ನಾಯಿ, ಬೆಕ್ಕು ಅಂದ್ರೆ ಕೆಲವರಿಗೆ ಏಕೆ ಅಲರ್ಜಿ; ಸಾಕುಪ್ರಾಣಿಗಳ ಅಲರ್ಜಿ ಕುರಿತು ತಿಳಿಯಬೇಕಾದ ಮಾಹಿತಿ ಇದು
ಶ್ವಾನ ಹಾಗೂ ಬೆಕ್ಕುಗಳನ್ನು ಸಾಕುವುದು ಹಲವರಿಗೆ ಇಷ್ಟದ ಹವ್ಯಾಸ. ಆದರೆ ಕೆಲವರಿಗೆ ಸಾಕು ಪ್ರಾಣಿಗಳಿಂದ ಅಲರ್ಜಿ ಸಮಸ್ಯೆ ಇರುತ್ತದೆ. ಸಾಕು ಪ್ರಾಣಿಗಳಿಂದ ಅಲರ್ಜಿ ಏಕೆ ಆಗುತ್ತದೆ? ಇದರ ಲಕ್ಷಣಗಳೇನು? ಮುನ್ನೆಚ್ಚರಿಕಾ ಕ್ರಮ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ.
ಮನೆಯಲ್ಲಿ ಪ್ರೀತಿಯಿಂದ ಸಾಕಲ್ಪಡುವ ಪ್ರಾಣಿಗಳು ಮನೆಯ ಸದಸ್ಯನ ಸ್ಥಾನವನ್ನೇ ಪಡೆದುಕೊಂಡು ಬಿಡುತ್ತವೆ. ಬೆಕ್ಕು, ನಾಯಿ ಸಾಕಿರುವವರು ಅವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಸಾಕು ಪ್ರಾಣಿಗಳಿಂದ ಅಲರ್ಜಿ ಇರುತ್ತದೆ. ಇಂಥವರಿಗೆ ಪ್ರಾಣಿಗಳ ಚರ್ಮ ಸೋಕಿದರೆ ಸಾಕು ಚರ್ಮದಲ್ಲಿ ತುರಿಕೆ ಆರಂಭಗೊಳ್ಳುತ್ತದೆ. ಇದರಿಂದ ಪ್ರಾಣಿಗಳನ್ನು ಮುದ್ದಿಸಬೇಕು ಎಂದು ಆಸೆಯಿದ್ದರೂ ಸಹ ಮುದ್ದಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಏನಿದು ಸಾಕು ಪ್ರಾಣಿಗಳಿಂದ ಬರುವ ಅಲರ್ಜಿ? ಈ ಸಮಸ್ಯೆ ಇರುವವರು ಮನೆಯಲ್ಲಿ ಪ್ರಾಣಿಗಳನ್ನು ಸಾಕಲು ಸಾಧ್ಯವಿಲ್ಲವೇ? ಸಾಕು ಪ್ರಾಣಿಗಳಿಂದ ಬರುವ ಈ ಅಲರ್ಜಿ ಸಮಸ್ಯೆಗಳ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.
ಏನಿದು ಸಾಕು ಪ್ರಾಣಿಗಳಿಂದ ಬರುವ ಅಲರ್ಜಿ?
ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಸಾಕಷ್ಟು ಅಧ್ಯಯನಗಳು ತಿಳಿಸಿವೆ. ಆದರೆ ಇವುಗಳ ರೋಮವು ನಿಮ್ಮ ಅಲರ್ಜಿಗೆ ಕಾರಣವಾಗಬಹುದು. ನೀವು ಸಾಕುವ ಪ್ರಾಣಿ, ಪಕ್ಷಿಗಳ ಲಾಲಾರಸ, ಮೂತ್ರ, ರೂಮಗಳಲ್ಲಿ ಕಂಡುಬರುವ ಪ್ರೊಟೀನ್‌ಗಳು ಚರ್ಮದ ಅಲರ್ಜಿಯನ್ನು ಉಂಟುಮಾಡುತ್ತದೆ.
