Sleeping Issues: ರಾತ್ರಿ ಒಳಉಡುಪು ಧರಿಸದೇ ಮಲಗಿದರೆ ಇಷ್ಟೊಂದು ಪ್ರಯೋಜನ; ಈ ಬಗ್ಗೆ ವೈದ್ಯರು ಹೇಳೋದಿಷ್ಟು
ರಾತ್ರಿ ಮಲಗಿದಾಗ ಒಂದು ಒಳ್ಳೆಯ ನಿದ್ರೆ ಬರಬೇಕು ಎಂದು ಹಲವು ಕಸರತ್ತುಗಳನ್ನು ಜನರು ಮಾಡುತ್ತಾರೆ. ಒಳಉಡುಪು ಧರಿಸದೇ ಮಲಗಿದರೆ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ, ಇದರಿಂದ ನಿದ್ದೆಯೂ ಚೆನ್ನಾಗಿ ಬರುತ್ತದೆ. ಈ ಬಗ್ಗೆ ವೈದ್ಯರು ಹೇಳೋದೇನು ನೋಡಿ.

ರಾತ್ರಿ ಮಲಗುವಾಗ ಒಳ್ಳೆಯ ನಿದ್ರೆ ಬರಬೇಕು, ಮನಸ್ಸು ಮತ್ತು ದೇಹಕ್ಕೆ ಉತ್ತಮ ವಿಶ್ರಾಂತಿ ದೊರಕಬೇಕು ಎಂದು ಎಲ್ಲರೂ ಬಯಸುತ್ತಾರೆ. ಸುಖನಿದ್ರೆ ಎನ್ನುವುದು ಎಲ್ಲರಿಗೂ ಸುಲಭದಲ್ಲಿ ಬರುವುದಿಲ್ಲ. ಅದಕ್ಕಾಗಿ ವಿವಿಧ ತಂತ್ರಗಳ ಮೊರೆಹೋಗುವವರೂ ಇದ್ದಾರೆ. ಆದರೆ ಬಹಳಷ್ಟು ಮಂದಿ ರಾತ್ರಿ ಮಲಗುವಾಗ ಒಳಉಡುಪು ಧರಿಸದೇ ಮಲಗಿದರೆ ಉತ್ತಮ ನಿದ್ರೆ ಬರುತ್ತದೆ ಎನ್ನುತ್ತಾರೆ. ಆದರೆ ಇನ್ನು ಕೆಲವರು ಕೇವಲ ಒಳಉಡುಪು ಮಾತ್ರ ಧರಿಸಿ ಮಲಗುತ್ತಾರೆ, ಹಾಗೆ ಮಲಗಿದರೆ ಮಾತ್ರ ಉತ್ತಮ ನಿದ್ರೆ ಬರುತ್ತದೆ ಎನ್ನುತ್ತಾರೆ. ಆದರೆ ಹಾಗೆ ಒಳಉಡುಪು ಮಾತ್ರ ಧರಿಸಿ ಮಲಗಿದರೆ ಸಮಸ್ಯೆಯಾಗುತ್ತದೆ ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯ. ಒಳಉಡುಪು ತೆಗೆದು, ತೆಳುವಾದ ಮತ್ತು ಸರಳ ಉಡುಪು ಧರಿಸಿ ಮಲಗುವುದೇ ಉತ್ತಮ ಎನ್ನುವುದು ವೈದ್ಯರ ಸಲಹೆಯಾಗಿದೆ.
ಒಳಉಡುಪು ಧರಿಸಬೇಕೇ ಅಥವಾ ಬೇಡವೇ?
ಈ ಕುರಿತು ಬಹಳಷ್ಟು ಜನರಲ್ಲಿ ವಿವಿಧ ರೀತಿಯ ಅಭಿಪ್ರಾಯಗಳಿವೆ. ತಜ್ಞವೈದ್ಯರ ಪ್ರಕಾರ, ರಾತ್ರಿ ಮಲಗುವಾಗ ಬಿಗಿಯಾದ ಒಳಉಡುಪು ಧರಿಸಿ ಮಲಗುವುದರಿಂದ, ದೇಹ ಮತ್ತು ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಚರ್ಮ ಆರಾಮವಾಗಿ ಉಸಿರಾಡಲು ಕಷ್ಟವಾಗುತ್ತದೆ. ಅಲ್ಲದೆ, ಸಿಂಥೆಟಿಕ್ ಫ್ಯಾಬ್ರಿಕ್ ಬಳಸಿರುವ ಪಾಲಿಸ್ಟರ್, ನೈಲಾನ್ ಉಡುಪುಗಳಾದರೆ, ಅವು ತೇವಾಂಶವನ್ನು ಹೀರಿಕೊಳ್ಳುತ್ತವೆ, ಅದರಿಂದ ದೇಹದ ಉಷ್ಣಾಂಶ ಹೆಚ್ಚಳವಾಗಬಹುದು, ಮೈ ಮೇಲಿನ ತೇವಾಂಶ ಕಡಿಮೆಯಾಗಿ, ಆರೋಗ್ಯಕ್ಕೆ ತೊಂದರೆಯಾಗಬಹುದು, ಚರ್ಮದಲ್ಲಿ ಕಿರಿಕಿರಿ ಉಂಟಾಗಿ, ತುರಿಕೆ ಅಥವಾ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ. ಹೀಗಾಗಿ ಎಚ್ಚರಿಕೆ ಅಗತ್ಯ.
