ಚಳಿಗಾಲದಲ್ಲಿ ವಿದೇಶ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ? ವಿಶ್ವದ ಈ 5 ಚಳಿಗಾಲದ ಹಬ್ಬಗಳ ಬಗ್ಗೆ ತಿಳಿದಿರಲಿ
Winter Festivals: ಹೊಸ ಹೊಸ ದೇಶಗಳಿಗೆ ಪ್ರಯಾಣ ಬೆಳೆಸಬೇಕು. ಆದರೆ ಚಳಿಗಾಲದಲ್ಲಿ ಪ್ರವಾಸ ಕೈಗೊಳ್ಳೋಕೆ ಯಾವ ದೇಶ ಸೂಕ್ತ ಅಂತಾ ಯೋಚನೆ ಮಾಡುತ್ತಿದ್ದೀರೇ..? ಹಾಗಾದರೆ ಚಳಿಗಾಲದ ಸೀಸನ್ನಲ್ಲಿ ವಿಶ್ವದಲ್ಲಿ ನಡೆಯುವ ಈ ಐದು ಪ್ರಸಿದ್ಧ ಹಬ್ಬಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ಸದ್ಯ ಚಳಿಗಾಲ ಆರಂಭಗೊಂಡಿದೆ. ಚುಮು ಚುಮು ಚಳಿಯಲ್ಲಿ ಬೆಚ್ಚಗೆ ಹೊದ್ದು ಮಲಗೋದೇನೋ ಚಂದ. ಆದರೆ ಇದೇ ಸೀಸನ್ನಲ್ಲಿ ವಿಶ್ವದಲ್ಲಿ ನಡೆಯುವ ವಿವಿಧ ಆಚರಣೆಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ..? ಹಲವು ದೇಶಗಳಿಗೆ ಚಳಿಗಾಲ ಅನ್ನೋದು ಸಂಭ್ರಮದ ಋತುಮಾನವಿದ್ದಂತೆ. ಈ ದೇಶಗಳು ಚಳಿಗಾಲವನ್ನು ಸಂಗೀತ, ನೃತ್ಯ, ದೀಪಾಲಂಕಾರಗಳ ಮೂಲಕ ಸ್ವಾಗತಿಸುತ್ತವೆ, ಸಂಭ್ರಮಿಸುತ್ತವೆ. ನೀವು ಕೂಡ ಚಳಿಗಾಲದಲ್ಲಿ ಯಾವುದಾದರೂ ದೇಶಕ್ಕೆ ವಿಸಿಟ್ ಕೊಡಬೇಕು ಅಂತಾ ಪ್ಲಾನ್ ಮಾಡಿದ್ದರೆ ಈ ಐದು ವಿಶೇಷ ಸ್ಥಳಗಳು ಹಾಗೂ ಅಲ್ಲಿ ನಡೆಯುವ ಹಬ್ಬಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು .
1) ಹಾರ್ಬಿನ್ ಐಸ್ ಮತ್ತು ಹಿಮ ಶಿಲ್ಪ ಕಾರ್ಯಕ್ರಮ : ಇದು ವಿಶ್ವದ ಅತೀ ದೊಡ್ಡ ಹಿಮ ಶಿಲ್ಪ ನಿರ್ಮಿಸುವ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮವು ಚೀನಾದಲ್ಲಿ ಡಿಸೆಂಬರ್ 20ರಿಂದ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮವು 2024ರ ಮಾರ್ಚ್ ತಿಂಗಳ ಆರಂಭದವರೆಗೂ ಮುಂದುವರಿಯಲಿದೆ. ಇಲ್ಲಿ ನೀವು ಹಿಮಗಳಿಂದ ನಿರ್ಮಾಣ ಮಾಡುವ ಅತ್ಯಂತ ರಮಣೀಯ ಶಿಲ್ಪಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
2) ವ್ಯಾನಿಸ್ ಕಾರ್ನೀವಲ್ : ವ್ಯಾನಿಸ್ನಲ್ಲಿ ಆಯೋಜಿಸಲ್ಪಡುವ ಈ ಚಳಿಗಾಲದ ಉತ್ಸವವನ್ನು ನೋಡುವುದೇ ಕಣ್ಣಿಗೆ ಪರಮಾನಂದ. ವಿವಿಧ ವೇಷ ತೊಟ್ಟವರಿಂದ ಮೆರವಣಿಗಳು, ನೃತ್ಯ ಹಾಗೂ ಸಂಗೀತಗಳನ್ನು ಈ ಭವ್ಯವಾದ ಮೆರವಣಿಗೆಯು ಒಳಗೊಂಡಿರುತ್ತದೆ. ಚಳಿಗಾಲದ ಈ ಉತ್ಸವವು 2024ರ ಫೆಬ್ರವರಿ 2ನೇ ತಾರೀಖಿನಿಂದ 13ರರವರೆಗೆ ನಡೆಯಲಿದೆ.