ಅಲರ್ಜಿ ಅಸ್ತಮಾ ಮತ್ತು ಇಮ್ಯುನೋಲಜಿ ರಿಸರ್ಚ್‌ನಲ್ಲಿ 2018ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಕ್ಕುಗಳು ಹಾಗೂ ನಾಯಿಗಳಿಂದ ಉಂಟಾಗುವ ಅಲರ್ಜಿಯು ವಿಶ್ವದ ಒಟ್ಟು ಜನಸಂಖ್ಯೆಯ 10 ರಿಂದ 20 ಪ್ರತಿಶತ ಜನರ ಮೇಲೆ ಪರಿಣಾಮ ಬೀರುತ್ತಿದ್ದು ಇದೊಂದು ಕಾಳಜಿ ವಹಿಸುವಂಥ ವಿಷಯವಾಗಿದೆ ಎಂದು ತಿಳಿಸಲಾಗಿದೆ.
ಸಾಕುಪ್ರಾಣಿಗಳ ಅಲರ್ಜಿಯ ಸಾಮಾನ್ಯ ಲಕ್ಷಣಗಳೇನು?
- ಸೀನುವಿಕೆ
- ಉಸಿರುಗಟ್ಟುವಂತಹ ಅನುಭವ
- ತುರಿಕೆ
- ಕಣ್ಣಿನಲ್ಲಿ ನೀರು ತುಂಬಿಕೊಳ್ಳುವುದು
- ಕೆಮ್ಮು
- ಎದೆಯಲ್ಲಿ ಬಿಗಿತ
- ಚರ್ಮದಲ್ಲಿ ದದ್ದು
ಇದನ್ನೂ ಓದಿ | ಮುಖದ ಮೊಡವೆ ಕಲೆಗಳನ್ನು ಮಾಯವಾಗಿಸುತ್ತೆ ಪುದೀನಾ ಎಲೆಗಳು; ಈ ರೀತಿ ಬಳಸಿ ನೋಡಿ
ಗಂಭೀರ ಪ್ರಕರಣಗಳಲ್ಲಿ, ಸಾಕು ಪ್ರಾಣಿಗಳಿಂದ ಬಹುತೇಕರಿಗೆ ಅಸ್ತಮಾ ಅಟ್ಯಾಕ್ ಉಂಟಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ವ್ಯಕ್ತಿಯ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸೌಮ್ಯದಿಂದ ತೀವ್ರ ಎಂದು ಪರಿಗಣಿಸಬಹುದಾಗಿದೆ. ಕೆಲವರು ಮುಖ ಬಾತುವುದು, ಕಣ್ಣುಗಳು ಊದಿಕೊಳ್ಳುವುದು ಅಥವಾ ಆಯಾಸ ಭಾವನೆ ಕೂಡ ಇದರ ಲಕ್ಷಣಗಳಾಗಿವೆ.
ಸಾಕುಪ್ರಾಣಿಗಳಿಂದ ಅಲರ್ಜಿ ಉಂಟಾಗುತ್ತಿದೆ ಎಂಬುದನ್ನು ನಿರ್ಧರಿಸುವುದು ಹೇಗೆ..?
ದೈಹಿಕ ಪರೀಕ್ಷೆ ಹಾಗೂ ಅಲರ್ಜಿ ಪರೀಕ್ಷೆಗಳನ್ನು ಮಾಡುವ ಮೂಲಕ ಒಬ್ಬ ವ್ಯಕ್ತಿಗೆ ಸಾಕುಪ್ರಾಣಿಗಳಿಂದ ಅಲರ್ಜಿ ಉಂಟಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದಾಗಿದೆ. ವಿವಿಧ ರಕ್ತಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಗಳು ಸಾಕುಪ್ರಾಣಿಗಳಿಂದ ಬರುವ ಅಲರ್ಜಿಯು ವ್ಯಕ್ತಿಯ ದೇಹದಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸಲು ವೈದ್ಯರಿಗೆ ಸಹಾಯ ಮಾಡುತ್ತದೆ. ಅಲ್ಲದೆ ಎಂಥ ಪರೀಕ್ಷೆಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು ಸಹ ಸಹಾಯ ಮಾಡುತ್ತದೆ.
ಸಾಕು ಪ್ರಾಣಿಗಳಿಂದ ಅಲರ್ಜಿಗೆ ಒಳಗಾಗುವ ದೇಹ ನಿಮ್ಮದಾದರೂ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕಬಹುದೇ?
