ದುಬಾರಿ ಬಂಗ್ಲೆ, ಕಾರು, ಮದುವೆ ಬಗ್ಗೆ ಕೇಳಿರಬಹುದು: 9 ಕೋಟಿ ಬೆಲೆ ಬಾಳುತ್ತೆ ಪೈನ್ ಬೋನ್ಸಾಯ್ ಟ್ರೀ, ವಿಶ್ವದ ಅತ್ಯಂತ ದುಬಾರಿ ಮರವಿದು
ಜಗತ್ತಿನಲ್ಲಿ ದುಬಾರಿ ಬಂಗ್ಲೆ, ದುಬಾರಿ ಕಾರು, ದುಬಾರಿ ಮದುವೆ ಬಗ್ಗೆ ಕೇಳಿರಬಹುದು. ಹಾಗೆಯೇ ದುಬಾರಿ ಮರವೂ ಇದೆ. ಬಹುತೇಕರಿಗೆ ಈ ಬಗ್ಗೆ ಪ್ರಶ್ನೆಗಳಿರಬಹುದು. ದುಬಾರಿ ಮರದ ಹೆಸರು ಪೈನ್ ಬೋನ್ಸಾಯ್ ಟ್ರೀ ಎಂದು. ಜಪಾನಿನ ಪೈನ್ ಬೋನ್ಸಾಯ್ ಮರವು ಅತ್ಯಂತ ದುಬಾರಿಯಾಗಿದ್ದು, ಇದರ ಬೆಲೆ ಎಷ್ಟೆಂದರೆ ಮರ್ಸಿಡಸ್ ಮತ್ತು ಬಿಎಂಡಬ್ಲ್ಯೂ ಕಾರುಗಳನ್ನು ಖರೀದಿಸಬಹುದು.
ಜಗತ್ತಿನಲ್ಲಿ ಲಕ್ಷಾಂತರ ಮರಗಳಿವೆ. ಕೆಲವೊಂದು ದೇಶಗಲ್ಲಿ ಕೆಲವು ಜಾತಿಯ ಮರಗಳನ್ನು ಪೂಜ್ಯನೀಯ ಭಾವನೆಯಿಂದ ಕಾಣಲಾಗುತ್ತದೆ. ಹಾಗೆಯೇ ಪರಿಸರ ಸಂರಕ್ಷಣೆ ಉದ್ದೇಶದಿಂದ ಗರಿಷ್ಠ ಸಂಖ್ಯೆಯಲ್ಲಿ ಸಸ್ಯಗಳನ್ನು ನೆಡುವ ಅಗತ್ಯ ಹೆಚ್ಚಿದೆ. ಆದರೂ, ಜಗತ್ತಿನ ಅತ್ಯಂತ ದುಬಾರಿ ಮರ ಯಾವುದಿರಬಹುದು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ಈ ಪ್ರಶ್ನೆಯು ಚರ್ಚೆಯ ವಿಷಯವಾಗಿದೆ. ಜಗತ್ತಿನಲ್ಲಿ ದುಬಾರಿ ಬಂಗ್ಲೆ, ದುಬಾರಿ ಕಾರು, ದುಬಾರಿ ಮದುವೆ ಬಗ್ಗೆ ಕೇಳಿರಬಹುದು. ಹಾಗೆಯೇ ದುಬಾರಿ ಮರವೂ ಇದೆ. ಇದರ ಹೆಸರು ಪೈನ್ ಬೋನ್ಸಾಯ್ ಟ್ರೀ ಎಂದು. ಇದು ವಿಶ್ವದ ಅತ್ಯಂತ ದುಬಾರಿ ಮರ ಎಂಬ ಖ್ಯಾತಿ ಪಡೆದಿದೆ.
ಹಳೆಯದಾದಷ್ಟು ದುಬಾರಿ ಪೈನ್ ಬೋನ್ಸಾಯ್ ಮರ
ಜಪಾನಿನ ಪೈನ್ ಬೋನ್ಸಾಯ್ ಮರವು ಅತ್ಯಂತ ದುಬಾರಿಯಾಗಿದ್ದು, ಇದರ ಬೆಲೆ ಎಷ್ಟೆಂದರೆ ಮರ್ಸಿಡಸ್ ಮತ್ತು ಬಿಎಂಡಬ್ಲ್ಯೂ ಕಾರುಗಳನ್ನು ಖರೀದಿಸಬಹುದು. ಅಷ್ಟು ದುಬಾರಿ ಈ ಮರ. ಬೋನ್ಸಾಯ್ ಮರಗಳು ಸಂಪೂರ್ಣವಾಗಿ ಬೆಳೆದ ಮರಗಳ ಚಿಕ್ಕ ಆವೃತ್ತಿಗಳಾಗಿವೆ. ಅಂದರೆ ಇವುಗಳನ್ನು ಕುಂಡದಲ್ಲಿ ಬೆಳೆಸಿ, ಪೋಷಿಸಲಾಗುತ್ತದೆ. ಆಲ್ಕೋಹಾಲ್ ವೈನ್ ಹೇಗೆ ಹಳೆಯದಾಗುತ್ತಾ ಅದರ ಬೆಲೆ ಹೆಚ್ಚುತ್ತಾ ಹೋಗುತ್ತದೆಯೋ ಅದೇ ರೀತಿ ಈ ಪೈನ್ ಬೋನ್ಸಾಯ್ ಮರವೂ ಹಳೆಯದಾದಷ್ಟು ಅದರ ಬೆಲೆ ಹೆಚ್ಚು. ಈ ಮರವು ಕೋಟಿಗಟ್ಟಲೆ ಬೆಲೆಬಾಳುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಕೆಲವು ವರ್ಷಗಳ ಹಿಂದೆ ಜಪಾನಿನ ಟಕಮಟ್ಸು ಎಂಬಲ್ಲಿ ನಡೆದ ಅಂತಾರಾಷ್ಟ್ರೀಯ ಬೋನ್ಸಾಯ್ ಸಮ್ಮೇಳನದಲ್ಲಿ ಬೋನ್ಸಾಯ್ ಮರವನ್ನು 9 ಕೋಟಿ ರೂಪಾಯಿಗೂ ಹೆಚ್ಚು ಕೊಟ್ಟು ಖರೀದಿಸಲಾಗಿತ್ತು. ಈ ಮರವು ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಮರವಾಗಿತ್ತು. ಇಲ್ಲಿಯವರೆಗೆ ಯಾವುದೇ ಮರವನ್ನು ಇಷ್ಟು ಬೆಲೆಗೆ ಮಾರಾಟ ಮಾಡಿಲ್ಲ.
