Pulwama Attack: ಪುಲ್ವಾಮಾ ದಾಳಿಗೆ 6 ವರ್ಷ; ಫೆ 14 ಅನ್ನು ಭಾರತದಲ್ಲಿ ಕರಾಳ ದಿನ ಎಂದು ಆಚರಿಸಲು ಕಾರಣ ಹೀಗಿದೆ
ಜಗತ್ತಿನಾದ್ಯಂತ ಪ್ರೇಮಿಗಳ ದಿನದ ಸಂಭ್ರಮ ಕಳೆಗಟ್ಟಿದ್ದರೆ, ಭಾರತದಲ್ಲಿ ಮಾತ್ರ ಫೆಬ್ರುವರಿ 14 ಅನ್ನು ಕರಾಳ ದಿನ ಎಂದು ಆಚರಿಸಲಾಗುತ್ತದೆ. ಇಂದು ಪುಲ್ವಾಮಾ ದಾಳಿಯಾಗಿ 6 ವರ್ಷವಾಗಿದೆ. ಅಂದು ನಡೆದಿದ್ದೇನು ನೋಡಿ.

2019ರ ಇದೇ ದಿನ ಅಂದರೆ ಫೆಬ್ರುವರಿ 14 ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಜನರು ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿದ್ದರೆ ಭಾರತಕ್ಕೆ ಮಾತ್ರ ಅಂದು ಕರಾಳ ದಿನವಾಗಿತ್ತು. ಜಮ್ಮು–ಕಾಶ್ಮೀರದ ಪುಲ್ವಾಮಾದಲ್ಲಿ ಅಂದು ನಡೆದ ಭೀಕರ ಭಯೋತ್ಪಾದಕ ದಾಳಿಗೆ 40 ಮಂದಿ ಸಿಆರ್‌ಪಿಎಫ್ ಯೋಧರು ಪ್ರಾಣ ತೆತ್ತಿದ್ದರು. ಅಂದಿನಿಂದ ಭಾರತದಲ್ಲಿ ಫೆಬ್ರುವರಿ 14 ಅನ್ನು ಬ್ಲ್ಯಾಕ್ ಡೇ ಅಥವಾ ಕರಾಳ ದಿನ ಎಂದು ಆಚರಿಸಲಾಗುತ್ತಿದೆ.
2019ರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಫೆಬ್ರುವರಿ 14 ಅನ್ನು ಕರಾಳ ದಿನ ಎಂದು ಆಚರಿಸಲಾಗುತ್ತದೆ. ಅಂದು ಮಧ್ಯಾಹ್ನ 3.15ರ ಸುಮಾರಿಗೆ ಉಗ್ರರು ಎಸಗಿದ ದುಷ್ಕೃತ್ಯಕ್ಕೆ ಭಾರತೀಯ ಸೈನಿಕರು ತಮ್ಮ ಉಸಿರು ಚೆಲ್ಲಿದ್ದರು. ಈ ದಾಳಿಯ ದಿನವು ಭೀಕರ ದಿನವಾಗಿ ಇತಿಹಾಸದ ಪುಟ ಸೇರಿತು. ಪ್ರೇಮಿಗಳ ದಿನಾಚರಣೆಯ ಸಂಭ್ರಮದಲ್ಲಿದ್ದ ಭಾರತೀಯರಿಗೆ ಈ ದಿನವು ಮರೆಯಲಾಗದ ನೋವು ನೀಡಿತ್ತು.
2019ರ ಫೆಬ್ರುವರಿ 14 ರಂದು ಏನಾಗಿತ್ತು?
ಈ ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕನೊಬ್ಬ ಸ್ಫೋಟಕ ತುಂಬಿದ ಕಾರನ್ನು ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ನುಗ್ಗಿಸಿ 40 ಸೈನಿಕರನ್ನು ಅಮಾನವೀಯವಾಗಿ ಸಾಯಿಸಿದ್ದ. ದಾಳಿಕೋರ ಆದಿಲ್ ಅಹ್ಮದ್ ದಾರ್ ಎಂಬಾತನು ಸ್ಫೋಟಕಗಳಿಂದ ತುಂಬಿದ ಕಾರನ್ನು ಸಿಆರ್‌ಪಿಎಫ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭಾರಿ ಸ್ಫೋಟದಿಂದಾಗಿ ಸೈನಿಕರು ಮರಣ ಹೊಂದಿದ್ದರು. ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪು ಈ ದಾಳಿಯನ್ನು ನಡೆಸಿತ್ತು. ಇದು ದೇಶದಾದ್ಯಂತ ದುಃಖ, ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಭಾರತವು ಪ್ರತಿಯಾಗಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ವಿರುದ್ಧ ಬಾಲಕೋಟ್ ವೈಮಾನಿಕ ದಾಳಿ ಭಾರತದಲ್ಲಿ ರಕ್ಷಣಾ ಕ್ರಮದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಯ್ತು.