- ನಿಮಗೆ ಪ್ರಾಣಿಗಳಿಂದ ಅಲರ್ಜಿ ಇದ್ದರೂ ಸಹ ಪ್ರಾಣಿಗಳನ್ನು ಸಾಕಲು ಸಾಧ್ಯವಿದೆ. ಆದರೆ ಕೆಲವೊಂದು ಎಚ್ಚರಿಕೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇರಲಿದೆ.
- ನೀವು ಮನೆಯಲ್ಲಿ ಹೆಚ್ಚು ಸಮಯ ಕಾಲ ಕಳೆಯುವ ಸ್ಥಳದಿಂದ ಸಾಕುಪ್ರಾಣಿಗಳನ್ನು ದೂರವಿಡಬೇಕು.
- ಪ್ರಾಣಿಗಳನ್ನು ಅತಿಯಾಗಿ ಮುದ್ದಿಸುವುದನ್ನು ನಿಲ್ಲಿಸಬೇಕು.
- ವ್ಯಾಕುಮ್ ಕ್ಲೀನರ್‌ಗಳ ಸಹಾಯದಿಂದ ಮನೆಯನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು.
- ನಿಮ್ಮ ಸಾಕು ಪ್ರಾಣಿಗಳಿಗೆ ಕಾಲ ಕಾಲಕ್ಕೆ ಸ್ನಾನ ಮಾಡಿಸುತ್ತಿರಬೇಕು.
- ಮನೆಯ ಯಾವುದೇ ಸ್ಥಳದಲ್ಲಿಯೂ ಪ್ರಾಣಿಗಳ ರೋಮ ಇರದಂತೆ ನೋಡಿಕೊಳ್ಳಿ.
ಸಾಕು ಪ್ರಾಣಿಗಳಿಂದ ಬರುವ ಅಲರ್ಜಿಗೆ ಚಿಕಿತ್ಸೆ ಏನು ?
ಸಾಕುಪ್ರಾಣಿಗಳ ಅಲರ್ಜಿಗೆ ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಇದನ್ನು ಹಾಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ನಿಮಗೆ ಇನ್ನಷ್ಟು ತೊಂದರೆ ಉಂಟಾಗಬಹುದು. ಇಲ್ಲವಾದಲ್ಲಿ ಅಸ್ತಮಾದಂಥ ಸಮಸ್ಯೆ ಕಾಣಿಸಿಕೊಳ್ಳಬಹುದು. ಸೈನಸ್ ಸಮಸ್ಯೆ ಕೂಡ ಉಂಟಾಗಬಹುದು. ಸಾಕು ಪ್ರಾಣಿಗಳ ಅಲರ್ಜಿ ಸಮಸ್ಯೆಯಿಂದ ನಿದ್ರೆಗೆ ಹಾನಿ ಉಂಟಾಗಬಹುದು. ಹೀಗಾಗಿ ಈ ಸಮಸ್ಯೆಗೆ ಸೂಕ್ತಕಾಲಕ್ಕೆ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ.
ಸಾಕು ಪ್ರಾಣಿಗಳನ್ನು ನೀವು ಮಲಗುವ ಕೋಣೆಗಳಿಂದ ಅಥವಾ ನೀವು ಮನೆಯಲ್ಲಿ ಹೆಚ್ಚುಕಾಲ ಇರುವ ಪ್ರದೇಶದಿಂದ ದೂರ ಇಡಬೇಕು. ಆಂಟಿಹಿಸ್ಟಮೈನ್‌ಗಳು, ಮೂಗಿನ ಕಾರ್ಟಿಕೊಸ್ಟೆರಾಯ್ಡ್‌ಗಳು, ಡಿಕೊಂಗಸ್ಟೆಂಟ್‌ಗಳು ಮತ್ತು ಲ್ಯುಕೋಟ್ರೀನ್‌ಂಥ ಔಷಧಿಗಳು ಇಂತಹ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಜೀವನಶೈಲಿ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Garlic Benefits: ಪ್ರತಿದಿನ ಬೆಳ್ಳುಳ್ಳಿ ತಿಂದ್ರೆ ಕ್ಯಾನ್ಸರ್ ಬರೋಲ್ಲ, ಇದ್ರಿಂದ ಇನ್ನೂ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ವಿಭಾಗ