ಬೋನ್ಸಾಯ್ ಮರಗಳು ಅವುಗಳ ವಿರಳತೆ, ಆರೈಕೆ ಮತ್ತು ನಿರ್ವಹಣೆಗೆ ತೆಗೆದುಕೊಳ್ಳುವ ಸವಾಲುಗಳಿಂದಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಡುತ್ತವೆ. ಇವು ಯಾವುದೇ ವಿಶೇಷ ಗುಣಮಟ್ಟವನ್ನು ಹೊಂದಿರದಿದ್ದರೂ, ಅವು ಕಲಾಕೃತಿಗಳಾಗಿವೆ. ಅವು ಎಲ್ಲರನ್ನೂ ಆಕರ್ಷಿಸುವುದರಿಂದ ಅದರ ಬೆಲೆ ಹೆಚ್ಚಾಗುತ್ತಾ ಹೋಗುತ್ತದೆ. ಈ ಮರವನ್ನು ಬೆಳೆಸಲು ವರ್ಷಗಳ ಕಾಲ ತರಬೇತಿ ಪಡೆಯುವುದು ಹಾಗೂ ಸರ್ಮಪಣಾ ಮನೋಭಾವ ಅಗತ್ಯವಿರುತ್ತದೆ. ಹೀಗಾಗಿ ಇವುಗಳನ್ನು ಹಲವಾರು ವರ್ಷಗಳಿಂದ ಬಹಳ ಎಚ್ಚರಿಕೆಯಿಂದ ಬೆಳೆಸಲಾಗುತ್ತದೆ. ಇದನ್ನು ನೋಡಿಕೊಳ್ಳಲು ತಗುಲುವ ಕಾರ್ಮಿಕ ವೆಚ್ಚವೂ ದುಬಾರಿಯಾಗಿದೆ.
ಪೈನ್ ಬೋನ್ಸಾಯ್ ಮರವನ್ನು ಪಡೆಯಬೇಕು ಎಂದಾದರೆ ಅದರ ಆರೈಕೆಯಲ್ಲಿ ಆಳವಾದ ಜ್ಞಾನ ಮತ್ತು ಪರಿಣತಿಯ ಅಗತ್ಯವಿದೆ. ಈ ಸೂಕ್ಷ್ಮ ಸಸ್ಯಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ರೋಗಗಳು ಸೇರಿದಂತೆ ವಿವಿಧ ಅಂಶಗಳಿಂದ ನಾಶವಾಗಬಹುದು. ಹೀಗಾಗಿ ಈ ಮರವನ್ನು ಸಂರಕ್ಷಿಸಲು ಮತ್ತು ಪೋಷಿಸಲು ಅಗತ್ಯವಾದ ಕೌಶಲ್ಯಗಳನ್ನು ಹೊಂದಿದ್ದರೆ ಮಾತ್ರ ಇದನ್ನು ಖರೀದಿಸಬಹುದು.
ಜಪಾನಿನ ಹಿರೋಷಿಮಾದಲ್ಲಿ ಯಮಕಿ ಪೈನ್ ಎಂದು ಕರೆಯಲ್ಪಡುವ 400 ವರ್ಷಗಳಷ್ಟು ಹಳೆಯದಾದ ಬೋನ್ಸಾಯ್ ಮರವಿದೆ. ಇದನ್ನು ವಾಸ್ತವವಾಗಿ ಯಮಕಿ ಕುಟುಂಬದ ಆರು ತಲೆಮಾರುಗಳಿಂದ ಸಂರಕ್ಷಿಸಲಾಗಿದೆ. ನಂತರ ಅಮೆರಿಕದ ವಾಷಿಂಗ್ಟನ್‍ನಲ್ಲಿರುವ ನ್ಯಾಷನಲ್ ಬೋನ್ಸಾಯ್ ಮತ್ತು ಪೆನ್ಜಿಂಗ್ ಮ್ಯೂಸಿಯಂಗೆ ದಾನ ಮಾಡಿಲಾಯಿತು.
ಅಂದಹಾಗೆ, ಬೋನ್ಸಾಯ್ ಮರಗಳು ಮಾತ್ರ ಇಷ್ಟು ಬೆಲೆಗೆ ಮಾರಾಟವಾಗುವುದಿಲ್ಲ. ಕೆಲವು ಮರಗಳು ಸಹ ಕೆಜಿಗೆ ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತವೆ. ಈ ಮರದ ಹೆಸರು ಆಫ್ರಿಕನ್ ಬ್ಲಾಕ್ ವುಡ್ ಆಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಲೆ 7 ರಿಂದ 8 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.
ವಿಭಾಗ