ಇದನ್ನೂ ಓದಿ: ನಿಮ್ಮ ಡಯೆಟ್‌ನಲ್ಲಿ ಈ ಹಣ್ಣು, ತರಕಾರಿಗಳನ್ನು ಸೇರಿಸಿದ್ರೆ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣ್ತೀರಿ, ಇದರಲ್ಲಿದೆ ಯೌವನದ ಗುಟ್ಟು
ಮಹಿಳೆಯರು ಬಿಗಿಯಾದ ಒಳಉಡುಪು ಧರಿಸಿ ಮಲಗುವುದರಿಂದ, ಯೋನಿಯಲ್ಲಿ ಶುಷ್ಕತೆ ಉಂಟಾಗಬಹುದು. ಅಲ್ಲದೆ, ಮಾಯಿಸ್ಚರ್ ಉಂಟಾಗಿ, ಅದರಿಂದ ತುರಿಕೆ ಮತ್ತಿತರ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪುರುಷರಲ್ಲಿ ಕೂಡ ಬಿಸಿ ಏರಿಕೆಯಾಗಿ, ಬೆವರಬಹುದು, ಅದರಿಂದ ಚರ್ಮದಲ್ಲಿ ಕಿರಿಕಿರಿ, ತುರಿಕೆ ಉಂಟಾಗುವ ಸಾಧ್ಯತೆಯಿರುತ್ತದೆ.
ಬಿಗಿ ಒಳಉಡುಪು ಧರಿಸಿ ಮಲಗಿದರೆ ಹಲವು ತೊಂದರೆ
ಬಿಗಿ ಒಳಉಡುಪು ಧರಿಸಿ ಮಲಗಿದರೆ, ಅದರಿಂದ ದೇಹದ ಬಿಸಿ ಹೆಚ್ಚಾಗುತ್ತದೆ. ತೇವಾಂಶ ಕಡಿಮೆಯಾಗಿ, ಚರ್ಮದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಉತ್ಪಾದನೆಯಾಗುತ್ತದೆ. ಚರ್ಮದಲ್ಲಿ ತುರಿಕೆ, ಗುಳ್ಳೆ ಏಳುವುದು ಮತ್ತು ಅಲರ್ಜಿಯೂ ಉಂಟಾಗುತ್ತದೆ. ಹೀಗಾಗಿ, ಸಡಿಲ, ಹತ್ತಿಯಿಂದ ತಯಾರಿಸುವ ಸರಳ ಉಡುಪುಗಳನ್ನು, ಒಳಉಡುಪುಗಳನ್ನು ಬಳಸುವುದು ಹೆಚ್ಚು ಸೂಕ್ತ, ಅದರಿಂದ ದೇಹಕ್ಕೂ ಉತ್ತಮ, ಚರ್ಮದ ಆರೋಗ್ಯವೂ ಚೆನ್ನಾಗಿರುತ್ತದೆ.
ದೇಹದ ತಾಪಮಾನ ಏರಿಕೆ
ಬಿಸಿ ಹೆಚ್ಚಿಸುವ ಬಟ್ಟೆಗಳಾದ ನೈಲಾನ್, ಪಾಲಿಸ್ಟರ್‌ನಿಂದ ತಯಾರಿಸುವ ಒಳಉಡುಪು ಧರಿಸಿ ಮಲಗಿದರೆ, ಅದರಿಂದ ಉಷ್ಣಾಂಶ ಮತ್ತಷ್ಟು ಹೆಚ್ಚಳವಾಗುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾದರೆ, ನಿದ್ರೆಗೆ ತೊಂದರೆಯಾಗಬಹುದು. ಸರಿಯಾದ ನಿದ್ರೆ ಬರದಿದ್ದರೆ, ಅದರಿಂದ ಮುಂದೆ ಸಮಸ್ಯೆಯಾಗುತ್ತದೆ, ಅಲ್ಲದೆ, ದೇಹದ ಉಷ್ಣತೆ ಹೆಚ್ಚಳದಿಂದ ವಿವಿಧ ತೊಂದರೆ ನಮ್ಮನ್ನು ಬಾಧಿಸಬಹುದು.
ಇದನ್ನೂ ಓದಿ: ಒತ್ತಡ ತೊಡೆದುಹಾಕಿ ಒಳ್ಳೆಯ ನಿದ್ದೆ ಬರಲು ಈ ಪಾನೀಯಗಳನ್ನು ಸೇವಿಸಿ
ಒಳಉಡುಪು ಧರಿಸದೇ ಮಲಗಿದರೆ ಹಲವು ಪ್ರಯೋಜನ
ಒಳಉಡುಪು ಧರಿಸದೇ, ಹಾಗೆಯೇ ಮಲಗಿದರೆ ಮಹಿಳೆಯರ ಯೋನಿ ಆರೋಗ್ಯಕರವಾಗಿರುತ್ತದೆ, ಚೆನ್ನಾಗಿ ಗಾಳಿಯ ಸಂಚಾರವಾಗುತ್ತದೆ. ಅದರಿಂದ ಬ್ಯಾಕ್ಟೀರಿಯಾ, ಯೀಸ್ಟ್ ಬೆಳೆಯುವುದಿಲ್ಲ. ಹಾಗೆಯೇ, ಪುರುಷರಲ್ಲಿ ಒಳಉಡುಪು ತ್ಯಜಿಸುವುದರಿಂದ, ವೃಷಣಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ, ಶಾಖವೂ ಉಂಟಾಗುವುದಿಲ್ಲ, ಜತೆಗೆ ವೀರ್ಯ ವೃದ್ಧಿಯೂ ಆಗುತ್ತದೆ, ದೇಹಕ್ಕೂ ಉತ್ತಮ ಅನುಭವ ನೀಡುತ್ತದೆ ಎನ್ನುವುದು ತಜ್ಞ ವೈದ್ಯರ ಸಲಹೆಯಾಗಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
