳ ದೈನಂದಿನ ಆಹಾರಪದ್ಧತಿಯಲ್ಲಿ ಇಂತಹ ಆಹಾರವು ಅವಶ್ಯಕವಾಗಿದೆ. ಇದು ಮೂತ್ರದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಬೆಕ್ಕುಗಳಿಗೆ ಹಣ್ಣುಗಳು ಅಥವಾ ಹಗುರವಾದ ಆಹಾರ ಪದಾರ್ಥವನ್ನು ತಿನ್ನಿಸಲು ಪ್ರಯತ್ನಿಸಿ. ಅಲ್ಲದೆ ಸೌತೆಕಾಯಿಯು ಬೆಕ್ಕಿಗೆ ಉತ್ತಮ ತರಕಾರಿ. ಇದರಲ್ಲಿ ಹೆಚ್ಚಿನ ನೀರಿನ ಅಂಶ ಹಾಗೂ ಪೌಷ್ಠಿಕಾಂಶವನ್ನು ಹೊಂದಿರುವುದರಿಂದ ಬೇಸಿಗೆಯಲ್ಲಿ ಅತ್ಯುತ್ತಮ ಆಹಾರವಾಗಿದೆ. ಹಾಗಂತ ಜಾಸ್ತಿ ತಿನ್ನಲು ಕೊಟ್ಟರೆ ಅತಿಸಾರ ಸಮಸ್ಯೆ ಉಂಟಾಗಬಹುದು. ಕಡಿಮೆ ಪ್ರಮಾಣದಲ್ಲಿ ನಿಮ್ಮ ಬೆಕ್ಕುಗಳಿಗೆ ಸೌತೆಕಾಯಿ ತಿನ್ನಲು ಕೊಡಿ.

ಬೆಕ್ಕುಗಳಿಗೆ ಈ ಆಹಾರ ಕೊಡದಿರಿ

 ಯಾವುದೇ ಪ್ರಾಣಿಗಳಿಗೆ, ವಿಶೇಷವಾಗಿ ಬೆಕ್ಕುಗಳಿಗೆ ಚಾಕೊಲೇಟ್ ಎಂದಿಗೂ ಒಳ್ಳೆಯದಲ್ಲ. ಚಾಕೊಲೇಟ್‌ನಲ್ಲಿ ಕೆಫಿನ್ ಮತ್ತು ಥಿಯೋಬ್ರೊಮಿನ್ ಅಂಶ ಇದೆ. ಇದು ಹೃದಯಕ್ಕೆ ತೊಂದರೆ ಉಂಟುಮಾಡುವುದು, ಸ್ನಾಯುಗಳ ನಡುಕ ಮತ್ತು ರೋಗಗ್ರಸ್ತವಾಗುವಿಕೆಯ ಸಮಸ್ಯೆಯನ್ನು ಉಂಟುಮಾಡುವ ಸಾಧ್ಯತೆ ಇದೆ.

ಮುಖ್ಯವಾಗಿ ನಿಮ್ಮ ಸಾಕು ಪ್ರಾಣಿಗಳಿಗೆ ಈ ಬೇಸಿಗೆಯಲ್ಲಿ ನೀರು ಅತ್ಯಗತ್ಯ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಒದಗಿಸಿ. ಸಾಕುಪ್ರಾಣಿಗಳಿಗೆ ಸುಲಭವಾಗಿ ಸಿಗುವಂತೆ ಮನೆಯಲ್ಲಿ ನೀರಿನ ಮೂಲಗಳನ್ನು ಇರಿಸಿ. ಸಾಕು ಪ್ರಾಣಿಗಳು ನಿರ್ಜಲೀಕರಣದಿಂದ ಬಳಲದಂತೆ ಗಮನಹರಿಸಿ. ಅವುಗಳ ಮೇಲೆ ನೀರು ಸಿಂಪಡಿಸುವುದರಿಂದ ಅವು ತಂಪಾಗಿರುತ್ತದೆ. ಅವುಗಳ ಪಂಜರವನ್ನು ನೇರ ಸೂರ್ಯನ ಬಿಸಿಲು ಬೀಳುವ ಹಾಗೆ ಇಡದಿರಿ.

ನಿಮ್ಮ ಮನೆಯ ಸಾಕುಪ್ರಾಣಿಯ ಆಹಾರವನ್ನು ಇದ್ದಕ್ಕಿದ್ದಂತೆ ಬದಲಾಯಿಸಬೇಡಿ. ಇಂತಹ ಹಠಾತ್ ಬದಲಾವಣೆಗಳು ವಾಂತಿ ಮತ್ತು ಅತಿಸಾರದಂತಹ ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಆಹಾರ ಬದಲಿಸುವ ಮುನ್ನ ತಜ್ಞರಿಂದ ಮಾಹಿತಿ ಪಡೆಯುವುದು ಉತ್ತಮ.