ಪುಲ್ವಾಮಾ ದಾಳಿಗೆ ಭಾರತದ ಪ್ರತಿಕ್ರಿಯೆ
ಪುಲ್ವಾಮಾ ದಾಳಿಯ ನಂತರ, ಭಾರತ ಸರ್ಕಾರವು ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿತು. ಪ್ರಧಾನಿ ನರೇಂದ್ರ ಮೋದಿ ಹೊಣೆಗಾರರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪಾಕಿಸ್ತಾನವು ಜೆಇಎಂ (ಜೈಶ್-ಎ-ಮೊಹಮ್ಮದ್) ಸಂಘಟನೆಯನ್ನು ಬೆಂಬಲಿಸುತ್ತಿದೆ ಎಂದು ಭಾರತ ಆರೋಪಿಸಿತು ಮತ್ತು ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೇರಬೇಕೆಂದು ಕರೆ ನೀಡಿತು. ಸರ್ಕಾರವು ಪಾಕಿಸ್ತಾನಕ್ಕೆ ನೀಡಲಾಗಿದ್ದ ವಿಶೇಷ ವ್ಯಾಪಾರ ಪ್ರಯೋಜನಗಳನ್ನು ಹಿಂತೆಗೆದುಕೊಂಡಿತು ಮತ್ತು ಪಾಕಿಸ್ತಾನಿ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಿತು. ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್ ಮತ್ತು ರಷ್ಯಾ ಸೇರಿದಂತೆ ಅನೇಕ ದೇಶಗಳು ಭಾರತವನ್ನು ಬೆಂಬಲಿಸಿದವು ಮತ್ತು ದಾಳಿಯನ್ನು ಖಂಡಿಸಿದವು.
ಪಾಕಿಸ್ತಾನದಲ್ಲಿ ಭಾರತದ ವಾಯುದಾಳಿ
ಫೆಬ್ರವರಿ 26, 2019 ರಂದು ಭಾರತವು ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತು. ‘ಆಪರೇಷನ್ ಬಂದರ್‘ ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಈ ದಾಳಿಯು ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡಲು ಪೂರ್ವಭಾವಿ ದಾಳಿ ಎಂದು ಭಾರತ ಹೇಳಿಕೊಂಡಿದೆ. ಆದರೆ ಪಾಕಿಸ್ತಾನದ ಭಾರತದ ಈ ದಾಳಿಯಿಂದ ಯಾವುದೇ ದೊಡ್ಡ ಹಾನಿಗಳು ಸಂಭವಿಸಿಲ್ಲ ಎಂದು ಹೇಳಿಕೊಂಡಿದೆ.
ಮರುದಿನ, ಪಾಕಿಸ್ತಾನವು ಭಾರತೀಯ ಮಿಲಿಟರಿ ಪೋಸ್ಟ್‌ಗಳ ಮೇಲೆ ದಾಳಿ ಮಾಡಲು ತನ್ನ ಯುದ್ಧ ವಿಮಾನಗಳನ್ನು ಕಳುಹಿಸಿತು, ಇದು ವೈಮಾನಿಕ ಯುದ್ಧಕ್ಕೆ ಕಾರಣವಾಯಿತು. ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕಿಸ್ತಾನಿ ಎಫ್ -16 ಅನ್ನು ಹೊಡೆದುರುಳಿಸಿದರು. ಆದರೆ ಅವರ ಜೆಟ್ ಪಾಕಿಸ್ತಾನದಲ್ಲಿ ಪತನಗೊಂಡ ನಂತರ ಅವರನ್ನು ಸೆರೆಹಿಡಿಯಲಾಯಿತು. ರಾಜತಾಂತ್ರಿಕ ಒತ್ತಡದ ನಂತರ, ಪಾಕಿಸ್ತಾನವು ಮಾರ್ಚ್ 1 ರಂದು ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು, ಇದನ್ನು ‘ಶಾಂತಿ ಸೂಚಕ‘ ಎಂದು ಕರೆದಿದೆ.
ಪುಲ್ವಾಮಾ ದಾಳಿಯ ಪರಿಣಾಮ
ಪುಲ್ವಾಮಾ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿತು. ಇದು ಭಯೋತ್ಪಾದನೆಯ ಬೆದರಿಕೆ ಮತ್ತು ಭಾರತದ ಭದ್ರತೆಯನ್ನು ಬಲಪಡಿಸುವ ಅಗತ್ಯವನ್ನು ಎತ್ತಿ ತೋರಿಸಿತು. ಬಾಲಕೋಟ್ ವೈಮಾನಿಕ ದಾಳಿಯು ಭಯೋತ್ಪಾದಕ ಶಿಬಿರಗಳ ವಿರುದ್ಧ ಬಲವಾದ ಕ್ರಮ ಕೈಗೊಳ್ಳಲು ಭಾರತದ ಇಚ್ಛೆಯನ್ನು ತೋರಿಸಿದೆ. ಈ ಘಟನೆಯು ಅಂತರರಾಷ್ಟ್ರೀಯ ಗಮನವನ್ನೂ ಗಳಿಸಿತು, ಅನೇಕ ದೇಶಗಳು ಪಾಕಿಸ್ತಾನವನ್ನು ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದವು.

ವಿಭಾಗ