3) ರಿಯೋ ಕಾರ್ನಿವಲ್ : ಇಡೀ ಜಗತ್ತಿನಲ್ಲೇ ಆಯೋಜಿಸಲ್ಪಡುವ ಸಾಂಸ್ಕೃತಿಕ ಹಬ್ಬಗಳ ಪೈಕಿ ಅತ್ಯಂತ ಪ್ರಸಿದ್ಧವಾದ ಹಬ್ಬ ಇದಾಗಿದೆ. ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿನಿತ್ಯ 2 ಮಿಲಿಯನ್ ಜನರು ಪಾಲ್ಗೊಳ್ಳುತ್ತಾರೆ. ಈ ಪ್ರಸಿದ್ಧ ಕಾರ್ನಿವಲ್ ಕಾರ್ಯಕ್ರಮವು 2024ರ ಫೆಬ್ರವರಿ 9ರಿಂದ ಫೆಬ್ರವರಿ 17ರವರೆಗೆ ಇರಲಿದೆ.
4) ಪೋರ್ಟ್ಲ್ಯಾಂಡ್ ವಿಂಟರ್ ಲೈಟ್ ಫೆಸ್ಟಿವಲ್ : ಈ ಬಾರಿಯ ಪೋರ್ಟ್ಲ್ಯಾಂಡ್ ವಿಂಟರ್ ಲೈಟ್ ಫೆಸ್ಟಿವಲ್ಗೆ ವಾಟ್ ಗ್ಲೋವ್ಸ್ ಅಂಡರ್ ಪ್ರೆಶರ್ ಎಂಬ ಥೀಮ್ ನೀಡಲಾಗಿದೆ. ಈ ಬೆಳಕಿನ ಹಬ್ಬವು 2024ರ ಫೆಬ್ರವರಿ 2ನೇ ತಾರೀಖಿನಿಂದ ಫೆಬ್ರವರಿ 10ರವರೆಗೆ ಒರೆಗಾನ್ನ ಪೋರ್ಟ್ಲ್ಯಾಂಡ್ ನಗರದಲ್ಲಿ ನಡೆಯಲಿದೆ.
5) ಮರ್ಡಿ ಗ್ರಾಸ್ ನ್ಯೂ ಆರ್ಲಿಯನ್ಸ್ : ಮುಂಬರುವ ಮರ್ಡಿ ಗ್ರಾಸ್ ನ್ಯೂ ಅರ್ಲಿಯನ್ಸ್ ಕಾರ್ಯಕ್ರಮವು 2024ರ ಫೆಬ್ರವರಿ 13ನೇ ತಾರೀಖಿನಂದು ಆಯೋಜನೆಗೊಳ್ಳಲಿದೆ. ನ್ಯೂ ಅರ್ಲಿಯನ್ಸ್ ನಗರದಲ್ಲಿ ನಡೆಯುವ ಮರ್ಡಿ ಗ್ರಾಸ್ ಮೆರವಣಿಗೆಯಲ್ಲಿ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ನಾಗರಿಕರು ಬೌರ್ಬನ್ ಬೀದಿಯಲ್ಲಿ ಸೇರುತ್ತಾರೆ.